More

    ಜ.15ರಂದು ಮುಂಜಾನೆ ಮಕರ ಸಂಕ್ರಮಣ ಪೂಜೆ; ಸಂಜೆ ಮಕರಜ್ಯೋತಿ ದರ್ಶನ

    ಕಾಸರಗೋಡು: ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಾನದಲ್ಲಿ ಮಕರಜ್ಯೋತಿ ವೀಕ್ಷಣೆಗೆ ತಯಾರಿ ಪೂರ್ತಿಗೊಂಡಿದ್ದು, ಭಕ್ತರು ಭಾರಿ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಬಂದು ಸೇರುತ್ತಿದ್ದಾರೆ.

    ಜ.15ರಂದು ಬೆಳಗಿನ ಜಾವ 2.09ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯುವ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬುಧವಾರ ಬೆಳಗ್ಗೆ 2.09ಕ್ಕೆ ಮಕರಸಂಕ್ರಮಣ ಪೂಜೆ ನಂತರ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.

    ಪಂದಳ ಅರಮನೆಯಿಂದ ಸೋಮವಾರ ಹೊರಟ ಪವಿತ್ರ ಆಭರಣಗಳ ಮೆರವಣಿಗೆ ಜ.15ರಂದು ಮಧ್ಯಾಹ್ನ ಪಂಪೆಗೆ ತಲುಪಲಿದ್ದು, ಅಲ್ಲಿಂದ ರಾಜಪ್ರತಿನಿಧಿಯ ಅನುಮತಿಯೊಂದಿಗೆ ನೀಲಿಮಲೆ ಬೆಟ್ಟವನ್ನು ಏರಲಿದೆ. ಶರಂಗುತ್ತಿಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಆಭರಣ ಮೆರವಣಿಗೆಯನ್ನು ಎದುರುಗೊಂಡು, ಸನ್ನಿಧಾನಕ್ಕೆ ಒಯ್ಯುತ್ತಾರೆ. ಸಾಯಂಕಾಲ 5.30ಕ್ಕೆ ಅಯ್ಯಪ್ಪ ವಿಗ್ರಹಕ್ಕೆ ಆಭರಣ ತೊಡಿಸಿ 6.30ರಿಂದ 6.45ರ ಕಾಲಾವಧಿಯಲ್ಲಿ ದೀಪಾರಾಧನೆ ನಡೆಯಲಿದೆ. ನಂತರ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.

    ಜ್ಯೋತಿ ವೀಕ್ಷಣೆಗೆ 9 ಕೇಂದ್ರ: ಸನ್ನಿಧಾನ ಆಸುಪಾಸಿನ 9 ಕೇಂದ್ರಗಳಲ್ಲಿ ಮಕರಜ್ಯೋತಿ ವೀಕ್ಷಣೆಗೆ ಭಕ್ತರು ಸೇರಲಿದ್ದಾರೆ. ಸನ್ನಿಧಾನದ ಬಾಬರ ನಡೆ, ಅಪ್ಪ-ಅರವಣ ಕೌಂಟರ್ ಸನಿಹ, ಅಗ್ನಿಕುಂಡ ಸನಿಹ, ಮಾಳಿಗಪುರತ್ತಮ್ಮ ಕ್ಷೇತ್ರ ವಠಾರ, ಅನ್ನದಾನ ಮಂಟಪ, ಇನ್ಸಿನೇಟರ್ ಕೇಂದ್ರ, ಮರಕ್ಕೂಟ್ಟಂ, ಶರಂಗುತ್ತಿ, ಪಾಂಡಿತ್ತಾವಳ ಒಳಗೊಂಡಂತೆ ಪ್ರಮುಖ ಒಂಬತ್ತು ಕೇಂದ್ರಗಳಲ್ಲಿ ಭಕ್ತರು ಮಕರಜ್ಯೋತಿ ವೀಕ್ಷಿಸಲಿದ್ದಾರೆ. ಮಕರಜ್ಯೋತಿ ಅಂಗವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಬೃಹತ್ ಕಟ್ಟಡಗಳ ಮೇಲೆ ಏರಿ ಹಾಗೂ ಪಂಪೆಯ ಹಿಲ್​ಟಾಪ್​ನಲ್ಲಿ ಜ್ಯೋತಿ ವೀಕ್ಷಣೆಗೆ ಪೊಲೀಸರು ಅನುಮತಿ ನಿಷೇಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts