ಅಡಕೆ ಮರವೇರುವ ಬೈಕ್ ಯಂತ್ರದ ಮೇಲೆ ಮಹೀಂದ್ರಾ ಕಣ್ಣು

ಬಂಟ್ವಾಳ: ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್‌ನ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಸಜೀಪಮೂಡ ಗ್ರಾಪಂನ ನಿಕಟಪೂರ್ವ ಅಧ್ಯಕ್ಷ ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಿದ್ದು, ಯುವತಿಯೋರ್ವಳು ಮರ ಏರುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈಗ ಯಂತ್ರಕ್ಕೆ ದೇಶ ಹಾಗೂ ಹೊರದೇಶಗಳಿಂದಲೂ ಬೇಡಿಕೆ ಬರುತ್ತಿದೆ.

ಈಗ ಮರ ಹತ್ತಿ ಕೆಲಸ ಮಾಡಲು ನುರಿತ ಕಾರ್ಮಿಕರು ಸಿಗುತ್ತಿಲ್ಲ ಎಂಬುದು ಕರಾವಳಿಯ ಅಡಕೆ ಬೆಳೆಗಾರರ ಅಳಲು. ಮರ ಹತ್ತಲು ಹಲವು ಯಂತ್ರಗಳ ಆವಿಷ್ಕಾರಗಳು ಕಾಲಕಾಲಕ್ಕೆ ನಡೆಯುತ್ತಲೇ ಇವೆ. ಇದಕ್ಕೊಂದು ಸೇರ್ಪಡೆ ಮರ ಹತ್ತುವ ಬೈಕ್. ಇದರ ಮೂಲ ಉದ್ದೇಶವೇ ಯಾರ ಸಹಾಯವೂ ಇಲ್ಲದೆ ಮರ ಹತ್ತುವುದು. ಸದ್ಯಕ್ಕೆ ಅಡಕೆ ಮರ ಹತ್ತಲು ಉಪಯೋಗವಾಗುತ್ತಿರುವ ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯನ್ನು ಗಣಪತಿ ಭಟ್ ಹಾಕಿಕೊಂಡಿದ್ದಾರೆ.

ಬೈಕ್ ಮಾದರಿಯ ಯಂತ್ರ: ಇದು ೨೮ ಕೆ.ಜಿ. ತೂಕವುಳ್ಳ ಪೆಟ್ರೋಲ್ ಚಾಲಿತ ೨ ಸ್ಟ್ರೋಕ್ ಇಂಜಿನ್ ಇರುವ ಬೈಕ್ ಮಾದರಿ ಯಂತ್ರ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್ ಡ್ರಮ್ ಹೊಂದಿದ ಬ್ರೇಕ್ ಇದೆ. ಗೇರ್ ಬಾಕ್ಸ್ ಮತ್ತು ಡಬಲ್ ಚೈನ್ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್, ಸೇಫ್ಟಿ ಬೆಲ್ಟ್ ವ್ಯವಸ್ಥೆ ಇದೆ. ೭೦ ಕೆ.ಜಿ. ತೂಕವುಳ್ಳ ವ್ಯಕ್ತಿ ಇದರಲ್ಲಿ ಸಲೀಸಾಗಿ ಕುಳಿತು ಮರ ಏರಬಹುದು. ಎರಡೂ ಕೈಯನ್ನು ಹಿಡಿಯಲು ಹ್ಯಾಂಡಲ್, ಬೈಕ್‌ನ ಹ್ಯಾಂಡ್ ಬ್ರೇಕ್ ಮಾದರಿಯ ನಿಯಂತ್ರಣ ವ್ಯವಸ್ಥೆ ಇಲ್ಲಿದೆ. ಈ ಬೈಕ್‌ನಂಥ ಯಂತ್ರದಲ್ಲಿ ಕುಳಿತು ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್ ಒತ್ತಿದರೆ ಸಾಕು, ೩೦ ಸೆಕೆಂಡ್‌ಗಳಲ್ಲಿ ಅಡಕೆ ಮರದ ತುದಿಗೆ ತಲುಪುತ್ತದೆ. ಕೆಲಸ ಮುಗಿಸಿ ಇಂಜಿನ್ ಆಫ್ ಮಾಡಿದರೂ ಬೈಕ್ ಕೆಳಗಿಳಿಯುತ್ತದೆ. ಬೀಳುವ ಅಪಾಯವಿಲ್ಲ, ಮರಕ್ಕೂ ತೊಂದರೆ ಇಲ್ಲ.
ಮಹಿಳೆಯರು, ಮಕ್ಕಳಿಗೂ ಇದು ಸುರಕ್ಷಿತ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ. ಸಾಮಾಜಿಕ ಜಾಲಾತಾಣದಲ್ಲಿ ಬೈಕ್ ಯಂತ್ರ ವೈರಲ್ ಆದ ಪರಿಣಾಮ ಯಂತ್ರ ಖರೀದಿಗೆ ಸಾಕಷ್ಟು ಬೇಡಿಕೆಯೂ ಬರುತ್ತಿದೆ ಎನ್ನುತ್ತಾರೆ ಗಣಪತಿ ಭಟ್.

ಮಹೀಂದ್ರಾ ಕಂಪನಿ ಮಾರುಕಟ್ಟೆ ಯೋಜನೆ: ಬೈಕ್ ಮಾದರಿ ಯಂತ್ರ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿದೆ. ಇದನ್ನು ಗಮನಿಸಿರುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಂತ್ರ ತುಂಬಾ ಚೆನ್ನಾಗಿದೆ. ಸುಲಭವಾಗಿ ಮರ ಏರುವುದು ಮಾತ್ರವಲ್ಲ, ಕಡಿಮೆ ತೂಕ, ಆಕರ್ಷಕ ವಿನ್ಯಾಸವೂ ಗಮನ ಸೆಳೆಯುತ್ತಿದೆ. ಇದನ್ನು ನಮ್ಮ ಕೃಷಿ ವಿಭಾಗದ ಮೂಲಕ ಮಾರುಕಟ್ಟೆಗೆ ತರಬಹುದೇ ಎಂದು ಪರಿಶೀಲಿಸಿ ಎಂದು ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್‌ನ ಕೃಷಿ ಪರಿಕರ ವಿಭಾಗದ ಅಧ್ಯಕ್ಷ ರಾಜೇಶ್ ಜೆಜುರಿಕರ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜೇಶ್, ನಾವು ಖಂಡಿತಾ ಗಣಪತಿ ಭಟ್‌ರನ್ನು ಸಂಪರ್ಕಿಸಿ, ಯಂತ್ರವನ್ನು ಪರಿಶೀಲಿಸಿ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.

ಹೀಗೆ ನೇರವಾಗಿ ಟ್ವಿಟರ್‌ನಲ್ಲಿ ಹಾಕಿರುವುದರಿಂದ ನಿಮ್ಮ ಪ್ರತಿಸ್ಪರ್ಧಿ ಕಂಪನಿಗಳು ಗಣಪತಿ ಭಟ್‌ರನ್ನು ಸಂಪರ್ಕಿಸಬಹುದು ಎಂದು ಒಬ್ಬರು ಹೇಳಿರುವುದಕ್ಕೂ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ. ಹೆಚ್ಚೆಚ್ಚು ಜನರು ಅವರನ್ನು ಸಂಪರ್ಕಿಸಿದರೆ ಉತ್ತಮ ವಹಿವಾಟು ಅವರಿಗೆ ಸಿಗಬಹುದು. ಇದು ಅವರಂಥ ಇನ್ನಷ್ಟು ಮಂದಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದಿದ್ದಾರೆ.

ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಗಣಪತಿ ಭಟ್, ನನ್ನನ್ನು ಇದುವರೆಗೆ ಮಹೀಂದ್ರಾ ಕಂಪನಿ ಸಂಪರ್ಕಿಸಿಲ್ಲ. ನಾನು ಯಾವುದೇ ಕಂಪನಿಗೆ ಈ ಯಂತ್ರದ ಉತ್ಪಾದನೆ ಹಕ್ಕು ನೀಡಲು ಸಿದ್ಧನಿಲ್ಲ. ನಾನೇ ಉತ್ಪಾದಿಸಿ ರೈತರಿಗೆ ತಲುಪಿಸುತ್ತೇನೆ. ಅದಕ್ಕಾಗಿ ಪ್ರತ್ಯೇಕ ತಂಡ ರೂಪಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಡಕೆ ಮರ ಏರುವ ಯಂತ್ರಕ್ಕೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ ಸಿಂಗಾಪುರ, ಮಲೇಷಿಯಾ, ಬರ್ಮಾ, ದಕ್ಷಿಣ ಆಫ್ರಿಕಾಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರಿಂದಲೂ ಬೇಡಿಕೆ ಇದೆ. ೫೦೦ ಯಂತ್ರಗಳಿಗೆ ಬೇಡಿಕೆ ಬಂದಿದ್ದು, ೫೦ ಮಂದಿ ಮುಂಗಡ ಹಣ ಪಾವತಿಸಿದ್ದಾರೆ. ಬಿ.ಸಿ.ರೋಡಿನ ಗಾಣದಪಡ್ಪು ಬಳಿ ಪ್ರತಿದಿನ ಬೆಳಗ್ಗೆ ೧೦ರಿಂದ ಸಂಜೆ ೫ ಗಂಟೆಯವರೆಗೆ ಉಚಿತ ಪ್ರಾತ್ಯಕ್ಷಿಕೆಯ ವ್ಯವಸ್ಥೆ ಇದ್ದು, ರೈತರು ಸದುಪಯೋಗ ಪಡೆದುಕೊಳ್ಳಬಹುದು.
– ಗಣಪತಿ ಭಟ್, ಪ್ರಗತಿಪರ ಕೃಷಿಕ

Leave a Reply

Your email address will not be published. Required fields are marked *