ಗ್ರೀನ್ ವೆಡ್ಡಿಂಗ್‌ಗೆ ನಿಶ್ಚಲ್-ಪೂಜಾ ಜೋಡಿ ಮುನ್ನುಡಿ

ಮೈಸೂರು: ಸ್ವಚ್ಛ ನಗರಿ ಮೈಸೂರು ಹಸಿರು ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಯಿತು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾಲಿಕೆಯ ಇಂಜಿನಿಯರ್ ಮಹೇಶ್ ಪುತ್ರ ನಿಶ್ಚಲ್ ಹಾಗೂ ಪೂಜಾ ಬಿ. ಶೇಷಾದ್ರಿ ಜೋಡಿ ಬುಧವಾರ ಪರಿಸರ ಸ್ನೇಹಿ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸ್ವಚ್ಛತೆ ಕಾಯ್ದುಕೊಳ್ಳಲು ಜಿಲ್ಲಾಡಳಿತ ಹಾಗೂ ಪಾಲಿಕೆ ವತಿಯಿಂದ ನಗರದಲ್ಲಿ ‘ಹಸಿರು ವಿವಾಹ’ ಯೋಜನೆ ಜಾರಿಗೊಳಿಸಲಾಗಿದೆ. ಇದು ಅನುಷ್ಠಾನಕ್ಕೆ ಬಂದ ಬಳಿಕ ನಡೆದ ಮೊದಲ ಹಸಿರು ವಿವಾಹ ಇದಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಕಲ್ಯಾಣ ಮಂಟಪಕ್ಕೆ ತೆರಳಿ ಅಭಿನಂದನಾ ಪ್ರಮಾಣಪತ್ರ ಪ್ರದಾನ ಮಾಡಿ ಅವರ ದಾಂಪತ್ಯ ಜೀವನಕ್ಕೆ ಶುಭಕೋರಿದರು.

ಮದುವೆ ಮಂಟಪವನ್ನು ಸಂಪೂರ್ಣವಾಗಿ ಹಸಿರುಮಯ ಮಾಡಲಾಗಿತ್ತು. ಧಾರೆ ಮಂಟಪದಿಂದ ಹಿಡಿದು ಊಟದವರೆಗೂ ಬಳಸುವ ವಸ್ತುಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲಾಗಿತ್ತು. ಇಲ್ಲಿ ಬಾಳೆ ಎಲೆಗಳಿಗೆ ಬದಲಾಗಿ ಅಂದಾಜು 2 ಸಾವಿರ ಸ್ಟೀಲ್ ತಟ್ಟೆ ಹಾಗೂ ಲೋಟ ಬಳಸಲಾಯಿತು. ಇದರೊಂದಿಗೆ ಮದುವೆ ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುವ ತ್ಯಾಜ್ಯ ಕಡಿಮೆ ಮಾಡಲಾಯಿತು.

ಈಗಿನ ಮದುವೆ ಎಂದರೆ ಸಾಕು ಆಡಂಬರ ಹೆಚ್ಚು. ಜತೆಗೆ ಪರಿಸರ ಮಾಲಿನ್ಯ ಉಂಟು ಮಾಡುವಂತಹ ವಿವಾಹ ಕಾರ್ಯಕ್ರಮಗಳು ಅಧಿಕ. ಅವರೆಲ್ಲರ ನಡುವೆ, ಈ ಪರಿಸರ ಸ್ನೇಹಿ ಮದುವೆ ಎಲ್ಲರ ಗಮನ ಸೆಳೆಯಿತು. ಪಾಲಿಕೆ ಹೊಸ ಮಾದರಿಯ ಗ್ರೀನ್‌ವೆಡ್ಡಿಂಗ್ ಪಾಲಿಕೆ ಅಧಿಕಾರಿ ಮಗನ ಮದುವೆಯಿಂದಲೇ ಜಾರಿಗೆ ಬಂದಿದ್ದು, ಇದು ಅದರ ಪ್ರಯತ್ನಕ್ಕೆ ಮೊದಲ ಜಯ ಸಿಕ್ಕಂತಾಗಿದೆ.

ಏನಿದು ಗ್ರೀನ್ ವೆಡ್ಡಿಂಗ್?: ನಗರದಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವುದು ಕಲ್ಯಾಣ ಮಂಟಪಗಳಿಂದ. ಇದರ ನಿರ್ವಹಣೆಯೇ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ವಿವಾಹ ಮಂಟಪಗಳಲ್ಲಿ ತ್ಯಾಜ್ಯ ನಿವಾರಣೆಗೆ ‘ಗ್ರೀನ್ ವೆಡ್ಡಿಂಗ್’ (ಹಸಿರು ವಿವಾಹ) ಎಂಬ ಪರಿಕಲ್ಪನೆಯನ್ನು ಪಾಲಿಕೆ ಪರಿಚಯಿಸಿದೆ.

ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ, ಮುದ್ರಿತ ಆಹ್ವಾನ ಪತ್ರಿಕೆ ಬದಲಿಗೆ ಡಿಜಿಟಲ್ ಆಹ್ವಾನ ಪತ್ರಿಕೆ, ಪೇಪರ್ ಪ್ಲೆಟ್, ಕಪ್ ಸೇರಿ ತ್ಯಾಜ್ಯ ಉತ್ಪಾದನೆ ತಡೆಯುವಂತಹ ರೀತಿಯಲ್ಲಿ ವಿವಾಹವಾಗಲು ಪ್ರೋತ್ಸಾಹ ನೀಡುತ್ತಿದೆ. ಇಂತಹ ವಿವಾಹಕ್ಕಾಗಿ ಪಾಲಿಕೆ ವೆಬ್‌ಸೈಟ್, ಕಂಟ್ರೊಲ್ ರೂಂ 0821-2418800 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಸಾಮಾನ್ಯ ಮದುವೆ ಅಥವಾ ಹಸಿರುವಿವಾಹ ಎಂದು ಪರಿಶೀಲನೆ ಮಾಡಲು ಪಾಲಿಕೆಯಿಂದ ತಂಡವನ್ನು ರಚಿಸಲಾಗಿದ್ದು, ಅವರು ಈ ವಿಧಾನಗಳ ಪಾಲನೆಯನ್ನು ವಧು-ವರರಿಗೆ ಹಾಗೂ ಪಾಲಕರಿಗೆ ತಿಳಿಸುತ್ತಾರೆ. ಇದು ಪಾಲನೆಯಾದರೆ ವಧು ವರರಿಗೆ ಶುಭ ಹಾರೈಸಿ ಪ್ರಶಂಸನಾ ಪತ್ರ ನೀಡಲಾಗುತ್ತದೆ.

Leave a Reply

Your email address will not be published. Required fields are marked *