63 ವರ್ಷದ ನಂತರ ಹಲ್ಲುಮರಿ ಜಾತ್ರೆಗೆ ಕಡೂರಿನಿಂದ ಮೀಸಲು ಗೂಡೆ

ಬೀರೂರು: ಕಾರಣಾಂತರಗಳಿಂದ 63 ವರ್ಷಗಳಿಂದ ನಿಂತಿದ್ದ ಹೊಸದುರ್ಗ ತಾಲೂಕಿನ ಶ್ರೀ ಕ್ಷೇತ್ರ ಸೂಜಿಗಲ್ಲು ಅಮಾನಿಕೆರೆ ತೋಪಿನ ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ಹಲ್ಲುಮರಿ ಜಾತ್ರಾ ಮಹೋತ್ಸವ ಈ ಬಾರಿ ದೇವರ ಅಪ್ಪಣೆ ಮೇರೆಗೆ ಏ.24 ರಂದು ವಿಜೃಂಭಣೆಯಿಂದ ನಡೆಯುತ್ತಿದೆ.

ಹಲ್ಲುಮರಿ ಜಾತ್ರೆ ಮಹೋತ್ಸವದ ಅಂಗವಾಗಿ ಕಡೂರಿನ ಸಹಸ್ರಾರು ಭಕ್ತರು ಪಟ್ಟಣದ ಪೇಟೆ ಶ್ರೀ ಮಾಸ್ತಾಂಭಿಕ ದೇವಾಲಯದಿಂದ ಮೀಸಲು ಗೂಡೆಯನ್ನು ಹೊತ್ತ ಮಹಿಳೆಯರು ಶ್ರೀ ಪಾಂಡುರಂಗ ದೇವಾಲಯದವರೆಗೆ ಬರಿಗಾಲಿನಲ್ಲಿ ಜಾತ್ರೆಗೆ ಪ್ರಯಾಣಿಸಿದರು.

ತಾಲೂಕು ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ಅಮಾನಿಕೆರೆ ತೋಪಿನ ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿಗೆ ಕಡೂರಿನ 48 ಹರಿವಾಣ, 48 ಗೊಲ, 4 ನಿಟ್ಟುಗಳ ಭಕ್ತರು ಸೇರಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿರುವುದರಿಂದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.

ಬೀರಲಿಂಗೇಶ್ವರ ಜಾತ್ರೆ ವಿಶೇಷ : ರಾಜ್ಯದಲ್ಲಿರುವ ಬೀರಲಿಂಗೇಶ್ವರ ಸ್ವಾಮಿಗೆ ಎಲ್ಲಿಯೂ ಪತ್ನಿ ಇಲ್ಲ. ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿಗೆ ಮಾತ್ರ ಕಮಲಮ್ಮ ದೇವಿ ಪತ್ನಿ ಇರುವುದು ವಿಶೇಷ. ಬೀರಲಿಂಗೇಶ್ವರ ಸ್ವಾಮಿಗೆ ಪ್ರತಿ 5 ವರ್ಷಗಳಿಗೊಮ್ಮೆ ಬ್ರಹ್ಮ ರಥೋತ್ಸವ ನಡೆಯಲಿದೆ. ಬೇರೆಡೆ ಇರುವ ಬೀರಲಿಂಗೇಶ್ವರ ದೇವಾಲಯದಲ್ಲಿ ಮೂರ್ತಿ ಶೈವ ಪದ್ಧತಿಯಲ್ಲಿದ್ದರೆ, ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವೈಷ್ಣವ ಪದ್ಧತಿ ಮೂರ್ತಿ ಇರುವುದು ವಿಶೇಷ. ಏ.19ರಿಂದ ಜಾತ್ರೋತ್ಸವ ಆರಂಭವಾಗಿ ಏ.26ರವರೆಗೆ ನಡೆಯಲಿದ್ದು, 24ರಂದು ಹಲ್ಲುಮರಿ ಜಾತ್ರೆ ನಡೆಯಲಿದೆ. ಪ್ರತಿದಿನ ಧಾರ್ವಿುಕ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಲಗೂರಿನ ಶ್ರೀ ಬಿಂದುಮಾಧವ ಸ್ವಾಮೀಜಿ, ಕಡೂರಿನ ಬೆಳ್ಳಿಗೊಲ, ತೆಕ್ಕೆಗೊಲ, ಗೌಡಗೊಲ, ಬ್ಯಾಲಗೊಲದ ಕುರುಬ ಸಮಾಜದ ನೂರಾರು ಕುಟುಂಬಗಳು ಭಾಗವಹಿಸಲಿವೆ.