ಮಹಾಮೇಳಾವ್‌ಗೆ ಅನುಕೂಲ ಮಾಡಿಕೊಡಿ

ಬೆಳಗಾವಿ: ದೇಶದಲ್ಲಿ ಭಾಷೆ ಆಧರಿಸಿ ರಾಜ್ಯಗಳನ್ನು ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿರುವ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು. ಬೆಳಗಾವಿ ಮರಾಠಿಗರು ತಮ್ಮ ಹಕ್ಕು ಕೇಳುತ್ತಿದ್ದಾರೆ. ಕರ್ನಾಟಕ ಸರ್ಕಾರ ಮರಾಠಿಗರ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ದೀಪಕ ಕೇಸರಕರ್ ಮನವಿ ಮಾಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಬೆಳಗಾವಿಗೆ ಆಗಮಿಸಿದ್ದ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸಲಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮರಾಠಿ ಭಾಷಿಕರು ವಾಸಿಸುವ ಪ್ರದೇಶಗಳು ಈಗ ಕರ್ನಾಟಕ ವ್ಯಾಪ್ತಿಯಲ್ಲಿವೆ. ಅಲ್ಲಿ ಕನ್ನಡದ ಜತೆಗೆ ಮರಾಠಿ ನಾಮಫಲಕ ಅಳವಡಿಸಬೇಕು. ಗಡಿ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸುವಂತೆ ಆಗಬಾರದು. ಗಡಿ ವಿವಾದ ಇತ್ಯರ್ಥ ಆದರೆ ಎರಡೂ ರಾಜ್ಯಗಳಿಗೆ ಅನುಕೂಲ ಆಗಲಿದೆ ಎಂದು ಅವರು ಪ್ರತಿಪಾದಿಸಿದರು.

ಮಹಾಜನ ವರದಿ ಪ್ರಕಾರ ಮರಾಠಿ ಭಾಷಿಕ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿವೆ. ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು, ಮಹಾರಾಷ್ಟ್ರಕ್ಕೆ ನ್ಯಾಯ ಸಿಗಲಿದೆ ಎಂದರು.  ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಮರಾಠಿಗರು ತಮ್ಮ ಹಕ್ಕು ಪ್ರತಿಪಾದಿಸುತ್ತಿದ್ದಾರೆ.ಹಾಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹೋರಾಟಗಳಿಗೆ ಅವಕಾಶ ಬೇಕು ಎಂದು ಅವರು ಆಗ್ರಹಿಸಿದರು.