Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ನಾಳೆಗಳೂ ಹಸಿರಾದೀತೆಂಬ ಭರವಸೆಯ ಮೊಳಕೆ…

Thursday, 21.06.2018, 3:03 AM       No Comments

| ಅನಿತಾ ನರೇಶ್​ ಮಂಚಿ

ನಾನಾಗ ಸಣ್ಣ ತರಗತಿಯ ವಿದ್ಯಾರ್ಥಿನಿ. ಕೈಗೆ ಸಿಕ್ಕ ಪುಸ್ತಕಗಳೆಲ್ಲ ನನ್ನ ಓದಿನ ತುತ್ತುಗಳೇ. ರಜೆಯಲ್ಲಿ ಅಜ್ಜನ ಮನೆಗೆ ಹೋಗಿದ್ದಾಗ ಅಣ್ಣನ ಪಠ್ಯಪುಸ್ತಕಗಳನ್ನು ತಿರುವಿಹಾಕುವುದು ನನ್ನ ಮೆಚ್ಚಿನ ಕೆಲಸ. ವಿಜ್ಞಾನ ಪುಸ್ತಕವೊಂದರಲ್ಲಿ ಚಿಟ್ಟೆಯ ಜೀವನಚಕ್ರವನ್ನು ಚಿತ್ರಸಮೇತ ತೋರಿಸಿದ್ದರು. ಅಲ್ಲಿಯವರೆಗೆ ಕಂಬಳಿಹುಳು ಚಿಟ್ಟೆಯಾಗುವುದು ಎಂದು ಯಾರಾದರೂ ಪ್ರಮಾಣಮಾಡಿ ಹೇಳಿದ್ದರೂ ನಂಬುತ್ತಿರಲಿಲ್ಲ. ಆದರೆ ಪುಸ್ತಕದಲ್ಲೇ ಬರೆದಿದ್ದಾರೆ ಎಂದಮೇಲೆ ಸತ್ಯವಿರಲೇಬೇಕಲ್ಲ. ಅಲ್ಲಿಯವರೆಗೆ ಅಸಹ್ಯ ಹುಟ್ಟಿಸುತ್ತಿದ್ದ ಕಂಬಳಿಹುಳುಗಳು ಚೆಂದ ಕಾಣಲಿಕ್ಕೆ ಶುರುವಾದವು. ಕೋಕೋ ಗಿಡ, ಪೇರಳೆ ಮರದಲ್ಲೆಲ್ಲ ನೇತಾಡುತ್ತಿದ್ದ ಕಂಬಳಿಹುಳುಗಳು ಚಿಟ್ಟೆಯಾಗುವ ಕಾರಣಕ್ಕಾಗಿ ನಮ್ಮಿಂದ ಸಾಯಿಸಲ್ಪಡದೆ ಜೀವಂತವಾಗುಳಿದವು. ರಜೆ ಮುಗಿಸಿ ಬಂದೊಡನೆ ನನಗೆ ತಿಳಿದ ಈ ಸುದ್ದಿಯನ್ನು ಎಲ್ಲರಿಗೂ ಹಂಚತೊಡಗಿದೆ. ಅಚ್ಚರಿ ಅನ್ನಿಸಿದ್ದು ವಯಸ್ಸಿನಲ್ಲಿ ಹಿರಿಯರಾಗಿದ್ದ ಹಲವು ಮಂದಿಗೂ ಈ ವಿಚಾರ ಗೊತ್ತಿಲ್ಲದೆ ಇದ್ದುದು. ಒಬ್ಬ ಗೆಳತಿಯಂತೂ ‘ಅದು ಹೇಗೆ ಕಂಬಳಿಹುಳುವಿನ ಮೈಮೇಲಿದ್ದ ಕೂದಲೆಲ್ಲ ಸೇರಿ ರೆಕ್ಕೆಯಾಗುವುದು? ಹೇಗೆ ಅಂಟಿಸಿಕೊಳ್ಳುತ್ತೆ ಅದು? ಬಣ್ಣ ಹೇಗೆ ಹಾಕೋದು?’ ಅಂತೆಲ್ಲ ಜಗಳಕ್ಕೆ ಬಂದುಬಿಟ್ಟಿದ್ದಳು. ಆಗ ಉತ್ತರ ಗೊತ್ತಿಲ್ಲದಿದ್ದರೂ ಅದು ಕುತೂಹಲ ಬೆಳೆಸಿಕೊಳ್ಳುವುದಕ್ಕೆ ನಾಂದಿಯಾಯಿತು. ಜತೆಗೆ ಇದನ್ನು ನಿಜವೆಂದು ಒಪ್ಪಿಕೊಂಡ ಹಲವರು ನನ್ನ ಜಾಣತನಕ್ಕೆ ಹೊಗಳಿದ್ದು ಜಂಭದಕೋಡು ಮೂಡಿಸಿತ್ತು.

ಬೇಸಿಗೆಯ ಕೊನೆಯ ದಿನಗಳವು. ಅಜ್ಜನ ಮನೆಯಲ್ಲಿ ತೋಟದ ಮೂಲೆಯಲ್ಲಿದ್ದ ಕೆರೆಯ ನಡುವಿನ ಹೊಂಡದಲ್ಲಿ ಮಾತ್ರ ಒಂದಿಷ್ಟು ನೀರು. ತೋಟವೋ, ಹಾಕುತ್ತಿದ್ದ ಎಲ್ಲ ನೀರನ್ನೂ ಆಪೋಶನಗೈದು ಇನ್ನೂ ಹಾಕು ಎಂದು ಬೇಡುವ ಕಾಲವದು. ಪ್ರತಿವರ್ಷ ಆ ಸಮಯದಲ್ಲಿ ಕೆರೆಯ ಕೆಸರು ತೆಗೆಯುವ ಕೆಲಸವಿರುತ್ತಿತ್ತು. ಕೆಲಸದವರ ಜತೆಗೆ ನಾವು ಕೂಡಾ ಈ ಕೆಲಸಕ್ಕೆ ಸಹಾಯ ಮಾಡುವುದೆಂದು ನಮ್ಮಿಂದಾದಷ್ಟು ಮೈ ಕೈ ಕೆಸರು ಮಾಡಿಕೊಂಡು ಕೆಲಸ ಮಾಡಿದ್ದೇವೆಂದು ತೋರಿಸಿಕೊಳ್ಳುತ್ತಿದ್ದೆವು. ಕೆಲಸಗಾರರು ಒಂದಿಷ್ಟು ಬಿಡುವಿಗೆಂದು ಕುಳಿತಾಗ ನನ್ನ ಸಂಶೋಧಕ ಬುದ್ಧಿ ಎದ್ದುನಿಲ್ಲುತ್ತಿತ್ತು. ಕೆರೆಯ ಬದಿಯ ಗೋಡೆಯಲ್ಲೆಲ್ಲ ಪುಟ್ಟಪುಟ್ಟ ಪೊಟರೆಗಳು ಕಂಡು ಅದರೊಳಗೇನಿರಬಹುದು

ಎಂದು ಹುಡುಕಹೊರಟೆ. ಒಂದೆರಡು ಪೊಟರೆ ಖಾಲಿಯಾಗಿ ನಿರಾಸೆ ಮೂಡಿಸಿದರೂ ಸುಮ್ಮನಿರದೆ ಮುಂದುವರಿದೆ. ಇದ್ದುದರಲ್ಲೇ ದೊಡ್ಡ ಪೊಟರೆಯೊಂದಕ್ಕೆ ಕೈಹಾಕಿದೆ. ಕೈಗೆ ತಣ್ಣಗೆ ಏನೋ ತಗಲಿತು. ಫಕ್ಕನೆ ಕೈ ಹಿಂದೆ ತೆಗೆದೆ. ಮತ್ತೆ ಕುತೂಹಲ. ಕೈಯನ್ನು ಒಳತಳ್ಳಿ ಸಿಕ್ಕಿದ್ದನ್ನು ಬಲವಾಗಿ ಎಳೆದೆ. ಇನ್ನೂ ರೆಕ್ಕೆ ಮೂಡದ ಕೊಕ್ಕರೆಯ ಮರಿ. ಆಗಲೇ ಹತ್ತಿರ ಬಂದಿದ್ದ ಅಜ್ಜ ಬೆನ್ನಿಗೊಂದೇಟು ಹಾಕಿ ‘ಒಳಗೆ ಬಿಡದನ್ನು.. ಯಾವ ಕೆಲಸದವರಿಗಾದರೂ ಈ ಸುದ್ದಿ ಹೇಳಿದರೆ ಇನ್ನೆರಡು ಕೊಡ್ತೇನೆ ಬೆನ್ನಿಗೆ’ ಎಂದು ಬಯ್ದರು.

ನನ್ನ ಸಂಶೋಧನೆಗಾದ ಅವಮಾನವನ್ನು ತಡೆಯಲಾರದೆ ಮನೆಗೆ ನುಗ್ಗಿ ಸ್ನಾನಮಾಡಿ ಕೋಪದಿಂದ ಮುಸುಕೆಳೆದು ಮಲಗಿಬಿಟ್ಟಿದ್ದೆ. ಅಜ್ಜ ಮನೆಗೆ ಬಂದವರು ಮಾತನಾಡಿಸಲಿಲ್ಲ. ರಾತ್ರಿ ಊಟ ಮುಗಿಸಿ ಮಲಗುವಾಗ ಕತೆ ಹೇಳುವ ಸಮಯ. ಸಿಟ್ಟಿದ್ದರೂ ಕತೆಗಾಗಿ ಕಾಯುತ್ತಿದ್ದೆ. ಅಜ್ಜ ನನ್ನ ಹತ್ತಿರ ಬಂದು ‘ಆಗ ಬೈದದಕ್ಕೆ ಕೋಪವಾ?’ ಎಂದರು. ಮಾತಾಡಲಿಲ್ಲ. ‘ನೀನು ಹಾಗೆ ಕೈಹಾಕಿ ಎಳೆಯುವಾಗ ಹಕ್ಕಿಮರಿಯ ಬದಲು ಹಾವಿದ್ದಿದ್ದರೆ…?’ ಎಂದು ಅಜ್ಜ ಕೇಳಿ ಬೆನ್ನಹುರಿಯಲ್ಲಿ ಚಳಿ ಮೂಡಿಸಿದರು. ಜತೆಗೆ ‘ಮನುಷ್ಯರ ಸಂಪರ್ಕಕ್ಕೆ ಬಂದ ಮರಿಗಳನ್ನು ಕೆಲ ಪ್ರಾಣಿ-ಪಕ್ಷಿಗಳು ತೊರೆದುಬಿಡುತ್ತವೆ. ಆಗ ಆ ಮರಿ ಆಹಾರವಿಲ್ಲದೆ ಸಾಯುತ್ತಿತ್ತು. ಅದರಮ್ಮ ಅದನ್ನು ಗೂಡಿಂದ ಹೊರಹಾಕಿದರೆ ನೀನು ಅದಕ್ಕೆ ಆಹಾರ ಕೊಡ್ತೀಯಾ?’ ಎಂದರು. ಮಾತಿಲ್ಲದೆ ಕೂತಿದ್ದೆ. ‘ರಾತ್ರಿಯಿಡೀ, ‘ನಾನು ಮುಟ್ಟಿದ ಹಕ್ಕಿಮರಿಯನ್ನು ಅದರಮ್ಮ ಗೂಡಿಂದ ಹೊರ ನೂಕಿದರೆ?’ ಎಂಬ ಚಿಂತೆಯಾಗಿತ್ತು. ಮರುದಿನ ತೋಟಕ್ಕೆ ಹೋಗಿ ಅಲ್ಲೆಲ್ಲೂ ಹಕ್ಕಿಮರಿ ಬಿದ್ದುಕೊಂಡಿಲ್ಲವೆಂದು ಸಮಾಧಾನವಾಗಿತ್ತು. ಅಂದಿನಿಂದ ನೋಡುವುದೇನಿದ್ದರೂ ದೂರದಿಂದಲೇ ಎಂದು ನಿಶ್ಚಯಿಸಿದ್ದೆ. ಕಲಿಯುವುದು ಎಂದರೆ ಪರಿಸರವನ್ನು ಇದ್ದಂತೆ ನೋಡುತ್ತ ಕಲಿಯಬೇಕು; ನಮಗೆ ಬೇಕಾದಂತೆ ಮಾರ್ಪಡಿಸಿ ಅಲ್ಲ ಎಂಬ ಸೂಕ್ಷ್ಮವನ್ನವರು ಹೇಳಿಕೊಟ್ಟಿದ್ದರು.

ಕೆಲ ದಿನಗಳ ಮೊದಲು ನೋಡಿದ್ದು. ಬಸವನಹುಳು ಮತ್ತು ಟಿ ಹುಳದ ಹೋರಾಟ. ತನಗಿಂತ ದಪ್ಪವಿದ್ದ ಬಸವನಹುಳುವನ್ನು ಸುತ್ತುಹಾಕಿ ಅಲ್ಲಾಡದಂತೆ ಸುತ್ತುಹಾಕಿತ್ತದು. ಅವುಗಳನ್ನು ದೂರ ಮಾಡಬೇಕಾ ಬೇಡವಾ? ಅಗಲಕ್ಕೆ ಹರಡಿದ್ದ ಜೇಡನ ಬಲೆಯಲ್ಲಿ ಚಡಪಡಿಸುತ್ತಿದ್ದ ಹಾರುವ ಚಿಟ್ಟೆ… ಬಿಡಿಸಬೇಕಾ ಬೇಡವಾ? ಇರುವೆಗಳು ಹೊತ್ತೊಯ್ಯುತ್ತಿದ್ದ ಜೀವಂತ ಮಿಡತೆ… ಕೊಡವಬೇಕಾ ಬೇಡವಾ? ಎಂಬ ಸಣ್ಣದೊಂದು ದ್ವಂದ್ವವನ್ನು ಅಜ್ಜನ ಮಾತಿನ ನೆನಪು ಸುಮ್ಮನಿರಿಸಿತ್ತು. ಅದು ಅವು ಗಳಿಸಿದ ಆಹಾರ. ಕಿತ್ತುಕೊಂಡು ಯಾವುದನ್ನೋ ಉಳಿಸಿದೆ ಎಂಬ ಸಾರ್ಥಕ್ಯ ಪಡೆಯುವ ಭರದಲ್ಲಿ ಇನ್ಯಾವುದೋ ಹಸಿದವುಗಳ ಆಹಾರ ಕಿತ್ತಂತೆ ಆಗುವುದಿಲ್ಲವೇ? ಯಾವುದಕ್ಕೇ ಆಗಲಿ, ಶತ್ರುಗಳು ಕೂಡಾ ಅಗತ್ಯವೇ. ಯಾವುದೇ ಒಂದು ಜಾತಿಯ ಜೀವಿಯ ಸಂಖ್ಯೆ ಮಾತ್ರ ವೃದ್ಧಿಯಾಗುವುದೂ ಪರಿಸರಕ್ಕೆ ಮಾರಕವೇ. ಈಗ ಹೆಚ್ಚಿನ ಸಂಖ್ಯೆಯಲ್ಲಿರುವ ಮಾನವ, ಪರಿಸರವನ್ನು ಹಾಳುಗೆಡಹುವುದು ಕಣ್ಣಿಗೆ ಕಾಣುತ್ತಿದೆಯಲ್ಲ….

ಪರಿಸರದಲ್ಲಿ ಪ್ರಾಣಿ-ಪಕ್ಷಿಗಳು ಹೊಟ್ಟೆ ತುಂಬುವಷ್ಟೇ ಆಹಾರವನ್ನು ಬಳಸಿಕೊಳ್ಳುತ್ತವೆ. ನಮ್ಮಂತೆ ಮಕ್ಕಳು-ಮರಿಗೆಂದು ಸಂಗ್ರಹ ಮಾಡಿಡುವುದು ಕಡಿಮೆ. ಹಾಗಾಗಿ ಅವುಗಳ ದಿನದ ದುಡಿಮೆಯದು.

ಇಂಥದ್ದೇ ಬೇರೆ ರೀತಿಯ ಕಲಿಕೆ ಅಜ್ಜಿಯ ಒಡನಾಟದಿಂದಲೂ ಲಭಿಸಿತ್ತು. ಅಜ್ಜಿಯ ಜತೆ ತೋಟಕ್ಕೆ ಹೋಗುವುದು ಒಂದು ವಿಶಿಷ್ಟ ಅನುಭವ. ಪ್ರತಿಯೊಂದು ಗಿಡ-ಮರ, ಅದರ ಬೆಳವಣಿಗೆಯ ಕ್ರಮ, ಅದರ ಔಷಧೀಯ ಗುಣ ಎಲ್ಲವೂ ಅವರಿಗೆ ನಾಲಿಗೆ ತುದಿಯಲ್ಲೇ. ಹಟ್ಟಿಯಲ್ಲಿದ್ದ ಪುಟ್ಟಕರುವಿಗೆ ಪೂಂಬಾಳೆ ಹೆಕ್ಕುತ್ತ ಇರುವಾಗ ಅಜ್ಜಿ ಒಂದು ಗಿಡವನ್ನು ತೋರಿಸುತ್ತ ‘ಇದು ಹಾವು ಕಚ್ಚಿದರೆ ವಿಷ ತೆಗೆಯಲು ಬಳಸುವ ಗಿಡ’ ಎಂದು ಹೇಳುತ್ತ ‘ಇಲ್ಲಿ ಬರುವಾಗ ಜಾಗ್ರತೆಯಾಗಿ ಹೆಜ್ಜೆ ಹಾಕಬೇಕು, ಹಾವಿರಬಹುದು’ ಎಂದರು. ‘ಅದು ಹೇಗೆ ಹೇಳ್ತೀರಾ?’ ಎಂದು ಕೇಳಿದ್ದಕ್ಕೆ ‘ಇಲ್ಲಿ ಹಾವಿರುವುದಕ್ಕೆ ಈ ಗಿಡವೂ ಇದೆ… ಭೂಮಿತಾಯಿ ವಿಷ ಇರುವಲ್ಲಿಯೇ ಪ್ರತಿವಿಷವನ್ನು ಇಟ್ಟಿರುತ್ತಾಳೆ. ನಾವು ಸೂಕ್ಷ್ಮವಾಗಿ ಗಮನಿಸಿದರೆ ಕಾಯಿಲೆ ಇರುವಲ್ಲೇ ಔಷಧವೂ ದೊರೆಯುತ್ತದೆ’ ಎಂದಿದ್ದರು.

ಹೀಗೆ ಪರಿಸರದ ಒಂದು ಭಾಗವೇ ಆಗಿ ಬದುಕುತ್ತಿದ್ದವರು ಅವರು. ಇಂತಹ ಗಿಡಗಳ ಗುರುತಿಸುವಿಕೆ ನಮಗೆ ಬಹಳ ಉಪಯುಕ್ತ. ಮೊನ್ನೆ ಮಂಗಳೂರಿನಿಂದ ಗೆಳತಿಯರಾದ ಡಾ. ಮೀರಾ ಮತ್ತು ನಯನಾ ಬಂದಿದ್ದರು. ನಮ್ಮಲ್ಲಿಂದ ಒಂದಷ್ಟು ಗಿಡ ಒಟ್ಟುಮಾಡಿ ತೆಗೆದುಕೊಂಡ ಅವರು ಹೊರಡುವಾಗ ಅಗಸೆ ಕೋಡು, ನಾಗಸಂಪಿಗೆಯ ಬೀಜ ಕೈಯಲ್ಲಿಟ್ಟರು. ದಾರಿಯಲ್ಲೆಲ್ಲಾದರೂ ಪ್ರಶಸ್ತ ಜಾಗ ಕಂಡಲ್ಲಿ ಬೀಜವೂರುವುದನ್ನೂ ಮಾಡುವ ಅವರು ಮತ್ತು ಅವರಂತಹ ಹಲವರು ಸದ್ದಿಲ್ಲದೆ ಪರಿಸರಕ್ಕಾಗಿ ಮಾಡುವ ಸೇವೆ ಅನನ್ಯ.

ನಾನೂ ನೀವೂ ಇದನ್ನು ಮಾಡಬಹುದು. ಮಳೆಯ ಮೊದಲ ದಿನಗಳಾದ ಈಗ ಕಾಡಿನ ಗಿಡಗಳ ಬೀಜವನ್ನು ಕಾಡಿನ ಮಣ್ಣಿಗೆ ಸೇರಿಸುವ ಕೆಲಸ. ಚಂದಳಿಗೆ, ಅಶೋಕ, ತೇಗ, ನಾಗಸಂಪಿಗೆ, ಮಾವು, ಹಲಸು, ಮಹಾಗನಿಯಂತಹ ಬೀಜ ಬಿಡುವ ಮರಗಳ ಬೀಜಗಳನ್ನು ಖಾಲಿಜಾಗದಲ್ಲಿ ಊರಿಬಿಡುವುದು. ಮಳೆಗಾಲ ಮುಗಿಯುವಾಗ ಬೇರೂರಿ ಗಟ್ಟಿಯಾಗುವ ಗಿಡಗಳು ಹೆಚ್ಚುವರಿ ನೀರನ್ನು ಬೇಡವು. ಭೂಮಿಯಾಳಕ್ಕೆ ಬೇರನ್ನಿಳಿಸಿ ತಮ್ಮ ಅವಶ್ಯಕತೆ ಪೂರೈಸಿಕೊಳ್ಳಲು ಶಕ್ತವಾಗುವುವು. ಮೂರ್ಖತನ. ಸಾಧ್ಯವಾದಷ್ಟೂ, ಕಡಿಮೆ ಮರಗಳಿರುವ ಬೋಳಾಗುತ್ತಿರುವ ಕಾಡುಗುಡ್ಡಗಳ ಒಳಹೋಗಿ ಬೀಜಗಳನ್ನು ಮಣ್ಣಿಗೆ ಊರುವುದು ಒಳಿತು.

ಮತ್ತೆ ಮಳೆ ಹೊಯ್ಯುತ್ತಿದೆ. ನೆಂದ ಭೂತಾಯಿಯ ಮಡಿಲು ಮರಗಿಡಗಳನ್ನು ಆಲಿಂಗಿಸಲು ಸಿದ್ಧವಾಗಿದೆ. ಮಮತಾ ಅರಸೀಕೆರೆಯಂತಹ ಗೆಳತಿಯರು ಗಿಡ ನೆಡುವ ತಮ್ಮ ಅನುಭವಗಳನ್ನು ಹಂಚಿಕೊಂಡು ಇನ್ನಷ್ಟು ಜನರು ಪ್ರೇರೇಪಿತರಾಗುವಂತೆ ಮಾಡುವುದು ಖುಷಿ ಕೊಡುವ ವಿಚಾರ.

ನಮ್ಮಲ್ಲೀಗ ಮೀರಾ ಕೊಟ್ಟ ನಾಗಸಂಪಿಗೆಯ ಬೀಜ ಮಣ್ಣಿನೊಳಗೆ ಸೇರಿದೆ. ಅಗಸೆ ಮೊಳಕೆಯೊಡೆದಿದೆ. ಪುಟ್ಟ ಕೊಂದೆ (ಗೋಲ್ಡನ್ ಶವರ್) ಗಿಡವೊಂದು ನನ್ನನ್ನು ‘ಬಿಸಿಲು ತುಂಬ ಬೀಳುವಲ್ಲಿ ನೆಡು; ತುಂಬ ಹೂ ಬಿಟ್ಟೇನು’ ಎನ್ನುತ್ತಿದೆ. ಇದರಿಂದಾಗಿ ನಮ್ಮ ಮಕ್ಕಳ ನಾಳೆಗಳೂ ಹಸಿರಾದೀತೆಂಬ ಭರವಸೆಯೂ ಮೊಳಕೆಯೊಡೆಯುತ್ತಿದೆ.

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top