ಪಂಢರಪುರಕ್ಕೆ ಭೇಟಿ ನೀಡಿದ್ದ ವಾಜಪೇಯಿ

ಉಮದಿ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪಂಢರಪುರ ಎಂದರೆ ವಿಶೇಷ ಪ್ರೇಮ. ಪಂಢರಪುರಕ್ಕೆ ಅವರು ಹಲವು ಬಾರಿ ಆಗಮಿಸಿ ವಿಠಲ-ರುಕ್ಮಿಣಿ ದರ್ಶನ ಪಡೆದಿದ್ದರು.

1974ರಲ್ಲಿ ಪಂಢರಪುರಕ್ಕೆ ಭೇಟಿ ನೀಡಿದ್ದ ಅವರು ನಂತರ 1988ಕ್ಕೆ ಮತ್ತೆ ಆಗಮಿಸಿದ್ದರು. ಬಿಜೆಪಿ ಸರ್ಕಾರ ಬಂದರೆ ಪಂಢರಪುರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. 1996ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಢರಪುರಕ್ಕೆ ರೈಲ್ವೆ ಹಳಿ ವಿಸ್ತರಣೆ ಸೇರಿ ಅನೇಕ ಯೋಜನೆಗಳಿಗೆ ಅನುದಾನ ನೀಡಿದ್ದರು. ಅವರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಜಗಮೋಹನ್ ಅವರು 2003ರಲ್ಲಿ ಪಂಢರಪುರಕ್ಕೆ ಆಗಮಿಸಿ ನಗರದ ಅಭಿವೃದ್ಧಿಗಾಗಿ 3 ಕೋಟಿ ರೂ. ಬಿಡುಗಡೆ ಮಾಡಿದ್ದರು. 2004ರಲ್ಲಿ ಪ್ರಧಾನಿ ಹುದ್ದೆಯಲ್ಲಿದ್ದಾಗ ಹಾಲುಮತ (ಧನಗರ) ಸಮಾಜದ ಸಮಾವೇಶ ನಿಮಿತ್ತ ವಾಜಪೇಯಿ ಪಂಢರಪುರಕ್ಕೆ ಆಗಮಿಸಿದ್ದರು. ಅಂದಿನ ಸಮಾವೇಶದಲ್ಲಿ 3 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು ಅವಿಸ್ಮರಣೀಯ. ಅದೇ ಸಮಯದಲ್ಲಿ ಬರದಿಂದ ತತ್ತರಿಸಿದ್ದ ಮಹಾರಾಷ್ಟ್ರ ರಾಜ್ಯಕ್ಕೆ ವಾಜಪೇಯಿ 200 ಕೋಟಿ ರೂ.ಅನುದಾನ ಘೊಷಿಸಿದ್ದರು. ಆಗ ವಾಜಪೇಯಿ ಅವರನ್ನು ಹಾಲುಮತ ಪ್ರತೀಕವಾದ ಡೊಳ್ಳು ಹಾಗೂ ಕಂಬಳಿ ನೀಡಿ ಸನ್ಮಾನಿಸಲಾಗಿತ್ತು. ವಾಜಪೇಯಿ ಡೊಳ್ಳು ಬಾರಿಸಿ ಸಂತಸ ವ್ಯಕ್ತಪಡಿಸಿದ್ದರು. ಅದಕ್ಕೂ ಮೊದಲು ವಿಠಲ-ರುಕ್ಮಿಣಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು.