ಸ್ಥಳಾಂತರಗೊಳ್ಳುವುದೇ ಮೆಕ್ಕೆಜೋಳ ಪಾರ್ಕ್?

ರಾಣೆಬೆನ್ನೂರ: ನಗರದ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ವಿುಸಲು ಉದ್ದೇಶಿಸಿದ್ದ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಈಗ ಮಾಗೋಡು ರಸ್ತೆಯ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಇದು ವರ್ತಕರಿಗೆ ಮತ್ತು ರೈತರಿಗೆ ಅನುಕೂಲವಾಗಬಹುದಾಗಿದೆ.

ನಗರದಿಂದ 8 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೂನಬೇವು ಮತ್ತು ಹುಲ್ಲಳ್ಳಿ ವ್ಯಾಪ್ತಿಗೊಳಪಡುವ ಎಪಿಎಂಸಿಯ ಮೆಗಾ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವ ಬಗೆಗೆ 2012ರಲ್ಲಿ ಬಜೆಟ್​ನಲ್ಲಿ ಘೊಷಿಸಲಾಗಿತ್ತು. ಜತೆಗೆ, ಕೇಂದ್ರ ಕಚೇರಿಯಿಂದ ಅನುಮತಿ ಪಡೆದು ಬೆಂಗಳೂರಿನ ಟೆಕ್ಸಾಕ್ ಸಂಸ್ಥೆಯವರಿಂದ ಡಿಮ್ಯಾಂಡ್ ಸರ್ವೆ ನಡೆಸಿ, ಮೆಗಾ ಮಾರುಕಟ್ಟೆಯ 220.24 ಎಕರೆ ಪ್ರದೇಶದಲ್ಲಿ 60 ಎಕರೆ ಪ್ರದೇಶವನ್ನು ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್​ಗೆ ಮೀಸಲಿಡಲಾಗಿತ್ತು.

ಪಾರ್ಕ್ ಸ್ಥಾಪನೆಯ ಉದ್ದೇಶ: ಮೆಕ್ಕೆಜೋಳ ಬೆಳೆ ಉತ್ಪಾದಕರಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸುವುದು. ಬೆಳೆಗೆ ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು. ರೈತರಿಗೆ ಸಾಗಣೆ ವೆಚ್ಚ ತಗ್ಗಿಸುವುದು. ಮೆಕ್ಕೆಜೋಳ ಉದ್ದಿಮೆಗಳ ಬೆಳವಣಿಗೆ ಹಾಗೂ ಜತೆಗೆ ಕ್ಲೀನಿಂಗ್, ಗ್ರೇಡಿಂಗ್, ಪ್ಯಾಕೇಜಿಂಗ್, ವೇರ್ ಹೌಸಿಂಗ್, ಮೇಜ್ ಪ್ರೋರೋಮಿಲ್, ಪೌಲ್ಟ್ರಿ ಫೀಡ್ಸ್, ಮೇಜ್ ಡ್ರೈಯಿಂಗ್, ಗ್ರಿಡ್ ಇತ್ಯಾದಿಗಳನ್ನು ಸ್ಥಾಪಿಸಿ ಮೆಕ್ಕೆಜೋಳ ಉತ್ಪನ್ನದ ಮೌಲ್ಯವರ್ಧನೆ ದೊರಕಿಸುವ ನಿರೀಕ್ಷೆಯೊಂದಿಗೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತಿತರರ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ.

ಪಾರ್ಕ್ ಸ್ಥಳಾಂತರಕ್ಕೆ ಕಾರಣವೇನು?: ಕೆಐಎಡಿಬಿ ವತಿಯಿಂದ ಮಾಗೋಡು ರಸ್ತೆಯಲ್ಲಿ 258 ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದು, ಇಲ್ಲಿಯೇ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಲು ಕೋರಬಹುದು ಎಂದು ಅಂದಿನ ಎಪಿಎಂಸಿ ಅಧ್ಯಕ್ಷ ಮಂಜನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿತ್ತು. ಮೆಗಾ ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳ ಪಾರ್ಕ್ ಸ್ಥಾಪನೆಗೊಂಡರೆ ಭವಿಷ್ಯದಲ್ಲಿ ಮಾರುಕಟ್ಟೆಯ ವಿಸ್ತೀರ್ಣ ಮತ್ತು ವಹಿವಾಟಿಗೆ ತೊಂದರೆಯಾಗಲಿದೆ. ಹಾಲಿ ಇರುವ ಎಪಿಎಂಸಿ ಮಾರುಕಟ್ಟೆಯ ಸ್ಥಿತಿಯೇ ಮೆಗಾ ಮಾರುಕಟ್ಟೆಯಲ್ಲಿ ತಲೆದೋರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಮಂಡಿಸಿದ್ದರು. ಅಂದಿನ ಶಾಸಕರಾದ ಕೆ.ಬಿ. ಕೋಳಿವಾಡರು ಮೆಗಾ ಮಾರುಕಟ್ಟೆ ಪ್ರಾಂಗಣದ ಬದಲಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ವರ್ಗಾಯಿಸಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಿಗೆ ಕೋರಲಾಗಿತ್ತು. ಈ ನಿಟ್ಟಿನಲ್ಲಿ 2017ರ ಆಗಸ್ಟ್ ಮತ್ತು ಅಕ್ಟೋಬರ್​ನಲ್ಲಿ ಸಭೆ ನಡೆದು, ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಯೋಜನೆಯನ್ನು ವಾಣಿಜ್ಯ ಕೈಗಾರಿಕಾ ಇಲಾಖೆಗೆ ವರ್ಗಾಯಿಸುವ ಕುರಿತಂತೆ ಸ್ಪಷ್ಟ ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶಕರಿಗೆ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಸೂಚನೆ ನೀಡಿದ್ದರು.

ಪಾರ್ಕ್ ಸ್ಥಾಪನೆ ಪ್ರಕ್ರಿಯೆ ಸ್ಥಗಿತ: ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವ ಬಗೆಗೆ ಸರ್ಕಾರದಿಂದ ಮಾರ್ಗದರ್ಶನ ಬರುವವರೆಗೆ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭಿಸಬಾರದೆಂದು ಅಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದ ಕೋಳಿವಾಡರು ಮೌಖಿಕವಾಗಿ 2017ರ ಅಕ್ಟೋಬರ್ 23ರಂದು ಸೂಚಿಸಿದ್ದರು. ಜತೆಗೆ, ಮೆಗಾ ಮಾರುಕಟ್ಟೆ ಅಭಿವೃದ್ಧಿಯ ದೃಷ್ಟಿಯಿಂದ ಪಾರ್ಕ್ ಸ್ಥಳಾಂತರ ಉತ್ತಮವೆಂಬುದು ಎಪಿಎಂಸಿ ಸದಸ್ಯರು, ವರ್ತಕರು ಹಾಗೂ ರೈತರ ಅಭಿಪ್ರಾಯವಾಗಿದೆ.

ಮೆಗಾ ಮಾರುಕಟ್ಟೆ ಪ್ರಾಂಗಣದ 60 ಎಕರೆ ಜಾಗದಲ್ಲಿ ನಿರ್ವಿುಸಲು ಉದ್ದೇಶಿಸಿದ್ದ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಾದಲ್ಲಿ, ಪ್ರಸ್ತುತ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುವ ವರ್ತಕರರಿಗೆ ತೊಂದರೆಯಾಗಬಹುದು. ಸಮಿತಿಯ ಮೂಲ ಉದ್ದೇಶಕ್ಕೂ ಧಕ್ಕೆಯಾಗುವ ಸಂಭವವಿರುವುದರಿಂದ, ಸಮಿತಿಯ ಮೂಲಕ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಯೋಜನೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ವರ್ಗಾಯಿಸಲು ಸಿದ್ಧತೆ ನಡೆದಿದೆ.

| ಸಿದ್ದಲಿಂಗಪ್ಪ ಕುಡಗೋಲು, ಅಧ್ಯಕ್ಷರು, ಎಪಿಎಂಸಿ