ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ಇದೆ ಎಂಬ ಕಾಂಗ್ರೆಸ್​ ಹೇಳಿಕೆ ಪುನರುಚ್ಚರಿಸಿದ ಪಾಕ್​ ಪ್ರಧಾನಿ ಇಮ್ರಾನ್​

ನ್ಯೂಯಾರ್ಕ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್​ನ ಮುಖಂಡರು ನೀಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿರುವ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​, ಕಾಶ್ಮೀರ ವಿಷಯದಲ್ಲಿ ಜಾಗತಿಕವಾಗಿ ಗಮನಸೆಳೆಯಲು ಮತ್ತೊಮ್ಮೆ ಪ್ರಯತ್ನಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗೂ ತನಗೂ ಯಾವುದೆ ಸಂಬಂಧ ಇಲ್ಲ ಎಂದು ಕಾಂಗ್ರೆಸ್​ ಹೇಳುತ್ತಿದೆ. ಆದರೂ ಇದು ಕಾಂಗ್ರೆಸ್​ನ ಹೇಳಿಕೆಯೆಂದು ಇಮ್ರಾನ್​ ಖಾನ್​ ಪ್ರಸ್ತಾಪಿಸುತ್ತಿರುವುದರಿಂದ ಕಾಂಗ್ರೆಸ್​ನ ಮುಜುಗರ ಮುಂದುವರಿದಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಬುಧವಾರ ಆಯೋಜನಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಇಮ್ರಾನ್​ ಖಾನ್​ ಈ ವಿಷಯವನ್ನು ಪ್ರಸ್ತಾಪಿಸಿದರು.

ಮೊದಲಿಗೆ ಅವರು ಕಾಶ್ಮೀರದಲ್ಲಿ ವಿಧಿಸಿರುವ ಕರ್ಫ್ಯೂವನ್ನು ತೆರವುಗೊಳಿಸಬೇಕು. ಅಂದಾಜು 50ಕ್ಕೂ ಹೆಚ್ಚು ದಿನದಿಂದ ಕಣಿವೆಯ ನಿವಾಸಿಗಳಿಗೆ ಮನೆಯಿಂದ ಹೊರಬರಲು ಅವಕಾಶ ನೀಡಲಾಗುತ್ತಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್​ ಆರೋಪಿಸಿದೆ. ರಾಜಕೀಯ ಬಂಧಿಗಳಾಗಿರುವವರ ಪರಿಸ್ಥಿತಿ ಏನಾಗಿದೆ ಎಂಬುದೇ ತಿಳಿಯದಾಗಿದೆ. ಈ ವಿಷಯದಲ್ಲಿ ಪ್ರಧಾನಿ ಮೋದಿ ಏನೋ ಮಾಡಲು ಹೋಗಿ, ಇನ್ನೊಂದು ಮಾಡಿದ್ದಾರೆ ಎಂದು ದೂರಿದರು.

ಇಮ್ರಾನ್​ ಖಾನ್​ ಅವರ ಈ ಹೇಳಿಕೆ ಕಾಂಗ್ರೆಸ್ ಮುಖಂಡರಿಗೆ ಭಾರಿ ಮುಜಗರವನ್ನುಂಟು ಮಾಡಿದೆ. ಕಾಶ್ಮಿರ ಕಣಿವೆಯಲ್ಲಿ 370 ವಿಧಿ ರದ್ದುಗೊಳಿಸಿದ ನಂತರದಲ್ಲಿ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್​ ಕಾನ್ಫರೆನ್ಸ್​ನ ನಾಯಕ ಓಮರ್​ ಅಬ್ದುಲ್ಲಾ ಅವರ ಹೇಳಿಕೆಯನ್ನು ಒಳಗೊಂಡಿದ್ದ ಪಾಕಿಸ್ತಾನದ ದಾಖಲೆಯೊಂದು ಸೋರಿಕೆಯಾಗಿತ್ತು. ಅಂದಿನಿಂದಲೂ ಕಾಂಗ್ರೆಸ್​ ಮುಖಂಡರ ಹೇಳಿಕೆ ಬಗ್ಗೆ ರಾಷ್ಟ್ರಾದ್ಯಂತ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ. ಜತೆಗೆ ಈ ಅಂಶ ಕಾಂಗ್ರೆಸ್​ ಅನ್ನು ತೀವ್ರ ಮುಜುಗರಕ್ಕೀಡು ಮಾಡುತ್ತಿದೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಕ್ಕೆ ಟರ್ಕಿ ಅಧ್ಯಕ್ಷರಿಗೆ ಮನವಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ, ಸುದೀರ್ಘ ಕಾಲದಿಂದಲೂ ಇರುವ ಸಮಸ್ಯೆಯನ್ನು ಪರಿಹರಿಸಲು ಮುಂದಾಗುವಂತೆ ಜಾಗತಿಕ ಶಕ್ತಿಗಳಿಗೆ ಸಲಹೆ ನೀಡುವಂತೆ ಟರ್ಕಿ ಅಧ್ಯಕ್ಷ ರೆಸೆಪ್​ ತಯ್ಯೀಪ್​ ಎರ್ಡೋಗಾನ್​ ಅವರಿಗೆ ಇಮ್ರಾನ್​ ಖಾನ್​ ಮನವಿ ಮಾಡಿಕೊಂಡರು.

ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ, ಸೌಹಾರ್ದ ವಾತಾವರಣ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಕಾಶ್ಮೀರ ವಿಷಯವನ್ನು ಇತ್ಯರ್ಥ ಪಡಿಸುವುದು ತುಂಬಾ ಮುಖ್ಯ ಎಂಬುದನ್ನು ಅವರು ಸಭೆಯಲ್ಲಿ ಪ್ರತಿಪಾದಿಸುವ ವಿಶ್ವಾಸ ತಮಗಿರುವುದಾಗಿ ಹೇಳಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *