ಅತ್ತೆ ಸತ್ತಳೆಂದು ಸಂತೋಷ ಪಟ್ಟಿದ್ದಕ್ಕೆ ಗಂಡನಿಂದಲೇ ಕೊಲೆಯಾದಳು!

ಮುಂಬೈ: ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ತನ್ನ ತಾಯಿ ಸತ್ತಿದ್ದಕ್ಕೆ ಹೆಂಡತಿ ಖುಷಿಯಾಗಿದ್ದಾಳೆ ಎಂದು ಭಾವಿಸಿ ತನ್ನ ಹೆಂಡತಿಯನ್ನೇ ವ್ಯಕ್ತಿಯೋರ್ವ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಆರೋಪಿ ಸಂದೀಪ್‌ ಲೋಖಂಡೆಯ ಎಂಬಾತನ ಪತ್ನಿ ಶುಭಂಗಿ ಲೋಕಂಡೆ(35) ಎಂಬಾಕೆಯು ಹತ್ಯೆಯಾಗಿದ್ದು, ತನ್ನ ತಾಯಿ ಮಾಲತಿ ಲೋಖಂಡೆ(70) ಎಂಬವರ ಸಾವಿಗೆ ಪ್ರತಿಯಾಗಿ ಹೆಂಡತಿಯ ಜೀವ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಾಯಿಯ ಸಾವನ್ನು ಪತ್ನಿ ಬಹಿರಂಗವಾಗಿ ಸಂಭ್ರಮಿಸಿದ್ದಕ್ಕೆ ಕೋಪಗೊಂಡಿದ್ದ ಸಂದೀಪ್‌ ಆಪ್ಟೆನಗರ ಉಪನಗರದಲ್ಲಿದ್ದ ತಮ್ಮ ನಿವಾಸದ ಎರಡನೇ ಮಹಡಿಯ ಬಾಲ್ಕನಿಯಿಂದ ಮಾ. 9ರಂದು ಶುಭಂಗಿಯನ್ನು ತಳ್ಳಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಕೆಲ ಸ್ಥಳೀಯ ಮಾಧ್ಯಮಗಳು ತನ್ನ ಅತ್ತೆ ಸಾವಿಗೆ ನೊಂದ ಶುಭಂಗಿ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿ ಮಾಡಿದ್ದವು. ಸದ್ಯ ಸಂದೀಪ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಕೈಗೊಂಡಿದ್ದಾರೆ. (ಏಜೆನ್ಸೀಸ್)