Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

‘ಸ್ವಚ್ಛಭಾರತ ನನ್ನ ಹೆಮ್ಮೆ’ ಎಂಬ ಮಂತ್ರಪಠಣವಾಗಲಿ…

Thursday, 16.08.2018, 3:05 AM       No Comments

ಭೋರೆಂದು ಸುರಿಯುವ ಮಳೆಹನಿಗಳನ್ನು ಸರಿಸಿ ಮಾರ್ಗ ಕಾಣುವಂತೆ ಮಾಡಲು ನಮ್ಮ ಕಾರಿನ ವೈಪರ್ ಬಹಳ ಪ್ರಯಾಸಪಡುತ್ತಿತ್ತು. ಮಳೆಯ ಆರ್ಭಟಕ್ಕೆ ನಮ್ಮ ಮಾತುಗಳೆಲ್ಲ ಮೌನವಾಗಿ ಪ್ರಕೃತಿಗೆ ಈ ಸಿಟ್ಟು ಬರಲು ಕಾರಣವೇನಿರಬಹುದು ಎಂದು ಮನಸ್ಸು ಆಲೋಚಿಸತೊಡಗಿತು. ಮರುಕ್ಷಣದಲ್ಲೇ ಉತ್ತರ ಸಿಕ್ಕಿತ್ತು ಎದುರಿನ ಕಾರಿನವರಿಂದ- ಆ ಮಳೆಯಲ್ಲೂ ಕಿಟಕಿಯ ಗಾಜು ಇಳಿಸಿ ಒಂದಿಷ್ಟು ಕಸ ಹೊರಗೆಸೆದಿದ್ದರು. ಸಾಕಲ್ಲ ಭೂಮಿಗೆ ಹೀಗೆ ತೊಳೆದು ಬಳಿದು ಮಾಡಲು… ತನ್ನ ಮೇಲಾಗುವ ದೌರ್ಜನ್ಯವನ್ನು ಎಷ್ಟೆಂದು ಸಹಿಸೀತು? ಒಂದಲ್ಲ ಒಂದು ದಿನ ಹೀಗೆ ಕೊಡಗಟ್ಟಲೆ ನೀರು ಹರಿಸಿ ಮನುಷ್ಯಜಂತುವನ್ನು ಹೊರಗೆಸೆದು ಭೂಮಿಯನ್ನು ತೊಳೆದು ಶುಭ್ರಗೊಳಿಸಬಹುದು ಎಂಬ ಸಮಾಧಾನವೂ ಜತೆಯಲ್ಲಿ..

ಯಾವುದೇ ಪೇಟೆಯೊಳಗೆ ನುಗ್ಗಬೇಕಾದರೂ ಅದರ ಹೊರಭಾಗದಲ್ಲಿ ದುರ್ನಾತ ಬೀರುತ್ತ ಕೊಳೆಯುತ್ತಿರುವ ಕೊಳಕಿನ ರಾಶಿ ದಾಟಿಯೇ ಹೋಗಬೇಕು. ನಮಗೇನೂ ಅನ್ನಿಸುವುದೇ ಇಲ್ಲವೇ? ನಮ್ಮ ಪಾಡಿಗೆ ಗೊಣಗಿಕೊಳ್ಳುವುದೇ ಪ್ರತಿಭಟನೆಯೇ?

ಮೊನ್ನೆಯಷ್ಟೇ ರಾತ್ರೋರಾತ್ರಿ ಕಸವನ್ನು ತಂದು ಊರ ಹೊರಗೆ ಸುರಿಯುತ್ತಿದ್ದ ವಂಚಕರನ್ನು ಹಿಡಿದು ಆ ಕಸವನ್ನು ಮರಳಿ ಅವರ ವಾಹನಕ್ಕೇ ತುಂಬುವಂತೆ ಮಾಡಿ ಅವರನ್ನು ಓಡಿಸಿದ ಗ್ರಾಮಸ್ಥರ ಬಗ್ಗೆ ಪತ್ರಿಕೆಯಲ್ಲಿ ವರದಿಯೊಂದಿತ್ತು. ಆ ಕಸವನ್ನು ಅವರೇನು ಮಾಡಿರಬಹುದು? ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿರಬಹುದೇ? ಅಥವಾ ಇನ್ನೊಂದು ನಿರ್ಜನ ಪ್ರದೇಶವನ್ನು ಹುಡುಕಿ ಎಸೆದಿರಬಹುದೇ? ನಾವು ಯಾಕೆ ಹೀಗೆ?

ಭಾರತಕ್ಕೆ ಸ್ವಾತಂತ್ರ್ಯ ಬಂದು ಅದಾಗಲೇ 70 ವರ್ಷಗಳು ಉರುಳಿದವು. ನಮಗಿನ್ನೂ ನಮ್ಮ ದೇಶದ ಮೇಲೆ ಪ್ರೀತಿ ಮೂಡಿಲ್ಲ. ನಮ್ಮ ಶಿಕ್ಷಣಮಟ್ಟ ಸುಧಾರಿಸಿರಬಹುದು, ಔದ್ಯೋಗಿಕ ಸಾಮರ್ಥ್ಯ ಹೆಚ್ಚಾಗಿರಬಹುದು. ನಾವೂ ರಾಕೆಟ್ ಉಡ್ಡಯನ ಮಾಡಿರಬಹುದು. ನಮ್ಮ ದೇಶದ ಜನರೂ ವಿಶ್ವದ ಶ್ರೀಮಂತರ ಯಾದಿಯಲ್ಲಿ ಕಾಣಿಸಬಹುದು. ಆದರೆ ನಮ್ಮ ನೈತಿಕ ಮೌಲ್ಯಗಳು? ಮೂಲಭೂತವಾಗಿ ಪ್ರಜೆಯೊಬ್ಬ ದೇಶಕ್ಕಾಗಿ ಮಾಡಲೇಬೇಕಾದ ಕರ್ತವ್ಯದ ಬಗೆಗೆ ನಮ್ಮ ಬದ್ಧತೆ? ಎಲ್ಲಿ ತಪ್ಪುತ್ತಿದ್ದೇವೆ ನಾವು?

ನಾವು ಸಣ್ಣವರಿರುವಾಗ, ಶಾಲೆಗೆ ಹೋಗುವ ಪ್ರತಿ ಮಗುವೂ ಶಾಲೆಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಭಾಗಿಯಾಗಲೇಬೇಕಿತ್ತು. ಅದೊಂದು ಸಂಭ್ರಮ. ಪ್ರತಿನಿತ್ಯವೂ ಒಂದೊಂದು ಬೆಂಚಿನ ಮಕ್ಕಳು ಕ್ಲಾಸ್​ರೂಮನ್ನು ಗುಡಿಸಬೇಕಿತ್ತು. ಗುಡಿಸುವುದೆಂದರೆ ಸುಮ್ಮನೆ ಹಣ ಕೊಟ್ಟು ತಂದಿಟ್ಟ ಕಸಪೊರಕೆಯನ್ನು ಬೆಂಚಿನ ಕೆಳಗೆ ಆಡಿಸುವುದಲ್ಲ. ಅಗತ್ಯವಿರುವ ಪೊರಕೆಯನ್ನು ನಾವೇ ಸಿದ್ಧಪಡಿಸಬೇಕಿತ್ತು. ರಸ್ತೆಬದಿಯಲ್ಲಿ ಅಗಲವಾಗಿ ಹಬ್ಬಿ ಬೆಳೆಯುತ್ತಿದ್ದ ಒಂದು ಜಾತಿಯ ಗಿಡವನ್ನು ಕಿತ್ತು ನೆರಳಿನಲ್ಲಿ ಒಣಗಿಸಿ ಕಟ್ಟಿ ಪೊರಕೆಯನ್ನು ತಯಾರುಮಾಡಿಕೊಳ್ಳುತ್ತಿದ್ದೆವು. ಸರತಿ ಪ್ರಕಾರ ಗುಡಿಸುವುದಾದರೂ ಯಾವ ಬೆಂಚಿನವರು ಹೆಚ್ಚು ಕಸ ಮಾಡುತ್ತಾರೋ ಅವರ ಬಗ್ಗೆ ಟೀಚರಿಗೆ ದೂರುಹೋಗುತ್ತಿತ್ತು. ಅದರ ವಿಚಾರಣೆಯೂ ನಡೆಯುತ್ತಿತ್ತು.

ಬೇಸಿಗೆ ಶುರುವಾದಾಗ ತಿಂಗಳಿಗೊಮ್ಮೆ ಅಂಗಳಕ್ಕೆ ಸಗಣಿ ಗುಡಿಸಿ ಧೂಳು ಬಾರದಹಾಗೆ ಮಾಡುವ ಕೆಲಸವಿತ್ತು. ಪ್ರತಿಯೊಬ್ಬರೂ ಸಗಣಿ ಹೊತ್ತೊಯ್ದು ಇಡೀ ಅಂಗಳಕ್ಕೆ ಗುಡಿಸುತ್ತಿದ್ದೆವು. ಇಂತಹ ಕೆಲಸಗಳು ಪರಿಸರವನ್ನು ಪ್ರೀತಿಸುವ, ಸ್ವಚ್ಛಗೊಳಿಸುವ ಮನಸ್ಥಿತಿಯನ್ನು ಹುಟ್ಟುಹಾಕುತ್ತಿದ್ದವು. ಈಗಿನ ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಆ ಕೆಲಸ ಮಾಡಲೆಂದೇ ಜನ ಇರುತ್ತಾರೆ. ನಮ್ಮ ಕೆಲಸವಲ್ಲ ಅದು ಎಂಬ ಭಾವನೆ ನಮ್ಮ ಮಕ್ಕಳಲ್ಲಿ ಸುಲಭವಾಗಿ ಬೇರುಬಿಡುತ್ತದೆ. ನಾವು ಕೊಳಕು ಮಾಡಿದರೆ ತೆಗೆಯುವ ಜನ ಬೇರೆ ಇದ್ದಾರೆ… ನಾವೇ ಸಂಬಳ ಕೊಟ್ಟು ಕೂರಿಸಿದ್ದೇವಲ್ಲ… ಅದವರ ಜವಾಬ್ದಾರಿ ಎಂಬ ಉಡಾಫೆ.

ಮೊನ್ನೆ ಒಂದು ವೈದ್ಯಕೀಯ ಶಿಕ್ಷಣಸಂಸ್ಥೆಯ ಆವರಣದಲ್ಲಿ ಗಂಟೆಗಟ್ಟಲೆ ಕಳೆಯಬೇಕಿತ್ತು. ಕುಳಿತು ಅತ್ತಿತ್ತ ನೋಡುವುದು ಬಿಟ್ಟು ನನಗೇನೂ ಕೆಲಸವಿರಲಿಲ್ಲ. ಬಿಡುವಿನ ವೇಳೆಯಲ್ಲಿ ಅಲೆಯುತ್ತಿದ್ದ ಪ್ರತಿ ವಿದ್ಯಾರ್ಥಿಯ ಕೈಯಲ್ಲೂ ಪ್ಲಾಸ್ಟಿಕ್​ನೊಳಗೆ ತುಂಬಿದ ತಿಂಡಿ-ತಿನಿಸು, ಪಾನೀಯಗಳು. ಪಕ್ಕದಲ್ಲಿದ್ದ ಆಳೆತ್ತರದ ಕಸದತೊಟ್ಟಿ ನೋಡುತ್ತಿದ್ದಂತೆಯೇ ತುಂಬಿ ತುಳುಕುವಂತಾಗಿತ್ತು. ಕೆಲವರು ಯಾರೂ ನೋಡುವುದಿಲ್ಲ ಎಂದುಕೊಂಡು ನಿಂತಲ್ಲಿಂದಲೇ ಅದರೆಡೆಗೆ ಕಸತೂರಿ ಹೋಗುವವರು. ನೋಡುವ ಮಂದಿ ಇದ್ದರೆ ಮಾತ್ರ ಜಾಗರೂಕತೆ, ಇಲ್ಲದಿದ್ದರೆ ಕಸ ಬಿಸುಡಬಹುದು ಎನ್ನುವ ಅಪಾಯಕಾರಿ ಮನಸ್ಸುಗಳು. ತಾವು ಏರಿಸುತ್ತಿರುವ ಪ್ಲಾಸ್ಟಿಕ್ ಬೆಟ್ಟದ ಪರಿವೆಯೇ ಅವರಿಗಿದ್ದಂತಿಲ್ಲ.

ಈಗ ಪಾಶ್ಚಿಮಾತ್ಯ ರಾಷ್ಟ್ರಗಳ ‘ಬಳಸು ಬಿಸಾಡು’ (ಯೂಸ್ ಆಂಡ್ ಥ್ರೊ) ಎಂಬ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಿಸಾಡುವಾಗ ನಮ್ಮದೇ ಪರಿಸರವನ್ನು ಹಾಳುಗೆಡವುತ್ತೇವೆ. ಮೊದಲೆಲ್ಲ ನನ್ನಜ್ಜ ಅಪ್ಪಂದಿರ ಕಾಲದಲ್ಲಿ ತಿನ್ನುವುದು ಎಂದರೆ ಮನೆಯೊಳಗೆ ಅಥವಾ ಅಪರೂಪಕ್ಕೆ ಹೋಟೆಲ್ಲು ಎಂಬ ಕಟ್ಟಡದೊಳಗೆ. ಪ್ಲಾಸ್ಟಿಕ್ಕಿನೊಳಗೆ ತುಂಬಿಟ್ಟ ಸಿದ್ಧಆಹಾರವನ್ನು ಸೇವಿಸುವ ಕ್ರಮ ಇರಲಿಲ್ಲ. ಹೆಚ್ಚೆಂದರೆ ಬಸ್ಸುಗಳಲ್ಲಿ ನೆಲಗಡಲೆಯ ಸಿಪ್ಪೆಗಳಿರುತ್ತಿದ್ದವು. ಈಗ ಒಂದು ಕೈಯಲ್ಲಿ ಕೋಕ್ ಇನ್ನೊಂದು ಕೈಯಲ್ಲಿ ಚಿಪ್ಸ್ ಕವರ್. ಸ್ವಲ್ಪ ಹೊತ್ತಲ್ಲಿ ಅವೆರಡೂ ಕಸ. ಇನ್ನೊಂದೆರಡು ವರ್ಷದಲ್ಲಿ ಸಮಾಜದ ಮೇಲ್ತರಗತಿಗೆ ಸೇರಿಹೋಗುವ ಜನಗಳಿವರು. ಇನ್ನು ಕಲಿಯುವುದು ಯಾವಾಗ?

ನನಗೆ ತಿಳಿದ ವೈದ್ಯರೊಬ್ಬರು ತಮ್ಮ ಮನೆ ಪರಿಸರ, ಕ್ಲಿನಿಕ್ ಅನ್ನು ಅತ್ಯಂತ ಚೊಕ್ಕಟವಾಗಿಡುವವರು. ಕ್ಲಿನಿಕ್ ಕಸವನ್ನು ಮಾತ್ರ ರಸ್ತೆಬದಿಯ ಖಾಲಿಸ್ಥಳಕ್ಕೆ ಬಿಸಾಡಿ ಹೋಗಿಬಿಡುತ್ತಿದ್ದರು. ಇಂತಹ ಅಪಾಯಕಾರಿ ಜನಗಳೇ ಪರಿಸರಕ್ಕೆ ಮಾರಕ. ಯಾರು ಕಲಿಸಬೇಕು ಇವರಿಗೆ? ವಯಸ್ಸು, ವಿದ್ಯೆಗಳು ಬದುಕಿನ ರೀತಿನೀತಿಗೆ ಮಾನದಂಡವಲ್ಲ ಎಂಬುದಷ್ಟೇ ಸತ್ಯ.

ಮೊನ್ನೆ ಅಂಗಡಿಯೊಂದಕ್ಕೆ ಹೋಗಿದ್ದೆ. 3-4 ಬಗೆ ಸಾಮಾನುಗಳನ್ನು ಕೊಂಡುಕೊಂಡೆ. ಎಲ್ಲವನ್ನೂ ನನ್ನೆದುರಿಗಿಟ್ಟು ಬಿಲ್ ಕೊಟ್ಟರು. ಒಂದು ನಿಮಿಷ ಕಾದೆ- ಅವರದನ್ನು ತುಂಬಿಕೊಡುವ ಪ್ಲಾಸ್ಟಿಕ್ ಕವರ್​ಗಾಗಿ. ‘ನಾವಿಲ್ಲಿ ಪ್ಲಾಸ್ಟಿಕ್ ಕವರ್ ಕೊಡುವುದಿಲ್ಲ. ಬಟ್ಟೆಯ ಬ್ಯಾಗು ಇದೆ. ಅದಕ್ಕೆ ಹೆಚ್ಚಿನ ಹಣ ಕೊಡಬೇಕು, ಬೇಕಾ?’ ಎಂದರು. ಫಕ್ಕನೆ ನಾಚಿಕೆಯೆನಿಸಿತು.

‘ಬೇಡ ಬೇಡ’ ಎಂದು ಕೊಂಡೊಯ್ದ ಪರ್ಸಿನೊಳಗೆ ತುಂಬಿ ತಂದೆ. ಮನೆಗೆ ಬಂದವಳು ಮೊದಲು ಪರ್ಸಿನೊಳಗೆ ಮನೆಯಲ್ಲಿದ್ದ ಬಟ್ಟೆಯ ಬ್ಯಾಗೊಂದನ್ನು ಹಾಕಿಟ್ಟೆ. ತುಂಬ ಸಮಯದವರೆಗೆ ಸುಲಭಕ್ಕಾಗಿ ಮಾಡಿಕೊಂಡ ಕೆಟ್ಟ ಅಭ್ಯಾಸ ಕೆಲವೊಮ್ಮೆ ಹೊರಗಿಣುಕುತ್ತದೆ. ಹಾಗೆಂದು ಅದರ ಗೋಣುಮುರಿಯುವುದು ಅಸಾಧ್ಯವೇನಲ್ಲ. ನನ್ನಜ್ಜ ಮನೆಯಿಂದ ಹೊರಗೆ ಹೋಗುವಾಗ ಒಯ್ಯುತ್ತಿದ್ದ ದೊಡ್ಡಚೀಲ ನೆನಪಾಯಿತು. ಈಗ ಅಂಗೈಯೊಳಗೇ ಹಿಡಿಯುವ ಪರ್ಸನ್ನು ಒಯ್ಯುವುದೇ ಕಷ್ಟ ಎಂಬಂತಾಡುವ ನಮ್ಮ ಸಣ್ಣತನ.

ಹಲವು ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸ್ವಚ್ಛತಾ ಆಂದೋಲನ ಕೈಗೆತ್ತಿಕೊಳ್ಳುತ್ತವೆ. ಅದನ್ನು ಗೇಲಿಮಾಡುತ್ತಲೇ ‘ಅವರಿಗೆ ಗುಡಿಸಲು ಕಸ ಬೇಕಲ್ಲಾ, ಅದಕ್ಕೇ ಕಸ ಹಾಕೋದು ನಾನು’ ಎಂದು ಕೊಂಕು ನುಡಿಯುವ ಜನಗಳನ್ನು ಕಂಡಿದ್ದೇನೆ. ‘ದೇಶ ಸರಿಯಿಲ್ಲ, ರಾಜ್ಯ ಸರಿಯಿಲ್ಲ; ನಾನು ಇಲ್ಲಿರಬೇಕಾದ ಸಣ್ಣಮನುಷ್ಯನೇ ಅಲ್ಲ’ ಎಂದು ಮಾತುಮಾತಿಗೆ ಡೋಲು-ಡಂಗುರ ಸಾರುವ ಇಂತಹ ಮಂದಿಯೇ ಕೊಳಕಿನ ಮೂಲ. ಒಳಗೂ ನಾರುವ ಇಂಥವರು ಹೊರಗೆ ಹೇಗೆ ಶುಚಿಯಾಗಿರಲು ಸಾಧ್ಯ? ಯಾರೋ ಮಾಡಿಕೊಡಬೇಕು ಎನ್ನುವ ರೋಗಪೀಡಿತ ಮನಸ್ಸುಗಳಿವು.

ಸಾರ್ವಜನಿಕ ಸ್ಥಳ ಎಂದರೆ ಯಾರಪ್ಪನ ಸೊತ್ತೂ ಅಲ್ಲ, ಅದನ್ನು ಯಾರು ಬೇಕಾದರೂ ಹಾಳುಮಾಡಬಹುದು ಎಂಬುದು ನಮ್ಮ ನಂಬಿಕೆ. ಎಲ್ಲರ ಬಳಕೆಗಾಗಿ ಇರುವಂಥದ್ದನ್ನು ನಾವು ಉಳಿಸಬೇಕಾದರೆ ಅದಕ್ಕೆ ಮಾರಕವಾಗುವಂಥದ್ದನ್ನು ಮಾಡಬಾರದೆಂಬ ಸಣ್ಣ ವಿಷಯವೂ ನಮ್ಮ ಮನಸ್ಸೊಳಗಿಳಿಯುವುದಿಲ್ಲ.

ಎಲ್ಲಿ ತಪ್ಪುತ್ತಿದ್ದೇವೆ? ಉತ್ತರ ಸುಲಭ. ಎಲ್ಲಿಯೂ ತಪ್ಪಿಲ್ಲ. ಅದಿರುವುದು ನಮ್ಮೊಳಗೆ. ನಾವು ಯೋಚಿಸುವ ವಿಚಾರದೊಳಗೆ. ಯಾರಿಗಾಗಿಯೋ ನಾನು ಮಾಡುತ್ತೇನೆ ಇಂತಹುದನ್ನು ಎಂಬ ನಮ್ಮ ಮನಸಿನೊಳಗೆ. ಇದನ್ನು ಸುಧಾರಿಸಬೇಕಾದರೆ ನಮಗೆ ನಾವು ಮೊದಲು ಪ್ರಾಮಾಣಿಕರಾಗಬೇಕು. ತಪ್ಪು-ಒಪ್ಪುಗಳು ಸೋಗಿಗಾಗಿಯಲ್ಲ; ‘ಸರಿಯಾದುದನ್ನೇ ಮಾಡುತ್ತೇನೆ’ ಎಂಬ ದೃಢನಿರ್ಧಾರ ನಮ್ಮೊಳಗೆ ಇರಬೇಕು. ಸಣ್ಣ ಮಕ್ಕಳಿರುವಾಗಲೇ ಸ್ವಚ್ಛತೆಯ ಮೂಲಭೂತ ಪಾಠ ಕಲಿಸಬೇಕು. ಅದು ಉಸಿರಿನಷ್ಟೇ ಸಹಜ ಎಂಬಂತೆ ನಮ್ಮಲ್ಲೇ ಮಿಳಿತಗೊಳ್ಳಬೇಕು. ದಾರಿಯಲ್ಲಿ ಕಸ ಹಾಕುವ ಜನರನ್ನು ಸಮಾಜ ನಿಕೃಷ್ಟವಾಗಿ ನೋಡುವ ದಿನಗಳು ಬಂದಾಗ ನಾವು ನಿಜವಾಗಿ ನಾಗರಿಕತೆಯತ್ತ ಹೆಜ್ಜೆಹಾಕುತ್ತೇವೆ. ಭಾರತವನ್ನು ಸಿಂಗಾಪುರ ಮಾಡುತ್ತೇವೆ ಎಂದು ಆಗಾಗ ಮಂತ್ರಿಗಳು ಭಾಷಣ ಬಿಗಿಯುವುದು ಕೇಳಿರಬಹುದಲ್ಲ. ಆಗಬೇಕಾಗಿರುವುದು ಸಿಂಗಾಪುರವಲ್ಲ, ಕಸಕೊಳೆಯಿಲ್ಲದ ಸಹಜ ಹಸಿರಪುರ. ಅದು ನಮ್ಮಿಂದ, ನಮ್ಮ ಮಕ್ಕಳಿಂದ ಸಾಧ್ಯ. ಸ್ವತಂತ್ರ ಭಾರತ, ಸ್ವಚ್ಛತಂತ್ರ ಭಾರತವಾದಾಗಲೇ ನಾವು ಅಭಿವೃದ್ಧಿಯ ಪಥದತ್ತ ಹೆಜ್ಜೆಹಾಕಲು ಸಾಧ್ಯವಾಗುತ್ತದೆ.

ಇದು ನಮ್ಮಿಂದ ಸಾಧ್ಯ. ಈ ಸ್ವಾತಂತ್ರೊ್ಯೕತ್ಸವ, ‘ಸ್ವಚ್ಛಭಾರತ ನನ್ನ ಹೆಮ್ಮೆ’ ಎಂಬ ಮಂತ್ರವನ್ನು ಸದಾ ಪಠಿಸುವಂತೆ ಮಾಡಲಿ. ಇದು ನಾವು, ನಮ್ಮ ನಾಡು, ನೆಲದ ಬಗೆಗಿನ ಪ್ರೀತಿಯನ್ನು ತೋರಿಸಲು ದಿನಾ ಮಾಡುವ ಕರ್ತವ್ಯವಾಗಲಿ.

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top