38 ವರ್ಷಕ್ಕೆ 20ನೇ ಬಾರಿಗೆ ಗರ್ಭವತಿಯಾದ ಮಹಾರಾಷ್ಟ್ರದ ಮಹಿಳೆ, ಬದುಕುಳಿದಿರುವ ಮಕ್ಕಳೆಷ್ಟು ಗೊತ್ತಾ?

ಮುಂಬೈ: ಅಪರೂಪದ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರು 20ನೇ ಬಾರಿಗೆ ಗರ್ಭಿಣಿಯಾಗಿರುವ ವಿಚಾರ ಇದೀಗ ಸುದ್ದಿಗೆ ಗ್ರಾಸವಾಗಿದ್ದು, 38 ವರ್ಷದ ಮಹಿಳೆಯು 16 ಹೆರಿಗೆಗಳನ್ನು ಮಾಡಿಕೊಂಡಿದ್ದಾರೆ ಮತ್ತು ಮೂರು ಬಾರಿ ಗರ್ಭಪಾತ ಉಂಟಾಗಿದ್ದರೂ ಇದೀಗ 7 ತಿಂಗಳ ಗರ್ಭಿಣಿಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರತಿಸಲವು ಮಹಿಳೆ ಒಂದು ಮಗುವಿಗೆ ಜನ್ಮ ನೀಡಿದ್ದಾರೆ ಮತ್ತು ಅವುಗಳಲ್ಲಿ ಐದು ಮಕ್ಕಳು ಹುಟ್ಟಿದ ಕೆಲವೇ ಗಂಟೆ, ದಿನಗಳಲ್ಲಿ ಮೃತಪಟ್ಟಿದ್ದರೆ 11 ಬದುಕುಳಿದಿವೆ. ಮೂರು ತಿಂಗಳಿರುವಾಗಲೇ ಮೂರು ಬಾರಿ ಗರ್ಭಪಾತವಾಗಿದೆ ಎಂದು ತಿಳಿಸಿದ್ದಾರೆ.

ಅಲೆಮಾರಿ ಗೋಪಾಲ್‌ ಸಮುದಾಯಕ್ಕೆ ಸೇರಿದ ಲಂಕಭಾಯಿ ಖಾರಟ್‌ ಎಂಬ ಮಹಿಳೆಯು 20ನೇ ಬಾರಿಗೆ ಗರ್ಭಿಣಿಯಾಗಿರುವ ವಿಚಾರವನ್ನು ಕೇಳಿ ಸ್ಥಳೀಯ ಆಸ್ಪತ್ರೆ ಅಧಿಕಾರಿಗಳೇ ದಿಗ್ಭ್ರಾಂತರಾಗಿದ್ದಾರೆ. 38 ವರ್ಷದ ಮಹಿಳೆಗೆ ಸದ್ಯ 11 ಮಕ್ಕಳಿದ್ದು, 20ನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂದು ಬೀಡ್‌ ಜಿಲ್ಲಾ ಸಿವಿಲ್‌ ಸರ್ಜನ್‌ ಡಾ. ಅಶೋಕ್‌ ಥೋರಟ್‌ ತಿಳಿಸಿದ್ದಾರೆ.

ಮಹಿಳೆಯು ಗರ್ಭಿಣಿ ಎನ್ನುವ ವಿಚಾರವು ತಿಳಿಯುತ್ತಲೇ ನಾವು ಆಕೆಯನ್ನು ಸಿವಿಲ್‌ ಆಸ್ಪತ್ರೆಗೆ ಕರೆದುಕೊಂಡು ಹೋದೆವು ಮತ್ತು ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ಮುಗಿಸಿದೆವು. ಮಗು ಮತ್ತು ತಾಯಿ ಇಬ್ಬರು ಸುರಕ್ಷಿತವಾಗಿದ್ದಾರೆ. ಸೋಂಕು ತಡೆಗಟ್ಟಲು ಮಹಿಳೆಗೆ ಅಗತ್ಯ ವೈದ್ಯಕೀಯ ನೆರವು ಮತ್ತು ಶುಚಿಯಾಗಿರಲು ಮತ್ತು ಇತರ ಅಭ್ಯಾಸಗಳ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.

ಇದು ಆಸ್ಪತ್ರೆಯಲ್ಲಿ ಮಹಿಳೆಯ ಮೊದಲನೇ ಹೆರಿಗೆಯಾಗಿದ್ದು, ಉಳಿದೆಲ್ಲ ಹೆರಿಗೆಗಳನ್ನು ಮನೆಯಲ್ಲೇ ಮಾಡಿಸಲಾಗಿದೆ. ತೊಂದರೆಯಾಗುವುದನ್ನು ತಡೆಗಟ್ಟಲು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಲಾಗಿದ್ದು, ಇನ್ನೆರಡು ತಿಂಗಳಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೀಡ್‌ ಜಿಲ್ಲೆಯ ಮಜಲ್ಗೋನ್‌ ತೆಹ್ಸೀಲ್‌ನ ಕೇಸಾಪುರಿ ಪ್ರದೇಶದ ಖಾರಟ್‌, ಭಿಕ್ಷೆ ಅಥವಾ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುವ ಅಲೆಮಾರಿ ಗೋಪಾಲ್‌ ಸಮುದಾಯಕ್ಕೆ ಸೇರಿದವರು. ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಲೇ ಇರುತ್ತಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *