Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಈ ಪ್ರಾಣಿ-ಪಕ್ಷಿಗಳಿಗೆ ಯಾರು ಕೊಡ್ತಾರೆ ವೆದರ್ ರಿಪೋರ್ಟು…

Thursday, 10.05.2018, 3:04 AM       No Comments

ಸಿಕ್ಕಾಪಟ್ಟೆ ಸೆಖೆ.. ಈ ಮೇ ತಿಂಗಳು ಇನ್ನೇನು ಮಂಜು ಸುರಿಯುತ್ತದೆಯೇ ಎಂದುಕೊಂಡರೂ ತಡೆಯಲಾಗದಂತಹ ಬೇಗೆ ಎದ್ದಾಗ ಆಕಾಶದ ಕಡೆ ನೋಡೋದು.. ಮುಗಿಲುಗಳನ್ನು ಕೂಡೋದು ಕಳೆಯೋದು, ಗಾಳಿಯನ್ನು ಗುಣಿಸೋದು ಭಾಗಿಸೋದು.. ನಮ್ಮಲ್ಲಿಗಿವತ್ತು ಗ್ಯಾರಂಟಿ ಮಳೆ ಬರುತ್ತದೆ ಅಂತ ಕಾಯೋದು. ಸಂಜೆಯ ಹೊತ್ತಾದ್ರೆ ಮನೆಯೊಳಗಿದ್ದ ಕುರ್ಚಿಯನ್ನು ಅಂಗಳಕ್ಕೆ ಹೊತ್ತೊಯ್ದು ಅಲ್ಲಿ ಕುಳಿತುಕೊಂಡು ಆಗಸವನ್ನು ಗಮನಿಸುವುದು ನಮ್ಮ ಇಷ್ಟದ ಕೆಲಸ. ಒಮ್ಮೊಮ್ಮೆ ಕಣ್ಣು ಹಾಯಿಸಿದಷ್ಟು ಅಗಲಕ್ಕೂ ಕಾಣುವ ನಕ್ಷತ್ರಗಳ ರಾಶಿ ಆಕರ್ಷಿಸಿದರೆ ಇನ್ನೊಮ್ಮೆ ಅದನ್ನು ಮರೆಮಾಚುವಂತೆ ಬರುವ ಮೋಡ. ಮೋಡ ಕಪ್ಪಾದಷ್ಟು ಒಳಗೊಳಗೆ ಸಂತಸ. ಮನೆಯೊಳಗೆ ಕುಳಿತವರನ್ನು ಹೊರಗೆಳೆದು ‘ನೋಡಲ್ಲಿ ಆ ದಿಕ್ಕಲ್ಲಿ ಕಪ್ಪಾದರೆ ಮಳೆ ನಮಗೇ ಗ್ಯಾರಂಟಿ’ ಎಂದೆಲ್ಲ ಬೊಗಳೆ ಬಿಟ್ಟು ಕಾಯುವಾಗ ಇನ್ನೆಲ್ಲೋ ಮಳೆ ಬರುತ್ತಿದೆ ಎಂದು ವಾಟ್ಸಾಪಿನ ಮೆಸೇಜು ಬಿದ್ದು ನಮ್ಮೂರಿಗೆ ಬರುವ ಮಳೆಯನ್ನು ಕಿತ್ತೊಯ್ದವರನ್ನು ಹಳಿದು ಮತ್ತೆ ಆಗಸಕ್ಕೆ ಮುಖ ಮಾಡಿ ಉಳಿದ ಮೋಡದಲ್ಲಿ ನಮ್ಮ ಮಂಡೆ ಮೇಲೆಷ್ಟು ಬೀಳಬಹುದು ಎಂದು ನೋಡುತ್ತಿರುವುದು.. ಇದೊಂದು ಆಟದಂತೆ ಅಥವಾ ಪಾಠದಂತೆ. ನಾವು ನಾವೇ ಪ್ರಕೃತಿಯನ್ನು ಅರಿಯುವ ಪುಟ್ಟ ಪ್ರಯತ್ನ ಮಾಡುವುದು.

ನಮಗೇನೋ ವೆದರ್ ರಿಪೋರ್ಟುಗಳು ಇಂಟರ್​ನೆಟ್ಟಿನಲ್ಲಿ ಸುಲಭವಾಗಿ ಸಿಗುತ್ತವೆ. ಅದರ ಆಧಾರದ ಮೇಲೆ ಕೊಂಚವಾದರೂ ಊಹಿಸಬಹುದೇನೋ. ಆದರೆ ಓದಲು ಬರೆಯಲು ಬರದವರಿಗೆ? ನಾನಿಲ್ಲಿ ಮನುಷ್ಯರ ಮಾತು ಹೇಳುತ್ತಿಲ್ಲ. ಓದಲು ಬರೆಯಲು ಬಾರದ ಗಿಡಮರ, ಪ್ರಾಣಿ-ಪಕ್ಷಿಗಳಿಗೆ ಯಾರು ಹೇಳುತ್ತಾರೆ ಇಂತಹ ಮುನ್ಸೂಚನೆ ಎಂಬ ಅಚ್ಚರಿ.

ಮೊನ್ನೆಯಿನ್ನೂ ಕಣ್ಣುಗಳಿಂದ ನಿದ್ರೆ ಹರಿದಿರಲಿಲ್ಲ. ಮಲಗಿದಲ್ಲೇ ಕೇಳಿದ್ದು ಹೊರಗಿನಿಂದ ಜೋರಾದ ಸದ್ದು. ಕಣ್ಬಿಟ್ಟೆದ್ದು ಸದ್ದಿನ ಹಿಂದೆ ಬಿದ್ದೆ. ತೋಟದ ಮೂಲೆಯಿಂದ ಕೇಳಿಬರುತ್ತಿತ್ತು. ಅಡಿಕೆ ಗಿಡಗಳನ್ನು ಸುತ್ತುವರಿದ ಹಸಿರು ಹುಲ್ಲಿನ ರಾಶಿ ಕಣ್ಣಿಗೆಲ್ಲವನ್ನೂ ಮರೆ ಮಾಡುವಂತಿತ್ತು. ಅದರಾಚೆ ಏನಿದೆ ಎಂಬುದರ ಸ್ಪಷ್ಟತೆ ಇದ್ದರೂ ಕಣ್ಣಿಗಿನ್ನೂ ಬೀಳದ ಅದರ ಮೇಲೆ ಕೋಪ. ನಿತ್ಯಕಾಯಕಗಳು ನನ್ನನ್ನೆತ್ತೊಯ್ದು ಮನೆಯೊಳಗೆ ಬಿಟ್ಟವು. ಕಿವಿ ಮಾತ್ರ ಆ ಸದ್ದು ಎಲ್ಲಿಂದ ಎಂದೇ ಆಲಿಸುತ್ತಿತ್ತು. ಚಟ್ನಿಗೆ ಒಗ್ಗರಣೆ ಹಾಕಲು ಕರಿಬೇವಿನಸೊಪ್ಪು ತರಲು ಹಿತ್ತಲಿನ ಕಡೆ ಹೆಜ್ಜೆ ಹಾಕುವಾಗ ಕಣ್ಣೊಮ್ಮೆ ಮನೆಯೆದುರಿನ ಅಂಗಳದತ್ತಲೂ ಹಾಯಿತು. ನನ್ನ ಕಣ್ಣುಗಳನ್ನು ನಾನೇ ನಂಬದ ಸ್ಥಿತಿ. ಮನೆಗೆ ಬರುವ ಮಣ್ಣಿನ ಹಾದಿಯಲ್ಲಿ ಯಾರೋ ಕಲಾಕಾರ ಚಿತ್ರಿಸಿ ಕೂರಿಸಿದ ಸ್ತಬ್ಧಚಿತ್ರದಂತೆ ಕುಳಿತಿತ್ತು ನವಿಲು. ಎದುರಿನ ಆಗಸದ ಕಪ್ಪು ಮೋಡ ಅದನ್ನು ಕಾಯುವಂತೆ ಮಾಡಿತ್ತೇನೋ.

ಇನ್ನೇನು ಹನಿ ಬೀಳಲಿ ನಾನು ಕುಣಿಯಲು ಸಿದ್ಧ ಎನ್ನುವಂತಿತ್ತು ಅದು ಕುಳಿತ ಭಂಗಿ. ಆ ದಿನ ಭೂಮಿ ಇನ್ನಷ್ಟು ಕಾದು ಸಂಜೆಯ ಹೊತ್ತಿಗೆ ಗುಡುಗು-ಮಿಂಚು ಸಹಿತದ ಭರ್ಜರಿ ಮಳೆ. ಮನೆಯ ಮೇಲಿನ ಗುಡ್ಡದಲ್ಲಿ ನವಿಲಿನ ಕೂಗು. ಕುಣಿಯುತ್ತಿತ್ತೇನೋ.

ಮನೆಯಲ್ಲಿ ಪುಟ್ಟದೊಂದು ಸಮಾರಂಭವಿತ್ತು. ಅಡುಗೆಯವರು ಬಂದಿದ್ದರು. ಮರುದಿನದ ಅಡುಗೆಯ ಒಂದಷ್ಟು ಸಿದ್ಧತೆಗಳನ್ನು ಮಾಡಿ, ‘ಹೋಳಿಗೆ ಮನೆಯಲ್ಲೇ ಮಾಡಿ ತರುತ್ತೇವೆ. ಮಳೆ ಬರ್ತದೇನೋ, ನೋಡಿ ಅಲ್ಲಿ (ಗೆದ್ದಲು) ಒರಳೆ ಹಾತೆಗಳು ಕಾಣ್ತಾ ಉಂಟು. ಬೇಗ ಹೋಗ್ತೇವೆ’ ಎಂದು ಹೋದರು. ಇವತ್ತೆಲ್ಲಿಂದ ಮಳೆ.. ಸೆಖೆ ಉಂಟು ಆದ್ರೆ ಮೋಡ ಎಂತದೂ ಕಾಣುವುದಿಲ್ಲ ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ಒರಳೆ ಹಾತೆಗಳು ಒಂದೆರಡಿದ್ದದ್ದು ಹತ್ತಾಗಿ ನೂರಾಗಿ ಸಾವಿರಾರು ಎದ್ದು ಬಂದವು. ಬೆಳಕಿನ ಮೂಲ ಕಂಡಲ್ಲೆಲ್ಲ ಸುತ್ತುವರಿದು ಹಾರಿದವು. ಒಂದು ಗಂಟೆಗಳ ಕಾಲ ಅವುಗಳ ಹಾರಾಟ ನಡೆದೇ ಇತ್ತು. ರೆಕ್ಕೆ ಕಳೆದುಕೊಂಡು ತೆವಳುವ ಹುಳಗಳು ಹಲ್ಲಿಗಳ ಆಹಾರವಾದವು. ಎಷ್ಟು ಹೊತ್ತು ನೋಡುವುದದನ್ನು ಎಂದು ಅಂಗಳಕ್ಕಿಳಿದರೆ ಟಪ್ ಟಪ್ ಎಂದು ಮಳೆ ಹನಿ ಬೀಳತೊಡಗಿತು. ನೆಲದಡಿಯಲ್ಲಿ ಅಡಗಿದ್ದ ಈ ಒರಳೆಗಳಿಗೆ ಯಾರು ಮಳೆಯ ಮುನ್ಸೂಚನೆ ಕೊಟ್ಟದ್ದು?

ಆತ್ಮೀಯರ ಮನೆಗೆ ಹೋಗಿದ್ದೆವು. ಅದಿನ್ನೂ ಫೆಬ್ರವರಿಯ ಕೊನೆ. ಅವರ ಮನೆಯೆದುರು ಒಂದು ಚೆಂದದ ಮರವಿತ್ತು. ಮರವಿಡೀ ಬೆಳಕಿನ ಗೊಂಚಲನ್ನು ಇಳಿಬಿಟ್ಟಂತಹ ಹಳದಿ ಬಣ್ಣದ ಹೂಗೊಂಚಲು. ಕನ್ನಡದಲ್ಲಿ ಕಕ್ಕೆ ಅಥವಾ ಕೊಂದೆ-ಇಂಗ್ಲಿಷಿನಲ್ಲಿ ಗೋಲ್ಡನ್ ಶವರ್ ಟ್ರೀ (cassia fistula) ಎನ್ನುವ ಹೆಸರು ಹೊತ್ತ ಮರವಿದು. ಹೂ ಹೊತ್ತ ಈ ಮರವನ್ನು ನೋಡುವುದೇ ಭಾಗ್ಯ. ಅದನ್ನು ನೋಡುತ್ತ ಅದರ ಬೀಜದಿಂದ ಗಿಡ ಹುಟ್ಟುತ್ತಾ, ಗೆಲ್ಲು ನೆಡಬೇಕಾ ಎಂದೆಲ್ಲ ವಿಚಾರಿಸುತ್ತ ಇರುವಾಗ ಅವರು ಒಂದು ಕುತೂಹಲಕರ ವಿಷಯ ಹೇಳಿದರು. ಈ ಮರ ಹೂಬಿಟ್ಟ ಒಂದು ತಿಂಗಳ ಆಸುಪಾಸಿನಲ್ಲಿ ಮಳೆ ಗ್ಯಾರಂಟಿ… ನನಗೆ ಅಚ್ಚರಿ. ಮಳೆಯ ಮುನ್ಸೂಚನೆ ಕೊಡುವ ಗಿಡ-ಮರಗಳೂ ಇದ್ದಾವಾ? ಮೊದಲ ಮಳೆಗೆ ಮಣ್ಣಿಂದೆದ್ದು ಹೂಬಿಟ್ಟು ನಸುನಗುವ ಹಲವಾರು ಗಿಡಗಳು ಗೊತ್ತಿದ್ದವು. ಆದರೆ ಮಳೆಯ ಭವಿಷ್ಯ ಹೇಳುವ ಮರದ ಬಗ್ಗೆ ತಿಳಿದಿರಲಿಲ್ಲ. ಅವರ ಮನೆಗೆ ಹೋದ ದಿನವನ್ನು ನೆನಪಿಟ್ಟುಕೊಂಡು ಕಾಯ್ತಾ ಇದ್ದೆ. ಆ ಸಲ ಮಾರ್ಚಿನ ಕೊನೆಗೆ ಮೊದಲ ಮಳೆ ಬಿದ್ದಿತ್ತು. ಈಗಂತೂ ನನ್ನ ಕಣ್ಣುಗಳು ಮನೆಯಿಂದ ಹೊರ ಹೋಗುವಾಗ ಆ ಮರಗಳು ಕಂಡರೆ ಹೂ ಮೊಗ್ಗಾಗಿದೆಯಾ ಹೂ ಬಿಟ್ಟಿದೆಯಾ ಎಂದೆಲ್ಲ ಹುಡುಕಲು ತೊಡಗುತ್ತವೆ. ನಾನೂ ಒಂದಿಷ್ಟು ವೆದರ್ ರಿಪೋರ್ಟರ್ ಅನ್ನಿಸಿಕೊಳ್ಳಬೇಕಲ್ವ..

ಆಗಸದಲ್ಲಿ ತೆಳುಮೋಡಗಳಿದ್ದವು. ಮನೆಯ ಅಂಗಳದ ಮೇಲಿಂದ ಹಾದು ಹೋಗುವ ವಿದ್ಯುತ್ ತಂತಿಗಳಲ್ಲಿ ನೊಣ ಹಿಡುಕ ಹಕ್ಕಿಗಳು ಸಾಲಾಗಿ ಕಾದು ಕುಳಿತಿದ್ದವು. ಇವತ್ತು ಏನು ಇವರ ಫಂಕ್ಷನ್ ಉಂಟಾ ಎಂದುಕೊಳ್ಳುತ್ತ ಮುಂದೇನಾಗಬಹುದು ಎಂದು ಕಾದೆ. ಇದ್ದಕ್ಕಿದ್ದಂತೆ ಡ್ರಾಗನ್ ಫ್ಲೈಗಳು(ದುಂಬಿ) ಆಗಸದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಈಗ ಕುಳಿತ ಹಕ್ಕಿಗಳು ಆಗಸದಲ್ಲಿ ಹಾರಾಟ ಪ್ರಾರಂಭಿಸಿ ಬೇಟೆಗೆ ಶುರು ಮಾಡಿದವು. ಡ್ರಾಗನ್ ಫ್ಲೈಗಳ ಸಂಖ್ಯೆ ಹೆಚ್ಚಿತು. ಹಕ್ಕಿಗಳ ಬಾಯಿಗೆ ಸಿಗದೇ ಉಳಿದವು ಒಂದಿಷ್ಟು ಹೊತ್ತು ಆಗಸದಲ್ಲೇ ಸುತ್ತು ಹೊಡೆಯುತ್ತಿದ್ದು ನಂತರ ನೆಲಮಟ್ಟದಿಂದ ಒಂದೆರಡು ಅಡಿಗಳ ಅಂತರದಲ್ಲೇ ಹಾರತೊಡಗಿದವು. ‘ಅಡಿಕೆಗೆ ಮುಚ್ಚಬೇಕಾ.. ಇವತ್ತು ಮಳೆ ಬರ್ತದೆ..’ ತೋಟದ ಕೆಲಸಗಾರ ಹೇಳಿದ್ದು ಕೇಳಿಸಿತು. ‘ಈ ದುಂಬಿಗಳು ಎತ್ತರದಲ್ಲಿ ಹಾರುತ್ತ ಇದ್ದರೆ ಮಳೆ ಬರಲೂಬಹುದು ಬಾರದೆಯೂ ಇರಬಹುದು, ಆದರೆ ನೆಲಮಟ್ಟಕ್ಕೆ ಸಮೀಪವಾಗಿ ಹಾರಿದ ದಿನ ಮಳೆ ಖಂಡಿತ’ ಎಂದದ್ದು ಅವನ ಹಲವು ವರ್ಷಗಳ ಅನುಭವದ ಮಾತು. ಆದರೆ ಕಡಿಮೆ ಆಯಸ್ಸು ಹೊಂದಿದ ಈ ದುಂಬಿಗಳಿಗಾರು ಹೇಳಿದರು ಮಳೆಯ ಸೂಚನೆಯನ್ನು…! ಹಕ್ಕಿಗಳಿಗೆ ಮೊದಲೇ ಯಾರು ಕರೆ ಕಳಿಸಿದ್ದರು ಔತಣಕ್ಕೆ ಬನ್ನಿ ಎಂದು..!

ಇನ್ನು ನಮ್ಮ ಮನೆಯ ಸುತ್ತಮುತ್ತ ಇರುವ ಕಪ್ಪೆಗಳ ಸಂಕುಲ ‘ವಟರ್ ವಟರ್’ ಎಂದು ಸಂಗೀತ ಕಛೇರಿ ಶುರು ಮಾಡಿದರೆ ಇಂದು ಮಳೆ ಖಂಡಿತ ಎಂದು ಹಿರಿಕಿರಿಯರೆಲ್ಲರೂ ಹೇಳುವ ಮಾತು. ನಾವು ಸಣ್ಣವರಿರುವಾಗ ಕಪ್ಪೆಗಳೇ ಮಳೆಯನ್ನು ಬರಿಸುವ ಪ್ರಾಣಿಗಳು, ಇವಿಲ್ಲದಿದ್ದರೆ ಮಳೆ ಬಾರದು ಎಂದುಕೊಂಡಿದ್ದೆವು. ಯಾರಾದರೂ ಕಪ್ಪೆಗಳನ್ನು ಸಾಯಿಸಲು ಹೊರಟರೆ ಕಪ್ಪೆ ಕೊಂದರೆ ಮಳೆ ಬರೋದಿಲ್ಲ ಎಂದು ಅವರನ್ನು ತಡೆದುಬಿಡುತ್ತಿದ್ದೆವು. ಪ್ರಾಣಿಹಿಂಸೆ ಮಾಡಬಾರದು ಎಂಬ ಕಾರಣಕ್ಕೆ ಇದನ್ನು ಹೇಳುತ್ತಿದ್ದರೂ, ಪರಿಸರದ ಸಮತೋಲನಕ್ಕೆ ಗಿಡ-ಮರ ಪ್ರಾಣಿ, ಪಕ್ಷಿ, ಕೀಟಗಳು ಎಲ್ಲವೂ ಅಗತ್ಯ. ನಮಗೆ ತೊಂದರೆ ಎಂದು ಕಾಣುವ ಗೆದ್ದಲಗೂಡು ಮೇಲೆ ಕಾಣುವುದರಿಂದ ಹೆಚ್ಚು ಭೂಮಿಯಾಳದಲ್ಲಿ ಇರುವ ಕಾರಣ ಮಳೆಗಾಲದಲ್ಲಿ ತನ್ನೊಳಗೆ ಬಿದ್ದ ನೀರನ್ನು ನೆಲದಾಳಕ್ಕಿಳಿಸಿ ಅಂತರ್ಜಲದ ಮಟ್ಟ ಹೆಚ್ಚಿಸುತ್ತದೆ. ಇಂತಹ ಸೂಕ್ಷ್ಮಗಳು ಪ್ರಕೃತಿಗೆ ಗೊತ್ತಿದೆ.

ಮನೆಯ ಹಿಂದಿನ ಭಾಗದಲ್ಲಿ ಯಾರೋ ಪಿಸುಗುಟ್ಟಿದಂತಹ ಶಬ್ದ. ಪುಟ್ಟ ಹಕ್ಕಿಯೊಂದು ಮಾಡಿನಡಿಯಲ್ಲಿ ಗೂಡು ಕಟ್ಟುವ ಸಿದ್ಧತೆ ನಡೆಸಿತ್ತು. ಆ ಹಕ್ಕಿಗಳ ಗೂಡು ಅಡಿಕೆ ಮರದ ಮೇಲ್ಭಾಗದಲ್ಲಿದ್ದುದನ್ನು ಕಂಡಿದ್ದೆ. ಅವುಗಳಿಗೆ ಮಳೆಯ ಮುನ್ಸೂಚನೆ ದೊರಕಿತ್ತೇನೋ.. ಎರಡು ದಿನದಲ್ಲಿ ಅವುಗಳು ನಮ್ಮನೆಯ ಹಿಂದಿನ ಭಾಗಕ್ಕೆ ಮನೆ ಶಿಫ್ಟ್ ಮಾಡಿದ್ದೇ ಮಾಡಿದ್ದು, ಮತ್ತೊಂದು ವಾರದಲ್ಲಿ ಬಂದಿತ್ತು ಮಳೆ. ಕಪ್ಪು ಇರುವೆಗಳ ದಂಡು ಸಿಕ್ಕ ಸಿಕ್ಕಲ್ಲೆಲ್ಲ ಎದ್ದು ಕಾಲಿಟ್ಟಲ್ಲೆಲ್ಲ ಕಡಿಯುತ್ತಿತ್ತು. ಇವುಗಳಿಗೆಂತ ಹೀಗೆ ಏಳುವ ರೋಗ ಎಂದು ಗೊಣಗಿಕೊಳ್ಳುತ್ತ ಹೋದರೆ, ಆ ದಿನ ಬಿದ್ದ ಮಳೆ ಅದಕ್ಕೆ ಕಾರಣ ಕೊಟ್ಟಿತ್ತು.

ಪ್ರಕೃತಿ ಮೊದಲೇ ತಿಳಿಸುತ್ತದೆ-ಏನೆಲ್ಲ ಆಗಬಹುದು ಎಂಬುದರ ಮುನ್ಸೂಚನೆಗಳನ್ನು ಮತ್ತು ಏನೇನು ತಯಾರಿ ಮಾಡಿಕೊಳ್ಳಬೇಕು ಎಂಬ ಮುನ್ನೆಚ್ಚರಿಕೆಯನ್ನು.. ನಾವು ಕೂಡ ಒಂದಿಷ್ಟು ತಯಾರಿ ಮಾಡುವ ಕುರಿತು ಯೋಚಿಸಬಹುದೇನೋ. ಮಳೆ ನೀರ ಕೊಯ್ಲು, ಒಂದಿಷ್ಟು ಹಣ್ಣಿನ ಬೀಜಗಳನ್ನು ಸಂಗ್ರಹ ಮಾಡಿಡುವುದು, ಮಳೆ ಬಿದ್ದ ನಂತರ ಬಿತ್ತಲು. ನೀರುಳಿಸುವ ಮತ್ತು ಭೂಮಿಗೆ ನೀರಿಳಿಸುವ ಕುರಿತು ನಮ್ಮ ಕೈಲಾದ ಯೋಚನೆಗಳನ್ನು, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಬಗೆಗಿನ ಆಲೋಚನೆ. ಇದಕ್ಕೆ ದೊಡ್ಡ ದೊಡ್ಡ ಕೆಲಸವೇನೂ ಬೇಡ. ಬರಡಾಗಿದ್ದ ಜಾಗದಲ್ಲಿ ನೀರು ಹಿಡಿದಿಟ್ಟುಕೊಳ್ಳುವಂತಹ ಬೇರುಗಳನ್ನು ಹೊಂದಿದ ಹುಲ್ಲಿನ ಬೀಜಗಳನ್ನು ಬಿತ್ತಿದರೂ ಸಾಕು. ಭೂಮಿ ತನ್ನ ಕೆಲಸ ತಾನು ಮಾಡಿಕೊಳ್ಳುತ್ತದೆ.

ಒಂದಿಷ್ಟು ಇದರ ಕುರಿತು ಯೋಚಿಸೋಣ, ಯೋಜಿಸೋಣ, ನಡೆಸೋಣ… ಭೂಮಿ ಹಸನಾಗಿಸೋಣ.

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top