Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಜನಸಾಗರದ ಮಧ್ಯೆ ಕಳಸಾಭಿಷೇಕ

Monday, 19.02.2018, 3:04 AM       No Comments

ಮಹಾಮಸ್ತಕಾಭಿಷೇಕ ಮಹೋತ್ಸವದ 2ನೇ ದಿನವಾದ ಭಾನುವಾರ ಶಿಸ್ತು, ಶ್ರದ್ಧೆಯೊಂದಿಗೆ 1008 ಕಳಸಗಳ ಅಭಿಷೇಕ ಯಶಸ್ವಿಯಾಗಿ ನಡೆಯಿತು. ಇನ್ನೊಂದೆಡೆ ಬಾಹುಬಲಿಸ್ವಾಮಿ ವೀಕ್ಷಣೆಗಾಗಿ ಸಹಸ್ರಾರು ಭಕ್ತರ ಸಾಗರವೇ ಕ್ಷೇತ್ರಕ್ಕೆ ಹರಿದು ಬಂತು. ಬೆಳಗ್ಗೆ 8 ಗಂಟೆಗೆ ಆರಂಭವಾಗಬೇಕಿದ್ದ ಪೂಜಾ ಕೈಂಕರ್ಯ, ಮುಕ್ಕಾಲು ಗಂಟೆ ತಡವಾಗಿ ಪ್ರಾರಂಭವಾಗಿ, ಮಧ್ಯಾಹ್ನ 3.16 ರ ಸುಮಾರಿಗೆ ಪೂರ್ಣಗೊಂಡಿತು. ವಿರಾಟ್ ವಿರಾಗಿಯ ಮೇಲೆ ಜಲಧಾರೆ ಸುರಿಯುವ ಮೂಲಕ ಎರಡನೇ ದಿನದ ಅಭಿಷೇಕಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನ 108 ಕಳಸಗಳಿಂದ ಮಿಂದಿದ್ದ ಬಾಹುಬಲಿಗೆ 2ನೇ ದಿನ, 1,008 ಕಳಸಗಳಿಂದ ಅಭಿಷೇಕ ನೆರವೇರಿಸಲಾಯಿತು.

ಮೊದಲಿಗೆ ಶಾಸ್ತ್ರೋಕ್ತವಾಗಿ 108 ಕಳಸಗಳ ಜಲಾಭಿಷೇಕ ನೆರವೇರಿಸಲಾಯಿತು. ಪಂಚಾಮೃತಭಿಷೇಕದ ನಂತರ ಎಳನೀರು, ಕಬ್ಬಿನ ರಸ, ಕ್ಷೀರ, ಶ್ವೇತ ಕಲ್ಕಚೂರ್ಣ, ಅರಿಶಿಣ, ಗಿಡಮೂಲಿಕೆಗಳ ಕಷಾಯ, ಶ್ರೀಗಂಧ, ಚಂದನ, ಅಷ್ಟಗಂಧಗಳಿಂದ ಅಭಿಷೇಕ ಮಾಡಲಾಯಿತು. ಒಂದೊಂದು ದ್ರವ್ಯದಿಂದ ಅಭಿಷೇಕ ಮಾಡಿದಾಗಲೂ ಬಾಹುಬಲಿ ಸ್ವಾಮಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ವಿವಿಧ ವರ್ಣಗಳಲ್ಲಿ ದರ್ಶನ ನೀಡುವ ಮೂಲಕ ಭಕ್ತರನ್ನು ಪುಳಕಿತಗೊಳಿಸಿದ. ಬಾಹುಬಲಿಮೂರ್ತಿಯ ಪದತಲದಲ್ಲಿ ನಿಂತ ನೂರಾರು ಭಕ್ತರು, ಮೂರ್ತಿಗೆ ಮಜ್ಜನವಾಗುತ್ತಿದ್ದಂತೆ ‘ಗೊಮ್ಮಟೇಶ್ವರ ಭಗವಾನ್ ಕಿ ಜೈ’ ಎಂದು ಹಷೋದ್ಗಾರ ಮಾಡಿದರು. ಗೊಮ್ಮಟನ ಮಸ್ತಕ, ಭುಜಗಳನ್ನು ತೋಯ್ಯಿಸಿ ಕೆಳಗೆ ಧುಮ್ಮಿಕ್ಕುತ್ತಿದ್ದ ದ್ರವ್ಯಗಳಿಗೆ ಮೈಯ್ಯೊಡ್ಡಿ ನಿಂತ ಭಕ್ತಾದಿಗಳು, ಭಗವಂತನನ್ನು ರ್ಸ³ಸಿದ ದ್ರವ್ಯ ತಮ್ಮ ಮೈ ಸೋಕಿದಾಗೆಲ್ಲ ಭಕ್ತಿಯ ಪರಾಕಾಷ್ಠೆ ತಲುಪಿ ಭಾವೋನ್ಮಾದದಿಂದ ನರ್ತಿಸುತ್ತಿದ್ದರು. ಅಷ್ಟದ್ರವ್ಯಗಳ ಅಭಿಷೇಕದ ನಂತರ ಕೇಸರ ವೃಷ್ಟಿ, ನವರತ್ನ, ಪುಷ್ಪವೃಷ್ಟಿ ಮಾಡಿ ಮಹಾಮಜ್ಜನ ನೆರವೇರಿಸಲಾಯಿತು. ಉಳಿದ ಕಳಸಗಳನ್ನು ಬಳಸಿ ಸಾರ್ವಜನಿಕ ದರ್ಶನದ ವೇಳೆ ಭಕ್ತರು ಅಭಿಷೇಕ ಮಾಡಿದರು.

ಗಣ್ಯರ ಸಂಖ್ಯೆ ಕಡಿತ

ಮಹಾಮಸ್ತಕಾಭಿಷೇಕದ ಮೊದಲ ದಿನ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಅಟ್ಟಣಿಗೆಯಲ್ಲಿದ್ದವರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ, ಭಾನುವಾರ ಪಾಸ್​ಗಳ ಸಂಖ್ಯೆ ಕಡಿತಗೊಳಿಸಿದ್ದರಿಂದ ಅಟ್ಟಣಿಗೆ ಮೇಲೆ ಸಾಕಷ್ಟು ಖಾಲಿ ಸ್ಥಳ ಉಳಿದಿತ್ತು. ಬಿರುಬಿಸಿನಲ್ಲಿಯೂ ಭಕ್ತರು, ಕಳಸಧಾರಿಗಳು ಉತ್ಸಾಹದಿಂದ ಅತ್ತಿತ್ತ ಓಡಾಡಲು ಸ್ಥಳಾವಕಾಶದ ಕೊರತೆ ಇರಲಿಲ್ಲ.

ಪ್ರಯಾಣಿಕರ ಪರದಾಟ

ಶ್ರವಣಬೆಳಗೊಳದ ಸುತ್ತಲಿನ ಆರು ಸಂಪರ್ಕ ರಸ್ತೆಗಳಲ್ಲಿಯೂ ಐದು ಕಿಮೀ. ಮುಂಚಿತವಾಗಿಯೇ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಂಚಾರ ನಿರ್ಬಂಧದ ಮಾಹಿತಿಯಿಲ್ಲದೆ ಪೊಲೀಸ್ ಬ್ಯಾರಿಕೇಡ್​ವರೆಗೂ ಬಂದ ಬಸ್​ಗಳು ಮುಂದೆ ಚಲಿಸಲು ಸಾಧ್ಯವಿಲ್ಲದಂತಾಯಿತು. ಆಗ ಚಾಲಕರು, ನಿರ್ವಾಹಕರು ಉಚಿತ ಬಸ್​ಗಳ ಮೂಲಕ ಶ್ರವಣಬೆಳಗೊಳಕ್ಕೆ ಹೋಗಿ ಅಲ್ಲಿಂದ ಪ್ರಯಾಣ ಮುಂದುವರಿಸುವಂತೆ ಪ್ರಯಾಣಿಕರಿಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಚಾಲಕರು, ನಿರ್ವಾಹಕರು, ಬಸ್ ತಡೆದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಕೊನೆಗೆ ಅನ್ಯದಾರಿಯಿಲ್ಲದೆ ಬಸ್ ಇಳಿದು ಸಿಟಿ ಬಸ್ ಸೇವೆ ಬಳಸಿಕೊಂಡು ಮುಂದುವರಿದರು.

ನಿತ್ರಾಣಗೊಂಡ ಪೊಲೀಸರು…

ಅಟ್ಟಣಿಗೆ ಮೇಲೆ ಕರ್ತವ್ಯದಲ್ಲಿದ್ದ ಒಬ್ಬ ಮಹಿಳಾ ಪೊಲೀಸ್ ಪೇದೆ ಹಾಗೂ ಓರ್ವ ಗೈಡ್ಸ್ ಸ್ವಯಂಸೇವಕಿ ಬಿಸಿಲಿನ ತಾಪ ಹಾಗೂ ಹಸಿವು ತಾಳಲಾರದೆ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ನಿತ್ರಾಣಗೊಂಡು ಕುಸಿದರು. ತಕ್ಷಣವೇ ಸ್ಥಳದಲ್ಲಿದ್ದ ಸ್ವಯಂಸೇವಕರು ಹಾಗೂ ವೈದ್ಯಕೀಯ ಸಿಬ್ಬಂದಿ ಶುಶ್ರೂಷೆ ಮಾಡಿ ಡೋಲಿ ಮೂಲಕ ವಿಂಧ್ಯಗಿರಿಯಿಂದ ಕೆಳಗೆ ಕರೆದೊಯ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆರೈಕೆ ನಂತರ ಇಬ್ಬರೂ ಚೇತರಿಸಿಕೊಂಡರು.

ದಣಿವರಿಯದ ಭಕ್ತರು…

ಮಹಾಮಜ್ಜನದ ಎರಡನೇ ದಿನವಾದ ಭಾನುವಾರ ಬೆಳಗೊಳಕ್ಕೆ ಭಾರಿ ಪ್ರಮಾಣದಲ್ಲಿ ಜನಸಾಗರವೇ ಹರಿದುಬಂದಿತ್ತು. ಬೆಳಗಿನ ಸಮಯ ಅಭಿಷೇಕದ ಅವಧಿಯಲ್ಲಿ ವಿಂಧ್ಯಗಿರಿಗೆ ಪ್ರವೇಶವಿಲ್ಲದ ಕಾರಣ, ಕ್ಷೇತ್ರಕ್ಕೆ ಆಗಮಿಸಿದ ಸಾರ್ವಜನಿಕರು ಚಿಕ್ಕಬೆಟ್ಟ (ಚಂದ್ರಗಿರಿ) ಏರಿದರು. ಒಮ್ಮೆಲೆ ಸಾವಿರಾರು ಜನರು ಮೆಟ್ಟಿಲು ಹತ್ತಲು ಆರಂಭಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತಾದರೂ ಪೊಲೀಸರ ಬಂದೋಬಸ್ತ್ ಕಾರಣದಿಂದ ಎಲ್ಲಿಯೂ ಅವ್ಯವಸ್ಥೆ ಕಂಡು ಬರಲಿಲ್ಲ. ಮಧ್ಯಾಹ್ನ 2.30ರ ನಂತರ ವಿಂಧ್ಯಗಿರಿಗೆ ಪ್ರವೇಶ ನೀಡುವುದಾಗಿ ಮೊದಲೇ ತಿಳಿಸಿದ್ದರಿಂದ ಸಾವಿರಾರು ಜನರು ಬೆಳಗ್ಗೆ 10 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಸಾರ್ವಜನಿಕ ದರ್ಶನ ಆರಂಭವಾಗುತ್ತಿದ್ದಂತೆ ಗೊಮ್ಮಟೇಶ್ವರನನ್ನು ಸ್ತುತಿಸುತ್ತ ಭಕ್ತರು ಪೈಪೋಟಿ ಮೇಲೆ ವಿಂಧ್ಯಗಿರಿ ಏರಿ ಬಾಹುಬಲಿ ದರ್ಶನ ಪಡೆದರು.

ಕಾಡಿದ ಬಿಸಿಲು

ಭಾನುವಾರ 1008 ಕಳಸಗಳ ಅಭೀಷೇಕ ನಡೆಯಬೇಕಿದ್ದರಿಂದ ಕಳಸ ಖರೀದಿಸಿದ ಅಷ್ಟೂ ಭಕ್ತರು ಬೆಳಗ್ಗೆ 8 ಗಂಟೆಗೆ ವಿಂಧ್ಯಗಿರಿ ಏರಿ ಕುಳಿತಿದ್ದರು. ಸಾವಿರಕ್ಕೂ ಹೆಚ್ಚು ಜನರು ಅಭಿಷೇಕ ಮಾಡಬೇಕಿದ್ದರಿಂದ ಕೆಲವರ ಸರದಿ ಬರುವಷ್ಟರಲ್ಲಿ ಸಮಯ ಸಂಜೆ 5 ಗಂಟೆಯಾಗಿತ್ತು. ಅದುವರೆಗೂ ಆಹಾರವಿಲ್ಲದೆ ಬಿರು ಬಿಸಿಲಿನಲ್ಲಿ ಕುಳಿತ ಕಳಸಧಾರಿಗಳು ಸುಸ್ತಾಗಿದ್ದರು. ಬಿಸಿಲಿನ ಝುಳದಿಂದ ರಕ್ಷಣೆ ಪಡೆಯಲು ಛತ್ರಿ ಹಾಗೂ ಚಾಪೆಗಳನ್ನೇ ತಲೆ ಮೇಲಿರಿಸಿಕೊಂಡು ನೆರಳು ಮಾಡಿಕೊಂಡರು.

ಮೂರನೇ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಶ್ರವಣಬೆಳಗೊಳಕ್ಕೆ ಸೋಮವಾರ ಭೇಟಿ ನೀಡುವ ಮೂಲಕ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡ ಮೂರನೇ ಪ್ರಧಾನಿಯಾಗಲಿದ್ದಾರೆ. ಈ ಹಿಂದೆ 1981ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಲ್ಲದೆ ವಿಂಧ್ಯಗಿರಿ ಏರಿ ಮಹಾಮಜ್ಜನ ವೀಕ್ಷಿಸಿದ್ದರು. 1993ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮಹಾಮಜ್ಜನ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಪ್ರಧಾನಿ ಮೋದಿ ಭೇಟಿಗೆ ಜೈನಕಾಶಿ ಸಜ್ಜು

ಪ್ರಧಾನಿ ನರೇಂದ್ರ ಮೋದಿ ಅವರ ಚೊಚ್ಚಲ ಭೇಟಿಗೆ ಜೈನಕಾಶಿ ಶ್ರವಣಬೆಳಗೊಳ ಸಜ್ಜುಗೊಂಡಿದ್ದು, ಸೋಮವಾರ ಪಂಚಕಲ್ಯಾಣ ನಗರದಲ್ಲಿರುವ ಚಾವುಂಡರಾಯ ಸಭಾಮಂಟಪದಲ್ಲಿ ವಿಂಧ್ಯಗಿರಿ ಮೆಟ್ಟಿಲುಗಳು, ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಶ್ರವಣಬೆಳಗೊಳದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.

ವಿಂಧ್ಯಗಿರಿ ಏರುವರೇ ಮೋದಿ?: ಪ್ರಧಾನಿ ನರೇಂದ್ರ ಮೋದಿ ಅವರು 45 ನಿಮಿಷಗಳನ್ನು ಶ್ರವಣಬೆಳಗೊಳದ ಕಾರ್ಯಕ್ರಮಕ್ಕೆ ಮೀಸಲಿಟ್ಟಿದ್ದಾರೆ. ಅವರ ಅಭಿಮಾನಿಗಳು ಮೋದಿ ವಿಂಧ್ಯಗಿರಿ ಏರಿ ಭಗವಾನ್ ಬಾಹುಬಲಿ ದರ್ಶನ ಪಡೆಯಬಹುದು ಎನ್ನುವ ನಿರೀಕ್ಷೆ ಹೊಂದಿದ್ದಾರೆ.

ಶ್ರವಣಬೆಳಗೊಳದಲ್ಲಿ ಇಂದು

# ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1.30ಕ್ಕೆ ಹೆಲಿಪ್ಯಾಡ್​ಗೆ ಆಗಮನ

# ಚಾವುಂಡರಾಯ ಸಭಾಮಂಟಪಕ್ಕೆ 1.35ಕ್ಕೆ ಆಗಮನ

# 1.44ರಿಂದ 1.47 ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ

# 1.52ರಿಂದ 1.57 ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ

# 1.57ರಿಂದ 2ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಾಹುಬಲಿ ಸಾರ್ವಜನಿಕ ಆಸ್ಪತ್ರೆ, ವಿಂಧ್ಯಗಿರಿ ಹೊಸ ಮೆಟ್ಟಿಲುಗಳ ಉದ್ಘಾಟನೆ

# 2ರಿಂದ 2.20ರವರೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ

# 2.20ಕ್ಕೆ ನಿರ್ಗಮನ

 

Leave a Reply

Your email address will not be published. Required fields are marked *

Back To Top