ಬಗೆಬಗೆ ಮುಖವಾಡಗಳ ಎಂಎಂಸಿಎಚ್

ವಿದ್ಯಾರ್ಥಿ ಜೀವನ ಬರೀ ಓದುವುದು, ಬರೆಯುವುದಲ್ಲ. ಬದಲಿಗೆ ಅವರವರ ಜೀವನವನ್ನು ಅವರೇ ರೂಪಿಸಿಕೊಳ್ಳುವುದೇ ಶಿಕ್ಷಣ. ಈ ಅಂಶದ ಜತೆಜತೆಗೆ ಭೂಗತ ಜಗತ್ತಿನಲ್ಲಿ ಹೆಣ್ಣುಮಕ್ಕಳೂ ಇರುತ್ತಾರೆ ಎಂಬುದನ್ನು ‘ಎಂಎಂಸಿಎಚ್’ ಮೂಲಕ ನಿರ್ದೇಶಕ ‘ಮುಸ್ಸಂಜೆ’ ಮಹೇಶ್ ಹೇಳಹೊರಟಿದ್ದಾರೆ. ಜು. 13ಕ್ಕೆ ಚಿತ್ರ ತೆರೆಕಾಣಲಿದ್ದು, ಚಿತ್ರದ ನಾಲ್ಕು ಪ್ರಧಾನ ಪಾತ್ರಗಳ ಬಗ್ಗೆ ನಮಸ್ತೆ ಬೆಂಗಳೂರು ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೇಡು ಬಯಸದ ಮೇಘನಾ

ಇಡೀ ಚಿತ್ರದ ತುಂಬ ಭಾವನಾತ್ಮಕ ಜೀವಿಯಾಗಿ ಮೇಘನಾ ಕಾಣಿಸಿಕೊಳ್ಳುತ್ತಾರೆ. ಯಾರಿಗೂ ತೊಂದರೆ ಕೊಡಬಾರದು. ತಾನು ಕಷ್ಟ ಅನುಭವಿಸಿದರೂ ಪರವಾಗಿಲ್ಲ. ಬೇರೊಬ್ಬರಿಗೆ ಅನ್ಯಾಯ ಎಸಗಬಾರದು ಎಂಬ ಪ್ರಬುದ್ಧ ಮನಸ್ಥಿತಿಯ ಯುವತಿಯ ಪಾತ್ರ ನಿಭಾಯಿಸಿದ್ದಾರೆ. ಕಾಲೇಜ್ ಹುಡುಗಿಯಾಗಿ, ಕುಟುಂಬ ನಿಭಾಯಿಸುವ ಜವಾಬ್ದಾರಿ ಹೊತ್ತ ಹೆಣ್ಣುಮಗಳಾಗಿಯೂ ಮೇಘನಾ ಕಾಣಿಸುತ್ತಾರೆ. ಕ್ರೖೆಂ ಥ್ರಿಲ್ಲರ್ ಎಳೆಯ ಕಥೆ ಒಂದು ಕಡೆ ತೆರೆದುಕೊಂಡರೆ, ಅದರಾಚೆಗೆ ಸ್ನೇಹ-ಪ್ರೀತಿ ಹೇಗೆ ಎಂಬ ಮತ್ತೊಂದು ಎಳೆ ಬಿಚ್ಚಿಕೊಳ್ಳುತ್ತದೆ.

ಸೈಲೆಂಟ್ ಆಗಿರ್ತಾರೆ ದೀಪ್ತಿ

ಲೋಕಜ್ಞಾನ ಕಡಿಮೆ ಇರುವ, ಜಾಸ್ತಿ ಮಾತನಾಡದ, ಸೌಮ್ಯ ಸ್ವಭಾವದ ಹುಡುಗಿಯ ಪಾತ್ರವನ್ನು ದೀಪ್ತಿ ನಿಭಾಯಿಸಿದ್ದಾರೆ. ಕಾಲೇಜು ಹುಡುಗಿಯಾದರೂ, ಯಾರೊಂದಿಗೂ ಅಷ್ಟಾಗಿ ಬೆರೆಯದ, ತಾನಾಯ್ತು ತನ್ನ ಕೆಲಸವಾಯ್ತು ಎಂಬ ಮನಸ್ಥಿತಿಯ ಹುಡುಗಿ. ಆದರೆ, ಅದೇ ಹುಡುಗಿ ಒಂದು ಸಮಯದಲ್ಲಿ ಬೇರೆ ರೀತಿಯಲ್ಲೇ ಕಾಣಿಸುತ್ತಾಳೆ. ಸೈಲೆಂಟ್ ಆಗಿದ್ದವಳು, ಘಟನೆಯೊಂದರಿಂದ ವೈಲೆಂಟ್ ಆಗುತ್ತಾಳೆ. ಯಾಕೆ? ಏನು? ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ತಿಳಿದುಕೊಳ್ಳಬೇಕು. ಇನ್ನುಳಿದ ಮೂರು ಪ್ರಧಾನ ಪಾತ್ರಗಳಿಗೆ ಹೋಲಿಕೆ ಮಾಡಿದರೆ, ದೀಪ್ತಿ ಪಾತ್ರ ಸಾಗುವ ಪರಿಯೂ ವಿಭಿನ್ನವಾಗಿದೆ.

ರೌಡಿ ಲುಕ್​ನಲ್ಲಿ ಸಂಯುಕ್ತಾ

ರೌಡಿಯಾಗಿ, ಹುಡುಗರನ್ನೇ ಕಾಡಿಸಿ, ಚುಡಾಯಿಸುವ ಛಾಯಾ ಎಂಬ ಪಾತ್ರ ಸಂಯುಕ್ತಾ ಹೊರನಾಡು ಅವರದ್ದು. ಕಥೆ ಹೇಳುವಾಗಲೇ ಅವರ ಪಾತ್ರದಲ್ಲಿನ ಗಟ್ಟಿತನದ ಬಗ್ಗೆ ಹೇಳಿದ್ದೆ. ತುಂಬ ರಗಡ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದೀರಿ ಅಂದಿದ್ದೆ. ಅದರಂತೆ ಸಿನಿಮಾದಲ್ಲಿ ಠಪೋರಿ ಹುಡುಗಿಯಾಗಿ ಅವರನ್ನು ತೋರಿಸಿದ್ದೇನೆ. ತನಗನ್ನಿಸಿದ್ದನ್ನು ಮಾಡುವ ಮತ್ತು ತಾನು ಮಾಡಿದ್ದೇ ಸರಿ ಎನ್ನುವ ವ್ಯಕ್ತಿತ್ವ ಆ ಪಾತ್ರದ್ದು. ಮನೆಯಲ್ಲಿನ ತಂದೆ ತಾಯಿಗೂ ಆಕೆ ಡೋಂಟ್ ಕೇರ್. ಡೈಲಾಗ್ ಜತೆಗೆ ಕಿಕ್ ಬಾಕ್ಸಿಂಗ್ ಕಲಿತು, ರೌಡಿಗಳೊಂದಿಗೆ ಫೈಟ್ ಸಹ ಮಾಡಿದ್ದಾರೆ.

ಟಾಮ್ ಬಾಯ್ ಪ್ರಥಮಾ

ಪ್ರಥಮಾ ಅವರದ್ದು ಟಾಮ್ ಬಾಯ್ ಅವತಾರ. ಅದಕ್ಕಾಗಿಯೇ ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ಕಲರಿಪಯಟ್ಟು ಕಲಿತು ಪೂರ್ಣ ಪ್ರಮಾಣದ ಎಫರ್ಟ್ ಹಾಕಿದ್ದಾರೆ. ಖಡಕ್ ಕಾಲೇಜ್ ಹುಡುಗಿಯಾಗಿ, ಇನ್ನುಳಿದ ಮೂವರಿಗಿಂತ ಹೆಚ್ಚು ಧೈರ್ಯಶಾಲಿ ಮತ್ತು ಏನೇ ಬಂದರೂ ಎದುರಿಸುವ ತಾಕತ್ತಿರುವ ಪಾತ್ರ ಮಾಡಿದ್ದಾರೆ. ಕ್ರೖೆಮ್ೊಂದರ ಹಿಂದೆ ಸಾಗುವ ಚಿತ್ರ ಆಗಿರುವುದರಿಂದ ಬರೀ ಕ್ರೖೆಂಗೆ ಮಹತ್ವ ನೀಡಿಲ್ಲ. ಅದನ್ನೇ ವೈಭವೀಕರಿಸುವ ಗೋಜಿಗೆ ಹೋಗಿಲ್ಲ. ನಡೆದ ಸತ್ಯವನ್ನು ಅಧ್ಯಯನ ಮಾಡಿ ತೆರೆಮೇಲೆ ತರುವ ಪ್ರಯತ್ನಮಾಡಿದ್ದೇವೆ.