ಮಕರ ಸಂಕ್ರಾಂತಿ ಗಾಳಿಪಟದ ಮೇಲೆ ರಾಹುಲ್​ ‘ರಫೇಲ್​ ಡೀಲ್​’ ಪ್ರಶ್ನೆಗಳು

ಜೈಪುರ: ರಫೇಲ್​ ಹೆಲಿಕಾಪ್ಟರ್​ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್​ ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಕೌಂಟರ್​ ನೀಡುತ್ತಿದೆ. ಈಗ ಕಾಂಗ್ರೆಸ್​ ಕಾರ್ಯಕರ್ತರು ಮತ್ತೊಂದು ವಿಭಿನ್ನ ರೀತಿಯಲ್ಲಿ ರಫೇಲ್​ ಡೀಲ್​ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ.

ಮಕರ ಸಂಕ್ರಾಂತಿ ನಿಮಿತ್ತ ರಾಜಸ್ಥಾನದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಎಲ್ಲೆಡೆ ಗಾಳಿಪಟಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದಾರೆ. ಆದರೆ ಆ ಗಾಳಿಪಟದ ಮೇಲೆ ರಫೇಲ್​ ಡೀಲ್​ಗೆ ಸಂಬಂಧಪಟ್ಟ ನಾಲ್ಕು ಪ್ರಶ್ನೆಗಳನ್ನು ಮುದ್ರಿಸಲಾಗಿದೆ.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರು ರಫೇಲ್​ ಡೀಲ್​ ಬಗ್ಗೆ ನಾಲ್ಕು ಪ್ರಶ್ನೆಗಳನ್ನು ಪ್ರಧಾನಿ ಮೋದಿಯವರಿಗೆ ಕೇಳಿದ್ದರು.

1) ಇಂಡಿಯನ್​ ಏರ್​ಫೋರ್ಸ್​ಗೆ 126 ಏರ್​ಕ್ರಾಫ್ಟ್​ಗಳ ಅಗತ್ಯವಿದ್ದರೂ ಸರ್ಕಾರ 36 ನ್ನು ಮಾತ್ರ ಖರೀದಿಸಲು ಕಾರಣವೇನು? 2) ಯುದ್ಧವಿಮಾನದ ಬೆಲೆಯನ್ನು 560 ಕೋಟಿಯಿಂದ 1600 ಕೋಟಿ ರೂಪಾಯಿಗೆ ಹೆಚ್ಚಳ ಮಾಡಿದ್ದು ಏಕೆ? 3)ರಫೇಲ್​ ವಿಚಾರದಲ್ಲಿ ಎಚ್​ಎಎಲ್​ ಬದಲಾಗಿ ಅನಿಲ್​ ಅಂಬಾನಿ ನೇತೃತ್ವದ ರಿಲಯನ್ಸ್​ ಡಿಫೆನ್ಸ್​ಗೆ ಯಾಕೆ ಮಹತ್ವ ನೀಡಿದಿರಿ? ಹಾಗೂ ರಫೇಲ್​ ಹೆಲಿಕಾಪ್ಟರ್​ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳು ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರ ಮಲಗುವ ಕೋಣೆಯಲ್ಲಿ ಇದೆಯೆಂದು ಹೇಳಲಾಗುತ್ತಿದೆ ಅದು ಸತ್ಯನಾ ಎಂಬ ಪ್ರಶ್ನೆಗಳನ್ನು ತಮ್ಮ ಟ್ವಿಟರ್​ ಮೂಲಕ ಕೇಳಿದ್ದರು.

ಈಗ ಈ ಎಲ್ಲ ಪ್ರಶ್ನೆಗಳನ್ನು ಗಾಳಿಪಟದ ಮೇಲೆ ಮುದ್ರಿಸಿ ಹಬ್ಬದ ನಿಮಿತ್ತ ಜನರಿಗೆ ಕಾಂಗ್ರೆಸ್​ ಕಾರ್ಯಕರ್ತರು ವಿತರಿಸುತ್ತಿದ್ದು ಮೋದಿ ಸರ್ಕಾರ ನಡೆಸಿದ ಹಗರಣದ ಜಾಗೃತಿಗಾಗಿ ಈ ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *