ಭಾಲ್ಕಿ: ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಸಾಗರ್ ಈಶ್ವರ ಖಂಡ್ರೆ ಭರವಸೆ ನೀಡಿದರು.
ಪಟ್ಟಣದ ಬಾಲಾಜಿ ಮಂದಿರದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘದ ೧೪ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ವರ್ಷಗಳಿಂದ ಇಲ್ಲಿಯ ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರು ಸಂಘಟನೆಯ ಮೂಲಕ ಆರ್ಥಿಕ ಸದೃಢತೆಗಾಗಿ ಸಹಕಾರ ಸಂಘ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಾನೂ ಕೂಡ ಒಂದು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ನನಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಭಾಗದ ಶಿಕ್ಷಕರ ಎಲ್ಲ ್ಲ ಸಮಸ್ಯೆಗಳಿಗೂ ಸ್ಪಂದಿಸುವ ಕಾರ್ಯ ಮಾಡುವೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಕಟ್ಟಿಮನಿ ಹಿರೇಮಠ ಸಂಸ್ಥಾನ ಮೇಹಕರನ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಸಂಘಟನೆಯಲ್ಲಿ ಶಕ್ತಿಯಿದೆ. ಶಿಕ್ಷಕರೆಲ್ಲರೂ ಸಂಘಟಿತರಾಗಿ ಸಹಕಾರ ಸಂಘ ನಡೆಸುತ್ತಿರುವುದರಿಂದ ಈ ಭಾಗದ ಎಲ್ಲ ಶಿಕ್ಷಕರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ನಿರಾತಂಕವಾಗಿ ಬಗೆಹರಿಯುತ್ತಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ವಿಶ್ವನಾಥ ವಾಡೆ ವಾರ್ಷಿಕ ವರದಿ ಮಂಡಿಸಿದರು. ಕಾರ್ಯದರ್ಶಿ ನಾಗಭೂಷಣ ಮಾಮಡಿ ಪ್ರಗತಿ ವರದಿ ಓದಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ, ಬಿಇಒ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಫುಲಾರಿ, ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಸಂಘದ ಉಪಾಧ್ಯ ಭಗವಾನ ವಲಾಂಡೆ, ಶರಣಪ್ಪ ರಾಚೋಟೆ,ಷಡಕ್ಷರಿ ಶಿವಲಿಂಗಯ್ಯಾ ಹಿರೇಮಠ, ಬಾಬುರಾವ ಕಾರಬಾರಿ, ವೀರಶೆಟ್ಟಿ ಇಟಗೆ, ಸೋಮನಾಥ ಮುದ್ದಾ ಇದ್ದರು. ರಮೇಶ ಮಾನಶೆಟ್ಟೆ ಸ್ವಾಗತಗೀತೆ ಹಾಡಿದರು. ಪ್ರಭು ಡಿಗ್ಗೆ ಸ್ವಾಗತಿಸಿದರು. ಬಸವರಾಜ ರಂಜೇರೆ ನಿರೂಪಣೆ ಮಾಡಿದರು. ಚಂದ್ರಕಾಂತ ಮಾಶೆಟ್ಟೆ ವಂದಿಸಿದರು.