ಐಪಿಎಲ್​ನಲ್ಲಿ ವಿಶಿಷ್ಟ ದಾಖಲೆ ಬರೆಯಲು ಸಜ್ಜಾದ ಧೋನಿ, ರೈನಾ, ರೋಹಿತ್​

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಆರಂಭವಾಗಲು ದಿನಗಣನೆ ಆರಂಭವಾಗಿರುವಂತೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ, ಸುರೇಶ್​ ರೈನಾ ಮತ್ತು ರೋಹಿತ್​ ಶರ್ಮಾ ವಿಶಿಷ್ಟ ದಾಖಲೆ ನಿರ್ಮಿಸುವ ತವಕದಲ್ಲಿದ್ದು, ಯಾರು ಮೊದಲು ಈ ಮೈಲಿಗಲ್ಲನ್ನು ಮುಟ್ಟುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಧೋನಿ ಐಪಿಎಲ್​ನಲ್ಲಿ ಇದುವರೆಗೆ 186 ಸಿಕ್ಸರ್​ ಸಿಡಿಸಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ ಜತೆ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಸುರೇಶ್​ ರೈನಾ 185 ಸಿಕ್ಸರ್​ ಸಿಡಿಸಿದ್ದಾರೆ. ರೋಹಿತ್​ ಶರ್ಮಾ 184 ಸಿಕ್ಸರ್​ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ವೆಸ್ಟ್​ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್​ಮ್ಯಾನ್​ ಕ್ರಿಸ್​ ಗೇಲ್​ ಇದ್ದು, ಅವರು ಇದುವರೆಗೆ ಐಪಿಎಲ್​ 292 ಸಿಕ್ಸರ್​ ಸಿಡಿಸಿದ್ದಾರೆ.

ಪ್ರಸ್ತುತ ಈ ಐಪಿಎಲ್​ನಲ್ಲಿ ಧೋನಿ, ರೈನಾ ಮತ್ತು ರೋಹಿತ್​ಗೆ 200 ಸಿಕ್ಸರ್​ ಸಿಡಿಸುವ ಅವಕಾವಿದೆ. ಈ ಮೂಲಕ ಐಪಿಎಲ್​ನಲ್ಲಿ 200 ಸಿಕ್ಸರ್​ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲು ಇವರು ಸಿದ್ಧತೆ ನಡೆಸುತ್ತಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಶ್ರೀಲಂಕಾದ ವೇಗಿ ಲಸಿತ್​ ಮಾಲಿಂಗಾ 154 ವಿಕೆಟ್​ ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಭಾರತದ ಬೌಲರ್​ಗಳಾದ ಅಮಿತ್​ ಮಿಶ್ರಾ 146 ಮತ್ತು ಪಿಯೂಷ್​ ಚಾವ್ಲಾ 140 ವಿಕೆಟ್​ ಪಡೆದಿದ್ದಾರೆ.

ಮಾ. 23 ರಿಂದ ಐಪಿಎಲ್​ ಆರಂಭವಾಗಲಿದ್ದು, ಚೆನ್ನೈನಲ್ಲಿ ಮೊದಲ ಪಂದ್ಯ ನಡೆಯಲಿದ್ದು ಚೆನ್ನೈ ಸೂಪರ್​ ಸಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. (ಏಜೆನ್ಸೀಸ್​)