ಅತಿಥಿ ಮತ್ತು ಆತಿಥೇಯ ಸಂಬಂಧದ ಸುತ್ತಮುತ್ತ…

ಕೆಲ ವರ್ಷಗಳ ಹಿಂದಿನ ಸುದ್ದಿ. ಬೆಳಗ್ಗೆ ಬೇಗ ಎದ್ದು ಹೊರಟು ಸ್ಕೂಟರಿನಲ್ಲಿ ಸಾಗುತ್ತಿದ್ದ ನಮ್ಮ ಪಯಣದ ಗುರಿ ಅಮ್ಮನ ಮನೆಯಾದ ಭಾಗಮಂಡಲ. ಸಂಪಾಜೆ ತಲುಪಿದಾಗ ರಸ್ತೆಯಿಂದ ಕೊಂಚ ಒಳಹೋದರೆ ಸಿಗುವ ಇವರ ಸೋದರಮಾವನ ಮನೆಗೊಂದು ಭೇಟಿನೀಡಿದರೆ ಹೇಗೆ ಎಂಬ ಆಲೋಚನೆ ಬಂದಿತು. ಅವರು ಅಲ್ಲಿರುವ ಜಾಗವನ್ನು ಮಾರಾಟಮಾಡಿ ಬೇರೆ ಊರಿಗೆ ಹೋಗುವವರಿದ್ದರು. ಈಗಿನಂತೆ ಮೊಬೈಲಿನ ಯುಗವಲ್ಲದ ಕಾರಣ ಹೋಗಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ, ಹೆಚ್ಚೇನೂ ದೂರದ ಹಾದಿಯಲ್ಲದ ಕಾರಣ ಹೋಗಿ ನೋಡಿಯೇಬಿಡುವ ಎಂದು ಒಳರಸ್ತೆಗೆ ವಾಹನ ತಿರುಗಿಸಿದೆವು. ಮನೆಯ ಬಾಗಿಲು ತೆರೆದಿತ್ತು. ಎಲ್ಲ ಕಡೆ ಸಾಮಾನುಗಳನ್ನು ಪ್ಯಾಕ್ ಮಾಡಿ ಇಟ್ಟಿದ್ದರು. ‘ಹೊರಡುವ ತಯಾರಿಯೋ…’ ಎಂದು ವಿಚಾರಿಸುತ್ತಲೇ ಮನೆಯೊಳಗೆ ಅಡಿ ಇಟ್ಟೆವು. ನಮ್ಮದಿನ್ನೂ ತಿಂಡಿ ಆಗಿರಲಿಲ್ಲ. ‘ಈಗ ಅರ್ಜೆಂಟ್ ಬಾಯಾರಿಕೆಗೆಂತ ಬೇಕು… ಒಂದೈದು ನಿಮಿಷದಲ್ಲಿ ತಿಂಡಿ ಮಾಡ್ತೇನೆ’ ಎಂದು ಮಾತನಾಡುತ್ತಲೇ ಅತ್ತೆ ಸೆರಗು ಬಿಗಿದೆದ್ದರು. ನಾವು ತಲೆಯಾಡಿಸುತ್ತ ಮಾವನ ಜತೆ ಪಟ್ಟಾಂಗ ಹೊಡೆಯುತ್ತ ಕುಳಿತುಬಿಟ್ಟೆವು. ಒಳಗಿನಿಂದ ಬುಲಾವ್ ಬಂತು. ಎಲೆಯ ಮೇಲೆ ಬಿಸಿಯಾಡುತ್ತಿರುವ ದೋಸೆ, ಕಾಯಿಚಟ್ನಿ. ಪಟ್ಟಾಗಿ ತಿಂದು ಕೈ ತೊಳೆಯುತ್ತ ‘ಯಾವಾಗ ಶಿಫ್ಟ್ ಆಗೋದು?’ ಎಂದು ಕೇಳಿದೆವು. ‘ಈಗ ಸ್ವಲ್ಪ ಹೊತ್ತಲ್ಲಿ ಲಾರಿ ಬರ್ತದೆ’ ಎಂಬ ಉತ್ತರ ಬಂತು. ಒಂದು ಕ್ಷಣ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ನಾವು ಹೋದಾಗ ಅವರ ಮನೆಯ ಎಲ್ಲ ಸಾಮಗ್ರಿಗಳನ್ನು ತುಂಬಿಸಿಟ್ಟಾಗಿತ್ತು. ನಮ್ಮ ಆಗಮನದ ನಂತರ ಅಡುಗೆಮನೆಯ ಸಾಮಗ್ರಿಗಳನ್ನು ತುಂಬಿದ ರಟ್ಟಿನ ಪೆಟ್ಟಿಗೆ ಹುಡುಕಿ ಅದರಿಂದ ಗೋಧಿಹುಡಿ ತೆಗೆದು, ಉಪ್ಪಿನಹುಡಿ ಹುಡುಕಿ, ಕಲಸಿ ದೋಸೆ ಮಾಡಿದ್ದರು. ಜತೆಗೆ ಚಟ್ನಿ.. ಒಂದಿಷ್ಟೂ ಆ ತೊಂದರೆಯ ಸುಳಿವು ಕೊಡದಂತೆ ನಮಗೆ ತಿಂಡಿಮಾಡಿ ಬಡಿಸಿದ್ದರು ಶಿವತ್ತೆ. ಈಗಲೂ ಅವರ ಆ ಅತಿಥಿ ಸತ್ಕಾರವನ್ನು ನೆನೆದರೆ ಮನ ತುಂಬಿಬರುತ್ತದೆ.

ನಾವು ಶಾಲೆಗೆ ಹೋಗುವಾಗ ನಮ್ಮೂರಿಗೆ ಬರುತ್ತಿದ್ದ ಕೊನೆಯ ಬಸ್ಸಿನ ಸಮಯ ರಾತ್ರಿ ಹತ್ತು ಗಂಟೆ. ಆ ಬಸ್ಸು ಬಂದು ಹತ್ತು ನಿಮಿಷದ ನಂತರವೇ ನಮ್ಮಲ್ಲಿ ಊಟಕ್ಕೆ ಬಟ್ಟಲಿಡಲಾಗುತ್ತಿತ್ತು. ಯಾರಾದರೂ ಕೊನೆಯ ಬಸ್ಸಿಗೆ ಊರಿಂದ ಬಂದರೆ, ಅವರಿಗೆ ಅನ್ನ, ಪದಾರ್ಥ ಖಾಲಿಯಾಗಿಬಿಟ್ಟರೆ ಎಂಬ ಅಮ್ಮನ ಮುಂಜಾಗರೂಕತೆ. ಹಲವು ಸಲ ಕೊನೆಯ ಬಸ್ಸಿಗೆ ಹಸಿದುಬಂದ ಅತಿಥಿಗಳ ಹಸಿವು ತಣಿಸಿ ಅಮ್ಮನಿಗೆ ಅರೆಹೊಟ್ಟೆಯ ಊಟವಾದದ್ದೂ ಇದೆ. ಆದರೆ ಆ ಕ್ರಮವನ್ನು ಅಲ್ಲಿರುವವರೆಗೂ ಅಮ್ಮ ಬಿಡಲಿಲ್ಲ.

ಒಮ್ಮೆ ನಮ್ಮಲ್ಲಿ ಅರ್ಧರಾತ್ರಿಯ ಹೊತ್ತಿಗೆ ಫೋನ್ ಸದ್ದಾಯಿತು. ಆಗೆಲ್ಲ ಆ ಹೊತ್ತಿಗೆ ಮನೆಯ ಫೋನ್ ರಿಂಗಾಗಿದ್ದು ಎಂದರೆ ಏನೋ ಕೆಟ್ಟಸುದ್ದಿಯೆಂದೇ ಹೆದರಿಕೆ. ಯಾರಿಗೇನಾಯ್ತಪ್ಪಾ ಎಂದು ಹೆದರುತ್ತ ಮಾವ ಫೋನ್ ಎತ್ತಿದರೆ ಮನೆ-ಮಂದಿಯೆಲ್ಲ ಫೋನಿನ ಸುತ್ತವೇ ಗಾಬರಿಯಲ್ಲಿ ನಿಂತಿದ್ದೆವು. ಹತ್ತಿರ ಸಂಬಂಧಿಯೊಬ್ಬರು ಅವರ ಸ್ನೇಹಿತರ ಮನೆಯಿಂದ ಫೋನ್ ಮಾಡಿ ‘ಈಗ ನಿಮ್ಮ ಮನೆಗೆ ಬರುತ್ತೇವೆ, ಊಟವಾಗಿಲ್ಲ ಇನ್ನೂ …’ ಎಂದಿದ್ದರು. ಗಂಟೆ ರಾತ್ರಿ ಹನ್ನೆರಡರ ಮೇಲಾಗಿದೆ. ಆ ನಡುವೆಯೂ ನನ್ನತ್ತೆಗೆ ಅತಿಥಿ ಸತ್ಕಾರದ ಸಡಗರ. ‘ಅನ್ನ ಇದೆ. ಒಂದು ಪದಾರ್ಥ ಇದೆ. ಆದರೆ ಒಂದೇ ಬಗೆ ಹೇಗೆ ಬಡಿಸುವುದು.. ಪಲ್ಯ ಎಲ್ಲ ಬೇಯಿಸುವಷ್ಟು ಸಮಯವಿಲ್ಲ.. ಇನ್ನೇನು ಅವರು ಬಂದೇಬಿಡುತ್ತಾರೆ. ಇನ್ನೊಂದೆಂತ ಮಾಡುವ?’ ಎಂದು ನಿದ್ದೆಗಣ್ಣಲ್ಲಿ ನಿಂತಿದ್ದ ನನ್ನನ್ನು ಕೇಳಿದರು. ‘ಟೊಮ್ಯಾಟೊ ಮೊಸರುಗೊಜ್ಜು ಮಾಡುವ; ನಾನು ಕತ್ತರಿಸಿ ಕೊಡುತ್ತೇನೆ, ನೀವು ಬಾಳೆಲೆ ಇಡುವ ಸಿದ್ದತೆ ಮಾಡಿ’ ಎಂದೆ. ಕೈಗೆ ಸಿಕ್ಕಿದ ಟೊಮ್ಯಾಟೊವನ್ನು ಅವಸರದಿಂದ ಕತ್ತರಿಸಿ, ಈರುಳ್ಳಿ-ಹಸಿಮೆಣಸು-ಶುಂಠಿ ಎಲ್ಲ ಬೆರೆಸಿ ಉಪ್ಪು-ಮೊಸರು ಸೇರಿಸಿ ಒಗ್ಗರಣೆ ಕೊಡುವಷ್ಟರಲ್ಲಿ ಮನೆಯೆದುರು ಅವರ ಜೀಪು ನಿಂತಿತ್ತು. ‘ಇಷ್ಟು ಹೊತ್ತಿನಲ್ಲಿ ತೊಂದರೆ ಕೊಡುತ್ತಿರುವುದಕ್ಕೆ ಕ್ಷಮಿಸಬೇಕು’ ಎಂದು ಹೇಳುತ್ತಲೇ ಮನೆಯೊಳಗೆ ಬಂದು ಊಟಮಾಡುತ್ತ ಪ್ರತಿ ತುತ್ತಿಗೂ ‘ಇಂದಿಲ್ಲಿ ಮಾಡಿದ ಊಟ ನನ್ನ ಕೊನೆಯವರೆಗೂ ನೆನಪಿಟ್ಟುಕೊಳ್ಳುತ್ತೇನೆ’ ಎನ್ನುತ್ತಿದ್ದರು. ‘ಅಲ್ಲ ಮಾರಾಯ್ತಿ, ನೀನು ಸಣ್ಣಗೆ ಕೊಚ್ಚಬೇಕಾದ ಒಂದು ಟೊಮ್ಯಾಟೊವನ್ನು ಎರಡೇ ತುಂಡು ಮಾಡಿ ಹಾಕಿದ್ದಲ್ವಾ.. ಅದಕ್ಕೆ ಅವರು ಇದನ್ನು ನೆನಪಿಟ್ಟುಕೊಳ್ಳುವುದು’ ಎಂದಿವರು ಛೇಡಿಸಿದರೂ, ನಮ್ಮ ಬಂಧುಗಳಂತೂ ನಮ್ಮನ್ನು ಕಂಡಾಗಲೆಲ್ಲ ಅಂದಿನ ಊಟದ ಮಾತನ್ನೆತ್ತಿ ನಾವೇನೋ ಸಾಧನೆ ಮಾಡಿದ್ದೇವೆ ಎಂದು ಹೆಮ್ಮೆಪಡುವಂತೆ ಮಾಡುತ್ತಿದ್ದರು. ಬಹುಶಃ ಇಂಥ ಮಾತುಗಳು ನಮ್ಮಂಥ ಗೃಹಿಣಿಯರಿಗೆ ಒಂದಿಷ್ಟು ಟಾನಿಕ್ಕಿನಂತೆ… ಇಂಥ ಉತ್ತಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಬಹುದು ಎನ್ನುವ ಭರವಸೆಯಂತೆ…

ಇದಕ್ಕೆ ವಿರುದ್ಧವಾದ ಅನುಭವವೂ ಆಗದೇ ಇಲ್ಲ. ಮಧ್ಯಾಹ್ನದ ಹೊತ್ತು. ಮನೆ ಮಂದಿಯೆಲ್ಲ ಊಟಕ್ಕೆ ಶುರುಮಾಡಿದ್ದರು. ನಾನು ತೋಟದ ಸಹಾಯಕರಿಗೆ ಬಡಿಸಿ ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಎನ್ನುವಾಗ ಮೊಬೈಲ್ ರಿಂಗಣಿಸಿತು. ‘ಇಲ್ಲೇ ಹತ್ತಿರಕ್ಕೆ ಬಂದಿದ್ದೇನೆ. ಈಗ ಊಟಕ್ಕೆ ಬರ್ತೇನೆ ಮಾರಾಯ್ತಿ; ಜತೆಗೆ ನನ್ನೊಬ್ಬಳು ಸ್ನೇಹಿತೆಯೂ ಇದ್ದಾಳೆ.. ಬರಲೇ?’ ಆಕೆಯ ಮಾತು ಕೇಳಿಸಿತು.

‘ಅಯ್ಯೋ ಬಾ ಮಾರಾಯ್ತಿ…’ ಎಂದು ಧೈರ್ಯವಾಗಿ ಹೇಳಿದೆ. ಹೇಗೂ ಒಂದೆರಡು ಜನರ ಅನಿರೀಕ್ಷಿತ ಆಗಮನವನ್ನು ಸುಧಾರಿಸುವಷ್ಟು ಅಡುಗೆ ಮಧ್ಯಾಹ್ನ ಇದ್ದೇ ಇರುತ್ತದೆ. ಇನ್ನೇನು ಬರ್ತಾಳಲ್ಲ ಅವಳ ಜತೆಯೇ ಊಟ ಮಾಡಿದರಾಯಿತು ಎಂದು ಕಾಯುತ್ತ ಕುಳಿತೆ. ಅರ್ಧ ಗಂಟೆ ಕಾದ ಬಳಿಕ ಬಂದರು. ಅವಳ ಜತೆಗಿದ್ದ ಅಪರಿಚಿತ ಮುಖ, ಆಕೆ ಪರಿಚಯಿಸಿದರೂ ಕೈಯಲ್ಲಿದ್ದ ಮೊಬೈಲ್ ನೋಡುತ್ತಿದ್ದವಳು ಬಗ್ಗಿಸಿದ ತಲೆ ಮೇಲಕ್ಕೆತ್ತಿರಲಿಲ್ಲ. ‘ಬನ್ನಿ ಊಟಕ್ಕೇ…’ ಎಂದು ಒಳಮನೆಗೆ ಕರೆದೆ. ‘ಸರಿ, ಬೇಗ ಬಡಿಸು… ಬೆಳಗ್ಗೆ ಎಂತದೋ ತಿಂದ ಶಾಸ್ತ್ರಮಾಡಿ ಹೊರಟದ್ದು; ರಣ ಹಸಿವೆಯೀಗ… ಮತ್ತೆ ಬೇಗ ಹೋಗ್ಬೇಕು’ ಎಂದವಸರಿಸಿದಳಾಕೆ.

ತಟ್ಟೆಯಿಟ್ಟು ಬಡಿಸಿದೆ. ಆಕೆ ಊಟವನ್ನು ಆಸ್ವಾದಿಸುತ್ತ ಮಾತನಾಡುತ್ತಿದ್ದರೆ ಪಕ್ಕದವಳಿನ್ನೂ ಮೊಬೈಲಿನ ಒಳಗೇ.. ‘ಅನ್ನಕ್ಕೆ ಸಾರು ಬಡಿಸಲೇ..?’ ಎಂದಾಗ ತಲೆ ಎತ್ತಿದ್ದ ಕಣ್ಣುಗಳಲ್ಲಿ ನಿರ್ಲಿಪ್ತನೋಟ. ಹೊಸಬರಾದ ಕಾರಣ ಸಂಕೋಚವಿರಬೇಕು ಎಂದುಕೊಂಡು ಮಾತಾಡಿಸುತ್ತ ಬಡಿಸ ಹೊರಟೆ. ಸಾರು ಬದಿಗೆ ಪಲ್ಯ, ಚಟ್ನಿಪುಡಿ, ಉಪ್ಪಿನಕಾಯಿ, ಮಜ್ಜಿಗೆಹುಳಿ ಎಲ್ಲವೂ ಒಂದರ ಮೇಲೊಂದು ಆಕೆಯ ತಟ್ಟೆ ತುಂಬಿದರೂ ಕೈಯಲ್ಲಿ ಹಿಡಿದಿದ್ದ ಮೊಬೈಲನ್ನು ಕೊಡವುತ್ತ ‘ರೇಂಜ್ ಇಲ್ವಾ ಇಲ್ಲಿ..’ ಎಂದಳು.

ಆಗೊಮ್ಮೆ ಈಗೊಮ್ಮೆ ತುತ್ತು ತೆಗೆದು ಬಾಯಲ್ಲಿಡುತ್ತ ಕಣ್ಣುಗಳನ್ನು ಮೊಬೈಲಿನ ಒಳಗೆ ಇಟ್ಟು ಈ ಲೋಕದ ಗೊಡವೆಯಿಂದಾಚೆಯೇ ಇದ್ದಳು.

‘ಒಳ್ಳೇ ಊಟ ಮಾರಾಯ್ತಿ, ಥ್ಯಾಂಕ್ಸ್ ಆಯ್ತಾ, ಅಯ್ಯೋ.. ಮರೆತೇಬಿಟ್ಟಿದ್ದೆ ನಿನ್ನದೂಟ ಆಗಿಲ್ವಾ .. ಮಾಡು, ಅಷ್ಟೊತ್ತು ಕಾಯ್ತೀನಿ’ ಎನ್ನುತ್ತ ಆಕೆ ಕೈ ತೊಳೆಯಲು ಎದ್ದೊಡನೇ ಇವಳೂ ಎದ್ದುಬಿಟ್ಟಳು.. ತಟ್ಟೆಯಲ್ಲಿ ಹಾಗೇ ಉಳಿದ ಆಹಾರ… ‘ಅಯ್ಯೋ.. ನಿಧಾನಕ್ಕೆ ಊಟಮಾಡಿ ಏಳಿ, ನಾನಿದ್ದೀನಿ ಕಂಪನಿಗೆ’ ಎಂದೆ. ‘ಇಲ್ಲ 11 ಗಂಟೆಗೆ ತಿಂಡಿ ತಿಂದಿದ್ದೆ. ಅದು ಹಾಗೇ ಇದೆ ಹೊಟ್ಟೆಯೊಳಗೆ’ ಎಂದು ಕೈ ತೊಳೆದು ಮೊಬೈಲನ್ನೇ ನೋಡುತ್ತ ಹೊರನಡೆದಳು. ಬೇಸರವೆನಿಸಿತು. ಒಳಹೋಗಿ ನೋಡಿದರೆ ಕುಕ್ಕರಿನ ತಳದಲ್ಲಿದ್ದ ಕೊಂಚ ಅನ್ನ… ‘ಯಾಕೆ ಅಪಾತ್ರದಾನ ಮಾಡಿದೆ? ಅನುಭವಿಸೀಗ…’ ಎಂದು ದೂರುವಂತೆ ಕಂಡಿತು. ತನಗೆ ಹಸಿವಿಲ್ಲದಿದ್ದರೆ ಅವಳು ಮೊದಲೇ ಹೇಳಬಹುದಿತ್ತಲ್ಲ. ತಟ್ಟೆಗೆ ಬಡಿಸುವಾಗೆಲ್ಲ ಮಾತೇ ಆಡದೇ ಕುಳಿತು, ಬಡಿಸಿದ್ದನ್ನು ಹಾಗೇ ಬಿಟ್ಟೆದ್ದು, ಒಂದಿಷ್ಟೂ ತಪ್ಪಿತಸ್ಥ ಭಾವ ಇಲ್ಲದೇ ಹೊರನಡೆದಿದ್ದು ಅತಿಥೇಯರಿಗೆ ಮಾಡಿದ ಅವಮಾನವೆನ್ನಿಸಿತ್ತು ಆ ಕ್ಷಣದಲ್ಲಿ..

ಕೇರಳದ ಕಡೆ ಪ್ರವಾಸ ಹೋಗಿದ್ದೆವೊಮ್ಮೆ. ಮನೆಯಿಂದ ಬೇಗ ಹೊರಟ ಕಾರಣ ದಾರಿಯಲ್ಲೆಲ್ಲಾದರೂ ತಿಂಡಿ ತಿಂದರಾಯಿತು ಎಂದುಕೊಂಡಿದ್ದೆವು. ಅಲ್ಲೆಲ್ಲೂ ಸೌಕರ್ಯವಾಗದ ಕಾರಣ ನಾವು ಹೋಗಬೇಕಿದ್ದ ಜಾಗಕ್ಕೆ ನುಗ್ಗಿ ಬರುವಾಗ ತಿಂಡಿಯ ಚಿಂತೆ ಮಾಡೋಣ ಎಂದುಕೊಂಡೆವು. ಬೇಕಲ್ ಕೋಟೆಯ ಸೌಂದರ್ಯ ಎಲ್ಲ ನೋಡಿ ಹೊರಬರುವಾಗ ಎಲ್ಲ ಕಡೆ ಸ್ಮಶಾನಮೌನ. ಅಂಗಡಿಗಳೆಲ್ಲ ಬಾಗಿಲು ಹಾಕಿವೆ. ದಾರಿಯಲ್ಲಿ ಸಿಕ್ಕವರನ್ನು ಕೇಳಿದಾಗ ‘ಇವತ್ತು ಬಂದ್’ ಎಂಬ ಉತ್ತರ ಬಂತು. ಚುರುಗುಟ್ಟುತ್ತಿದ್ದ ಹೊಟ್ಟೆ ‘ಬಂದ್’ ಶಬ್ದ ಕೇಳಿದ ಕೂಡಲೆ ‘ಈಗಲೇ ಆಹಾರ ಕೊಡು…’ ಎಂದು ಬೊಬ್ಬೆಹಾಕಲಾರಂಬಿಸಿತು. ಎಲ್ಲಿ ನೋಡಿದರೂ ಯಾವುದೇ ಅಂಗಡಿ ತೆರೆದಿಲ್ಲ. ಅಲ್ಲಿರಬಹುದು, ಇಲ್ಲಿರಬಹುದು ಎಂದು ನಮಗೆ ಗೊತ್ತಿದ್ದ ಕಡೆಯೆಲ್ಲ ಅಲೆದರೂ ಒಂದು ತುಣುಕು ಬಿಸ್ಕೆಟ್ ಕೂಡ ಸಿಕ್ಕಿರಲಿಲ್ಲ. ಹಾಗೇ ಮನೆಗೆ ಮರಳಿ ಮನೆಯಲ್ಲಿ ಊಟ ಮಾಡುವಾಗ ಸಂಜೆಯ ಸೂರ್ಯ ಟಾಟಾ ಹೇಳುವ ಹೊತ್ತಾಗಿತ್ತು. ಅಂದು ಅನ್ನದ ಮಹತ್ವದ ಅರಿವಾಗಿತ್ತು. ಅಲ್ಲಿಂದ ನಂತರ ಎಲ್ಲಿಯಾದರೂ ಸರಿ, ಆಹಾರ ವಸ್ತುಗಳನ್ನು ಬಡಿಸಿಕೊಂಡು ತಿನ್ನದೇ ಪೋಲುಮಾಡುವುದನ್ನು ಕಂಡಾಗ ಹೊಟ್ಟೆಯಲ್ಲಿ ಸಂಕಟ. ಯಾರೋ ಒಬ್ಬ ಹಸಿದವನ ಅನ್ನವನ್ನು ನಾವು ಕಸಿದುಕೊಂಡಿದ್ದೇವೆ ಎಂಬ ಭಾವ.

ಪ್ರತಿದಿನ ಅಡುಗೆ ಮಾಡುತ್ತೇವೆ, ಬಂದವರಿಗೆ ಬಡಿಸುತ್ತೇವೆ, ನಾವೂ ಉಣ್ಣುತ್ತೇವೆ. ಹೆಚ್ಚೆನಿಸಿದ್ದನ್ನು ತಟ್ಟೆಯಲ್ಲಿ ಬಿಟ್ಟೆದ್ದು ನಡೆಯುತ್ತೇವೆ. ಇದರಲ್ಲೇನಿದೆ, ಎಲ್ಲರೂ ಮಾಡುವಂಥದ್ದೇ ಅನ್ನಿಸಬಹುದು. ಅದೇ ಒಂದು ಹೊತ್ತಿನ ಊಟದ ನಸೀಬು ಇಲ್ಲದಾದ ಹೊತ್ತಲ್ಲಿ ಬಿಟ್ಟೆದ್ದ ಆಹಾರದ ತುಣುಕುಗಳು ನಮ್ಮನ್ನು ಶಪಿಸದಿರಲಿ. ಅತಿಥಿ ಮತ್ತು ಆತಿಥೇಯ ಎಂಬೆರಡೂ ಸಂಬಂಧಗಳು ಪರಸ್ಪರ ಗೌರವಿಸುತ್ತಲೇ ಹೆಗಲಿಗೆ ಹೆಗಲುಕೊಟ್ಟು ನಡೆಯುವಂತಿರಲಿ…

(ಲೇಖಕರು ಸಾಹಿತಿ)