ವರುಣನಾಗಮನದ ಸಂಭ್ರಮ ಪ್ರತಿ ವರ್ಷವೂ ಹೊಸತೇ!

| ಅನಿತಾ ನರೇಶ್​ ಮಂಚಿ

ಮಳೆಗಾಲದಲ್ಲಿ ಹೆಣ್ಣುಮಕ್ಕಳಿಗಿದ್ದ ದೊಡ್ಡ ಆಕರ್ಷಣೆ ಎಂದರೆ ಮರಗಳ ಮೇಲೆ ಅರಳಿ ನಗುವ ಆರ್ಕಿಡ್ ಹೂಗಳು. ಎಷ್ಟು ಬಣ್ಣಗಳಲ್ಲಿ ಆ ಹೂಗಳು ಸಿಗುತ್ತಿದ್ದವೆಂದರೆ ಈಗ ಮಾರುಕಟ್ಟೆಗಳಲ್ಲಿ ದೊರಕುವ ಹೂಗಳನ್ನು ನೀವಾಳಿಸಿ ಒಗೆಯಬೇಕು. ಈಗಲೂ ದಟ್ಟ ಕಾಡುಗಳ ತಿರುಗಾಟದ ಹವ್ಯಾಸ ಇದ್ದವರಿಗೆ ಇದು ಕಾಣಬಹುದೇನೋ..

ಕರಾವಳಿಯಲ್ಲಿ ಭಾರೀ ಮಳೆ… ಸದ್ಯಕ್ಕೆ ಇದು ಪತ್ರಿಕೆಗಳಲ್ಲಿ ದಿನನಿತ್ಯ ಕಾಣಿಸುವ ಸುದ್ದಿ. ಎಲ್ಲ ಕಾಲಗಳು ಸಮವೇ ಎಂದರೂ ಮಳೆಗಾಲಕ್ಕೆ ವಿಶೇಷ ಮಹತ್ವ. ನೆಲ ನೆನೆಸಿ ಒದ್ದೆಯಾಗಿಸಿ ಒಳಗಿರುವ ಬಸಿರನ್ನು ಹಸಿರಾಗಿ ಮಾರ್ಪಡಿಸುವ ಮಾಂತ್ರಿಕತೆ ಇರುವುದು ಮಳೆಗೆ.

‘ಎಂಥ ಮಳೆ ಮಾರಾಯ್ರೇ.. ಹೀಗೆ ಮಳೆ ಬರೋದನ್ನು ನಾವು ನೋಡಲೇ ಇಲ್ಲ.. ಹೊರಗಡೆ ಹೋಗಲು ಆಗ್ತಿಲ್ಲ’ ಎಂದು ಹರೆಯದವರ ವಾಟ್ಸಾಪುಗಳು ಸಂಭಾಷಣೆ ಮಾಡುತ್ತಿದ್ದರೆ, ಮೂಲೆಯಲ್ಲಿ ಕುಳಿತು ಅಡಿಕೆ ಹೋಳುಗಳನ್ನು ಕುಟ್ಟಣಿಗೆಯಲ್ಲಿ ಕುಟ್ಟುವ ಅಜ್ಜಿ- ‘ಮಳೆ ಅಂದರೆ ಹೀಗೇ ಬರಬೇಕು… ಎಷ್ಟು ಕಾಲ ಆಯ್ತು ಇದನ್ನು ನೋಡಿ ಅಲ್ವಾ’ ಎಂದು ಬೊಕ್ಕುಬಾಯಲ್ಲಿ ಎಲೆ ಜಗಿಯಲು ಪ್ರಯಾಸ ಪಡುತ್ತಿದ್ದ ಅಜ್ಜನನ್ನು ಕೇಳುತ್ತಿದ್ದಳು.

ನಾವು ಅತ್ತೂ ಅಲ್ಲ ಇತ್ತೂ ಅಲ್ಲದವರು. ಬಾಲ್ಯದ ಮಳೆರಾಯನ ಪುನರಾಗಮನಕ್ಕೆ ಖುಷಿ ಪಡಬೇಕೋ, ಕಣ್ಣಿಗೆ ರಾಚುವ ತೋಟದ ಬಾಕಿ ಉಳಿದ ಕೆಲಸಗಳನ್ನು ನೆನಪಿಸಿಕೊಳ್ಳುತ್ತ ತಲೆ ಮೇಲೆ ಕೈ ಹೊತ್ತುಕೊಳ್ಳಬೇಕೋ ಎಂಬ ಗೊಂದಲಕ್ಕೆ ಬಿದ್ದಿದ್ದೆವು. ಕಾಗದದ ದೋಣಿಗಳು ಅಂಗಳದಲ್ಲಿ ಒಂದಿಷ್ಟು ದೂರ ಸಾಗುತ್ತಲೇ ಮಳೆಯ ಹೊಡೆತಕ್ಕೆ ನೆಲಕಚ್ಚಿ ಮುದ್ದೆಯಾಗುವುದನ್ನು ನೋಡುತ್ತ ನಂಗೆ ಹಾಳೆಯ ದೋಣಿ ಕೊಡು ಎಂದು ಅಮ್ಮನನ್ನು ಪೀಡಿಸುವ ಮಕ್ಕಳು ಇನ್ನಷ್ಟು ಮಳೆಯನ್ನು ಬೇಡುತ್ತಿದ್ದರು. ಈ ಬಾಲ್ಯಕ್ಕೂ ಮಳೆಗೂ ಯಾವತ್ತೂ ತಳುಕು.

ನಾವು ಅಷ್ಟೇ.. ಮಳೆ ಎನ್ನುವುದನ್ನು ಬೇಡಿ ಬರಿಸಿಕೊಳ್ಳುವ ಕಾಲವೂ ಆ ಬಾಲ್ಯದ ವರವೇ ಆಗಿತ್ತು. ವರುಣನಾಗಮನದ ಸಂಭ್ರಮ ಪ್ರತಿ ವರ್ಷವೂ ಹೊಸತೇ. ಭಾಗಮಂಡಲ ಹೇಳಿ ಕೇಳಿ ಮಳೆಯ ತವರು. ಹಿಡಿದ ಮಳೆ ಬಿಡಲು ವಾರಗಳೇ ಬೇಕಿದ್ದಂತಹ ಸಮಯವದು. ಕನ್ನಿಕೆ ಕಾವೇರಿಯರು ಉಕ್ಕಿ ಸೊಕ್ಕಿ ಹರಿದು ಪೇಟೆಯನ್ನು ಇಬ್ಭಾಗವಾಗಿಸುತ್ತಿದ್ದವು. ನಾವು ಕಾಯುತ್ತಿದ್ದುದೂ ಇಂತಹ ಸಮಯಕ್ಕೆ.

ಶಾಲೆಗೆ ರಜೆ ಸಿಗುತ್ತದೆ ಎನ್ನುವುದು ಮಳೆಯನ್ನು ಬೇಡುವುದಕ್ಕಿದ್ದ ಮೊದಲ ಕಾರಣವಾದರೂ ಆ ರಜೆಯಲ್ಲಿ ನಾವು ಮಾಡಲಿದ್ದ ಸಾಹಸಗಳ ಆಕರ್ಷಣೆಯೂ ಸಣ್ಣದಲ್ಲ. ಮನೆಯಿಂದ ನೂರು ಹೆಜ್ಜೆಳತೆಯಲ್ಲಿ ಹೊಳೆ. ಅದರ ಆಚೀಚೆ ಗದ್ದೆ ಸಾಲು. ಮಳೆ ಶುರುವಾದ ಕೂಡಲೇ ನಮ್ಮ ಕಣ್ಣುಗಳು ಮೊದಲು ತಿರುಗುತ್ತಿದ್ದುದು ಈ ಗದ್ದೆಗಳ ಕಡೆಗೆ. ಹೊಳೆಯ ದಂಡೆ ಮಗುಚಿ ನೀರು ಗದ್ದೆಗೆ ತುಂಬತೊಡಗಿದಂತೆ ನಮ್ಮ ಸ್ವಿಮ್ಮಿಂಗ್ ಸೂಟುಗಳು ಸಿದ್ಧವಾಗುತ್ತಿದ್ದವು. ಹುಡುಗರಾದರೆ ಹಳತು ಚಡ್ಡಿ, ಹುಡುಗಿಯರಾದರೆ ಸಿಮೀಸು ಎಂದು ನಾವು ಕರೆಯುತ್ತಿದ್ದ ತುಂಡು ಕೈಯ ಒಳ ಉಡುಪು. ಒದ್ದೆ ಮುದ್ದೆಯಾಗಿ ಮನೆ ಸೇರುವಾಗ ನಡುಗುವ ಮೈ ಚಳಿಯನ್ನು ಕಡಿಮೆ ಮಾಡಲೆಂದು ಮಣ್ಣಲ್ಲಿ ಮುಚ್ಚಿಟ್ಟ ಹಲಸಿನ ಬೀಜಗಳನ್ನು ಕೆಂಡದಲ್ಲಿ ಸುಟ್ಟು ಅಡಗಿಸಿಟ್ಟು ಹೋಗುತ್ತಿದ್ದೆವು. ಹೊಸತಾಗಿ ಈಜು ಕಲಿಯುವವರಿಗೆಂದು ರಕ್ಷಣಾಕವಚವಾಗಿ ಬಾಳೆದಂಡು ಅಥವಾ ಮೂರು ಸುಲಿಯದ ತೆಂಗಿನಕಾಯಿಗಳನ್ನು ಜೋಡಿಸಿ ಕಟ್ಟಿ ಸಿದ್ಧ ಪಡಿಸಿಟ್ಟಿರುತ್ತಿದ್ದರು ನಮ್ಮಿಂದ ಮೊದಲು ಈಜು ಕಲಿತವರು. ಮೊದಲಿಗೆ ಕಡಿಮೆ ನೀರಿರುವ ಜಾಗದಲ್ಲಿ ನೆಲಕ್ಕೆ ಕೈಯೂರಿ ಕಾಲು ಬಡಿಯುತ್ತಿದ್ದೆವು. ಒಂದೆರಡು ದಿನಗಳವರೆಗೆ ಪಾಠ ಇಲ್ಲಿಂದ ಮುಂದೆ ಸಾಗುತ್ತಿರಲಿಲ್ಲ. ನಂತರ ಬಾಳೆಯ ದಂಡಿನ ಮೇಲೆ ಕವುಚಿ ಕೈಕಾಲು ಬಡಿಯುತ್ತ ಈಜು ಕಲಿಯುವ ಪ್ರಕ್ರಿಯೆ ಮುಂದುವರಿಯುತ್ತಿತ್ತು. ಮಳೆಗಾಲ ಮುಗಿದಾಗ ಈಜು ಕಲಿತಾಗುತ್ತಿತ್ತು.

ಹೊಳೆಯಲ್ಲಿ ತೇಲಿ ಬರುತ್ತಿದ್ದ ದೊಡ್ಡ ಮರದ ದಿಮ್ಮಿಗಳನ್ನು ಎಳೆದು ದಡಕ್ಕೆ ಹಾಕುವುದು ಆಗಿನ ಅತಿ ದೊಡ್ಡ ಸಾಹಸ. ಇದರಲ್ಲಿ ಮಕ್ಕಳಾದ ನಮಗೇನೂ ಕೆಲಸವಿಲ್ಲದಿದ್ದರೂ ದೊಡ್ಡವರು ಮಾಡುವ ಕೆಲಸ ನೋಡುವ ಗಮ್ಮತ್ತು ಇರುತ್ತಿತ್ತು. ನೀರಿನಲ್ಲಿ ತೇಲಿ ಬರುವ ದಿಮ್ಮಿಗಳು ಹಗುರವಿದ್ದಂತೆ ಕಾಣಿಸಿಕೊಳ್ಳುತ್ತಿದ್ದವು. ಅದಕ್ಕೆ ಹಗ್ಗ ಕಟ್ಟಿ ಎಳೆದು ದಡಕ್ಕೆ ತರುವುದು ಸುಲಭ. ನೀರಿಳಿದ ಮೇಲೆ ಆ ದಿಮ್ಮಿಯನ್ನು ಎತ್ತುವುದು ಬಿಡಿ ಅಲುಗಾಡಿಸುವುದು ಕೂಡ ಸಾಧ್ಯವಾಗುತ್ತಿರಲಿಲ್ಲ . ಅಂತಹ ದಿಮ್ಮಿಗಳು ರಸ್ತೆಯ ಬದಿಯಲ್ಲಿ ಇರುವವರೆಗೂ ನಮ್ಮ ಆಟಕ್ಕೆ ಬಳಕೆಯಾಗುತ್ತಿತ್ತು.

ಪ್ರವಾಹದ ನೀರು ಕಾಫಿ ತೋಟದೊಳಗೆಲ್ಲ ನುಗ್ಗುತ್ತಿತ್ತು. ಆ ಜಾಗದಲ್ಲಿ ಮಕ್ಕಳು ಗುಂಪುಗಟ್ಟಿ ಸಣ್ಣ ಸಣ್ಣ ಹೊಂಡ ಮಾಡಿ ನೀರು ನಿಲ್ಲುವಂತೆ ಮಾಡುತ್ತಿದ್ದೆವು. ಮಳೆ ಕಡಿಮೆಯಾದಾಗ ಅದು ಪುಟ್ಟ ಕೆರೆಯಂತೆ ಕಾಣಿಸುತ್ತಿತ್ತು. ಹೊಳೆಯಿಂದ ಹಿಡಿದ ಮೀನುಗಳನ್ನು, ಮೀನು ಸಿಗದಿದ್ದರೆ ಗೊದ್ದ( ಕಪ್ಪೆ ಮರಿ) ಗಳನ್ನು ಅದರೊಳಗೆ ಬಿಟ್ಟು ಅವುಗಳು ಈಜಾಡುವುದನ್ನೇ ನೋಡುತ್ತ ಕುಳಿತುಬಿಡುತ್ತಿದ್ದೆವು.

ಮಳೆಗೆಂದು ಶಾಲೆಯವರು ರಜೆ ಕೊಟ್ಟರೆ ನಮ್ಮ ಅಲೆದಾಟ ಇಂತಹ ದಿನಗಳಲ್ಲಿ ಜೋರು. ಕಾಫಿ ತೋಟದ ನಡುವಿನಲ್ಲಿ ನೆರಳಿಗೆಂದು ನೆಟ್ಟ ಮರಗಳ ಮೇಲೆ ಮಳೆಗಾಲ ಮಾತ್ರ ಸಿಗುವ ಕೆಸುವಿನ ಸೊಪ್ಪನ್ನು ಅರಸುತ್ತ ಮೈಲುಗಟ್ಟಲೆ ತಿರುಗಾಡುತ್ತಿತ್ತು ನಮ್ಮ ಮಕ್ಕಳ ಸೈನ್ಯ.

ಆಟಿ ತಿಂಗಳ ಚಳಿಯ ನಡುಕಕ್ಕೆ ಮದ್ದಾಗಿ ಆ ತಿಂಗಳಿನಲ್ಲಿ ಮಾಡುವ ಸಾಂಪ್ರದಾಯಿಕ ಪಾಯಸವೊಂದು ಬಹು ವಿಶಿಷ್ಟ. ಆಟಿ ಸೊಪ್ಪು ಎಂದೇ ಕರೆಯಲ್ಪಡುವ ಆ ಗಿಡದ ಸೊಪ್ಪು ಆಟಿ ತಿಂಗಳ ಹದಿನೆಂಟನೇ ದಿನದಲ್ಲಿ ಸಕಲ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಎಂಬ ನಂಬಿಕೆ.

ಸೊಪ್ಪಿನ ಕಷಾಯವನ್ನು ತಯಾರಿಸಿ ಸೋಸಿಕೊಂಡು ಆ ಕಷಾಯಕ್ಕೆ ಅಕ್ಕಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳುವುದು. ಇದಕ್ಕೆ ಬೆಲ್ಲ ಸಕ್ಕರೆಯ ಬದಲು ಸಿಹಿಗೆ ಬೇಕಾದಷ್ಟು ಜೇನು ಸೇರಿಸಿ ತಿನ್ನುವುದು ವಿಶೇಷ. ನಮ್ಮ ಸೈನ್ಯವಂತೂ ಪ್ರತಿ ಮನೆಗೂ ಹೋಗಿ ಅಲ್ಲಿ ಮಾಡಿಟ್ಟ ಪಾಯಸ ಚಪ್ಪರಿಸುತ್ತಿತ್ತು. ಇಡೀ ದಿನ ಒದ್ದೆ ಬಟ್ಟೆಯಲ್ಲೇ ಕುಣಿಯುವ ನಮಗೆ ರಾತ್ರಿಯ ಬೆಚ್ಚಗಿನ ಸ್ನಾನದ ನಂತರ ಸಿಗುವ ಬಿಸಿಗಂಜಿಯೇ ಮೃಷ್ಟಾನ್ನ ಭೋಜನ.

ಬಿಡದೇ ಸುರಿಯುವ ಮಳೆ ಜೋರಾಗಿ ರಸ್ತೆಯ ಮೇಲೆಲ್ಲ ನೀರು ತುಂಬಿ ಸಾರಿಗೆ ಸಂಪರ್ಕ ಕಡಿದುಕೊಳ್ಳುತ್ತಿತ್ತು. ಒಂದು ಸಲವಂತೂ ವಾರವಿಡೀ ನೀರು ಇಳಿದಿರಲೇ ಇಲ್ಲ. ಮನೆಯಲ್ಲಿ ಅಕ್ಕಿಯ ದಾಸ್ತಾನು ಮುಗಿದಿತ್ತು. ಇದ್ದ ಸಣ್ಣ ಪೇಟೆಗೂ ಹೋಗುವಂತಿಲ್ಲ. ಅಕ್ಕಪಕ್ಕದ ಮನೆಗಳೂ ನಮ್ಮದೇ ಪರಿಸ್ಥಿತಿಯಲ್ಲಿ ಇದ್ದವರು. ಹೀಗೆ ಮನೆ ಮಂದಿ ಚಡಪಡಿಸುತ್ತ ಮಳೆಗೆ ಬಯ್ಯುತ್ತಿದ್ದರೆ ನಮಗೆ ಮಳೆ ಎಲ್ಲಿ ಕಡಿಮೆಯಾಗಿ ಶಾಲೆ ಶುರು ಆಗುತ್ತದೋ ಎಂಬ ಭಯದಲ್ಲಿ ಗುಟ್ಟಾಗಿ ಮಳೆ ಬರಲಿ ದೇವರೇ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದೆವು.

ಹೀಗೆ ಹೊಳೆ ಕಟ್ಟಿದಾಗ ಅಪ್ಪನಿಗೆ ತೆಪ್ಪದಲ್ಲಿ ಹೋಗುವ ಆಸೆ. ಒಮ್ಮೆ ಹೀಗೇ ನೀರು ಏರಿರುವಾಗ ನಾಲ್ಕಾರು ಬಾಳೆದಂಡುಗಳನ್ನು ಕಡಿದು ಜೋಡಿಸಿ ಕಟ್ಟಿ ತೆಪ್ಪ ಮಾಡಿ ಅಗಲ ಹಲಗೆಯೊಂದನ್ನು ಹುಟ್ಟಾಗಿಸಿ ತೆಪ್ಪದಲ್ಲಿ ಕುಳಿತು ಹೊರಟರು. ಸ್ವಲ್ಪ ದೂರ ಹೋದದ್ದಷ್ಟೇ.. ಜೋರಾದ ಗಾಳಿ ಮಳೆ. ಕೊಡೆ ಬಿಡಿಸಿದರು. ಗಾಳಿಯ ವೇಗಕ್ಕೆ ತೆಪ್ಪ ನದಿಯಲ್ಲೇ ಕೆಳಮುಖವಾಗಿ ಸಾಗತೊಡಗಿತು. ದಡದಲ್ಲಿ ನಿಂತ ಎಲ್ಲರೂ ಜೋರಾಗಿ ಬೊಬ್ಬೆ ಹೊಡೆಯತೊಡಗಿದರು. ಕೊಡೆ ಮಡಚಿದರೂ ನೀರಿನ ವೇಗದಿಂದಾಗಿ ತೆಪ್ಪ ಈಚೆ ಬರಲೇ ಇಲ್ಲ. ಸೆಳವಿನ ವೇಗದೊಂದಿಗೆ ತೆಪ್ಪದಲ್ಲಿ ಕುಳಿತ ಅಪ್ಪನೂ… ಮನೆಯಲ್ಲಿದ್ದ ಚಿಕ್ಕಪ್ಪ ಉದ್ದದ ಹಗ್ಗವೊಂದನ್ನು ಹಿಡಿದು ಈಜುತ್ತ ಸಾಗಿದರು. ಆತಂಕದ ವಾತಾವರಣ. ಸ್ವಲ್ಪ ಹೊತ್ತಲ್ಲಿ ಹಗ್ಗ ಹಿಡಿದು ಹೋದ ಚಿಕ್ಕಪ್ಪ ಮರಳಿದರು. ಅಪ್ಪ ಹೊಳೆಯಲ್ಲೇ ಹೋಗಿ ಅನುಕೂಲದ ಜಾಗ ನೋಡಿ ನೀರಿಗೆ ಹಾರಿ ಈಜಿ ಮೇಲೆ ಬಂದಿದ್ದ ಸುದ್ದಿಯ ಜೊತೆಗೆ. ಅಲ್ಲಿಯವರೆಗೆ ಸಲೀಸಾಗಿ ತಾಯಿ ಮಡಿಲಿನಂತೆ ಕಾಣುತ್ತಿದ್ದ ನೀರಿನ ರೌದ್ರಮುಖವನ್ನು ಅಂದು ಕಂಡೆವು. ಸೂಚನೆಯಿಲ್ಲದೆ ಪ್ರವಾಹ ಉಕ್ಕಿ ಬಂದು ಆದ ಒಂದೆರಡು ಅನಾಹುತಗಳೂ ನೀರಿನ ಹತ್ತಿರ ಹೋಗುವಾಗ ವಹಿಸಲೇಬೇಕಾದ ಎಚ್ಚರಿಕೆಯನ್ನು ಕಲಿಸಿಕೊಟ್ಟಿದ್ದವು.

ಮೊನ್ನೆ ನಮ್ಮೂರಿನ ಸೇತುವೆಯ ಮೇಲಿಂದ ಒಂದಿಷ್ಟು ಯುವಕರ ಗುಂಪು ನೀರಿಗೆ ಹಾರುತ್ತಿರುವ ವಿಡಿಯೋ ವೈರಲ್ ಆಗಿತ್ತು. ತಲೆ ಗಟ್ಟಿ ಇದೆಯೆಂದು ಬಂಡೆಗೆ ಚಚ್ಚಿಕೊಳ್ಳುವುದು ಎಷ್ಟು ಮೂರ್ಖತನವೋ ಇದು ಕೂಡ ಅಷ್ಟೇ ಹೆಡ್ಡು ಕೆಲಸ. ಈಜು ಗೊತ್ತಿದ್ದರೂ ಮಳೆಯ ಪ್ರವಾಹದ ವೇಗಕ್ಕೆ ಸಿಲುಕಿದರೆ ಮರಳಿ ಬರುವ ದಾರಿ ಸಿಕ್ಕದು. ಇಂತಹ ಹುಚ್ಚಾಟಗಳು ದುರಂತಗಳಾಗುವ ಪ್ರಮೇಯವೇ ಹೆಚ್ಚು. ಅರೆಬರೆ ಈಜು ಕಲಿತ ಮಕ್ಕಳು ಇಂತದ್ದನ್ನು ನೋಡಿ ಅನುಸರಿಸಹೊರಟರೆ ಆಗಬಹುದಾದ ಅನಾಹುತದ ಕಲ್ಪನೆ ಇದೆಯೇ ಇಂಥವರಿಗೆ…

ನದಿ, ಕೆರೆ, ಕೊಳ್ಳಗಳ ಬಳಿಯಿಂದಲೇ ಸಾಗುವ ಅನಿವಾರ್ಯತೆಯಿದ್ದಾಗ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ. ನೀರಿನ ಹರಿವಿನ ಅಂದಾಜು ಇಲ್ಲದಲ್ಲಿ ನಡೆದಾಡುವ ಯೋಚನೆ ಬಿಟ್ಟುಬಿಡಿ. ಹೊಸ ಜಾಗಗಳಿಗೆ ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳುವವರಾದರೆ ಅಲ್ಲಿನ ಸ್ಥಳೀಯರ ಮಾರ್ಗದರ್ಶನದಲ್ಲೇ ಸಾಗಿ.

ಈ ವರ್ಷ ಭರ್ಜರಿ ಮಳೆಯಾಗುತ್ತಿದೆ. ಹಳೆಯ ನೆನಪುಗಳ ತೆರೆಯುಕ್ಕಿಸುತ್ತಿದೆ. ಹೊಸ ಹುಟ್ಟನ್ನು ಲಾಲಿಸುವ ಹೊಣೆ ಹೊತ್ತ ನೀರು ನಮ್ಮನ್ನೂ ಪೊರೆಯಲಿ. ಮಳೆಯ ಜೊತೆಗೇ ಕನಸಿನಂತೇ ಕಾಣುವ ಬಾಲ್ಯ ಮತ್ತೊಮ್ಮೆ ಮೆರೆಯಲಿ.

(ಲೇಖಕರು ಸಾಹಿತಿ)