ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿತವೇ..?!

| ಅನಿತಾ ನರೇಶ್​ ಮಂಚಿ

ಮನೆಗೆ ಬಂದಿದ್ದರವರು. ಸುಮ್ಮನೆ ಒಂದಿಷ್ಟು ಮಾತುಕತೆ ಹರಟೆ, ಸಂಜೆಯ ಬೇಸರ ನೀಗುವುದಷ್ಟೇ ಅದರ ಉದ್ದೇಶ. ‘ನೋಡಿ ಮಾರಾಯ್ರೇ, ಎಂತಾ ಮಳೆ ಹೊಡೀತಾ ಉಂಟು. ಅಲ್ಲ.. ಮಳೆ ಕಡಿಮೆಯಾಗಲಿಕ್ಕೆ ಕಾಡು ಕಡಿದದ್ದು ಕಾರಣ ಅಂತಾರಲ್ಲ, ಈ ವರ್ಷದ ಮಳೆ ನೋಡಿದರೆ ಇರುವ ಕಾಡನ್ನೂ ಕಡಿವ ಅಂತ ಆಗ್ತಾ ಉಂಟು.. ಛೇ ಹೀಗೆ ಸುರಿದರೆ ಹೇಗೆ.. ಮನುಷ್ಯರು ಬದುಕಬೇಕಲ್ಲಾ..’- ಅವರಿಗಾಗಿ ಕಾಫಿ ತರಲು ಒಳಹೋಗುತ್ತಿದ್ದವಳ ಕಿವಿಗೆ ಬಿದ್ದಿತ್ತಿದು.

ಅರೇ.. ಮಳೆ ಎನ್ನುವುದು ಭೂಮಿಯಲ್ಲಿರುವ ಮನುಷ್ಯನಿಗೆ ಮಾತ್ರವೇ ಅಗತ್ಯವಾ.. ಅವನೊಬ್ಬನಿಗೆ ಒಳ್ಳೆಯದೋ ಕೆಟ್ಟದೋ ಆದರೆ ಸಾಕಾ.. ಮನುಷ್ಯನಲ್ಲದೆ ಉಳಿದ ಜೀವಜಂತುಗಳು ಗಿಡ-ಮರಗಳು ಇದೇ ಭೂಮಿಯಲ್ಲಿ ಬದುಕುವುದಿಲ್ಲವೇ?- ಕೇಳಬೇಕೆನಿಸಿದ ಇಂಥ ಪ್ರಶ್ನೆಗಳಿಗೆ ಉತ್ತರ ಅವರಲ್ಲಿ ದೊರಕದು ಎಂದು ಗಂಟಲಿನಲ್ಲಿಯೇ ಮಾತುಗಳನ್ನಡಗಿಸಿದೆ.

ಗೆಳತಿಯೊಬ್ಬಳ ಫೋನ್ ಬಂದಿತ್ತು- ‘ನಮ್ಮೂರಿಗೂ ಫ್ಲೈ ಓವರ್ ಬರ್ತಾ ಇದೆ.. ಮತ್ತೆ ಮಳೆಗಾಲದಲ್ಲೂ ನಮ್ಮೂರಲ್ಲಿ ಟೂರಿಸ್ಟ್ ಗಳು ಬರ್ತಾ ಇರ್ತಾರೆ..’ ಎಂದಳು. ಸಂತಸವಿತ್ತು ಅವಳ ದನಿಯಲ್ಲಿ.

‘ಹೌದಾ ಎಲ್ಲಿ ಮಾಡ್ತಾರೆ?’.

‘ಅಲ್ಲೇ ಗದ್ದೆ ಉಂಟಲ್ಲ.. ಅದ್ರಲ್ಲಿ..’.

‘ಮಣ್ಣು ತಂದುಹಾಕಿ ಎತ್ತರ ಮಾಡ್ತಾರೆ.. ಮತ್ತೆ ಸೇತುವೆ..’ ಮಾತು ಮುರಿಯಿತು.

ಇಷ್ಟು ವರ್ಷ ಅದಿಲ್ಲದೇ ಏನು ತೊಂದರೆಯಾಗಿತ್ತು? ವರ್ಷದಲ್ಲಿ ಒಂದೆರಡು ದಿನ ಬರುವ ಸೇತುವೆ ಮೇಲಿನ ನೀರಿಗಾಗಿ ವರ್ಷಪೂರ ಕಾಯುತ್ತಿದ್ದೆವಲ್ಲಾ.. ಆ ಸಂತಸದ ಮುಂದೆ ಬೇರೇನಾದರೂ ಇತ್ತೇ.. ಯಾರೋ ಬರುತ್ತಾರೆಂದು ನಾವು ಪ್ರತಿದಿನ ಪಟ್ಟೆ-ಪೀತಾಂಬರ ತೊಟ್ಟು ಕೂರುತ್ತೇವೆಯೇ.. ಮನೆಯಲ್ಲಿ ಯಾವತ್ತೂ ಇದ್ದಂತೆ ತಾನೇ ಇರುವುದು.. ನಮ್ಮೂರು ಹೇಗಿದೆಯೋ ಹಾಗೆ ನೋಡಿ.. ಕಾಲುದಾರಿಯಲ್ಲಿ ನಡೆಯಿರಿ. ಕಾರು ಹೋಗುವ ರಸ್ತೆಯೇ ಬೇಕೆಂದಾದರೆ ಅದಿರುವಲ್ಲಿಗೆ ಹೋಗಿ.. ಕಾಡು ನೋಡಲು ಬರುವವರು ನಿಮ್ಮ ಮನೆಯ ಸಕಲ ಸುವಿಧಗಳು ಕಾಡಲ್ಲೂ ಇರಬೇಕೆಂದು ಬಯಸುವಿರಾದರೆ ಟಿ.ವಿ. ಹಾಕಿ ಮನೆಯೊಳಗೇ ಕುಳಿತು ನೋಡಬಾರದೇ.. ನಮ್ಮ ಕಾಡಿನ ಮರ ಕಡಿದು ನೀವು ಬರುವ ದಾರಿ ಯಾಕಾಗಬೇಕು.. ಯಾಕೆ ಹೇಳುವುದಿಲ್ಲ ನಾವಿದನ್ನು ಧ್ವನಿ ಗಟ್ಟಿ ಮಾಡಿ.. ಯಾಕೆಂದರೆ ಇದಕ್ಕೆ ಸ್ವರ ಸೇರಿಸುವವರು ಸಿಗುವುದಿಲ್ಲ.. ಹೆದ್ದಾರಿಗಳು ನಮಗೆ ಬೆಲೆ ಕಟ್ಟುತ್ತವಲ್ಲ.. ನಾವು ಅದಕ್ಕೆ ಮಾರಿಕೊಂಡುಬಿಡುತ್ತೇವೆ.

ನಮಗೆ ಗೊತ್ತಿರುವಂತೆ ಭೂಮಂಡಲವೊಂದೇ ಜೀವಿಗಳು ವಾಸಿಸುತ್ತಿರುವ ಸ್ಥಳ. ಇಲ್ಲಿರುವ ಉಳಿದೆಲ್ಲ ಪ್ರಾಣಿಗಳು ತಮ್ಮ ಅಗತ್ಯದ ಆಹಾರವನ್ನು ಮಾತ್ರ ಭೂಮಿಯಿಂದ ಪಡೆಯಲು ಅಲೆದಾಡುತ್ತವೆ. ತಮಗೆ ಅಗತ್ಯವಿರುವಷ್ಟನ್ನು ಮಾತ್ರ ತಿನ್ನುತ್ತವೆ. ಮಳೆ-ಚಳಿಯಿಂದ ರಕ್ಷಿಸಿಕೊಳ್ಳಲು ಸಹಜವಾಗಿಯೇ ಇರುವ ಪೊಟರೆಗಳನ್ನೋ ಗುಹೆಗಳನ್ನೋ ಬಳಸಿಕೊಳ್ಳುತ್ತವೆ. ಆದರೆ ಪ್ರಾಣಿಗಳಲ್ಲೇ ಬುದ್ಧಿವಂತನಾದ ಮಾನವ ಹಾಗಲ್ಲ; ಭೂಮಿಯಲ್ಲಿರುವ ವಸ್ತುಗಳೆಲ್ಲ ತನಗಾಗಿಯೇ ಸೃಷ್ಟಿಸಲ್ಪಟ್ಟದ್ದು ಎಂಬ ಅಹಂಕಾರದಿಂದ ಎಲ್ಲವನ್ನೂ ಬಾಚಿಕೊಳ್ಳುತ್ತಿದ್ದಾನೆ. ಮೊದಲೊಂದು ಕಾಲದಲ್ಲಿ ವಾಸಿಸುವುದಕ್ಕೆಂದು ಕಾಡು ಕಡಿದು ಮನೆ ಕಟ್ಟಿ ಕೆಲವೇ ಮೂಲಭೂತ ಸೌಲಭ್ಯಗಳಿಂದಷ್ಟೇ ಬದುಕುತ್ತಿದ್ದವನು, ನಾಗರಿಕನಾಗುತ್ತ ಹೋದಂತೆ ತನ್ನ ಸ್ವಾರ್ಥಕ್ಕೋಸ್ಕರ ಅರಣ್ಯ ನಾಶಕ್ಕೆ ಕಾರಣನಾಗುತ್ತ ಹೋದ. ಗಾಳಿಯನ್ನು ಮಲಿನ ಮಾಡಿದ, ನೀರನ್ನು ಕೊಳಕಾಗಿಸಿದ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ಬಗೆಯುತ್ತ ಅದರ ಸಹಜ ಸೌಂದರ್ಯವನ್ನು ನಾಶಮಾಡುತ್ತ ನಡೆದ. ಇದರ ಜೀವಂತ ಉದಾಹರಣೆ ಮೊನ್ನೆ ಕೊಡಗು, ದ.ಕ., ಚಿಕ್ಕಮಗಳೂರಿನಲ್ಲಿ ನಡೆದ ದುರಂತ. ಅದರಲ್ಲೂ ಸುಂದರ ನಾಡಾಗಿದ್ದ ಕೊಡಗು ಜರ್ಜರಿತಗೊಂಡಿತು. ಕ್ಷಣಕ್ಷಣವೂ ಭೂಮಿ ಸ್ಥಳಾಂತರಗೊಳ್ಳುತ್ತಿತ್ತು. ‘ಇಷ್ಟು ಕಾಲ ನೀವು ಕುಣಿದಿರಿ ನನ್ನ ಮೇಲೆ, ಈಗ ನನ್ನ ಸರದಿ’ ಎಂಬಂತೆ ಗಹಗಹಿಸಿ ನಕ್ಕಿತ್ತು. ನಾನು, ನನ್ನದು, ನನ್ನದಿದು ಈ ಭೂಮಿ ಎಂಬೆಲ್ಲ ಅಹಂಕಾರಗಳು ಸತ್ತು ‘ಎಲ್ಲಿದೆ ನಿನ್ನ ಜಾಗ, ನಾನು ಕೊಟ್ಟರಷ್ಟೇ ನಿನಗೆ’ ಎಂದು ಪ್ರಕೃತಿ ಪಾಠಮಾಡಿತ್ತು.. ಕಲಿತೆವೇ ನಾವು..?

ನಮ್ಮ ಊರು ‘ಪ್ರವಾಸೋದ್ಯಮ’ ಎಂಬ ಸಕ್ಕರೆಲೇಪದ ಕಹಿಗುಳಿಗೆಯಾಗಿ ಯಾವಾಗ ಬದಲಾಗುವುದೋ ನಮಗೆ ಅರಿವಿಗೇ ಬರುವುದಿಲ್ಲ. ಮೊದಲೊಂದು ಕಾಲುಹಾದಿ, ನಂತರ ರಸ್ತೆ, ನೋಡಬರುವ ಜನರಿಗೆ ಸವಲತ್ತುಗಳಿರುವ ಮನೆ.. ದಿನಕ್ಕಿಷ್ಟು ಹಣ.. ಮತ್ತೆ.. ಮತ್ತಷ್ಟು ಹಣಕ್ಕಾಗಿ ಜಾಗ ಹದಗೊಳಿಸು.. ಮನೆ ಕಟ್ಟು.. ಬೆಟ್ಟವೋ ಗುಡ್ಡವೋ ತೊರೆಯೋ ಜರಿಯೋ.. ತೋರಿಸು.. ಅವರ ಕಸದರಾಶಿಯನ್ನು ಪೇರಿಸು. ನಮ್ಮ ಕೈಗೆ ಬರುವ ಕಾಗದದ ನೋಟಿಗೆ ಮಾತ್ರ ಬೆಲೆ; ಅವರು ಎಸೆದುಹೋದ ಕಸದ ರಾಶಿಗಲ್ಲ ಎಂದು ನಮಗರಿವಾಗುವುದೇ ಇಲ್ಲ. ಈಗಿನ ಇಂಟರ್ನೆಟ್ ಯುಗದಲ್ಲಿ ಪ್ರಪಂಚ ಹತ್ತಿರವಾಗುತ್ತಿದೆ. ನಿಸರ್ಗದ ಅದ್ಭುತ ಸೌಂದರ್ಯದ ಚಿತ್ರಗಳು ಕಣ್ಣಿಗೆ ಬಿದ್ದರೆ ಸಾಕು.. ನಾವು ಅದನ್ನು ನೋಡಿಲ್ಲ ಎಂದರೆ ಸಣ್ಣವರಾಗುವುದಿಲ್ಲವೇ.. ಹೊರಟುಬಿಡುತ್ತೇವೆ ನಮ್ಮ ಕಸಹೊತ್ತ ಮಿದುಳಿನ ಸಹಿತ….

ಮೊನ್ನೆ ಆದದ್ದೂ ಹಾಗೆಯೇ.. ತನ್ನ ಮೇಲಾಗುತ್ತಿದ್ದ ನಿರಂತರ ಪ್ರಹಾರಗಳಿಂದ ಭೂಮಿ ಸಡಿಲಗೊಂಡಿತ್ತು. ನೆಲದ ಮಣ್ಣನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಬೇಕಾದ ನೆಲದಾಳಕ್ಕೆ ಬೇರುಗಳನ್ನಿಳಿಸಿದ ಮರಗಳಿಲ್ಲ. ಯಂತ್ರಗಳಿಂದ ಕೆತ್ತಿಟ್ಟ ಭೂಮಿ ಎಷ್ಟು ಕಾಲ ಮಣ್ಣನ್ನು ತನ್ನದಾಗಿ ಹಿಡಿದಿಟ್ಟುಕೊಂಡೀತು.. ಬಿದ್ದ ಮಳೆಯ ನೀರೆಲ್ಲ ಪ್ರವಾಹವಾಗಿ ನೆಲದೊಂದಿಗೇ ಜಾರಿತು. ಜತೆಗೆ ಬದುಕೂ ಜಾರಿತ್ತು…

ಈ ಎಲ್ಲದರ ಮೂಲಕಾರಣ ಮನುಷ್ಯನ ಸಂಖ್ಯೆ ಹೆಚ್ಚಾಗುತ್ತಿರುವುದು. ಒಂದು ಕಾಲದಲ್ಲಿ ಜನಸಂಖ್ಯೆ ನಿಯಂತ್ರಣದ ಪೋಸ್ಟರುಗಳು ಎಲ್ಲೆಂದರಲ್ಲಿ ಕಾಣುತ್ತಿದ್ದವು. ಈಗ ಅಂಥವುಗಳ ಸುಳಿವಿಲ್ಲ. ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಯಾವುದೇ ಸರ್ಕಾರಿ ಸವಲತ್ತು ಕೊಡದೇ ಇರುವಂತಹ ಕಡ್ಡಾಯ ಕಾನೂನು ಜಾರಿಗೆ ಬಂದರೆ ಇದು ಕೊಂಚ ನಿಯಂತ್ರಣಕ್ಕೆ ಬರಬಹುದೇನೋ.. ಆದರೆ ಹಾಗೆ ಮಾಡುವ ಮನಸ್ಸಿರುವ ರಾಜಕಾರಣಿಗಳು ಬೇಕಲ್ಲ.. ಮನುಷ್ಯರ ತಲೆಲೆಕ್ಕವೇ ಅವರ ಬದುಕಿನ ಕೂಡು-ಕಳೆವಾಟದ ಆಟಿಕೆಯಲ್ಲವೇ? ವೋಟಿನ ದಾಹಕ್ಕೆ ದಾಳವಾಗುವ ಮಂದಿ ಬೇಕಲ್ಲ.

ಇನ್ನೂ ಒಂದು ಕಾರಣ, ಕೂಡುಕುಟುಂಬಗಳು ಮರೆಯಾಗುತ್ತಿರುವುದು. ಕುಟುಂಬಗಳು ಒಡೆಯುತ್ತಿದ್ದಂತೆ ಅವರಿಗೆ ನೆಲೆ ನಿಲ್ಲಲು ಪ್ರತ್ಯೇಕ ಸ್ಥಳ ಬೇಕಾಗುವುದು. ಈ ಭೂಮಿಯಲ್ಲದೇ ಇನ್ನೆಲ್ಲಿ ಹೋಗುವುದು.. ಕಾಡನ್ನು ಕರಗಿಸಿ ಮನೆ ಕಟ್ಟುವುದು.. ಜನಸಂಖ್ಯೆ ಹೆಚ್ಚಿದಂತೆಲ್ಲ ಆಹಾರಕ್ಕೋಸ್ಕರ ಇನ್ನಷ್ಟು ಕಾಡು ಕಡಿದು ಧಾನ್ಯಗಳನ್ನು ಬೆಳೆಯಲೇಬೇಕಲ್ಲ. ಅಗತ್ಯಕ್ಕಿಂತ ಹೆಚ್ಚಿನ ಯಾವುದನ್ನೂ ಪ್ರಕೃತಿ ತನ್ನೊಳಗಿಟ್ಟುಕೊಳ್ಳದು. ಮಾನವನನ್ನು ಕೂಡಾ..

ಕೆಲವು ಕಡೆಗಳಲ್ಲಿ ಗುಡ್ಡದ ಇಳಿಜಾರಿನಲ್ಲಿ ಇನ್ನೇನು ಗಾಳಿಯ ಸಣ್ಣ ಅಲೆಗೂ ಬಿದ್ದೇಬಿಡುತ್ತವೆ ಎಂಬ ಮನೆಗಳು.. ಕಟ್ಟುವಾಗ ನೆಲವೇ ನಿನಗೆಷ್ಟು ನೋವಾಗಿದೆ ಎಂದು ಯೋಚಿಸಿದ್ದೇವೆಯೇ.. ಬಿತ್ತೋ.. ಆಗ ಪ್ರಕಟಗೊಳ್ಳುವ ನಮ್ಮ ಅಳು ನೋವು. ನಮ್ಮದೆಂದುಕೊಂಡದ್ದು ಹೋದದ್ದಕ್ಕಷ್ಟೇ.. ಭೂಮಿ ಹಾಳಾಗಿದ್ದಕ್ಕಲ್ಲ..

ಪ್ರಕೃತಿ ತನ್ನ ಸಮತೋಲನ ಕಾಯುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಅದಕ್ಕೆ ಮನುಷ್ಯ ಅನಿವಾರ್ಯವಲ್ಲ. ಮನುಷ್ಯ ಇಲ್ಲದಿದ್ದರೂ ಬದುಕಿ ಉಳಿಯುವುದದು. ಎಲ್ಲ ಜೀವಿಗಳು ಹೇಗೆ ಇಲ್ಲಿ ಉಗಮವಾದವೋ ಹಾಗೇ ನಾವೂ ಹುಟ್ಟಿದೆವು. ನಮಗೆಂದು ವಿಶೇಷ ಉಡುಗೊರೆಯನ್ನೇನೂ ಪ್ರಕೃತಿ ನೀಡುತ್ತಿಲ್ಲ. ಒಂದು ಕಾಲದಲ್ಲಿ ಇದೇ ನೆಲದ ಮೇಲಿತ್ತು ಎನ್ನಲಾಗುವ ಡೈನೋಸಾರ್​ಗಳಂತಹ ಬೃಹತ್ ಜೀವಿಗಳೇ ಈಗ ಮರೆಯಾಗಿಹೋಗಿವೆ. ಪ್ರಕೃತಿ ಹಾಗೇ ಉಳಿದಿಲ್ಲವೇನು? ಹಾಗೇ ನಾವು ಕೂಡಾ.. ಇದ್ದರೂ ಇಲ್ಲದಿದ್ದರೂ ನಿಸರ್ಗಕ್ಕೇನೂ ವ್ಯತ್ಯಾಸವಿಲ್ಲ.. ಬದಲಿಗೆ ಲಾಭವೇ ಆಗಬಹುದೇನೋ? ಆದರೆ ನಮ್ಮ ಸ್ವಾರ್ಥಮನಸ್ಸು ಯಾವಾಗ ಇಂಥದ್ದನ್ನು ಒಪ್ಪಿಕೊಳ್ಳುತ್ತದೆ? ‘ಇದೆಲ್ಲವೂ ನನ್ನದು, ನನಗಾಗಿಯೇ ಬೆಳೆದದ್ದು; ಈ ಹಸಿರು, ಈ ನೀರು, ಈ ಗಾಳಿ ನನ್ನ ಹುಟ್ಟನ್ನು ಸಾಕಲೇ ಇರುವಂಥವು’ ಎಂದುಕೊಳ್ಳುವ ನಮ್ಮ ಮೂರ್ಖತನಕ್ಕೆ ನಿಸರ್ಗವೇ ಪಾಠ ಕಲಿಸೀತಷ್ಟೇ. ಅದಕ್ಕೆಂದೇ ಕಗ್ಗವು ಹೇಳುತ್ತದೆ-

‘ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು

ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವುದು

ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ

ಸತತ ಕೃಷಿಯೋ ಪ್ರಕೃತಿ ಮಂಕುತಿಮ್ಮ..’

ಅದು ತನ್ನ ಕರ್ತವ್ಯವನ್ನು ಮಾಡುತ್ತಲೇ ಇರುತ್ತದೆ; ಆದರೆ ನಾವು?

ಎಷ್ಟು ದಿನ ಉಳಿಯಬಹುದು ನಾವು ಈ ಬೆಳಕು-ಗಾಳಿ-ನೀರು ಇಲ್ಲದಿದ್ದಲ್ಲಿ? ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕಿದೆ.

ಇದಕ್ಕಾಗಿಯೇ ಕೆಲವು ನಿರ್ಧಾರಗಳನ್ನು ನಾವುಗಳೇ ಮಾಡಿಕೊಳ್ಳಬೇಕು. ನಮ್ಮ ಮನೆಯ ಅಕ್ಕಪಕ್ಕ ಅಥವಾ ನಮ್ಮ ಪರಿಸರದಲ್ಲಿ ಯಾವುದೇ ಸುಂದರ ಜಾಗಗಳಿದ್ದಲ್ಲಿ ಅವನ್ನು ಇದ್ದಹಾಗೇ ಇಡುವ ಸಂಕಲ್ಪ ಮಾಡಬೇಕು. ಬೆಟ್ಟಗಳಿಗೆ ಮೆಟ್ಟಿಲು ಕಡಿಯುವುದು, ರಸ್ತೆ ಮಾಡುವುದು ಎಂಬೆಲ್ಲ ಅಭಿವೃದ್ಧಿ ಕಾರ್ಯಗಳೆಂಬ ‘ಕುಲಕ್ಕೆ ಮೃತ್ಯುವಾಗುವ’ ಕೆಲಸಗಳನ್ನು ವಿರೋಧಿಸುವ ಹೊಣೆ ನಮ್ಮದಾಗಬೇಕು. ಕಾಡುಕಡಿದು ನೀರನ್ನು ತಿರುಗಿಸಿ ನಿಮ್ಮ ಮನೆಬಾಗಿಲಿಗೆ ನೀರು ಹರಿಸುತ್ತೇವೆಂದು ಬೊಗಳೆ ಬಿಡುವವರನ್ನು ಸಾರಾಸಗಾಟಾಗಿ ತಿರಸ್ಕರಿಸಬೇಕು. ಮೊದಲು ಭೂಮಿ ಸಹಜವಾಗಿ ಉಳಿಯಬೇಕು. ಅದಿಲ್ಲದಿದ್ದರೆ ನಾವೆಲ್ಲಿ ಎಂಬ ಸಣ್ಣ ಪ್ರಶ್ನೆಯನ್ನು ಪ್ರತಿ ಕೆಲಸ ಮಾಡುವಾಗಲೂ ಕೇಳಿಕೊಳ್ಳುತ್ತಲೇ ಇರಬೇಕು. ಇದನ್ನು ಪ್ರಾಂತ್ಯಗಳ ಸಮಸ್ಯೆ ಎಂದುಕೊಳ್ಳದೆ, ಇಡೀ ಪ್ರಕೃತಿಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಯೋಚಿಸಿ ಮುಂದುವರಿಯುವ ಜಾಣತನ ಈಗಿನ ಅಗತ್ಯ. ಇಲ್ಲದಿದ್ದರೆ ಕ್ಷಿತಿಯೇನೋ ಮತ್ತೆ ಗರ್ಭ ಧರಿಸುವಳು.. ಅದರಲ್ಲಿ ಮನುಷ್ಯನ ಹೆಜ್ಜೆ ಮತ್ತೊಮ್ಮೆ ಮೂಡುವುದಿಲ್ಲ.

ಎಲ್ಲಿ ನೋವಿದೆಯೋ ಅಲ್ಲಿಗೆ ಔಷಧ ಸವರುವುದಲ್ಲ.. ನೋವಿನ ಮೂಲಕಾರಣ ಹುಡುಕಿ ಅದಕ್ಕೆ ಮದ್ದು ಮಾಡುವುದರಲ್ಲಿದೆ ನಮ್ಮ ಅಳಿವು-ಉಳಿವು..

(ಲೇಖಕರು ಸಾಹಿತಿ)