ಆಲಮಟ್ಟಿ ಡ್ಯಾಂಗೆ ಹರಿದ 815 ಟಿಎಂಸಿ ನೀರು !

ಹೀರಾನಾಯ್ಕ ಟಿ. ವಿಜಯಪುರ
ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ಆಲಮಟ್ಟಿ ಜಲಾಶಯಕ್ಕೆ ಹರಿದಿದ್ದು ಬರೋಬ್ಬರಿ 815 ಟಿಎಂಸಿ ನೀರು…!
ಹೌದು, ಅಗಸ್ಟ್ ತಿಂಗಳಲ್ಲಿ ಪ್ರವಾಹ ಉಂಟಾದಾಗ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆ ಆಲಮಟ್ಟಿ ಜಲಾಶಯಕ್ಕೆ ಜುಲೈ 3ರಿಂದ ಒಳಹರಿವು ಪ್ರಾರಂಭಗೊಂಡಿತು. ಪ್ರಾರಂಭದ ದಿನವೇ ಒಳಹರಿವಿನ ಪ್ರಮಾಣ 16,875 ಕ್ಯೂಸೆಕ್ ಇತ್ತು. ಜು.30ರಂದು ಲಕ್ಷ ಕ್ಯೂಸೆಕ್ ಗಡಿದಾಟಿದ್ದು, ಆ.1 ರಂದು 1.50 ಲಕ್ಷ ಕ್ಯೂಸೆಕ್, 2ರಂದು 2.05 ಲಕ್ಷ ಕ್ಯೂಸೆಕ್, 7ರಂದು 3.62 ಲಕ್ಷ ಕ್ಯೂಸೆಕ್ ಒಳಹರಿವಿದ್ದು, ಆ.13ರಂದು 6ಲಕ್ಷ ಕ್ಯೂಸೆಕ್ ಒಳಹರಿವು ಇತ್ತು.
ಸಮುದ್ರ ಸೇರಿದ ನೀರು: ಜು.3ರಿಂದ ಈವರೆಗೆ ಒಟ್ಟು 815 ಟಿಎಂಸಿ ನೀರು ಆಲಮಟ್ಟಿ ಡ್ಯಾಂಗೆ ಹರಿದಿದೆ. ಈ ಅವಧಿಯಲ್ಲಿ 711ಟಿಎಂಸಿ ನೀರು ಕೃಷ್ಣಾ ನದಿಗೆ ಹರಿಸಿ ಪ್ರವಾಹ ತಗ್ಗಿದ ನಂತರ 104.512 ಟಿಎಂಸಿ ನೀರು ಸಂಗ್ರಹಿಸಲಾಗಿದೆ. ಇಲ್ಲಿಂದ ಹರಿಸಿದ ನೀರಲ್ಲಿ ಬಹುತೇಕ ಪಾಲು ಸಮುದ್ರವನ್ನು ಸೇರಿದೆ.

ಕಣ್ಣೀರಾದ ಕೃಷ್ಣೆ: ಆಲಮಟ್ಟಿ ಅಣೆಕಟ್ಟೆಯಲ್ಲಿ 2001-02ರಲ್ಲಿ 515 ಮೀ.ವರೆಗೆ ನೀರು ನಿಲ್ಲಿಸಲಾಗಿತ್ತು. 2002ರಿಂದ 519.60 ಮೀ. ನೀರು ಸಂಗ್ರಹಿಸಲಾಗುತ್ತಿದೆ. 524.285ಮೀ.ವರೆಗೆ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಬೇಕೆಂದು ಈಗಾಗಲೇ ಗೆಜೆಟ್ ಅಧಿಸೂಚನೆ ಕೂಡ ಆಗಿದೆ. ಬ್ರಿಜೇಶ್‌ಕುಮಾರ ನ್ಯಾಯಾಧಿಕರಣದ ತೀರ್ಪು ಅನುಷ್ಠಾನಗೊಂಡರೆ ಜಿಲ್ಲೆಗೆ 100 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದೆ. ಆದರೆ, ಕೃಷ್ಣಾ ನದಿ ನೀರನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರಗಳು ವಿಲಗೊಂಡಿವೆ.

ಆಲಮಟ್ಟಿ ಜಲಾಶಯದಲ್ಲಿ 524.285 ಮೀ. ವರೆಗೆ ನೀರು ಸಂಗ್ರಹಿಸಲು ಅನೇಕ ತಾಂತ್ರಿಕ ತೊಡಕುಗಳಿವೆ. ಅವುಗಳ ನಿವಾರಣೆ ಮಾಡಿದರೆ 100 ಟಿಎಂಸಿ ಹೆಚ್ಚುವರಿಯಾಗಿ ನೀರಿನ ಲಭ್ಯತೆ ಆಗಲಿದೆ.
ಬಸವರಾಜ ಕುಂಬಾರ, ಕೃಷ್ಣಾ-ಕಾಡಾ ಮಾಜಿ ಅಧ್ಯಕ್ಷ

ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ಆಲಮಟ್ಟಿ ಜಲಾಶಯಕ್ಕೆ ಒಟ್ಟು 815 ಟಿಎಂಸಿ ನೀರು ಹರಿದು ಬಂದಿದೆ.
ಶರಣಬಸಪ್ಪ ಚಲವಾದಿ, ಸಹಾಯಕ ಅಭಿಯಂತರ, ಕೆಜಿಜೆಎನ್‌ಎಲ್

Leave a Reply

Your email address will not be published. Required fields are marked *