Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಒಂದಿಷ್ಟು ಕೆಟ್ಟವರಾಗೋಣ ಬನ್ನಿ…!

Thursday, 12.04.2018, 3:04 AM       1 Comment

| ಅನಿತಾ ನರೇಶ್​ ಮಂಚಿ

ಸಮಯ ಮಧ್ಯಾಹ್ನದ ಹನ್ನೆರಡು. ಯಾವುದೋ ಕೆಲಸದ ಮೇಲೆ ಗೆಳತಿಗೆ ಫೋನ್ ಮಾಡಿದ್ದೆ. ಮಾತಿನ ನಡುವೆ ‘ಮಗಳಿಗೆ ಪರೀಕ್ಷೆ ಆಯ್ತಲ್ಲಾ. ಏನು ಮಾಡ್ತಿದ್ದಾಳೆ’ ಎಂದು ಕೇಳಿದ್ದೆ. ‘ಮಾಡೋದೇನು ಇನ್ನೂ ಹಾಸಿಗೆಯಿಂದ ಎದ್ದಿಲ್ಲ.. ರಜಾ ಅಲ್ವಾ.. ಮಲಗಿರ್ಲಿ ಅಂತ ಬಿಟ್ಟಿದ್ದೀನಿ’ ಎಂದಳು. ಬೆಳಗಿನ ತಿಂಡಿ ಉಳಿತಾಯ ಆಯ್ತು ನಿಂಗೆ ಎಂದು ನಗೆಯಾಡಿದೆ. ‘ಅಯ್ಯೋ ಉಳಿತಾಯ ಎಂತದ್ದು. ಎದ್ದ ಕೂಡಲೇ ಬಕಾಸುರಿಯಂತೆ ಬೇಡಿಕೆ ಇಡ್ತಾಳೆ. ಅದು ಮಾಡು ಇದು ಮಾಡು ಎಂದೆಲ್ಲ.. ಇಡೀ ತಿಂಗಳಿನ ಬಜೆಟ್ ರಜೆಯ ದಿನಗಳಲ್ಲಿ ಅರ್ಧ ತಿಂಗಳಿಗೂ ಬರೋದಿಲ್ಲ ಗೊತ್ತಾ, ನಾವೆಲ್ಲ ಹೀಗಿರ್ಲಿಲ್ಲ ಅಲ್ವಾ.. ರಜಾ ಅಂದ್ರೆ ಮನೆಯೊಳಗೇ ಇರ್ತಾ ಇರ್ಲಿಲ್ಲ. ಕಾಡಿನ ಹಣ್ಣುಗಳು, ತೋಡಿನ ನೀರು, ತಿನ್ನಬಹುದಾದಂತಹ ಎಲ್ಲ ಸೊಪ್ಪು-ಸದೆಗಳು ನಮ್ಮ ಹೊಟ್ಟೆಗೆ..’. ಮಾತು ಮುಂದುವರಿಯುತ್ತಿತ್ತು. ಸುಮ್ಮನೆ ಕಿವಿಯಾದೆ.

ಅವಳ ಮಾತಲ್ಲಿ ಸುಳ್ಳಿರಲಿಲ್ಲ. ನಾವು ಸಣ್ಣವರಿರುವಾಗ ಇಂಥದ್ದೆಲ್ಲ ತಲೆಬಿಸಿಗಳಿರುತ್ತಿರಲಿಲ್ಲ. ಕೊನೆಯ ಪರೀಕ್ಷೆ ಮುಗಿಸಿ ಬರುವಾಗಲೇ ಆ ವರ್ಷದ ಪುಸ್ತಕವನ್ನು ನಮ್ಮ ಕೆಳಗಿನ ತರಗತಿಯ ಮಕ್ಕಳ ಕೈಗೆ ದಾಟಿಸಿ, ನಮ್ಮ ಮರುವರ್ಷದ ಪುಸ್ತಕವನ್ನು ಹಿಡಿದುಕೊಂಡೇ ಮನೆಗೆ ಕಾಲಿಡುತ್ತಿದ್ದುದು. ರಜಾ ದಿನಗಳೆಂದು ಎಷ್ಟು ಬೇಕಾದರೂ ಲಾಗ ಹಾಕಲು ಅನುಮತಿ ಇದ್ದರೂ ಒಂದಿಷ್ಟು ಮನೆಕೆಲಸಗಳನ್ನು ಮಾಡಲೇಬೇಕಾಗಿತ್ತು. ಪಠ್ಯಪುಸ್ತಕ ನೋಡಿ ದಿನಕ್ಕೊಂದು ಪುಟ ಬರೆಯಬೇಕಿತ್ತು. ಭಾಷಾಭೇದವಿಲ್ಲದೆ ಕನ್ನಡ, ಇಂಗ್ಲಿಷ್, ಹಿಂದಿ ಎಲ್ಲವನ್ನು ಬರೆದು ಅಮ್ಮನಿಗೆ ತೋರಿಸಬೇಕಾದ್ದು ನಿತ್ಯವಿಧಿಗಳಲ್ಲಿ ಸೇರಿತ್ತು. ರಜೆ ಎಂದು ಎಷ್ಟೆಷ್ಟೋ ಹೊತ್ತಿಗೆ ಏಳುವಂತಿರಲಿಲ್ಲ. ಶಾಲೆ ಇದ್ದಾಗ ಹೇಗೆ ಏಳುತ್ತಿದ್ದೆವೋ ಹಾಗೇ ಏಳಬೇಕಿತ್ತು. ಉಳಿದ ಹೊತ್ತೆಲ್ಲ ಕಾಡು ಸುತ್ತಲು, ನದಿಯಲ್ಲಿ ಈಜಲು, ಹೊಸ ಆಟಗಳನ್ನು ಕಲಿಯಲು, ಬಿರುಬಿಸಿಲಿನ ತಂಪಿಗೆಂದು ಮರ ಹತ್ತಿ ಅಲ್ಲೆಲ್ಲ ಗೂಡು ಕಟ್ಟಲು…

ಇದೆಲ್ಲ ಹಳೇ ಪುರಾಣವಾಯ್ತು. ಈಗೆಲ್ಲಿದೆ ಕಾಡು, ನೀರಿರುವ ತೋಡು, ಹತ್ತಲು ಮರ ಎಂದೆಲ್ಲ ನಮ್ಮ ಮಕ್ಕಳು ಪ್ರಶ್ನೆ ಮಾಡಿದರೆ ಉತ್ತರ ಹೇಳಲು ಬಾರದೇ ತೆಪ್ಪಗಿರಬೇಕಷ್ಟೇ. ಅದಕ್ಕಾಗಿ ನಾವೇನು ಮಾಡುತ್ತೇವೆಂದರೆ ಪರೀಕ್ಷೆಗಳು ಮುಗಿದವು. ಶಾಲೆಯ ಯಾವತ್ತಿನ ಪಾಠ ಓದು ಬರೆ ಎಂಬೆಲ್ಲ ಗಲಾಟೆಗಳಿಂದ ಮುಕ್ತವಾಗುವ ಕಾಲವಿದು. ಮಕ್ಕಳು ಮನೆಯೊಳಗೆ ಕುಳಿತು ಸಮಯ ವ್ಯರ್ಥ ಮಾಡುತ್ತಾರೆಂಬ ಚಿಂತೆಯಲ್ಲಿ ಇದ್ದಬದ್ದ ಕ್ಲಾಸುಗಳಿಗೆಲ್ಲ ಅಪ್ಲಿಕೇಷನ್ ಹಾಕುತ್ತೇವೆ. ಅದಲ್ಲದಿದ್ದರೆ ಬೇಸಿಗೆ ಶಿಬಿರಗಳ ಅಡ್ರೆಸ್ ಹುಡುಕುತ್ತ ಅಲೆಯುತ್ತೇವೆ, ಕೆಲವೊಮ್ಮೆ ಇದು ಸ್ಟೇಟಸ್ ವಿಷಯವೂ ಆಗಿ ದೊಡ್ಡ ಮೊತ್ತದ ಹಣಕ್ಕೆ ಕುತ್ತು ತರುವುದೂ ಇದೆ. ಮನೆಯಲ್ಲೇ ಮಕ್ಕಳುಳಿದರೆ ಅವರ ಇಡೀ ದಿನದ ‘ಬೋರ್… ಬೋರ್’ ಎಂಬ ರಾಗವನ್ನು ಸುಧಾರಿಸುವ ತಲೆಬಿಸಿಯ ಜತೆ ಅವರ ಉದ್ದುದ್ದದ ಬೇಡಿಕೆಗಳು. ಹಾಗಂತ ಬೇಸಿಗೆ ಶಿಬಿರಗಳು, ಯಾವ್ಯಾವುದೋ ಕ್ಲಾಸುಗಳು ಮಾತ್ರ ಇದಕ್ಕೆ ಪರಿಹಾರವಲ್ಲ. ಮನೆಯಲ್ಲಿ ಉಳಿದೇ ಹಲವು ವಿಷಯಗಳನ್ನು ಕಲಿಯಬಹುದು.

ಅದಕ್ಕೆಂದೇ ಒಂದಿಷ್ಟು ಕೆಟ್ಟವರಾಗೋಣ, ನಿಷ್ಠುರರಾಗೋಣ.

ರಜಾ ದಿನಗಳಲ್ಲಿ ಮಕ್ಕಳನ್ನು ನಾವು ಏಳುವ ಹೊತ್ತಿನಲ್ಲೇ ಬಡಿದೆಬ್ಬಿಸೋಣ. ಆ ಹೊತ್ತಿನ ಪ್ರಶಾಂತ ವಾತಾವರಣ ದಿನದ ಬೇರೆ ಯಾವ ವೇಳೆಯಲ್ಲೂ ಸಿಗದು. ಯೋಗಾಸನ, ವ್ಯಾಯಾಮಗಳಂಥದ್ದನ್ನು ಮಾಡಬಹುದು. ನಮಗೊಂದಿಷ್ಟು ಹಿತ್ತಲು ಎಂಬುದಿದ್ದರೆ ಅದರ ಸ್ವಚ್ಛತಾ ಕೆಲಸವನ್ನು ಮಾಡಬಹುದು. ಅಲ್ಲಿ ಗಿಡಗಳನ್ನು ಬೆಳೆಸಬಹುದು. ಅಥವಾ ಮನೆಯ ತಾರಸಿಯಲ್ಲಿ ತರಕಾರಿಗಳೋ ಹೂಗಿಡಗಳೋ ಏನಾದರೂ ಬೆಳೆಯುವ ಪ್ರಯತ್ನ ಮಾಡಬಹುದು. ಇದಕ್ಕೆ ಕೂಡ ಕುಂಡಗಳಿಗಾಗಿ ಹಣ ವ್ಯರ್ಥ ಮಾಡಬೇಕಿಲ್ಲ. ದಪ್ಪದ ಪ್ಲಾಸ್ಟಿಕ್ಕುಗಳು ಅನೇಕ ತಿಂಡಿ ತಿನಿಸುಗಳ ಪ್ಯಾಕ್ ಮಾಡಿ ನಮ್ಮ ಮನೆಗೆ ಕಸವಾಗಿ ಬಂದಿರುತ್ತವೆ. ಅದನ್ನೇ ಬಳಸಿಕೊಂಡರಾಯಿತು. ಅಲಸಂಡೆ, ಬೀನ್ಸಿನಂತಹ ಬೇಗ ಮೊಳಕೆಯೊಡೆಯುವ ಕಾಳುಗಳನ್ನು ಬಿತ್ತಿದರೆ ಮಕ್ಕಳು ಅವುಗಳ ಹುಟ್ಟು, ಬೆಳವಣಿಗೆ, ಹೂ ಬಿಡುವಿಕೆ, ಕಾಯಿ ಕಚ್ಚುವಿಕೆ ಎಲ್ಲವನ್ನೂ ಶಾಲೆ ಶುರು ಆಗುವ ಮೊದಲೇ ನೋಡಿ ಆನಂದಿಸಬಹುದು. ಬಾಲ್ಸಂ, ಜೀನಿಯಾದಂತಹ ಹೂಗಳು ಕೂಡ ಬೇಗನೇ ಹೂ ಬಿಟ್ಟು ನೆಟ್ಟವರ ಮನದಲ್ಲಿ ಸಂತಸ ಮೂಡಿಸುತ್ತವೆ.

ಹೆಣ್ಣು ಗಂಡುಗಳೆಂಬ ಭೇದವಿಲ್ಲದೇ ಮಕ್ಕಳು ಅಡುಗೆಮನೆಯೊಳಗೆ ಪ್ರವೇಶ ಪಡೆಯಬೇಕು. ಸಣ್ಣಪುಟ್ಟ ಅಡುಗೆಗಳನ್ನು, ಅಡುಗೆ ಮಾಡುವಾಗ ವಹಿಸಲೇಬೇಕಾದ ಎಚ್ಚರಿಕೆಗಳನ್ನು, ಮಿಕ್ಸಿ, ಓವನ್, ಕುಕ್ಕರ್​ಗಳನ್ನು ಬಳಸುವ ವಿಧಾನವನ್ನು ಕಲಿತುಕೊಳ್ಳಬೇಕು. ದಿನಸಿ ಸಾಮಗ್ರಿಗಳ ಪರಿಚಯವೂ ಆಗುತ್ತದೆ. ಅದನ್ನು ಹೇಗೆ ಅಡುಗೆಯಲ್ಲಿ ಬಳಸುತ್ತೇವೆ ಎಂಬುದರ ಪ್ರಾತ್ಯಕ್ಷಿಕೆಯೂ ಆದಂತಾಗುತ್ತದೆ. ತಾವೇ ತಯಾರಿಸಿದ ಆಹಾರವನ್ನು ಬೇರೆಯವರಿಗೆ ಉಣಬಡಿಸುವ ಗಮ್ಮತ್ತು ಅವರದಾಗುತ್ತದೆ. ನಮ್ಮ ದೈನಂದಿನ ಎಲ್ಲ ಕೆಲಸಗಳನ್ನೂ ಮಕ್ಕಳಿಗೆ ಪರಿಚಯಿಸುವ ಕೆಲಸ ನಮ್ಮಿಂದಲೇ ಆಗಬೇಕು.

ಮಕ್ಕಳು ನಮ್ಮ ಮಾತನ್ನು ಕೇಳಿ ಕಲಿಯುವುದಕ್ಕಿಂತಲೂ ಹೆಚ್ಚು ನಮ್ಮನ್ನು ನೋಡಿ ಕಲಿಯುತ್ತವೆ. ನನ್ನ ಮಗ ಸಣ್ಣವನಿರುವಾಗ ಶಾಲೆಯಲ್ಲಿ ಒಂದು ಹಾಡು ಮತ್ತು ಅದರ ನೃತ್ಯವನ್ನೂ ಹೇಳಿಕೊಟ್ಟಿದ್ದರು- ‘ನೆಲದಲ್ಲೇನು ನೆಲದಲ್ಲೇನು ಕಾಗದದ ಚೂರು ಕಾಗದದ ಚೂರು ಹೆಕ್ಕಿ ತೆಗೀರಿ ಹೆಕ್ಕಿ ತೆಗೀರಿ…’ ಸಣ್ಣ ಕಸ ಕಂಡರೂ ಈ ಪದ್ಯ ಹೇಳಿಕೊಂಡೇ ಹೆಕ್ಕುತ್ತಿದ್ದ. ಅಲ್ಲಿಲ್ಲಿ ಕಸ ಎಸೆಯಬಾರದೆಂಬ ಪ್ರಾಥಮಿಕ ಪಾಠ ಇದು. ಮಕ್ಕಳೇ ಮುಂದಾಳತ್ವ ವಹಿಸಿ ಮಾಡಬಹುದಾದ ಹಲವು ಕೆಲಸಗಳು ಮಕ್ಕಳಿಗೆ ಹೆಮ್ಮೆಯನ್ನು ಆತ್ಮತೃಪ್ತಿಯನ್ನು ತಂದುಕೊಡುವುದಲ್ಲದೆ ಮುಂದಕ್ಕೆ ಯೋಗ್ಯ ನಾಗರಿಕರಾಗಿ ರೂಪುಗೊಳ್ಳುವುದಕ್ಕೆ ಸಹಾಯ ಮಾಡುತ್ತವೆ.

ಒಂದೊಂದು ಬಡಾವಣೆಯ ಮಕ್ಕಳು, ಕೂಡಿಕೊಂಡು ಪುಟ್ಟ ಸೈನ್ಯ ಕಟ್ಟಿಕೊಳ್ಳಿ. ನಿಮ್ಮ ಬಡಾವಣೆಯಲ್ಲಿ ಯಾರೇ ಕಸ ಹಾಕಲು ಬಂದರೂ ಅವರಿಗೆ ತಿಳಿ ಹೇಳಿ. ನೀವು ಒಬ್ಬರೇ ಇದ್ದಾಗಲೂ ಅಳುಕದೇ ಈ ಕೆಲಸ ಮಾಡಬಹುದು. ಕೈಯಲ್ಲಿರುವ ಕಸ ಎಸೆದು ಮುಂದಕ್ಕೆ ಹೋಗುವವರನ್ನು ಅಡ್ಡಹಾಕಿ ನಿಮ್ಮದೇನೋ ವಸ್ತು ಬಿದ್ದಿದೆ ನೋಡಿ ಎಂದು ಆ ಕಸವನ್ನು ತೋರಿಸಿ. ಅಥವಾ ಕಸ ಹಾಕಬಾರದಿಲ್ಲಿ ಎಂದು ಗಟ್ಟಿಯಾಗಿ ಹೇಳಿ. ತಪ್ಪು ಮಾಡಿದವನಿಗೆ ಅಳುಕು ಇರುತ್ತದೆ. ಹಾಗಾಗಿ ಅವನು ನಿಮ್ಮನ್ನು ಎದುರಿಸಲಾರ. ಇನ್ನೂ ಮೊಂಡುತನ ಮಾಡಿದರೆ ಕಸವನ್ನು ಮೌನವಾಗಿಯೇ ಹೆಕ್ಕಿ ಹತ್ತಿರದ ಕಸದ ತೊಟ್ಟಿಗೆ ಹಾಕಿ. ಇದು ಅವರಿಗೆ ಅವಮಾನವನ್ನೇ ಉಂಟುಮಾಡುತ್ತದೆ. ಮತ್ತೊಮ್ಮೆ ಕೈಯಲ್ಲಿರುವ ಕಸ ಎಸೆಯುವಾಗ ಯೋಚಿಸುತ್ತಾರೆ. ನೀವು ಟೂರ್ ಹೋಗುವಾಗ ಕೈಯಲ್ಲಿ ಚೀಲವೊಂದಿರಲಿ. ಏನೇ ಕಸ ಇದ್ದರೂ ಅದರಲ್ಲಿ ಹಾಕಿ. ದಾರಿಯಲ್ಲೆಲ್ಲಿಯೂ ಎಸೆಯಬೇಡಿ.

ನಿಮ್ಮ ಪುಟ್ಟ ಕೈಗಳಿಂದ ಸಣ್ಣ ಸಣ್ಣ ಬ್ಯಾನರುಗಳನ್ನು ರಟ್ಟಿನಲ್ಲಿ ಬರೆಯಿರಿ. ಕಸ ಹಾಕಬೇಡಿ, ನೀರನ್ನು ಮಲಿನ ಮಾಡಬೇಡಿ, ಪ್ರಾಣಿಗಳಿಗೆ ತೊಂದರೆ ಕೊಡಬೇಡಿ. ವಾಹನ ಚಲಾಯಿಸುವಾಗ ಸೀಟ್​ಬೆಲ್ಟ್ ಧರಿಸಿ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ, ಹೆಲ್ಮೆಟ್ ಧರಿಸಿ- ಇಂತಹ ಇನ್ನು ಹಲವು ಎಚ್ಚರಿಕೆಯ ಮಾತುಗಳನ್ನು ಬರೆದು ಸಾರ್ವಜನಿಕರಿಗೆ ಕಾಣುವಂತೆ ಅಳವಡಿಸಿ. ಮಕ್ಕಳ ಇಂತಹ ಕಾಳಜಿಗಳು ದೊಡ್ಡವರ ಮನಸ್ಸನ್ನು ಕರಗಿಸುತ್ತವೆ. ಮಕ್ಕಳು ಹೇಳಿದ್ದಕ್ಕೆ ಬೆಲೆಯೂ ಹೆಚ್ಚು.

ಇನ್ನೀಗ ಬರುವುದು ಬಿರುಬೇಸಿಗೆ. ಸ್ವಲ್ಪ ದೂರ ಬಿಸಿಲಲ್ಲಿ ನಡೆದರೆ ಸಾಕು ನಾವು ನೀರಿಗಾಗಿ ತಹತಹಿಸುತ್ತೇವೆ. ಅದೇ ರೀತಿ ಪಶು-ಪಕ್ಷಿಗಳು ನೀರನ್ನು ಬೇಡುತ್ತವೆ. ಅವುಗಳಿಗಾಗಿ ನಿಮ್ಮ ಮನೆಯ ಮುಂದೆ ಅಗಲ ಬಾಯಿಯ ಬಕೆಟ್​ನಲ್ಲಿ ನೀರು ಇರಿಸಿ. ಅವುಗಳ ದಾಹ ನಿವಾರಿಸುವ ಪುಣ್ಯದ ಕೆಲಸ ನಿಮ್ಮದಾಗುತ್ತದೆ.

ನಿಮ್ಮ ಹತ್ತಿರ ಹಳೇ ಬಟ್ಟೆಗಳು ಎಷ್ಟೋ ಇರಬಹುದು. ಬೆಳೆಯುವ ಮಕ್ಕಳಾದ ಕಾರಣ ಬಟ್ಟೆಗಳು ಬಹುಬೇಗ ನಿಮಗೆ ಸಣ್ಣದಾಗಿ ಹಾಕಲಾಗದೇ ನಿರುಪಯುಕ್ತವಾಗುತ್ತವೆ. ಹರಿಯದೇ ಇರುವ ಅಂತಹ ಬಟ್ಟೆಗಳನ್ನು ಒಗೆದು ಮಡಚಿ ಪ್ಯಾಕ್ ಮಾಡಿ. ನಿಮ್ಮ ಗೆಳೆಯರ ಹತ್ತಿರವೂ ಈ ಕೆಲಸ ಮಾಡಲು ಹೇಳಿ. ದೇವಸ್ಥಾನದ ಮೆಟ್ಟಿಲುಗಳೋ ಅಥವಾ ಬಸ್​ಸ್ಟಾ್ಯಂಡಿನ ಕಟ್ಟೆಯೋ ಇಂತಹ ಜಾಗದಲ್ಲಿಟ್ಟು ಅವಶ್ಯವಿದ್ದವರು ಇದನ್ನು ಕೊಂಡೊಯ್ಯಬಹುದು ಎಂಬಂಥ ಸೂಚನೆ ಇರುವಂಥ ಫಲಕ ಅಳವಡಿಸಿ. ವಾರದ ಒಂದು ನಿಗದಿತ ದಿನವನ್ನು ಇದಕ್ಕೆ ಮೀಸಲಿಡಿ.

ವಾರದ ಒಂದು ದಿನ ಕತೆ ಹೇಳುವುದಕ್ಕೆ ಅಂತಲೇ ಇಟ್ಟುಕೊಳ್ಳಿ. ನಿಮ್ಮಲ್ಲಿ ಹಲವು ಕತೆಗಳಿರಬಹುದು. ನೀವು ಕೇಳಿದ್ದೊ ಓದಿದ್ದೋ.. ಅದನ್ನು ಇನ್ನೊಬ್ಬರಿಗೆ ಹೇಳಿ. ಓದುವ ಹವ್ಯಾಸ ಇರುವವರಾದರೆ ಹತ್ತಿರದ ಲೈಬ್ರರಿಗೆ ಮೆಂಬರ್ ಆಗಿ ಅಲ್ಲಿನ ಪುಸ್ತಕಗಳ ಸದುಪಯೋಗ ಪಡೆಯಬಹುದು. ರಜಾ ಎಂದ ಮೇಲೆ ಟೂರ್ ಹೋಗುವುದು ಸಾಮಾನ್ಯ. ನೀವು ಟೂರ್ ಹೋದ ಜಾಗಗಳ ವಿಶೇಷತೆಯ ಬಗ್ಗೆ ತಿಳಿದುಕೊಳ್ಳಿ. ನಿಮ್ಮದೇ ಆದ ವಾಕ್ಯಗಳಲ್ಲಿ ಪ್ರವಾಸದ ಅನುಭವಗಳನ್ನು ಬರೆಯಿರಿ. ಬೇರೆಯವರಿಗಿಂತ ನೀವು ವಿಶೇಷ ಇರಬಹುದು. ಅವುಗಳ ಪ್ರದರ್ಶನಕ್ಕೆಂದು ವೇದಿಕೆ ತಯಾರು ಮಾಡಿ.

ಪ್ರತಿದಿನವೂ ನೀವು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಒಂದೆರಡು ಸಾಲುಗಳನ್ನು ಡೈರಿಯಲ್ಲಿ ಬರೆದಿಡಿ.

ಇವಿಷ್ಟನ್ನೂ ಕಾಸು ಖರ್ಚಿಲ್ಲದೆ ಮಾಡಿ ರಜಾ ಕಾಲವಿಡೀ ಮೋಜನ್ನು ಪಡೆಯಬಹುದು. ಜತೆಗೆ ಏನೋ ಹೊಸತನ್ನು ಕಲಿತ, ಮಾಡಿದ ನೋಡಿದ ಸಂತೃಪ್ತಿಯೂ ನಿಮ್ಮದು. ಮತ್ತೆ ಶಾಲೆ ಶುರು ಆದಾಗ ನಿಮ್ಮ ಹತ್ತು ಹಲವು ಅನುಭವಗಳನ್ನು ಶಾಲೆಯಲ್ಲಿಯೂ ಹೇಳಿ. ಉಳಿದವರನ್ನು ಪ್ರೇರೇಪಿಸಿ.

ಮಾಡ್ತೀರಲ್ಲಾ…?

(ಲೇಖಕರು ಸಾಹಿತಿ)

One thought on “ಒಂದಿಷ್ಟು ಕೆಟ್ಟವರಾಗೋಣ ಬನ್ನಿ…!

  1. Dear Anita,

    One of the best article, i have read after a long time.

    I thank you from the bottom of my heart.

    I request you to continue this good work of writing good articles.

    Thanks and Regards

Leave a Reply

Your email address will not be published. Required fields are marked *

Back To Top