More

    ಒಂದಿಂಚೂ ಕೊಡಲ್ಲ; ಮಹಾರಾಷ್ಟ್ರ ಗಡಿ ತಕರಾರಿಗೆ ರಾಜ್ಯ ತಿರುಗೇಟು

    ಬೆಂಗಳೂರು: ಮಹಾರಾಷ್ಟ್ರದ ಸಿಎಂ ಗಾದಿಗೇರುತ್ತಿದ್ದಂತೆಯೇ ಬೆಳಗಾವಿ ಗಡಿ ವಿವಾದವನ್ನು ಕೆದಕಿರುವ ಉದ್ಧವ್ ಠಾಕ್ರೆ ಹಾಗೂ ಇತರ ನಾಯಕರಿಗೆ ಖಡಕ್ ಉತ್ತರ ನೀಡಿರುವ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರನೇಕರು ಈ ವಿಚಾರವಾಗಿ ಏಕಕಂಠದಿಂದ ಮಾತನಾಡಿದ್ದಾರೆ.

    ‘ಮಹಾಜನ್ ಆಯೋಗದ ವರದಿ ಪ್ರಕಾರ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರದ ಯಾವ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರಬೇಕೆಂದು ನಿರ್ಧಾರವಾಗಿದೆ. ಈ ಬಗ್ಗೆ ಈಗ ವಿವಾದ ಸೃಷ್ಟಿಸುವುದು ಸರಿಯಲ್ಲ. ಅಲ್ಲಿನ ಸಿಎಂ ಈ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ. ಗಡಿ ಭಾಗದ ಕನ್ನಡಿಗರು ಶಾಂತಿ ಕಾಪಾಡಬೇಕು’ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮ ಮುಖೇನ ಮಹಾರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

    ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕೂಡ ಮಹಾರಾಷ್ಟ್ರ ನಿಲುವನ್ನು ಖಂಡಿಸಿದ್ದಾರೆ. ‘ಪ್ರಾದೇಶಿಕ ಭಾವನೆ ಕೆರಳಿ ಸುತ್ತಿರುವವರ ಹೇಳಿಕೆ ಖಂಡನಾರ್ಹ. ಕನ್ನಡಿಗರ ಅಸ್ಮಿತೆ ಬಗ್ಗೆ ಯಾರಾದರೂ ಕೆಣಕಿದರೆ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ಎಚ್ಚರಿಸಿದ್ದಾರೆ. ಶಿವಸೇನೆಯ ವಾದ ಕೈಲಾಗದವರು ಮೈ ಪರಚಿಕೊಂಡರು ಎಂಬಂತಾಗಿದೆ. ಮಹಾರಾಷ್ಟ್ರದಲ್ಲಿರುವ ಬಡತನ, ನಿರುದ್ಯೋಗ ಹಾಗೂ ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮೊದಲು ಮಾಡಲಿ. ಸಾಧ್ಯವಾಗದ ಕೆಲಸದ ಬಗ್ಗೆ ಮೈ ಪರಚಿಕೊಳ್ಳುವುದನ್ನು ನಿಲ್ಲಿಸಲಿ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಪ್ರಾಬಲ್ಯ ಇರುವ ಪ್ರದೇಶಗಳೂ ಇವೆ. ದೇವೇಂದ್ರ ಫಡ್ನವಿಸ್ ಹೇಳಿಕೆ ಬಾಲಿಶ ಎನಿಸುತ್ತದೆ. ಅಕ್ಕಲಕೋಟೆ, ಸಾಂಗ್ಲಿ, ಕೊಲ್ಲಾಪುರ ಮೊದಲಾದ ಕಡೆ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ಹಾಗೆಂದು ಆ ಪ್ರದೇಶಗಳನ್ನು ಮಹಾರಾಷ್ಟ್ರ ವಶಪಡಿಸಿಕೊಂಡಿದೆ ಎಂದರೆ ಮೂರ್ಖತನದ್ದಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಕರ್ನಾಟಕದ ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆದು ಅಖಂಡ ಭಾರತ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದರೆ ನಮ್ಮ ನೆರೆರಾಜ್ಯಗಳು ಭಾಷೆ ಆಧಾರದ ಮೇಲೆ ದೇಶದೊಳಗೆ ವಿಭಜನೆಗೆ ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದರು.

    ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ ‘ಉದ್ಧವ್ ಠಾಕ್ರೆ ಸಿಎಂ ಆದ ನಂತರ ಶಿವಸೇನೆ ಕಾರ್ಯಕರ್ತರ ಪುಂಡಾಟ ಹೆಚ್ಚಾಗಿದೆ. ಗಡಿ ಕ್ಯಾತೆಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬೆಳಗಾವಿ ಕರ್ನಾಟಕದ್ದು. ಆದರೆ, ರಾಜಕೀಯ ಕಾರಣಗಳಿಗೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ, ಅದಕ್ಕೆ ನಾವು ಹೆದರಬೇಕಾದ ಅಗತ್ಯವಿಲ್ಲ. ಶಿವಸೇನೆಯ ಉದ್ಧಟತನಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎಂದು ತಿಳಿಸಿದರು.

    ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಕಂದಾಯ ಸಚಿವ ಆರ್.ಅಶೋಕ್ ಸಹ ಮಹಾರಾಷ್ಟ್ರ ವಿರುದ್ಧ ಹರಿಹಾಯ್ದಿದ್ದಾರೆ.

    ಮಹಾ ಕ್ಯಾತೆ ಏನು?
    1. ಮರಾಠಿ ಭಾಷಿಕರು ಹೆಚ್ಚಿರುವ ಬೆಳಗಾವಿ, ಕಾರವಾರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದಾಗಿವೆ ಎಂಬುದು ಶಿವಸೇನೆ, ಎಂಇಎಸ್ ತಕರಾರು.
    2. ಮರಾಠಿ ಭಾಷಿಕರ ಪ್ರಾಬಲ್ಯ ಇರುವ ರಾಜ್ಯದ ಸುಮಾರು 800 ಗ್ರಾಮಗಳನ್ನು ಗುರುತಿಸಿರುವ ಎಂಇಎಸ್ ಸಂಘಟನೆ ಕಿರಿಕಿರಿ ಶುರುಮಾಡಿದೆ.
    3. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಈ ವಿಚಾರ ಬಳಸಿಕೊಂಡು ಮರಾಠಿಗರನ್ನು ಭಾವನಾತ್ಮಕವಾಗಿ ಹಿಡಿದಿಡಲು ಮುಂದಾಗಿದ್ದಾರೆ.
    4. ಮರಾಠಿ ಅಸ್ಮಿತೆಯನ್ನು ತಳುಕು ಹಾಕಿ ಕರ್ನಾಟಕದ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಅಲ್ಲಿನ ರಾಜಕೀಯ ನಾಯಕರಿಂದ ನಡೆದಿದೆ.
    5. ‘ಪಾಕ್ ಆಕ್ರಮಿತ ಕಾಶ್ಮೀರ’ದಂತೆ ‘ಕರ್ನಾಟಕ ಆಕ್ರಮಿತ ಬೆಳಗಾವಿ’ ಎಂದು ಕಿಡಿಹಚ್ಚಿದ ಉದ್ಧವ್, ಗಡಿ ಉಸ್ತುವಾರಿಗೆಂದೇ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts