ಶಾಸಕರ ಪತ್ತೆಗೆ ಮುಂಬೈಗೆ ತೆರಳಿದ ಅಥಣಿ ಪೊಲೀಸರು; ಮಹಾರಾಷ್ಟ್ರ ಸಿಎಂ ಕಚೇರಿ ಮುಂದೆ ಧರಣಿಗೆ ನಿರ್ಧಾರ?

ಬೆಂಗಳೂರು: ನಾಪತ್ತೆಯಾಗಿರುವ ಶಾಸಕರನ್ನು ಹುಡುಕಿಕೊಡುವಂತೆ ಹೈಕೋರ್ಟ್​ ನೀಡಿದ ಸೂಚನೆ ಮೇರೆಗೆ ಕಾಂಗ್ರೆಸ್ ಶಾಸಕ ಮಹೇಶ್​ ಕುಮಟಳ್ಳಿ ಪತ್ತೆಗಾಗಿ ಅಥಣಿ ಪೊಲೀಸರು ಮುಂಬೈಗೆ ತೆರಳಿದ್ದಾರೆ.

ಶಾಸಕರಾದ ಮಹೇಶ್​ ಕುಮಟಳ್ಳಿ ಅವರನ್ನು ಹುಡುಕಿಕೊಡಿ ಎಂದು ಅಥಣಿ ಪೊಲೀಸರಿಗೆ ದೂರು ನೀಡಿದ್ದರು ಹುಡುಕಿಲ್ಲ ಎಂದು ಆರೋಪಿಸಿ ಪ್ರಮೋದ್ ಹಿರೇಮನಿ ಎಂಬುವವರು ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದರು. ಅವರನ್ನು ಅಪಹರಿಸಿ ಬಂಧನದಲ್ಲಿಟ್ಟಿರುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ಹುಡುಕಿಕೊಡಿ ಎಂದು ರಿಟ್​ ಅರ್ಜಿ ಮೂಲಕ ಮನವಿ ಮಾಡಿದ್ದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹೈಕೋರ್ಟ್​ ಶಾಸಕರನ್ನು ಈ ಕ್ಷಣವೇ ಹುಡುಕಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ನೋಟಿಸ್​ ಜಾರಿಗೊಳಿಸಿದೆ. ಹೀಗಾಗಿ ಕಳೆದ ರಾತ್ರಿಯೇ ಅಥಣಿ ಪೊಲೀಸರು ಮುಂಬೈಗೆ ತೆರಳಿದ್ದಾರೆ.

ಮಹಾರಾಷ್ಟ್ರ ಸಿಎಂ ಕಚೇರಿ ಮುಂದೆ ಧರಣಿ
ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್​ ಕಚೇರಿ ಮುಂದೆ ಧರಣಿ ನಡೆಸಲು ಕಾಂಗ್ರೆಸ್​-ಜೆಡಿಎಸ್​ ನಾಯಕರು ಚಿಂತನೆ ನಡೆಸಿದ್ದಾರೆ. ಈ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ದೋಸ್ತಿ ನಾಯಕರು ಯೋಜನೆ ರೂಪಿಸಿದ್ದಾರೆ. ಸದನ‌ ಮುಗಿದ ಬಳಿಕ ಮುಂಬೈಗೆ ತೆರಳುವ ಮುನ್ಸೂಚನೆ ಇದೆ.(ದಿಗ್ವಿಜಯ ನ್ಯೂಸ್​)