ಪ್ರಕೃತಿಯ ಸೊಬಗಿನೊಳಗೆ ವಿಸ್ಮಯದ ಪ್ರಾಣಿಗಳು…

ಇತ್ತಿತ್ತಲಾಗಿ ನಮ್ಮ ಕಣ್ಣುಗಳು ಸೂಕ್ಷ್ಮವಾಗುತ್ತಿದೆಯೋ ಅಥವಾ ಪ್ರಾಣಿ ಪಕ್ಷಿಗಳಿಗೆ ಇಲ್ಲೇನೂ ಅಪಾಯವಾಗದು ಎಂಬ ಅರಿವು ಹೆಚ್ಚಾಗುತ್ತಿದೆಯೋ ತಿಳಿಯದು. ಬಸವಳಿದು ಬಿದ್ದ ಚಿಟ್ಟೆಯೊಂದು ರೆಕ್ಕೆ ಬಡಿಯುತ್ತ ಆಗಸದಲ್ಲಿ ಹಾರಿದ್ದರ ಬಗ್ಗೆ ಹಿಂದೆ ಹೇಳಿದ್ದೆನಲ್ಲ. ಬಹುಶಃ ಆ ಚಿಟ್ಟೆ ಗಾಳಿ ಸುದ್ದಿ ಹರಡಿಸಿತೇನೋ ಎಂಬಂತೆ ಇನ್ನೊಂದು ಸುಮಧುರ ಘಟನೆ ನಡೆಯಿತು.

ರಾತ್ರಿ ಹನ್ನೊಂದರ ಸಮೀಪ. ಇನ್ನೇನು ಲ್ಯಾಪ್ಟಾಪಿಗೆ ನಮಸ್ಕಾರ ಹೇಳಿ ಮಲಗುವುದು ಎಂದು ಆಲೋಚಿಸುತ್ತಿದ್ದಾಗ ಮನೆಯ ಅಂಗಳದ ಕಡೆಯಿಂದ ಇವರು ಕರೆಯುವುದು ಕೇಳಿಸಿತು ‘ಇಲ್ಲೆಂತದೋ ಉದ್ದದ ಬಾಲ ಕಾಣಿಸ್ತದೆ ಬಾ..’ ಎಂದು. ಉದ್ದದ ಬಾಲ ಎಂದರೆ ಬುಸ್ಸಪ್ಪನೇ ಇರಬೇಕೆಂದು ಕುತೂಹಲದಿಂದ ಹೊರಗೋಡಿದೆ. ‘ಕಾರಿನ ಆ ಪಕ್ಕ ಹೋಯ್ತು ನೋಡು’ ಎಂದರು.

ನನಗೂ ಕಂಡದ್ದು ಬಾಲವೇ. ಆದರದು ನುಣ್ಣಗಿನ ಹಾವಿನ ಬಾಲದಂತಿರಲಿಲ್ಲ. ಕಪ್ಪನೆಯ ಕೂದಲು ತುಂಬಿದ ಉದ್ದದ ಬಾಲ. ಅಚ್ಚರಿಯಿಂದ ಮೆಲ್ಲನೆ ಇಣುಕುತ್ತ ಕಾರಿನ ಹತ್ತಿರ ಹೋದೆ. ಅದೀಗ ತನ್ನ ಉದ್ದನೆಯ ಬಾಲ ಎಳೆಯುತ್ತ

ಹೂಗಿಡಗಳ ಸಾಲಿನ ಪಕ್ಕ ನಿಧಾನಕ್ಕೆ ಹೋಗುತ್ತಿತ್ತು. ಇವರಿಗೂ ಈಗದರ ಪೂರ್ಣ ಆಕಾರ ಕಣ್ಣಿಗೆ ಕಾಣಿಸಿತು. ‘ಹೋಯ್.. ಅದು ಬೆರು (ಏಷಿಯನ್ ಪಾಮ್ ಸಿವೆಟ್)’ ಎಂದರು.

ಅರೇ.. ಬೆರು.. ಅದೂ ಇಷ್ಟು ಹತ್ತಿರದಲ್ಲಿ.. ಖುಷಿಯಿಂದ ಹೊರಗೋಡಿದೆ. ಬೆರು ಎಂಬ ಸುಂದರ ಜೀವಿ ನಮ್ಮ ಊರಿನಲ್ಲಿ ಮಾಮೂಲಿಯೇ. ಮೈಮೇಲೆಲ್ಲ ಮಕಮಲ್ಲಿನಂತಹ ನುಣುಪಾದ ದಟ್ಟ ಕೂದಲನ್ನು ಹೊಂದಿದ ಈ ಪ್ರಾಣಿ ಮುದ್ದುಗರೆಯುವಂತೆ ಇರುತ್ತದೆ. ಪುಟಾಣಿ ಕರಡಿಮರಿಯಂತೆ ಇರುವ ಇವುಗಳು ಕಾಣಸಿಗುವುದು ಕಷ್ಟ. ರಾತ್ರಿ ಹೊತ್ತೇ ಅವರ ಕಾರುಬಾರು ಇರುವುದರಿಂದ ಕಣ್ಣಿಗೆ ಬೀಳುವುದು ಕಡಿಮೆಯೇ.

ಇವು ನಮ್ಮ ಪರಿಸರದಲ್ಲೇ ಇರುವುದು ಎನ್ನುವುದಕ್ಕೆ ಸಾಕ್ಷಿಯನ್ನು ತೋಟದ ಕೊಕೋ ಗಿಡಗಳು ಹೇಳುತ್ತವೆ. ಆ ಗಿಡಗಳಲ್ಲಾದ ಹಲವು ಹಣ್ಣುಗಳಲ್ಲಿ ಅವುಗಳಿಗೂ ಸಮಪಾಲು. ಕೆಲವು ಗಿಡಗಳಲ್ಲಿ ಕಣ್ಣಿಗೆ ಕೇಸರಿಯಾದ ಕೋಕೋ ಹಣ್ಣುಗಳು ಕಾಣಿಸುವುದು ಮಾತ್ರ. ಕೊಕ್ಕೆ ಹಾಕಿ ಕೊಯ್ದರೆ ಒಂದು ಬದಿ ತೂತವಾಗಿ ಒಂದೇ ಒಂದು ಬೀಜ ಇಲ್ಲದಂತೆ ಖಾಲಿ. ಒಮ್ಮೆ ನಮ್ಮ ನಾಯಿ ತೋಟದಿಂದ ಬೆರುವೊಂದನ್ನು ಹಿಡಿದು ತಂದಿತ್ತು. ಆಗ ನೋಡಿದ್ದೆ ಅದರ ಪ್ರಾಣವಿಲ್ಲದ ದೇಹ. ಇಲಿ ಹೆಗ್ಗಣಗಳನ್ನು ಬೇಟೆಯಾಡುತ್ತಿದ್ದ ನಾಯಿ ಇದನ್ನೂ ಹಾಗೇ ಎಂದುಕೊಂಡಿತ್ತೇನೋ!

ಆದರೆ ಇದೀಗ ಜೀವಂತ ಬೆರು. ಅದೂ ಇಷ್ಟು ಹತ್ತಿರದಲ್ಲಿ. ಶಬ್ದ ಮಾಡದೇ ಅದನ್ನು ನೋಡುವ ಆತುರದಲ್ಲಿ ಅಂಗಳಕ್ಕಿಳಿದಿದ್ದೆ. ಅತಿ ನಾಚಿಕೆಯ ಪ್ರಾಣಿ, ಅತಿ ಚುರುಕಿನ ಪ್ರಾಣಿ, ಜತೆಗೆ ಮನುಷ್ಯರೆಂದರೆ ಭಯ ಬೀಳುವ

ಪ್ರಾಣಿಯದು. ಅಪಾಯ ಎಂದು ಓಡಿ ಹೋದರೆ.. ನೋಡುವ ಅದೃಷ್ಟ ತಪ್ಪಿ ಹೋಗುತ್ತದಲ್ಲ. ಹಾಗಾಗಿ ಎಚ್ಚರ ವಹಿಸಿದ್ದೆ. ಆದರೂ ಪ್ರಾಣಿಗಳು ಬಲು

ಸೂಕ್ಷ್ಮ. ನನ್ನನ್ನು ಕಂಡೇ ಬಿಟ್ಟಿತು.

ಛೇ..! ಸರಿಯಾಗಿ ನೋಡುವ ಮೊದಲೇ ಇನ್ನೇನು ಈಗ ಓಡಿ ಮರೆಯಾಗಿಬಿಡುತ್ತದಿದು ಎಂದುಕೊಂಡಿದ್ದೆ. ಆದರೆ ನಡೆದಿದ್ದೇ ಬೇರೆ. ಅದು ನನ್ನನ್ನು ನೋಡಿ ಓಡುವ ಬದಲು ನಿಧಾನನಡಿಗೆಯಲ್ಲೇ ಹತ್ತಿರ ಬರತೊಡಗಿತು. ಈಗ ಭಯಬಿದ್ದು ಓಡುವ ಪರಿಸ್ಥಿತಿ ನನ್ನದೇ. ಆದರೆ ಪುಟ್ಟಜೀವಿ ಅಷ್ಟು ಬೇಗ ನನಗೇನೂ ತೊಂದರೆ ಮಾಡದು ಎಂದು ಅಲ್ಲೇ ನಿಂತಿದ್ದೆ. ಅದೇ ಹೊತ್ತಿಗೆ ಇವರೂ ಕ್ಯಾಮೆರಾ ಹಿಡಿದು ಅಂಗಳಕ್ಕಿಳಿದರು. ಈಗದರ ಹೆಜ್ಜೆ ಅವರ ಕಡೆಗೆ ತಿರುಗಿತು. ಅರೇ ಇದೇನಾಗಿದೆ. ನಮ್ಮನ್ನು ನೋಡಿ ಓಡಿಹೋಗಬೇಕಿದ್ದ ಈ ಜೀವಿ ನಮ್ಮ ಬಳಿಗೆ ಯಾವ ಭಯವಿಲ್ಲದೇ ಬರುತ್ತಿದೆ.. ನಿಜಕ್ಕೂ ನಮ್ಮ ಕಣ್ಣುಗಳನ್ನು ನಾವೇ ನಂಬದ ಪರಿಸ್ಥಿತಿ. ನಾವು ಸಾಕಿದ ನಾಯಿಮರಿಯಂತೆ ಹತ್ತಿರ ಬಂದು ಸುಮ್ಮನೆ ಕುಳಿತುಬಿಟ್ಟಿತು ಒಂದು ರೀತಿಯ ಸ್ವರ ಹೊರಡಿಸುತ್ತ. ಅದು ನರಳುವಿಕೆಯಂತಿರಲಿಲ್ಲ. ಆದರೂ ಅದೇನೋ ಹೇಳಹೊರಟಿತ್ತು ನಮ್ಮ ಬಳಿ. ಅದೆಲ್ಲ ನಮಗರ್ಥವಾಗುವಂತಿದ್ದರೆ…

ಅದಕ್ಕೇನಾದರೂ ಗಾಯ ಆಗಿರಬಹುದೇ ಎಂಬ ಸಂದೇಹ ನನ್ನದು. ಅದನ್ನು ಮುಟ್ಟದಿದ್ದರೂ ಹತ್ತಿರ ಬಗ್ಗಿ ಅದರ ಇಡೀ ದೇಹವನ್ನು ನೋಡಿದೆ. ಎಲ್ಲೂ ಏನೂ ಕಾಣಿಸಲಿಲ್ಲ. ಏನೂ ಆಹಾರ ಸಿಗದೇ ನಿತ್ರಾಣವಾಗಿರಬಹುದೇ ಎನ್ನಿಸಿತು. ಸ್ವಲ್ಪ ನೀರು ಕೊಟ್ಟು ನೋಡುವ ಎಂದು ಅಗಲ ಪಾತ್ರೆಯಲ್ಲಿ ನೀರು ತಂದು ಅದರೆದುರು ಇಟ್ಟೆ. ಕುಡಿಯುವುದಿರಲಿ ಅದನ್ನು ಕಣ್ಣೆತ್ತಿಯೂ ನೋಡಲಿಲ್ಲ. ಅದು ಇನ್ನಷ್ಟು ಸ್ವರ ಹೊರಡಿಸುತ್ತ ನಮ್ಮ ಹತ್ತಿರವೇ ಸುಳಿಯತೊಡಗಿತು. ಇನ್ನೇನು ಉಪಾಯ ಎನ್ನುವಾಗ ನೆನಪಾಗಿದ್ದು ಹಣ್ಣುಗಳು.

ಇದರ ಆಹಾರ ಅಂದರೆ ಹಣ್ಣುಗಳೇ ಅಲ್ವಾ… ಹೇಗೂ ನಮ್ಮ ತೋಟದ ಕೊಕೋ ಹಣ್ಣಿನ ಮುಖ್ಯ ಗ್ರಾಹಕ ಇದೇ ತಾನೇ. ಹಾಗೆಂದು ಈಗ ತೋಟಕ್ಕೆ ಹೋಗಿ ಕೊಕೋ ಹಣ್ಣು ಹುಡುಕಿ ಇದರೆದುರು ಇಡಲು ಸಾಧ್ಯವೇ? ಮನೆಯೊಳಗಿರುವ ಹಣ್ಣುಗಳನ್ನು ಇಟ್ಟು ನೋಡಿದರೆ ಎಂದೆನಿಸಿತು. ಬೆರುವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದ ಮನೆಕೂಸು ಸ್ವಾತಿ ಈಗ ತಾನೇ ತರಾತುರಿಯಲ್ಲಿ ಹಣ್ಣು ತರಲು ಹೊರಟಳು. ಒಳಗಿದ್ದದ್ದು ಒಂದು ಕಲ್ಲಂಗಡಿ ಹಣ್ಣು ಮಾತ್ರ. ಅದನ್ನು ಕೊಡುವುದು ಹೇಗೆ? ತುಂಡು ಮಾಡಿಟ್ಟರೆ ತಿನ್ನದೇನೋ ಎಂಬ ಸಂದೇಹ.

ಟೊಮೆಟೋ ಹಣ್ಣು ಕೊಟ್ಟರೆ ಹೇಗೆ.. ಎಂಬ ಪ್ರಶ್ನೆಯ ಹಿಂದೆಯೇ ಟೊಮೆಟೋ ಹಣ್ಣು ಹಿಡಿದು ಬಂದಳು ಸ್ವಾತಿ. ಇದಾದರೆ ತಿಂದೀತೇನೋ ಎಂದು ಅದರೆದುರು ನೈವೇದ್ಯದಂತೆ ಇಟ್ಟು ನಾವು ಮರೆಯಾಗಲು ಹೊರಟೆವು. ಉಹೂಂ.. ಅದನ್ನು ಹಣ್ಣಿನ ಹಿಂದೆ ಬೀಳುವ ಬದಲು ನಮ್ಮ ಹಿಂದೆಯೇ ಮೆರವಣಿಗೆ ಬರತೊಡಗಿತು. ಸರಿ ನಾವಿಲ್ಲೇ ನಿಂತರೆ ತಿನ್ನಬಹುದೇನೋ ಎಂದೆನಿಸಿ ಹಣ್ಣನ್ನು ಮತ್ತೊಮ್ಮೆ ಅದರೆದುರು ಇಟ್ಟು ನಾವು ನಿಂತುಕೊಂಡೆವು. ಹಣ್ಣನ್ನು ಮೇಲಿನಿಂದ ಕೆಳಗಿನವರೆಗೂ ನಾಲ್ಕಾರು ಬಾರಿ ಮೂಸಿ ನೋಡಿತು. ನಮ್ಮ ಮೂಗಿಗೆ ಬಾರದ ಅದ್ಯಾವ ವಾಸನೆ ಅದಕ್ಕೆ ಸಿಕ್ಕಿತೇನೋ.. ಇದು ತಿನ್ನುವಂಥದ್ದಲ್ಲ ಎಂಬಂತೆ ಮುಖ ತಿರುಗಿಸಿತು. ಮತ್ತೆ ತಂದಿಟ್ಟ ಬೀನ್ಸ್, ತೊಂಡೆ, ಅಲಸಂಡೆಗಳಿಗೂ ಇದೇ ಸ್ಥಿತಿಯಾದಾಗ ಈ ಪ್ರಾಣಿಗೇನು ಬೇಕಾದ್ದಪ್ಪಾ ಎಂದು ಮಂಡೆ ಬಿಸಿಯಾಗತೊಡಗಿತು. ಅದೇ ನಾವುಗಳು ಇಂತಹ ಪರಿಸ್ಥಿತಿಯಲ್ಲಿದ್ದರೆ ಕೊಟ್ಟಿದ್ದನ್ನೆಲ್ಲ ಗಬಗಬನೆ ತಿನ್ನುತ್ತಿದ್ದೆವಲ್ಲ.. ನಮಗೆ ಪ್ರಕೃತಿಯ ಮಡಿಲಲ್ಲೇ ತಮ್ಮದೇ ಆಹಾರವನ್ನು ಅರಸುವ, ಬೇರೆಯದನ್ನು ಕಣ್ಣೆತ್ತಿಯೂ ನೋಡದ ಇಂತಹ ಸ್ಥಿತಪ್ರಜ್ಞತೆ ಬಂದೀತಾ?

ಇದನ್ನೆಲ್ಲ ಯೋಚಿಸುತ್ತ ಕೂರಲು ಸಮಯವಿರಲಿಲ್ಲ. ಇದನ್ನು ಹೀಗೆ ಬಿಟ್ಟು ಮನೆಯೊಳಗೆ ಹೋಗಿ ಬಾಗಿಲು ಹಾಕಿ ಮಲಗುವಂತೆಯೂ ಇಲ್ಲ. ‘ಒಳಗಿನಿಂದ ರಟ್ಟಿನ ಪೆಟ್ಟಿಗೆ ತರಲಾ.. ಅದರೊಳಗಿಟ್ಟು ಈ ತರಕಾರಿಗಳನ್ನು ಹಾಕಿ ಇಟ್ಟು ಬಿಡೋಣ. ನಾಳೆ ಬೆಳಗ್ಗೆ ನೋಡೋಣ ಆಗದಾ’ ಎಂದೆ. ಸ್ವಾತಿಯಂತೂ ಇದನ್ನು ನಾವೇ ಸಾಕಿದರೆ ಹೇಗೆ ಎಂದು ಸ್ಕೆಚ್ ಹಾಕುತ್ತಿದ್ದಳು. ‘ಉಹೂಂ.. ಅದೆಲ್ಲ ಬೇಡ.. ಎಲ್ಲೋ ಜಾಗ ತಪ್ಪಿ ನಮ್ಮ ಮನೆಯ ಆವರಣಕ್ಕಿಳಿದ ಅದಕ್ಕೀಗ ಅಯೋಮಯದ ಸ್ಥಿತಿಯಷ್ಟೇ.. ನೋಡೋಣ ಸ್ವಲ್ಪ ಅದನ್ನು ಸುಧಾರಿಸಿಕೊಳ್ಳಲು ಬಿಡೋಣ’ ಎಂದರಿವರು. ಮನೆಯ ಹಿಂದಿನ ಜಗಲಿಯಿಂದಲೂ ಮುಂದಿನ ಅಂಗಳದವರೆಗೆ ಸಿಮೆಂಟು ನೆಲ. ಅದರಲ್ಲೇ ನಡೆದು ಬಸವಳಿದಿತ್ತೇನೋ.. ಹುಂ..ತನ್ನದಲ್ಲದ ನೆಲದಲ್ಲಿ, ಎಲ್ಲರೂ ಅಸಹಾಯಕರೇ ಅಲ್ಲವೇ.. ಯಾರು ಕಣ್ಣಿಗೆ ಬೀಳುತ್ತಾರೋ ಅವರು ಶತ್ರುವೋ, ಮಿತ್ರನೋ ಎಂದು ಯೋಚಿಸದೆ ಸಹಾಯ ಯಾಚಿಸುವ ಪರಿಸ್ಥಿತಿ ನಮ್ಮಂತೇ ಪ್ರಾಣಿಗಳಿಗೂ ಇರುತ್ತದೆಯೇ?

ಸ್ವಲ್ಪ ಹೊತ್ತೇನು.. ಎಷ್ಟು ಹೊತ್ತು ಕಳೆದರೂ ನಾವೊಂದು ಹೆಜ್ಜೆ ಎತ್ತಿಡಲು ಗೊತ್ತಿಲ್ಲ.. ಅದೂ ನಮ್ಮ ಜತೆಗೆ ಎದ್ದು ಹಿಂದೆಬೀಳುತ್ತಿತ್ತು. ಹೇಗಾದರೂ ಬೆಳಕು ಹರಿಯುವ ಮೊದಲು ಅದು ತನ್ನ ಜಾಗ ಸೇರಿಕೊಳ್ಳದಿದ್ದರೆ ಅದಕ್ಕೆ ಅಪಾಯ ತಪ್ಪಿದ್ದಲ್ಲ. ಅದನ್ನು ಮಾಂಸಕ್ಕಾಗಿ ಹೊಡೆದು ಕೊಂದು ತಿನ್ನುವವರೂ ಇದ್ದಾರಲ್ಲ.

ಆಗ ಸಹಾಯಕ್ಕೆ ಬಂದಿದ್ದು ಮರದ ಕೋಲು. ಮರಕ್ಕೆ ಸರಸರನೆ ಏರುವ ಅದು ಮರದ ಕೋಲನ್ನೇರಿದರೆ ಹಾಗೆ ತೆಗೆದುಕೊಂಡು ಹೋಗಿ ತೋಟಕ್ಕೆ ಬಿಡಬಹುದಲ್ಲವೇ ಎನ್ನಿಸಿ ಕೋಲು ಹಿಡಿದು ಬಂದೆ. ನೇರವಾಗಿ ಅದರ ಪಕ್ಕ ಇಟ್ಟ ಕೋಲನ್ನು ಮೂಸಿ ಮೂಸಿ ನೋಡಿತು. ಇದಾದರೆ ತನಗೆ ಗೊತ್ತಿದ್ದದ್ದೇ ಎನ್ನುವ ನಂಬಿಕೆ ಬಂತೇನೋ. ಹಾಗೆಂದು ನಮ್ಮ ಯೋಚನೆಯಂತೆ ಅದು ಕೋಲನ್ನೇನು ಏರಿ ಕೂರಲಿಲ್ಲ. ಆಗಾಗ ಅದನ್ನು ಮೂಸುತ್ತ ನಿಂತುಕೊಂಡಿತು. ನಾನೀಗ ಅದೇ ಕೋಲನ್ನು ಕೊಂಚ ಕೊಂಚವೇ ಮುಂದಕ್ಕೆ ಎಳೆದುಕೊಂಡು ಹೋಗತೊಡಗಿದೆ. ಅದು ಕೋಲಿನ ಹಿಂದೆ. ಮನೆಯ ಸಿಮೆಂಟಿನ ಅಂಗಳ ದಾಟಿದೊಡನೇ ಸಿಕ್ಕಿದ ಹುಲ್ಲು ಅದಕ್ಕೆ ಸ್ವಲ್ಪ ಧೈರ್ಯ ಕೊಟ್ಟಿತೇನೋ. ಅಲ್ಲೇ ಕುಳಿತು ಪರಿಸರವನ್ನು ಅವಲೋಕಿಸಿತು. ‘ಪರವಾಗಿಲ್ಲ, ನಾನಿನ್ನೂ ಮರಗಿಡಗಳ ಮಧ್ಯೆಯೇ ಇದ್ದೇನೆ’ ಎಂಬ ಭರವಸೆ ಅದಕ್ಕೆ ಸ್ವಲ್ಪ ಲವಲವಿಕೆ ತಂದಿತು. ಹೆಜ್ಜೆಗಳು ಚುರುಕಾಯಿತು. ಹಾಗೆಂದು ನಾನು ತಿರುಗಿದರೆ ಅದು ಮತ್ತೆ ನನ್ನ ಹಿಂದೆಯೇ! ಈಗ ಕೋಲುಸಮೇತ ನಾನು ತೋಟದವರೆಗೆ ಹೋದೆ. ಅಲ್ಲೇ ಕೋಲನ್ನು, ಅದನ್ನು ಬಿಟ್ಟು ಓಡೋಡುತ್ತಲೇ ಮನೆ ಸೇರಿದೆ. ಮತ್ತೆ ಸ್ವಲ್ಪ ಸಮಯ ಬಿಟ್ಟು ಹೋಗಿ ನೋಡಿದರೆ ಅದಲ್ಲಿರಲಿಲ್ಲ. ತನ್ನ ದಾರಿ ಹಿಡಿದು ತನ್ನರಮನೆ ಸೇರಿರಬಹುದು. ಅಂತೂ ಎಲ್ಲವೂ ಸುಖಾಂತ್ಯವಾದಾಗ ಗಂಟೆ ಒಂದರ ಸಮೀಪ. ಆ ದಿನದ ನಮ್ಮ ಸುಖನಿದ್ರೆಗೂ ಇದೊಂದು ನೆಪವಾಗಿತ್ತು.

(ಲೇಖಕರು ಸಾಹಿತಿ)