More

  ಪಕ್ಷ ಕಟ್ಟುವಲ್ಲಿ ಮಹಿಳಾ ಮೋರ್ಚಾ ಪ್ರಮುಖ: ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ

  ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಗೆದ್ದು ನಿಮ್ಮ ಪ್ರತಿನಿಧಿ ಆಗುವ ಸೌಭಾಗ್ಯ ಸಿಕ್ಕಿದ್ದು, ನಿಮ್ಮೆಲ್ಲರ ಪರವಾಗಿ ನಾನು ಈ ಸನ್ಮಾನವನ್ನು ಸ್ವೀಕರಿಸಿದ್ದೇನೆ ಎಂದು ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
  ನಗರ ಬಿಜೆಪಿ ಮಹಿಳಾ ಮೋರ್ಚಾದಿಂದ ಸೋಮವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
  ಯಾವುದೇ ಒಂದು ಪಕ್ಷದ ಸಂಘಟನೆ ಬಲಿಷ್ಠವಾಗಿರಲು ಮಹಿಳಾ ಮೋರ್ಚಾ ಗಟ್ಟಿಯಾಗಿರಬೇಕು. ನಾನು ಈಗಾಗಲೇ ತಿಳಿಸಿದಂತೆ ಚುನಾವಣೆಯ ಗೆಲುವು ಚಾಮುಂಡೇಶ್ವರಿ, ಕಾವೇರಮ್ಮ, ಅಯೋಧ್ಯೆಯ ಬಾಲರಾಮ ಹಾಗೂ ಪಕ್ಷದ ಕಾರ್ಯಕರ್ತರ ಗೆಲುವುವಾಗಿದ್ದು, ನಿಮ್ಮೆಲ್ಲರ ವಿಶ್ವಾಸದೊಂದಿಗೆ ನಾನು ಕೆಲಸ ಮಾಡುತ್ತೇನೆ ಎಂದರು.
  ಲೋಕಸಭಾ ಚುನಾವಣೆ ಮೂಲಕವೇ ನನ್ನ ರಾಜಕೀಯ ಆರಂಭವಾಗಿದೆ. ಯಾವುದೇ ಒಂದು ಪಕ್ಷದ ಸಂಘಟನೆ ಬಲಿಷ್ಠವಾಗಿರಲು ಮಹಿಳಾ ಮೋರ್ಚಾ ಅತ್ಯಂತ ಗಟ್ಟಿಯಾಗಿ ಇರಬೇಕು. ಈ ನಿಟ್ಟಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರಮುಖ ಪಾತ್ರವಹಿಸಿ, ಚುನಾವಣೆಗೆ ಶ್ರಮಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
  ಮೈಸೂರು ಮಹಿಳಾ ಶಕ್ತಿಗೆ ಸಾಕ್ಷಿಯಾಗಿದ್ದು, ಇದಕ್ಕೆ 200 ವರ್ಷಗಳ ಇತಿಹಾಸವಿದೆ. ಮೈಸೂರು ಸಂಸ್ಥಾನದ ಮಹಾರಾಣಿಯರಾದ ಲಕ್ಷ್ಮಮ್ಮಣಿ, ದೊಡ್ಡಮ್ಮಣ್ಣಿ, ಲಿಂಗರಾಜಮ್ಮಣ್ಣಿ, ವಾಣಿ ವಿಲಾಸ ಸನ್ನಿದಾನ ಸೇರಿದಂತೆ ಹಲವರು ನಾಯಕತ್ವದ ಗುಣವನ್ನು ಹೊಂದಿದ್ದರು. ಇವರೆಲ್ಲರೂ ಅಂದಿನ ಕಾಲದಲ್ಲೇ ಆರೋಗ್ಯ, ಸಮಾಜಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದ ಉನ್ನತಿಗಾಗಿ ದೊಡ್ಡಪಾತ್ರ ವಹಿಸಿದ್ದರು ಎಂದು ಬಣ್ಣಿಸಿದರು.
  ಅಂದಿನ ಕಾಲದಲ್ಲಿದ್ದ ಮಹಿಳಾ ನಾಯಕತ್ವ ಇಂದಿಗೂ ಮುಂದುವರಿದಿದ್ದು, ಮೈಸೂರಿನಲ್ಲಿ ಮಹಿಳೆಯರ ಪಾತ್ರ ದೊಡ್ಡಮಟ್ಟದಲ್ಲಿದೆ. ಮೈಸೂರಿನ ಮಹಿಳೆಯರ ನಾಯಕತ್ವದ ಗುಣವನ್ನು ಕಾಣಲಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ, ಪಕ್ಷದ ಸಂಘಟನೆ ಬಲಿಷ್ಠಗೊಳಿಸೋಣ ಎಂದು ಹೇಳಿದರು.
  ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಹಿಳಾ ಮೋರ್ಚಾದಿಂದ ಸನ್ಮಾನಿಸಲಾಯಿತು. ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮಾಜಿ ಉಪಮೇಯರ್ ಡಾ.ಜಿ. ರೂಪ, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕರಾಜ್ ಇತರರು ಇದ್ದರು.

  See also  ಮುಖ್ಯವಾಹಿನಿಗೆ ಬರಲಿ ವಿಶ್ವಕರ್ಮ ಸಮಾಜ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts