blank

ರಾಜಧಾನಿ ಬೆಂಗಳೂರಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ

blank

ಬೆಂಗಳೂರು: ಮಹಾನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ ಸಾರ್ವಜನಿಕರು, ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿ ಒಳ್ಳೆಯ ಮಾತನಾಡುವ ಎಂದು ಸಂಬೋಧಿಸಿ ವರ್ಷದ ಮೊದಲ ಉತ್ಸವವನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಮಂಗಳವಾರ ವಿವಿಧ ಬಡಾವಣೆಗಳಲ್ಲಿನ ಮನೆಗಳ ಮುಂದೆ ಬಿಡಿಸಿದ್ದ ಬಣ್ಣ ಬಣ್ಣದ ರಂಗೋಲಿ ಕಂಗೊಳಿಸುತ್ತಿತ್ತು. ಮನೆಗಳಲ್ಲಿ ಪೂಜೆ ಮಾಡಿದ ಬಳಿಕ ತಮ್ಮ ಸಮೀಪದ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಹೆಂಗೆಳೆಯರು ತಮ್ಮ ಬಂಧುಗಳು, ಸ್ನೇಹ ಬಳಗದೊಂದಿಗೆ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ಖುಷಿಪಟ್ಟರು.

ಹಬ್ಬದ ವಿಶೇಷತೆಯಾದ ಕಡ್ಲೆಕಾಯಿ, ಅವರೆಕಾಯಿ, ಗೆಣಸನ್ನು ಬೇಯಿಸಿ ಹುಗ್ಗಿಯೊಂದಿಗೆ ಮನೆ ಮಂದಿಯೆಲ್ಲ ಸೇರಿ ಹಬ್ಬದೂಟ ಸವಿದರು. ಕೆಲ ಸಂಘ-ಸಂಸ್ಥೆಗಳು ಸಾಮೂಹಿಕವಾಗಿ ಸಂಕ್ರಾಂತಿ ಆಚರಿಸಿದರು. ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಗರದ ಹೊರವಲಯದ ಗ್ರಾಮೀಣ ಸೊಗಡು ಉಳಿಸಿಕೊಂಡಿರುವ ಹಳ್ಳಿಗಳಲ್ಲಿ ಸಂಕ್ರಾಂತಿ ಸಂಭ್ರಮ ಅಧಿಕವಾಗಿ ಕಂಡುಬಂದಿತು. ಗ್ರಾಮ ದೇವತೆಗಳ ದೇವಸ್ಥಾನಗಳಲ್ಲಿ ದೇವರುಗಳಿಗೆ ವಿಶೇಷಾಲಂಕಾರದ ಜತೆಗೆ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು. ಸಂಜೆ ಊರಿನ ಮುಖ್ಯ ದ್ವಾರ ಹಾಗೂ ಗ್ರಾಮದೇವತೆ ದೇಗುಲಗಳ ಬಳಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು. ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಊರಿನೊಳಗೆ ಮೆರವಣಿಗೆ ಮಾಡಿದ ವೇಳೆ ಮಕ್ಕಳು ಸೇರಿದಂತೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸುಗ್ಗಿ ಹಬ್ಬವನ್ನು ಆಚರಿಸಿ ಸಂತಸಪಟ್ಟರು.

ದೇಗುಲಗಳಲ್ಲಿ ವಿಶೇಷ ಪೂಜೆ:

ನಗರದ ಪ್ರಮುಖ ದೇಗುಲಗಳಾದ ಬಸವನಗುಡಿಯ ದೊಡ್ಡಬಸವಣ್ಣ ದೇವಾಲಯ, ಕೆ.ಆರ್.ಮಾರುಕಟ್ಟೆಯ ಕೋಟೆ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಬನಶಂಕರಿ ದೇಗುಲ, ಯಶವಂತಪುರ ಗಾಯತ್ರಿ ದೇವಸ್ಥಾನ ಇತ್ಯಾದಿ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಕೆಲವೆಡೆ ಎಳ್ಳು-ಬೆಲ್ಲವನ್ನು ಪ್ರಸಾದವಾಗಿ ವಿತರಿಸಲಾಯಿತು. ಕೆಲ ದೇಗುಲಗಳಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಪೌರಕಾರ್ಮಿಕರೊಂದಿಗೆ ಸುಗ್ಗಿ ಹಬ್ಬ:

ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ ಆಯೋಜಿಸಿದ್ದ ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರು ಪೌರಕಾರ್ಮಿಕರ ಜತೆಗೂಡಿ ಸಂಕ್ರಾಂತಿ ಆಚರಿಸಿದರು. ಮಹಿಳಾ ಪೌರಕಾರ್ಮಿಕರಿಗೆ ಹೊಸ ಬಟ್ಟೆ, ದಿನಸಿ ಸಾಮಗ್ರಿ ವಿತರಿಸಲಾಯಿತು. ಸ್ಥಳೀಯ ಮುಖಂಡ ಎನ್.ನಾಗರಾಜ್ ಹಾಜರಿದ್ದರು.

ಶಿವಲಿಂಗದ ಮೇಲೆ ಮೂಡದ ಸೂರ್ಯರಶ್ಮಿ:

ಇತಿಹಾಸ ಪ್ರಸಿದ್ಧ ಗವಿಪುರ ಗುಟ್ಟಹಳ್ಳಿಯ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಂಕ್ರಾಂತಿ ದಿನದಂದು ಸಂಜೆ ಶಿವಲಿಂಗದ ಮೇಲೆ ಸೂರ್ಯ ಕಿರಣಗಳು ಹಾದುಹೋಗುವ ಕೌತಕ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಆದರೆ, ಈ ಬಾರಿ ಮೋಡ ಕವಿದ ವಾತಾವರಣದಿಂದಾಗಿ ಶಿವಲಿಂಗದ ಮೇಲೆ ಸೂರ್ಯರಶ್ಮಿ ಬೀಳಲಿಲ್ಲ. ಇದರಿಂದ ನೆರೆದಿದ್ದ ನೂರಾರು ಭಕ್ತರು ನಿರಾಸೆಗೆ ಒಳಗಾದರು.

ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಕ್ಷಣವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಲು ದೇಗುಲ ವತಿಯಿಂದ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 5.14ರಿಂದ 5.17ರ ವೇಳೆ ಸೂರ್ಯಕಿರಣ ಶಿವಲಿಂಗ ಸ್ಪರ್ಶಿಸಬೇಕಿತ್ತು. ಮೋಡದ ವಾತಾವರಣದಿಂದ ಇದು ಸಾಧ್ಯವಾಗಲಿಲ್ಲ. ಬಳಿಕ ದೇಗುಲದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ದೇವಾಲಯದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್, ಶಿವಲಿಂಗಕ್ಕೆ ಸೂರ್ಯರಶ್ನಿ ಸ್ಪರ್ಶಿಸದಿರುವುದು ಯಾವುದೇ ರೀತಿಯಲ್ಲೂ ಅಶುಭ ಉಂಟಾಗದು. ಸಮಾಜಕ್ಕೆ ಯಾವುದೇ ಕಂಟಕ ಎದುರಾಗದು ಎಂದರು.

ಮೇಲ್ಮನೆ ಸದಸ್ಯ ಟಿ.ಎ.ಶರವಣ, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಮುಜರಾಯಿ ಇಲಾಖೆ ಆಯುಕ್ತ ಡಾ. ಎಂ.ವಿ.ವೆಂಕಟೇಶ್, ಮಾಜಿ ಕಾರ್ಪೊರೇಟರ್‌ಗಳು ಸೇರಿ ಹಲವು ಗಣ್ಯರು ಹಾಜರಿದ್ದರು.

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…