ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ

ಕುಶಾಲನಗರ: ಸಮಾಜದಲ್ಲಿ ಪ್ರಾಮಾಣಿಕ ಶ್ರದ್ಧೆ ಹಾಗೂ ಮಹತ್ವದ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಕ್ಕಾಗಿ ಬದುಕಬೇಕು. ತನ್ನ ಸಂಪಾದನೆಯಲ್ಲಿ ಒಂದು ಪ್ರಮಾಣವಾದರೂ ಇಲ್ಲದವರಿಗೆ ನೀಡುವ ಚಿಂತನೆ ಹೊಂದಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸೋಮವಾರಪೇಟೆಯ ರೋಟರಿ ಹಿಲ್ಸ್, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಬ್ಯಾಡಗೊಟ್ಟದಲ್ಲಿ ಬುಧವಾರ ಆಯೋಜಿಸಿದ್ದ ಕಾಯಕ ದಿನಾಚರಣೆ, ಬಸವಣ್ಣ, ಬುದ್ಧ, ಮಹಾವೀರ, ಅಕ್ಕಮಹಾದೇವಿ, ವಾಲ್ಮೀಕಿ, ಅಂಬೇಡ್ಕರ್, ಶಂಕರ, ಶಿವಕುಮಾರ ಸ್ವಾಮೀಜಿ ಜಯಂತಿ ಸಮಾರಂಭ ಮತ್ತು ದಿಡ್ಡಳ್ಳಿ ನಿರಾಶ್ರಿತರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವೀಯ ಶಿಕ್ಷಣವನ್ನು ವೈಯಕ್ತಿಕ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಸಾಮಾಜಿಕ ನ್ಯಾಯದ ಕೊರತೆಯ ನಡುವೆ ಸಹೋದರತ್ವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮಾದ್ರೆಯ ಮುದ್ದಿನಕಟ್ಟೆ ಮಠದ ಶ್ರೀಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಿರಾಶ್ರಿತರ ಆರೋಗ್ಯ ತಪಾಸಣೆಯು ಸಾರ್ಥಕತೆಯ ಕಾರ್ಯಕ್ರಮವಾಗಿದೆ. ಇದು ಅವರು ಬದುಕಿದಲ್ಲಿ ಚೈತನ್ಯವನ್ನು ಮೂಡಿಸುತ್ತದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮನುಷ್ಯ ಸುಸಂಸ್ಕೃತವಾಗಿರಲು ಶಿಕ್ಷಣದ ಜತೆಗೆ ಆರೋಗ್ಯವು ಮುಖ್ಯವಾಗಿರುತ್ತದೆ. ಬಸವಣ್ಣನವರು ಸಮಾಜಕ್ಕೆ ನೀಡಿದ ಉತ್ತಮವಾದ ಮಾರ್ಗದರ್ಶನವನ್ನು ಎಲ್ಲ ವರ್ಗದ ಜನರು ಮೈಗೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಕೊಡಗು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಮಹೇಶ್ ವಹಿಸಿದ್ದರು. ಕೊಡ್ಲಿಪೇಟೆ ಕಲ್ಲು ಮಠದ ಶ್ರೀಮಹಾಂತ ಸ್ವಾಮೀಜಿ, ಸೋಮವಾರಪೇಟೆ ವೀರಶೈವ ಮಹಾಸಭಾ ಅಧ್ಯಕ್ಷ ಹಾಲಪ್ಪ, ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವಪ್ಪ, ವಿರಾಜಪೇಟೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್, ಕುಶಾಲನಗರ ಪಾಲಿಟೆಕ್ನಿಕ್ ಕಾಲೇಜಿನ ಮಾಜಿ ಪ್ರಾಂಶುಪಾಲ ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ವೇದಿಕೆಯ ಪ್ರಮುಖರು ಇದ್ದರು.

ಈ ಸಂದರ್ಭ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಹಾಗೂ ಶೌರ್ಯಚಕ್ರ ಪುರಸ್ಕೃತರಾದ ಎನ್.ಎನ್.ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದ್ರೋಗ, ಸ್ತ್ರೀರೋಗ, ಚರ್ಮರೋಗ, ಮಕ್ಕಳ ತಜ್ಞರಿಂದ ಮಕ್ಕಳ ತಪಾಸಣೆ, ಇಸಿಜಿ ಮತ್ತು ಎಕೋ ಪರೀಕ್ಷೆ ನಡೆದವು. 300ಕ್ಕೂ ಹೆಚ್ಚು ನಿರಾಶ್ರಿತರು ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

ಪ್ರಾರ್ಥನೆಯನ್ನು ಅಕ್ಕನ ಬಳಗದವರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಎಸ್.ಕೆ.ಸೌಭಾಗ್ಯ ನೆರವೇರಿಸಿದರು.