ನೀರಿನ ಸಮಸ್ಯೆ ಪರಿಹಾರಕ್ಕೆ ನಿರ್ಲಕ್ಷ್ಯ

ರಬಕವಿ/ಬನಹಟ್ಟಿ: ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ನೀರು ಬಿಡುವಂತೆ ಮಾಡಿಕೊಂಡ ಮನವಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಡ್ನವಿಸ್ ಒಪ್ಪಿಗೆ ಸೂಚಿಸಿದ್ದರೂ ಕರ್ನಾಟಕ ಸರ್ಕಾರ ಎಂಒಯು (ನೀರು ಬಿಡುಗಡೆ ಒಪ್ಪಂದ) ಮಾಡಿಕೊಡದೆ ನಿರ್ಲಕ್ಷೃ ತೋರುತ್ತಿದೆ ಎಂದು ಶಾಸಕ ಸಿದ್ದು ಸವದಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಬನಹಟ್ಟಿಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನೀರು ಬರುವುದರೊಳಗೆ ಘಟಕವನ್ನು ಶುಚಿಗೊಳಿಸಿ ಜನತೆಗೆ ಶುದ್ಧ ನೀರು ಪೂರೈಕೆಗೆ ನಗರಸಭೆ ಸನ್ನದ್ಧವಾಗಬೇಕು. ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ ಕೆಲ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಹೇಳಿದರು.

ಅವಳಿ ಪಟ್ಟಣದಾದ್ಯಂತ ಪ್ರಸಕ್ತ ವರ್ಷ 52 ಸೇರಿ 271 ಕೊಳವೆ ಬಾವಿಗಳ ಮೂಲಕ 31 ವಾರ್ಡ್‌ಗಳಿಗೆ ನೀರು ಒದಗಿಸಲಾಗುತ್ತಿದೆ. 148 ಸಿಂಟೆಕ್ಸ್ ಅಳವಡಿಸಿದ್ದು, ಆಶ್ರಯ ಕಾಲನಿ ನಿವಾಸಿಗಳಿಗೆ 1300 ಮೀ.ನಷ್ಟು ಪೈಪ್‌ಲೈನ್ ಅಳವಡಿಸಿ ಮದಲಮಟ್ಟಿ ಗ್ರಾಮದಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ನೀರಿನ ಸಮಸ್ಯೆ ಎದುರಾದಲ್ಲಿ ನಗರಸಭೆ ಅಥವಾ ಶಾಸಕರ ಕಚೇರಿಯನ್ನು ಸಂಪರ್ಕಿಸಿದರೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಅದರೊಂದಿಗೆ ನಗರಸಭೆ ಸಹಾಯವಾಣಿ 08353-231262 ಸಂಪರ್ಕಿಸಬಹುದೆಂದು ಸವದಿ ತಿಳಿಸಿದರು.

ಪೌರಾಯುಕ್ತ ಆರ್.ಎಂ. ಕೊಡಗೆ ಮಾತನಾಡಿ, ನೀರು ಪೂರೈಕೆಗೆ ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೆಲ ಗುಡ್ಡದ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಹೆಚ್ಚಿನ ಟ್ಯಾಂಕರ್ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಸಹಾಯಕ ಅಭಿಯಂತರ ಬಿ.ಕೆ. ಪರಕಾಳೆ, ನಗರಸಭಾ ಸದಸ್ಯೆ ಸರೋಜಿನಿ ಸಾರವಾಡ, ಮಹಾದೇವ ಚನಾಳ, ಪರಸಪ್ಪ ಜಿಡ್ಡಿಮನಿ ಇತರರಿದ್ದರು.

ಮಹಾರಾಷ್ಟ್ರ ಸರ್ಕಾರದೊಂದಿಗಿನ ಒಪ್ಪಂದದ ಪ್ರಕಾರ ಬೇಸಿಗೆ ಸಂದರ್ಭದಲ್ಲಿ ರಾಜ್ಯಕ್ಕೆ 4 ಟಿಎಂಸಿ ನೀರು ಬಿಡಬೇಕು. ಇದಕ್ಕನುಗುಣವಾಗಿ ಮಹಾರಾಷ್ಟ್ರಕ್ಕೆ ಭೀಮಾ ನದಿಯಿಂದ ಮಳೆಗಾಲದಲ್ಲಿ 2 ಹಾಗೂ ಬೇಸಿಗೆಯಲ್ಲಿ 2 ಟಿಎಂಸಿ ನೀರು ಬಿಡುಗಡೆ ಒಪ್ಪಂದ ಅಧಿಕೃತಗೊಳ್ಳದ ಕಾರಣ ಮೂರು ಜಿಲ್ಲೆಗಳ ಜನ-ಜಾನುವಾರುಗಳು ಜಲಕ್ಷಾಮ ಎದುರಿಸುವಂತಾಗಿದೆ.
– ಸಿದ್ದು ಸವದಿ ಶಾಸಕ

Leave a Reply

Your email address will not be published. Required fields are marked *