ತೆನೆ ಹಾಳಾಗದಂತೆ ತಡೆಯಲು ಕ್ರಮ I ಜಾನುವಾರುಗಳಿಗೆ ಉತ್ಕೃಷ್ಟ ಮೇವು
ಮಾಯಕೊಂಡ: ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ಅನೇಕ ಗ್ರಾಮಗಳ ರೈತರು ಮೆಕ್ಕೆಜೋಳ ಸೂಲಂಗಿಯ ಸೊಪ್ಪೆ ಕಟಾವು ಕಾರ್ಯ ಪ್ರಾರಂಭಿಸಿದ್ದಾರೆ.
ದಾವಣಗೆರೆ ಕಸಬಾ ಸೇರಿ ಎಲ್ಲ ಹೋಬಳಿಗಳ 31,917 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಮೆಕ್ಕೆಜೋಳ ಬಿತ್ತನೆ ಮಾಡಿ ನೂರು ದಿನಗಳು ಆಗಿವೆ.
ಅಕ್ಟೋಬರ್ ಕೊನೇ ಅಥವಾ ನವೆಂಬರ್ ಮೊದಲ ವಾರ ರೈತರು ಬೆಳೆ ಕಟಾವು ಮಾಡುವ ನಿರೀಕ್ಷೆ ಇದೆ. ಮೆಕ್ಕೆಜೋಳದ ಸೂಲಂಗಿ ಸೊಪ್ಪೆಯು ದನಗಳಿಗೆ ಉತ್ಕೃಷ್ಟ ಮೇವು ಆಗಿರುವ ಕಾರಣ ರೈತರು ಅದರ ಕಟಾವಿಗೆ ಮುಂದಾಗಿದ್ದಾರೆ.
ಸೂಲಂಗಿ ಸೊಪ್ಪೆ ಕತ್ತರಿಸಿದರೆ ತೆನೆಗಳು ಬೇಗ ಒಣಗುತ್ತವೆ. ಕೂಲಿ ಕಾರ್ಮಿಕರಿಂದ ಅಥವಾ ಮಿಷನ್‌ನಿಂದ ಬೆಳೆ ಕಟಾವಿಗೆ ಅನುಕೂಲ ಆಗುತ್ತದೆ. ತೆನೆಗಳು ನೆಲಕ್ಕೆ ಬೀಳುವುದು, ಹಾಳಾಗುವುದು ತಪ್ಪುತ್ತದೆ ಎನ್ನುತ್ತಾರೆ ನರಗನಹಳ್ಳಿ ರೈತ ಪೂಜಾರ್ ಕೃಷ್ಣರಾಜ್.
ದಾವಣಗೆರೆ ತಾಲೂಕಿನಲ್ಲಿ ಈ ಬಾರಿ 31,917 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತತ್ನೆ ಮಾಡಿದ್ದು ಉತ್ತಮ ಇಳುವರಿಯ ನಿರೀಕ್ಷೆ ಇದೆ. ಸೂಲಂಗಿ ಸೊಪ್ಪೆ ಕತ್ತರಿಸಿದರೆ ತೆನೆಗೆ ನೇರವಾಗಿ ಬಿಸಿಲು, ಗಾಳಿ ಬಿದ್ದು, ಕಾಳುಗಳು ಬಹುಬೇಗನೆ ಒಣಗುತ್ತವೆ.
I ಡಿ.ಎಂ. ಶ್ರೀಧರಮೂರ್ತಿ, ತಾಲೂಕು ಕೃಷಿ ಸಹಾಯಕ ನಿರ್ದೇಶಕ.
ದಿಂಡದಹಳ್ಳಿ ಸುತ್ತಲಿನ ಗ್ರಾಮಗಳಲ್ಲಿ ಜೂನ್ ಮೊದಲ, ಎರಡನೇ ವಾರದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಕಟಾವಿಗೆ ಬಂದಿದೆ. ಕೂಲಿಕಾರರ ಸಮಸ್ಯೆ ನೀಗಿಸಲು ಯಂತ್ರದ ಮೊರೆ ಹೋಗುವುದು ಅನಿವಾರ್ಯ. ತೆನೆ ಹಾಳಾಗಬಾರದು ಎನ್ನುವ ಕಾರಣಕ್ಕೆ ಎಕರೆಗೆ 600ರಿಂದ 650 ರೂ. ಕೊಟ್ಟು ಸೂಲಂಗಿ ಸೊಪ್ಪೆ ಕತ್ತರಿಸಲಾಗುತ್ತದೆ.
I ಡಿ.ಸಿ. ಬಸವರಾಜಪ್ಪ, ಪ್ರಗತಿಪರ ರೈತ, ದಿಂಡದಹಳ್ಳಿ.
ಮೆಕ್ಕೆಜೋಳ, ಸೂಲಂಗಿ, ಸೊಪ್ಪೆ,