ಫೆ.9ರಿಂದ ಧರ್ಮಸ್ಥಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ: ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬೆಳೆಯಬೇಕು ಎಂಬುದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಉದ್ದೇಶ. ಎಲ್ಲ ಧರ್ಮಗಳಲ್ಲಿಯೂ ಶಾಂತಿ ಭೋದಿಸಲು ಪೂರಕವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ.9ರಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿ, ಹಿರಿಯ ಸ್ವಾಮೀಜಿಗಳು ಸೇರಿದಂತೆ ಅನೇಕ ಸಚಿವರುಗಳು, ಸಂಸದರು, ಶಾಸಕರು, ಮಾಜಿ ಸಚಿವರು, ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಚಾರಿತ್ರ್ಯ ಅಕ್ರವರ್ತಿ ಶ್ರೀ 108 ಶಾಂತಿಸಾಗರ ಮಹಾರಾಜರ ಅಕ್ಷುನ್ನ ಪರಂಪರೆಯ ಪಟ್ಟಾಧೀಶ ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರಜೀ ಮುನಿಮಹಾರಾಜರ ಸಾನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಪರಮ ಪೂಜ್ಯ ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿ ಮಹಾರಾಜರು, ಮುನಿಗಳು, ಆರ್ಯಿಕಾ ಮಾತಾಜಿ, ಶ್ರವಣಬೆಳಗೊಳ ಜೈನ ಮಠದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಹೋತ್ಸವ ಮಹೋತ್ಸವ ನಡೆಯಲಿದೆ. ಬಾಹುಬಲಿ ಪ್ರತಿಷ್ಠಾಪನೆ ಪ್ರಾರಂಭದಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಮಾರ್ಗದರ್ಶನ ಪ್ರೋತ್ಸಾಹ ನೀಡುತ್ತಿದ್ದು, ಇನ್ನಿತರ ಹಿರಿಯ ಸ್ವಾಮೀಜಿಗಳು ಪ್ರೋತ್ಸಾಹ ನೀಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಫೆ.8ರಂದು ಸಂತ ಸಮ್ಮೇಳನ: ಫೆ.8ರಂದು ಸಂತ ಸಮ್ಮೇಳನ ಆಯೋಜಿಸಲಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಉದ್ಘಾಟಿಸಲಿದ್ದಾರೆ. ಶ್ರವಣಬೆಳಗೊಳದ ಸ್ವಸ್ತಿಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶಿರ್ವಚನ ನೀಡಲಿದ್ದಾರೆ. ಕಾರ್ಕಳ ದಾನಶಾಲೆಯ ಧ್ಯಾನಯೋಗಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹುಂಚ ಮಠದ ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಿರಾಜಪೇಟೆ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಾಣಿಲ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮೊದಲಾದವರು ಉಪಸ್ಥಿತರಿರುವರು ಎಂದರು.

9ರಿಂದ ಜನಕಲ್ಯಾಣ ಕಾರ್ಯಕ್ರಮ: ಫೆ.9ರಂದು ಬೆಳಗ್ಗೆ 11ರಿಂದ ಜನಕಲ್ಯಾಣ ಕಾರ್ಯಕ್ರಮ ನಡೆಯಲಿದ್ದು ಉಡುಪಿ ಪೇಜಾವರ ಮಠ ಅಧೋಕ್ಷಜ ಪೀಠ ಶ್ರೀ ವಿಶ್ವೇಶ್ವರ್ತೀ ಶ್ರೀಪಾದರು ಆಶಿರ್ವಚನ ನೀಡಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚತುಷ್ಪಥ ರಸ್ತೆಯ ಪ್ರಥಮ ಹಂತ ಉದ್ಘಾಟನೆ ಮಾಡಲಿದ್ದಾರೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಭಿವೃದ್ಧಿ ಕಾರ್ಯ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಸರ್ಕಾರದೊಂದಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಕೆರೆ ಸಂಜೀವಿನಿ ಕಾರ್ಯಕ್ರಮ ಒಡಂಬಡಿಕೆ ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಗರಾಭಿವೃದ್ಧಿ, ವಸತಿ ಮತ್ತು ಉಸ್ತುವಾರಿ ಸಚಿವ ಯು.ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್,ಭೋಜೇಗೌಡ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಸಂಜೆ 7ಗಂಟೆಯಿಂದ ಲೇಸರ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಯಲಿದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರತ್ನಗಿರಿಯಲ್ಲಿ ಲೇಸರ್ ಶೋವನ್ನು ಚಿತ್ರನಟ ರಮೆಶ್ ಅರವಿಂದ್ ಉದ್ಘಾಟಿಸಲಿದ್ದಾರೆ. ಸಚಿವೆ ಜಯಮಾಲಾ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೊದಲಾದವರು ಉಪಸ್ಥಿತರಿರಲಿದ್ದಾರೆ. ನಂತರ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

10ರಂದು ಕ್ಷುಲ್ಲುಕ ದೀಕ್ಷಾ ಮಹೋತ್ಸವ: ಫೆ.10ರಂದು ಬೆಳಗ್ಗೆ 8ರಿಂದ 10ರವರೆಗೆ ಕ್ಷುಲ್ಲುಕ ದೀಕ್ಷಾ ಮಹೋತ್ಸವ ನಡೆಯಲಿದ್ದು 108 ಪುಷ್ಪದಂತ ಸಾಗರ ಮಹಾರಾಜರಿಂದ ಶ್ರೀ ಸತೀಶ್ ಜೀ ಬೈಯ್ಯಜಿ ಅವರಿಗೆ ಕ್ಷುಲ್ಲುಕ ಧೀಕ್ಷೆ ನಡೆಯಲಿದೆ. ಉತ್ತರಾಖಂಡದ ಯೋಗ ಗುರು ಶ್ರೀ ಬಾಬಾ ರಾಮ್‌ದೇವ್‌ಜಿ ಉಪಸ್ಥಿತರಿರುವರು. ಸಂಜೆ 4 ಗಂಟೆಯಿಂದ ಜನಮಂಗಲ ಕಾರ್ಯಕ್ರಮ ನಡೆಯಲಿದ್ದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ. ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿ ವಿಕಲಚೇತನರಿಗೆ ಗಾಲಿಕುರ್ಚಿ ವಿತರಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಗೃಹ ಸಚಿವ ಎಂ.ಬಿ. ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ್ ಮೊದಲಾದವರು ಉಪಸ್ಥಿತರಿರಲಿದ್ದಾರೆ. ಸಂಜೆ 7ಗಂಟೆಯಿಂದ ಅಜಯ್ ವಾರಿಯರ್ ಬಳಗದಿಂದ ಗಾನತರಂಗ ನಡೆಯಲಿದೆ.

ಫೆ.11ರಂದು ರಮೇಶ್‌ಚಂದ್ರ ಬಾಲಕಲಾವಿದರ ಬಳಗದಿಂದ ಬಾಲಪ್ರತಿಭೆ, ಫೆ.12ರಂದು ಸುಕನ್ಯಾ ರಾಮಗೋಪಾಲ್ ಅವರಿಂದ ಸ್ವರಮಾಧುರ್ಯ, ದೇಶಭಕ್ತಿಗೀತೆಗಳು- ಜಾಗೋ ಹಿಂದೂಸ್ತಾನಿ, ಫೆ.13ರಂದು ಕದ್ರಿ ಗೋಪಾಲನಾಥ್ ಹಾಗೂ ಪ್ರವೀಣ್ ಗೋಡ್ಕಂಡಿ ಮತ್ತು ಸಹಕಲಾವಿದರಿಂದ ವಾದ್ಯ ವೈವಿಧ್ಯ, ನಡೆಯಲಿದೆ.

14ರಂದು ಧಾರ್ಮಿಕ ಗ್ರಂಥಗಳ ಬಿಡುಗಡೆ: ಫೆ.14ರಂದು ಸಂಜೆ 4ಕ್ಕೆ ಧಾರ್ಮಿಕ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು 108 ಶ್ರೀ ಪುಣ್ಯಸಾಗರ ಮಹಾರಾಜರಿಂದ ಬಾಹುಬಲಿ ಅಹಿಂಜಾ ದಿಗ್ವಿಜಯಂ ಗದ್ಯಾನುವಾದದ ಗ್ರಂಥ ಬಿಡುಗಡೆ ಮಾಡಲಿದ್ದಾರೆ. 108 ಸಿದ್ಧಸೇನಾಚಾರ್ಯ ಮುನಿಮಹಾರಾಜರು ಆದಿ ಪುರಾಣ ಗ್ರಂಥ ಬಿಡುಗಡೆ ಮಾಡಲಿದ್ದಾರೆ. 108 ಶ್ರೀ ವೀರಸಾಗರ ಮುನಿಮಹಾರಾಜರು ಧರ್ಮಸ್ಥಳದ ಶ್ರೀ ಗೊಮ್ಮಟೇಶ್ವರ ಚರಿತ್ರೆ ಬಿಡುಗಡೆ ಮಾಡಲಿದ್ದಾರೆ. 50ನೇ ಪಟ್ಟಾಭಿಷೇಕದ ಸುವರ್ಣ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಬಿಡುಗಡೆ ಮಾಡಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅಥಿತಿಗಳಾಗಿ ಡಾ.ಹಂಪಾ ನಾಗರಾಜಯ್ಯ, ಕಮಲಾ ಹಂಪನ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಧರ್ಮಸ್ಥಳ ಗ್ರಾ.ಪಂ.ಅಧ್ಯಕ್ಷ ಚಂದನ್ ಕಾಮತ್ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ 7ರಿಂದ ರಮೆಶ್‌ಚಂದ್ರ ಅವರಿಂದ ಜಾನಪದ ಮಾಧುರ್ಯ, ಪ್ರಹ್ಲಾದ ಆಚಾರ್ಯ ಅವರಿಂದ ಶ್ಯಾಡೋ ಪ್ಲೇ ಇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಫೆ.15ರಂದು ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯವರಿಂದ ಭರತಾಗಮನ ಯಕ್ಷಗಾನ ಪ್ರದರ್ಶನ, ಫೆ.16ರಂದು ಫಯಾಝ್ ಖಾನ್ ಮತ್ತು ಬಳಗದವರಿಂದ ದಾಸ ಗೀತಿಕೆ, ಶೀಲಾ ಉನ್ನಿಕೃಷ್ಣನ್ ಮತ್ತು ಬಳಗದವರಿಂದ ನಾಟ್ಯಾಯನ, ಅರುಣ ಮೋಹಂತಿ ಮತ್ತು ಬಳಗದವರಿಂದ ಒಡಿಸ್ಸಿ ನೃತ್ಯೋತ್ಸವ, ಫೆ.17ರಂದು ಶಂಕರ ಮಹಾದೇವನ್ ಮತ್ತು ಬಳಗದವರಿಂದ ಗಾನ ನಿನಾದ, ವಿಲಾಸ್ ನಾಯಕ್ ಅವರಿಂದ ಚಿತ್ರ ಚಮತ್ಕಾರ, ಫೆ.18ರಂದು ಪಾರ್ಶ್ವನಾಥ ಉಪಾಧ್ಯೆ ಮತ್ತು ಬಳಗದವರಿಂದ ನೃತ್ಯ ಸಂಗಮ, ಎಸ್‌ಡಿಎಂ ಸಾಂಸ್ಕೃತಿಕ ವೈಭವ ಕಲೋತ್ಸವ ನಡೆಯಲಿದೆ.

ಸರ್ಕಾರದ ಸ್ಪಂದನೆಗೆ ಹೆಗ್ಗಡೆ ಶ್ಲಾಘನೆ
ಬೆಳ್ತಂಗಡಿ:
ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ ಶಾಶ್ವತ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾರ್ಯಕ್ಕೆ 23 ಕೋಟಿ ರೂ.ಬಿಡುಗಡೆಗೊಳಿಸಿದ್ದಲ್ಲದೆ ಇತರ ರೀತಿಯ ಸಹಕಾರಕ್ಕೆ ಮುಂದಾಗಿರುವುದು ಅಭಿನಂದನೀಯ. ಇದಕ್ಕಾಗಿ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರನ್ನು ಅಭಿನಂದಿಸುತ್ತೇನೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಸಚಿವ ಯು.ಟಿ.ಖಾದರ್, ಶಾಸಕ ಹರೀಶ್ ಪೂಂಜ ಸೇರಿದಂತೆ ಎಲ್ಲ ಸಚಿವರು, ಸಂಸದರು, ಶಾಸಕರು ಮತ್ತು ಅಧಿಕಾರಿ ವರ್ಗದವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಮಸ್ತಕಾಭಿಷೇಕ ನಮ್ಮದೇ ಕಾರ್ಯಕ್ರಮ ಎಂಬ ಮನಸ್ಸಿನಿಂದ ಸಹಕಾರ ನೀಡುತ್ತಿದ್ದಾರೆ. ಸರ್ಕಾರ ಹಾಗೂ ಇಲಾಖೆಯಿಂದ ನಡೆಯಬೇಕಾದ ಕಾರ್ಯಗಳಿಗೆ ವೇಗ ಹೆಚ್ಚಿದ್ದು, ಬಹುತೇಕ ಮೂಲ ಸೌಕರ್ಯಗಳು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

ನಾಳೆ ಮುನಿರಾಜರ ಕ್ಷೇತ್ರ ಪ್ರವೇಶ: ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಲಿರುವ ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರಜಿ ಮುನಿ ಮಹಾರಾಜರು ಜ.31ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪುರಪ್ರವೇಶ ಮಾಡಲಿದ್ದು, ಫೆ.2ರಂದು ಪರಮಪೂಜ್ಯ ಆಚಾರ್ಯ ಶ್ರೀ ವಾತ್ಸಲ್ಯ ವಾರಿಧಿ 108 ಪುಷ್ಪದಂತ ಸಾಗರಮುನಿ ಮಹಾರಾಜರು ಕ್ಷೇತ್ರ ಪ್ರವೇಶ ಮಾಡಲಿದ್ದಾರೆ. ಮಾತಾಜಿಗಳು, ದಿಗಂಬರರು ಸಹಿತ 100 ಪಿಂಛಿಗಳು ಭಾಗವಹಿಸಲಿದ್ದಾರೆ ಎಂದರು. ಮಹಾಮಸ್ತಕಾಭಿಷೇಕ ಮುಗಿದ ಬಳಿಕ ತಮಿಳುನಾಡು, ಮಹಾರಾಷ್ಟ್ರ ಮತ್ತು ಮಹಿಳಾ ಒಕ್ಕೂಟ ಮತ್ತೆ ಮಸ್ತಕಾಭಿಷೇಕಕ್ಕೆ ಈಗಾಗಲೇ ನೋಂದಾಯಿಸಿದ್ದು ಇದು 9,10,16ನೇ ದಿನಾಂಕದಂದು ನಡೆಯಲಿದ್ದು, ಉಳಿದಂತೆ 17, 18, 23, 24ರಂದು ಕೂಡ ಮಸ್ತಕಾಭಿಷೇಕ ನಡೆಯಲಿದೆ ಎಂದರು.

ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಿ: ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ದೇಶ ಕಂಡ ಮಹಾನ್ ತ್ಯಾಗಿ. ರಾಜ್ಯ, ದೇಶದ ಭವಿಷ್ಯವನ್ನು ಸುಮಾರು 50 ವರ್ಷಗಳ ಹಿಂದೆಯೇ ಕಂಡ ಶ್ರೀಗಳು ಮೊದಲನೇ ತಲೆಮಾರಿನ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ತ್ಯಾಗಿಗಳು. ಅವರಿಗೆ ನಿಜವಾಗಿಯೂ ಭಾರತರತ್ನ ಪ್ರಶಸ್ತಿ ಸಿಗಬೇಕಿತ್ತು, ಇನ್ನಾದರೂ ಸಿಗಲಿ. ಈ ಹಿಂದೆಯೂ ನಾನು ಒತ್ತಾಯಿಸಿದ್ದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.