ಕುಂಭಮೇಳ ಐಸಿಸ್ ಟಾರ್ಗೆಟ್?

ಮುಂಬೈ: ಮಹಾರಾಷ್ಟ್ರ ಉಗ್ರ ನಿಗ್ರಹ ದಳ (ಎಟಿಎಸ್) 9 ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದ್ದು, ಕೋಟ್ಯಂತರ ಭಕ್ತರು ಭಾಗವಹಿಸುವ ಕುಂಭಮೇಳದಲ್ಲಿ ದೊಡ್ಡ ಅನಾಹುತ ಸೃಷ್ಟಿಸಲು ಇವರು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ತನಿಖಾ ಸಂಸ್ಥೆಗೆ ಲಭ್ಯವಾಗಿದೆ.

ಗುಪ್ತಚರ ದಳದ ನಿರ್ದಿಷ್ಟ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಠಾಣೆ, ಮುಂಬ್ರಾ ಹಾಗೂ ಔರಂಗಾಬಾದ್​ನಲ್ಲಿ ಎಟಿಎಸ್ ಕಾರ್ಯಾಚರಣೆ ನಡೆಸಿದೆ. ಉಮ್ಮತ್-ಎ-ಮೊಹಮದೀಯಾ ಸಂಘಟನೆ ಹೆಸರಲ್ಲಿ ಕೆಲಸ ಮಾಡುತ್ತಿದ್ದ ಈ ಶಂಕಿತ ಉಗ್ರರ ಬಳಿ ಮಾರಣಾಂತಿಕ ರಾಸಾಯನಿಕ ಬಾಟಲ್ ಲಭ್ಯವಾಗಿವೆ. ಹೈಡ್ರೋಜನ್ ಫೆರಾಕ್ಸೈಡ್ ಬಾಟಲ್​ಗಳು ಕೂಡ ಬಂಧಿತರ ಕೊಠಡಿಯಲ್ಲಿ ಲಭ್ಯವಾಗಿದೆ.

ಎಟಿಎಸ್​ನ ಪ್ರಾಥಮಿಕ ವಿಚಾರಣೆ ಪ್ರಕಾರ, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸೇರಿರುವ ಕಡೆ ಈ ವಿಷವನ್ನು ಆಹಾರ ಹಾಗೂ ನೀರಿನಲ್ಲಿ ಮಿಶ್ರಣಗೊಳಿಸುವ ಉದ್ದೇಶವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ತನಿಖೆಯ ವಿವರಗಳನ್ನು ಪ್ರಯಾಗ್​ರಾಜ್​ನಲ್ಲಿನ ಕುಂಭಮೇಳದ ಉಸ್ತುವಾರಿ ಹೊತ್ತ ಭದ್ರತಾ ತಂಡದೊಂದಿಗೆ ಹಂಚಿಕೊಳ್ಳಲಾಗಿದೆ.

ತಪ್ಪಿದ ಅನಾಹುತ: ವಶಕ್ಕೆ ಪಡೆದಿರುವ ಹೈಡ್ರೋಜನ್ ಪೆರಾಕ್ಸೈಡ್​ನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರಲ್ಲಿನ ರಾಸಾಯನಿಕ ವಿವರಣೆ ಪಡೆದು ವಿಚಾರಣೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಐಸಿಸ್ ಸ್ಲೀಪರ್ ಸೆಲ್​ನ ಕಾರ್ಯಾಚರಣೆ ವಿಫಲಗೊಳಿಸಿದ್ದ ಎನ್​ಐಎ, ಭಾರಿ ವಿಧ್ವಂಸಕ ಘಟನೆ ತಪ್ಪಿಸಿತ್ತು. ಈಗ ಕುಂಭಮೇಳ ಹಾಗೂ ಗಣರಾಜ್ಯೋತ್ಸದ ಸಂದರ್ಭದಲ್ಲಿ ಮಹಾರಾಷ್ಟ್ರ ಎಟಿಎಸ್ ಇನ್ನೊಂದು ಸಂಚನ್ನು ವಿಫಲಗೊಳಿಸಿದೆ.

ಶಂಕಿತ ಉಗ್ರರು

ಸಲ್ಮಾನ್ ಖಾನ್, ಫಹದ್ ಷಾ, ಜಮೀನ್ ಕುಟೇಪಡಿ, ಮೊಹಿಸೀನ್ ಖಾನ್, ಮೊಹಮದ್ ಮಝುರ್ ಶೇಖ್, ಟಕಿ ಖಾನ್, ಸರ್ಫರಾಜ್ ಅಹ್ಮದ್, ಜಹೀದ್ ಶೇಖ್ ಹಾಗೂ ಇನ್ನೊಬ್ಬ 17 ವರ್ಷದ ಯುವಕ.

ಮಿಂಚಿನ ಕಾರ್ಯಾಚರಣೆ

ರಾಷ್ಟ್ರ ಹಾಗೂ ರಾಜ್ಯದ ವಿವಿಧ ಗುಪ್ತಚರ ಸಂಸ್ಥೆಗಳ ನಿರ್ದಿಷ್ಟ ಮಾಹಿತಿ ಆಧರಿಸಿ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಕಳೆದ ಕೆಲ ದಿನಗಳಿಂದ ಉಮ್ಮತ್-ಎ-ಮೊಹಮದೀಯಾ ಸಂಘಟನೆ ಮೇಲೆ ಕಣ್ಣಿರಿಸಿದ್ದರು. ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ದಾಳಿಗಳನ್ನು ನಡೆಸಲಾಗಿದೆ. ಹಲವು ದಿನಗಳಿಂದ ಶಂಕಿತ ಉಗ್ರರ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಭಾರಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಏಕಕಾಲದಲ್ಲಿ ಮಹಾರಾಷ್ಟ್ರದ ಮೂರು ಕಡೆ ದಾಳಿ ನಡೆಸಲಾಗಿದೆ. ಬಂಧಿತ 9 ಜನರ ಕೊಠಡಿಗಳಲ್ಲಿ ರಾಸಾಯನಿಕ, ಬಿಳಿ ಪುಡಿ, ಆಸಿಡ್ ಬಾಟಲ್, ಸಿಮ್ 6 ಚಾಕು, 6 ಪೆನ್​ಡ್ರೖೆವ್, 24 ಮೊಬೈಲ್, 6 ಲ್ಯಾಪ್​ಟಾಪ್, 6 ವೈ-ಫೈ ರೂಟರ್, ಹಾರ್ಡ್ ಡಿಸ್ಕ್, ಡಾಂಗಲ್ ಹಾಗೂ ರ್ಯಾಮ್ಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನು ಎನ್​ಐಎಗೆ ಹಸ್ತಾಂತರಿಸುವ ಸಾಧ್ಯತೆ ಕೂಡ ಇದೆ.

ರಷೀದ್ ಮಲ್ಬಾರಿ ಪುತ್ರನ ಬಂಧನ

ಬಂಧಿತರಲ್ಲಿ ಓರ್ವ ಮೋಸ್ಟ್ ವಾಂಟೆಡ್ ಉಗ್ರ ರಷೀದ್ ಮಲ್ಬಾರಿಯ ಪುತ್ರ. ದಾವೂದ್ ಇಬ್ರಾಹಿಂನ ಡಿ-ಕಂಪನಿಯ ಶಾರ್ಪ್ ಶೂಟರ್ ಆಗಿರುವ ಮಲ್ಬಾರಿ ಪುತ್ರ ಕೂಡ ಐಸಿಸ್ ಜತೆ ನಂಟು ಹೊಂದಿರುವ ಶಂಕೆಯಿದೆ. ವಿದೇಶದಲ್ಲಿನ ಐಸಿಸ್ ಜಾಲದ ಜತೆ ಈತನೇ ಸಂಪರ್ಕ ಸಾಧಿಸುತ್ತಿದ್ದ ಎನ್ನಲಾಗಿದೆ.

ಫುಟ್​ಬಾಲ್ ಕೋಚ್ ಸಂಚು!

ಮೂರು ತಿಂಗಳಿಂದ ಐಸಿಸ್​ಗೆ ಯುವಕರನ್ನು ಸೇರ್ಪಡೆಗೊಳಿಸಲು ಯತ್ನಿಸುತ್ತಿದ್ದ ಸ್ಲೀಪರ್ ಸೆಲ್​ಗಳ ಮೇಲೆ ದೇಶದ ಭದ್ರತಾ ಸಂಸ್ಥೆಗಳು ಕಣ್ಣಿಟ್ಟಿವೆ. ಈಗ ಎಟಿಎಸ್ ಕಾರ್ಯಾಚರಣೆ ಕೂಡ ಇದರ ಮುಂದುವರಿದ ಭಾಗವಾಗಿದೆ. ಬಂಧಿತ 9 ಜನರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಅವರಲ್ಲಿ ಓರ್ವ ಫುಟ್​ಬಾಲ್ ತರಬೇತುದಾರ. ಐಸಿಸ್ ಪರ ಒಲವಿರುವ ಯುವಕರನ್ನು ಸೆಳೆದು ತನ್ನ ಸಹೋದರನ ಜತೆ ಸಂಪರ್ಕ ಬೆಳೆಸುತ್ತಿದ್ದ. ಆ ಬಳಿಕ ತರಬೇತಿ ನೀಡುತ್ತಿದ್ದ.

3 ಉಗ್ರರ ಎನ್​ಕೌಂಟರ್

ಜಮ್ಮು-ಕಾಶ್ಮೀರದ ಬಾರಾಮೂಲಾ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್​ಕೌಂಟರ್​ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಗುಪ್ತಚರ ದಾಳಿ ಮಾಹಿತಿ ಪ್ರಕಾರ ಬಾರಾಮೂಲಾ ಹಳ್ಳಿಯೊಂದರಲ್ಲಿ ಉಗ್ರರು ಅಡಗಿದ್ದರು. ಈ ಆಧಾರದ ಮೇಲೆ ಬುಧವಾರ ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆ ಆರಂಭವಾಗಿತ್ತು. 9 ಉಗ್ರರ ತಂಡದಲ್ಲಿ ಸಿವಿಲ್ ಇಂಜಿನಿಯರ್, ಕಂಪ್ಯೂಟರ್ ಇಂಜಿನಿಯರ್, ಮೆಡಿಕಲ್ ರೆಪ್ರಸಂಟೇಟಿವ್​ಗಳಿದ್ದರು. ಇವರೆಲ್ಲರಿಗೂ ನಿರ್ದಿಷ್ಟ ದಾಳಿಗಳ ಪ್ರತ್ಯೇಕ ಜವಾಬ್ದಾರಿ ನೀಡಲಾಗಿತ್ತು ಎನ್ನಲಾಗಿದೆ.