ಶಿವಮೊಗ್ಗ: ಕೇಂದ್ರ ಕೃಷಿ ಮಂತ್ರಾಲಯವು ಶಿವಮೊಗ್ಗ ಜಿಲ್ಲೆಗೆ ಸಂಕ್ರಾಂತಿ ಸಂದರ್ಭದಲ್ಲಿ ಬಹುನಿರೀಕ್ಷಿತ ಮೆಕ್ಕೆಜೋಳ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಪತ್ರ ಹೊರಡಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಮೂರ‌್ನಾಲ್ಕು ವರ್ಷಗಳ ಸತತ ಪ್ರಯತ್ನ ಈಗ ಕೈಗೂಡಿದೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ದಾವಣಗೆರೆ, ಹಾವೇರಿ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳ ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲವಾಗಲಿದೆ. 2021-22ರಲ್ಲಿ ನರೇಂದ್ರ ಸಿಂಗ್ ತೋಮರ್ ಕೃಷಿ ಸಚಿವರಾಗಿದ್ದ ಸಂದರ್ಭದಲ್ಲೇ ಸಂಶೋಧನಾ ಕೇಂದ್ರ ಮಂಜೂರು ಮಾಡುವಂತೆ ಮನವಿ ಮಾಡಿದ್ದೆ. ಈಗ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಐಐಎಂಆರ್ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಜ್ ರೀಸರ್ಚ್) ಮಂಜೂರು ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಲೂದಿಯಾನದಲ್ಲಿರುವ ಪಂಜಾಬ್ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಐಎಂಆರ್ ಅನ್ನು ಶಿವಮೊಗ್ಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇಲ್ಲಿನ ಹವಾಮಾನ, ಪರಿಸರ, ಮೆಕ್ಕೆಜೋಳ ಬೆಳೆಯುವ ವಿಸ್ತಾರವಾದ ಭೂಮಿ ಸಂಶೋಧನೆಗೆ ಹೆಚ್ಚು ಸೂಕ್ತವಾಗಿದೆ ಎಂಬ ಕಾರಣಕ್ಕೆ ಈ ಅವಕಾಶ ಸಿಕ್ಕಿದೆ. ಐಸಿಎಆರ್ (ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್) ಅಡಿಯಲ್ಲಿ ಐಐಎಂಆರ್ ಕಾರ್ಯನಿರ್ವಹಿಸುತ್ತದೆ. ಶಿವಮೊಗ್ಗದಲ್ಲಿ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಸಿ.ಎಚ್.ಮಾಲತೇಶ್, ಕಾರ್ಯದರ್ಶಿಗಳಾದ ವಿನ್ಸೆಂಟ್ ರೋಡ್ರಿಗಸ್, ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಶೀರ್ನಲ್ಲಿ ಸುರೇಶ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.