ರಾಂಚಿ ಮ್ಯಾಚ್​ಗೂ ಮುನ್ನ ಮಹೇಂದ್ರ ಸಿಂಗ್​ ಧೋನಿ ಮನೆಯಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಔತಣ ಕೂಟ

ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಧೋನಿ ಬುಧವಾರ ತಮ್ಮ ಮನೆಗೆ ಭಾರತೀಯ ಕ್ರಿಕೆಟ್​ ತಂಡದ ಎಲ್ಲ ಆಟಗಾರರನ್ನೂ ಆಹ್ವಾನಿಸಿ ಭರ್ಜರಿ ಔತಣಕೂಟ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಒಟ್ಟು ಐದು ಏಕದಿನ ಪಂದ್ಯಾವಳಿ ಆಡಬೇಕಿರುವ ಟೀಂ ಇಂಡಿಯಾ ಈಗಾಗಲೇ ನಾಗ್ಪುರ ಮತ್ತು ಹೈದರಾಬಾದ್​ಗಳಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಗೆದ್ದು 2-0 ಅಂತರದಿಂದ ಮುನ್ನಡೆಯಲ್ಲಿದೆ. ಶುಕ್ರವಾರ ಮೂರನೇ ಪಂದ್ಯಾವಳಿ ರಾಂಚಿಯಲ್ಲಿ ನಡೆಯಲಿದ್ದು ಅದಕ್ಕೂ ಮೊದಲು ಸಣ್ಣ ಸಂಭ್ರಮವೆಂಬಂತೆ ತಂಡದ ಆಟಗಾರರು ಮಹೇಂದ್ರ ಸಿಂಗ್​ ಧೋನಿಯವರ ರಾಂಚಿ ಮನೆಯ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಬೌಲರ್​ ಯಜುವೇಂದ್ರ ಚಾಹಲ್​, ಫೋಟೋ ಶೇರ್​ ಮಾಡಿ ಧೋನಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿಯವರಿಗೆ ರಾಂಚಿ ಹೋಂ ಪಿಚ್​. ಅಲ್ಲಿ ಈವರೆಗೆ ಮೂರು ಪಂದ್ಯಗಳನ್ನಷ್ಟೇ ಆಡಿದ್ದಾರೆ. ಅದರಲ್ಲೂ ಎರಡು ಪಂದ್ಯಗಳಲ್ಲಿ ಮಾತ್ರ ಬ್ಯಾಟಿಂಗ್​ ಮಾಡಿ 21 ರನ್​ಗಳನ್ನು ಗಳಿಸಿದ್ದಾರೆ. ಧೋನಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಭಾರತ ಗೆಲುವು ಕಂಡಿದೆ. ಕೀಪರ್​ ಆಗಿದ್ದ ಅವರು ಮೂರು ಕ್ಯಾಚ್​ ಹಿಡಿದಿದ್ದರೆ, ಒಂದು ಸ್ಟಂಪಿಂಗ್​ ಮೂಲಕ ವಿಕೆಟ್​ ಕಿತ್ತಿದ್ದಾರೆ.

13,000ಕ್ಕೂ ಹೆಚ್ಚು ರನ್​ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಇತ್ತೀಚೆಗೆ ಮಹೇಂದ್ರ ಸಿಂಗ್​ ಧೋನಿಯವರೂ ಸೇರಿದ್ದಾರೆ.