More

    ಸ್ವಾರ್ಥಕ್ಕಾಗಿ ಸಮುದಾಯ ಒಡೆಯದಿರಿ ಎಂದ ಚಿಂತಕ ಮಹೇಂದ್ರಕುಮಾರ್

    ತುಮಕೂರು: ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಸಮುದಾಯಗಳನ್ನು ಒಡೆಯುವುದನ್ನು ಬಿಟ್ಟು ಸಮಾಜ ಕಟ್ಟಲು ಒಗ್ಗೂಡಬೇಕಿದೆ ಎಂದು ಚಿಂತಕ ಮಹೇಂದ್ರಕುಮಾರ್ ಹೇಳಿದರು.

    ನಗರದ ಧಾನಾ ಪ್ಯಾಲೇಸ್ ಬಳಿ ಜಂಟಿ ಆಕ್ಷನ್ ಕಮಿಟಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಸಂಘದ ಸಹಯೋಗದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಶನಿವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿ, ಹಿಂದು-ಮುಸ್ಲಿಮರ ನಡುವಿನ ಗೋಡೆ ಒಡೆದು ದೇಶ ನಿರ್ಮಿಸುವ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ಮಾಡಬೇಕಿದ್ದು, ಕಿಡಿಗೇಡಿಗಳಿಂದ ದೇಶವನ್ನು ರಕ್ಷಿಸಿಕೊಳ್ಳಬೇಕಿದೆ ಎಂದರು.

    ಮನುಷ್ಯನನ್ನು ನಿಕೃಷ್ಟವಾಗಿ ಕಾಣುವ ಪದ್ಧತಿ ಇಟ್ಟುಕೊಂಡು ಯಾವ ಹಿಂದುತ್ವವನ್ನು ಪ್ರತಿಪಾದಿಸಲು ಹೊರಟಿದ್ದೀರಿ? ದಲಿತರನ್ನು ದೇವಸ್ಥಾನಕ್ಕೆ ಬಿಟ್ಟುಕೊಳ್ಳಲು ಆಗದ ಹಿಂದುತ್ವವನ್ನು ನಾವು ಒಪ್ಪಬೇಕೆ? ಯಾವ ಹಿಂದುತ್ವದ ಆಧಾರದ ಮೇಲೆ ರಾಷ್ಟ್ರ ಪ್ರೇಮ ಪ್ರತಿಪಾದಿಸುತ್ತಿದ್ದೀರಿ? ಇಂತಹವರಿಂದ ದೇಶವನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

    ಸಿಎಎ, ಎನ್‌ಆರ್‌ಸಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಈ ದೇಶದ ಮೂಲ ನಿವಾಸಿಗಳನ್ನು ದೇಶದಿಂದ ಹೊರಹಾಕಲು ಯಾರಿಂದಲೂ ಸಾಧ್ಯವಿಲ್ಲ, ಈ ದೇಶದ ದಲಿತರು ಹಾಗೂ ಮುಸ್ಲಿಮರು, ಬಡ ಬ್ರಾಹ್ಮಣರ ಪರವಾಗಿ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.

    ಜಾತಿ, ಧರ್ಮ ಬಿಟ್ಟು ರಾಷ್ಟ್ರ ಕಟ್ಟಲು ಮುಂದಾಗುವವರನ್ನು ತುಕಡೆ ತುಕಡೆ ಗ್ಯಾಂಗ್ ಎನ್ನುವ ನೀವು ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವ ತುಕಡೆ ಗ್ಯಾಂಗ್. ದೇಶದ ಸಂವಿಧಾನವನ್ನು ಕಾಪಾಡಲು ಇಡೀ ದೇಶ ಧ್ವನಿ ಎತ್ತಿದೆ. ಸುಳ್ಳು ಭಾಷಣಕಾರ, ಎಳಸು ಸಂಸದರಿಂದ ಹೊಸ ಕತೆ ಸೃಷ್ಟಿಯಾಗಿದೆ. ಮುಸ್ಲಿಮರು ಅತಿಥಿಗಳು, ಅತಿಥಿಗಳಂತೆ ಇರಬೇಕು ಎನ್ನುವ ಭಟ್ಟರಿಗೆ ಈ ನೆಲದ ಪರಿಚಯವಿಲ್ಲ, ದಕ್ಷಿಣ ಕನ್ನಡದಲ್ಲಿ ಮಾಡಿದಂತೆ ಇಲ್ಲಿ ಮಾಡಲು ಬಂದರೆ ನಡೆಯುವುದಿಲ್ಲ ಎಂದು ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್ ಎಚ್ಚರಿಸಿದರು.

    ಚಿಂತಕ ಮಹೇಶ್, ಅಜೇಯ್, ಮಂಜುನಾಥ್, ಮುಖಂಡರಾದ ಮೌಲಾನ ಶಬ್ಬೀರ್ ಸಾಬ್, ಮೌಲಾನ ಜಿಯಾವುರ್ ರೆಹಮಾನ್ ಸಾಬ್, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಹನೀಫ್‌ವುಲ್ಲಾ ಸಾಬ್, ವಕೀಲರಾದ ಮೊಹಮದ್ ತಾಹೀರ್, ಝಲ್ಕೈರ್ ನೈನ್ ಸಾಬ್, ಅಜೀಂ ಶರೀಫ್, ಮುಫ್ತ್ತಿ ಶಬಾಜ್ ಆಲಂ ಉಪಸ್ಥಿತರಿದ್ದರು.

    ಈ ದೇಶದ ಪೌರತ್ವ ಸಾಬೀತುಪಡಿಸಲು ಪತ್ರ ನೀಡುವ ಬದಲು ರಕ್ತ ನೀಡುತ್ತೇವೆ, ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳಲಿ, ನಮ್ಮ ರಕ್ತ ಈ ದೇಶಕ್ಕೆ ಹೊಂದಾಣಿಕೆಯಾದರೆ, ಪರ ಇರುವವರ ರಕ್ತ ಮಧ್ಯ ಏಷ್ಯಾಕ್ಕೆ ಹೊಂದಾಣಿಕೆಯಾಗುತ್ತದೆ.
    ಭಾಸ್ಕರ್‌ಪ್ರಸಾದ್ ದಲಿತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts