ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ತೀರ್ಮಾನ

ಮಹಾಲಿಂಗಪುರ: ಬೆಲ್ಲದ ನಾಡು, ಮಹಾಲಿಂಗೇಶ್ವರರ ತಪೋಭೂಮಿ, ಸರ್ಕಾರಕ್ಕೆ ಅತಿ ಹೆಚ್ಚು ಕರ ತುಂಬುತ್ತಿರುವ ಮಹಾಲಿಂಗಪುರವನ್ನು ತಾಲೂಕು ರಚನೆಗೆ ಕಡೆಗಣಿಸಿರುವುದನ್ನು ವಿರೋಧಿಸಿ ಪಟ್ಟಣದ ಟೋಣಪಿನಾಥ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸರ್ವ ರಾಜಕೀಯ ಪಕ್ಷಗಳ, ಸರ್ವ ಧರ್ಮಗಳ, ಸಂಘ ಸಂಸ್ಥೆಗಳ ಮುಖಂಡರು ಹೋರಾಟದ ನಿರ್ಧಾರ ಕೈಗೊಂಡರು.

ಇತ್ತೀಚೆಗೆ ಮುಖ್ಯಮಂತ್ರಿ ಹೊಸ ತಾಲೂಕುಗಳನ್ನು ರಚನೆ ಮಾಡಿದರು. ಆ ಪೈಕಿ ಎಲ್ಲ ಪಟ್ಟಣಗಳಿಗಿಂತಲೂ ಮಹಾಲಿಂಗಪುರ ತಾಲೂಕು ಆಗಲು ಅರ್ಹವಾಗಿದೆ. 1974 ರಲ್ಲಿಯೇ ಎಚ್.ಕೆ. ಶಿವಾನಂದ ವರದಿ ಹಾಗೂ ಪಾಟೀಲ ಪುಟ್ಟಪ್ಪ ಆಯೋಗ ಅಂದಿನ ಸರ್ಕಾರಕ್ಕೆ ಮಹಾಲಿಂಗಪುರ ನಗರವನ್ನು ತಾಲೂಕು ಕೇಂದ್ರವಾಗಿಸಲು ಶಿಾರಸು ಮಾಡಿದ್ದವು.

ಎಂ.ಬಿ. ಪ್ರಕಾಶ ತಾಲೂಕು ಪುನರ್ ರಚನಾ ಸಮಿತಿ ವರದಿಯಲ್ಲಿಯೂ ತಾಲೂಕು ಮಾನ್ಯತೆ ನೀಡಲು ಶಿಾರಸು ಮಾಡಿದೆ. ಹೀಗಿದ್ದರೂ 25 ವರ್ಷಗಳಿಂದಲೂ ನಮ್ಮ ಕೋರಿಕೆಯನ್ನು ಕಡೆಗಣಿಸುತ್ತಲೇ ಬರಲಾಗಿದೆ. ಆದ್ದರಿಂದ ತಾಲೂಕು ಘೋಷಣೆಯಾಗುವವರೆಗೂ ನಮ್ಮ ಹೋರಾಟ ನಿಲ್ಲದು. ಮಹಾಲಿಂಗಪುರ ತಾಲೂಕು ರಚಿಸುವಂತೆ ಆಗ್ರಹಿಸಲು ಮುಖ್ಯಮಂತ್ರಿ ಬಳಿ ನಿಯೋಗ ಒಯ್ಯಲು ತೀರ್ಮಾನಿಸಲಾಗಿದೆ ಎಂದು ಮುಖಂಡರು ಸಭೆಗೆ ತಿಳಿಸಿದರು.

ಮಹಾಲಿಂಗಪ್ಪ ಕೋಳಿಗುಡ್ಡ, ಶೇಖರ ಅಂಗಡಿ, ಯಲ್ಲನಗೌಡ ಪಾಟೀಲ, ಮಲ್ಲಪ್ಪ ಶಿಂಗಾಡಿ, ಜಾವೇದ ಬಾಗವಾನ, ನಿಂಗಪ್ಪ ಬಾಳಿಕಾಯಿ, ಗೋವಿಂದ ನಿಂಗಸಾನಿ, ಧರೆಪ್ಪ ಸಾಂಗಲಿಕರ, ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ವಹಾಲಿಂಗಪ್ಪ ಕುಳ್ಳೊಳ್ಳಿ, ಹನುಮಂತ ಜಮಾದಾರ, ಶ್ರೀಶೈಲಪ್ಪ ರೊಡ್ಡನ್ನವರ, ಚಿದಾನಂದ ಧರ್ಮಟ್ಟಿ, ಸಿದ್ದು ಕೊಣ್ಣೂರ, ಎಸ್.ಎಂ. ಉಳ್ಳಾಗಡ್ಡಿ, ಸಜನಸಾಬ ಪೆಂಡಾರಿ, ಗುರಲಿಂಗಯ್ಯ ಮಠಪತಿ ಸೇರಿದಂತೆ ನೂರಾರು ಜನರು ಸೇರಿದ್ದರು.

ಮಹಾಲಿಂಗಪುರದಲ್ಲಿ ಏನೇನಿವೆ?: ರಾಯಚೂರು-ನಿಪ್ಪಾಣಿ ಹಾಗೂ ಜತ್ತ-ಜಾಂಬೋಟಿ ಈ ಎರಡು ಪ್ರಮುಖ ರಾಜ್ಯ ಹೆದ್ದಾರಿ ಹೊಂದಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲಾ ಕೇಂದ್ರಗಳಿಂದ 100 ಕಿ.ಮೀ. ಸಮಾನ ಅಂತರ ಹೊಂದಿದೆ. 75,000 ಜನಸಂಖ್ಯೆಯೊಂದಿಗೆ ಪುರಸಭೆ ಕಾರ್ಯಾಲಯ, 23 ವಾರ್ಡ್‌ಗಳು, ಸುಸಜ್ಜಿತ ಸಾರ್ವಜನಿಕ ಕ್ರೀಡಾಂಗಣ, ಮಾರುಕಟ್ಟೆ, ಕೆರೆ ಹಾಗೂ ರಸ್ತೆಗಳು, ಆಧುನಿಕ ಸೌಲಭ್ಯವುಳ್ಳ ಆಸ್ಪತ್ರೆಗಳು, ಹತ್ತಾರು ಸರ್ಕಾರಿ, ಖಾಸಗಿ ಶಿಕ್ಷಣ ಕೇಂದ್ರಗಳು, 50 ಹಾಸಿಗೆಗಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಪ್ರಧಾನ ಅಂಚೆ ಕಚೇರಿ, ಬ್ಯಾಂಕ್‌ಗಳನ್ನು ಹೊಂದಿದೆ.

ಮುಧೋಳ ತಾಲೂಕಿನ 19, ರಾಯಬಾಗ ತಾಲೂಕಿನ 6, ಜಮಖಂಡಿ 7, ಗೋಕಾಕ ತಾಲೂಕಿನ 16 ಗ್ರಾಮಗಳು ಮಹಾಲಿಂಗಪುರದಿಂದ ಕೇವಲ 10 ಕಿ.ಮೀ., ಇನ್ನುಳಿದ ಗ್ರಾಮಗಳು ಕೇವಲ 15 ಕಿ.ಮೀ.ಕ್ಕಿಂತಲೂ ಕಡಿಮೆ ಅಂತರದಲ್ಲಿವೆ. ಈ ಎಲ್ಲ ಗ್ರಾಮಗಳ ಒಟ್ಟು ಜನಸಂಖ್ಯೆ 3 ಲಕ್ಷ ದಾಟುತ್ತದೆ.