ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಮಂಗಳವಾರ ಮಕರ ಸಂಕ್ರಾಂತಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿತ್ತು. ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಬಹುತೇಕರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಸಂಕ್ರಾಂತಿ ಅಂಗವಾಗಿ ಹಲವು ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸಂಕ್ರಾಂತಿ ದಿನ ಸ್ನೇಹಿತರಿಗೆ, ನೆರೆಹೊರೆಯವರಿಗೆ ಎಳ್ಳು-ಬೆಲ್ಲ ಹಂಚುವುದು ಅನಾದಿ ಕಾಲದಿಂದ ನಡೆದು ಬಂದ ಪದ್ಧತಿ. ಅದರಂತೆ ವಿಶೇಷವಾಗಿ ಹೆಣ್ಣು ಮಕ್ಕಳು ಎಳ್ಳು-ಬೆಲ್ಲದ ಜತೆಗೆ ಕಬ್ಬಿನ ತುಂಡನ್ನು ನೆರೆ ಹೊರೆಯವರಿಗೆ, ಸ್ನೇಹಿತರಿಗೆ ಹಂಚುವ ಮೂಲಕ ಸಂಭ್ರಮಿಸಿದರು.
ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ, ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನ, ಬೆಜ್ಜವಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಕೂಡಲಿಯ ತುಂಗ-ಭದ್ರಾ ನದಿಯಲ್ಲಿ ನೂರಾರು ಭಕ್ತರು ಪುಣ್ಯಸ್ನಾನ ಮಾಡಿದರು. ಈ ವೇಳೆ ನಿರ್ಮಲ ತುಂಗಾ ಅಭಿಯಾನ, ವರದಶ್ರೀ ಫೌಂಡೇಶನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನದಿಯ ಪಾವಿತ್ರೃ ಮತ್ತು ಶುದ್ಧತೆಯ ಅರಿವು ಮೂಡಿಸಲು ವಿಷಮುಕ್ತ ಪುಣ್ಯಸ್ನಾನ ಅಭಿಯಾನ ನಡೆಸಲಾಯಿತು. ನದಿ ನೀರಿಗೆ ಶಾಂಪೂ, ಸಾಬೂನು ಮುಂತಾದ ರಾಸಾಯನಿಕಗಳನ್ನು ಸೇರಿಸದೆ ಕಡಲೆಹಿಟ್ಟು ಬಳಸಿ ಸ್ನಾನ ಮಾಡುವಂತೆ ತಿಳಿಸಲಾಯಿತು.
ಶಿವಮೊಗ್ಗದ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರಾಮತಾಕರ ಹೋಮ ನೆರವೇರಿತು. ಸಂಜೆ ತುಂಗಾ ನದಿಯಲ್ಲಿ ವೈಭವದ ತೆಪ್ಪೋತ್ಸವ ನಡೆಯಿತು. ನೂರಾರು ಮಂದಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಕೋಟೆ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.