ಮಹಾಲಿಂಗಪುರ: ಬೆಳೆಯುವ ಜಡೆಗಳ ಒಡೆಯ ಮಹಾಲಿಂಗಪುರದ ಆರಾಧ್ಯ ದೈವ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆ ನಿಮಿತ್ತ ಸಂಭ್ರಮದಿಂದ ರಥೋತ್ಸವ ನಡೆಯಿತು.
ಬುಧವಾರ ಸಂಜೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಬಣ್ಣ ಬಣ್ಣಗಳ ಬೃಹತ್ ಹೂಮಾಲೆಗಳು, ಅಲಂಕೃತ ವಿದ್ಯುತ್ ದೀಪಗಳು, ಬಾಳೆದಿಂಡು ಮತ್ತು ಕಬ್ಬುಗಳಿಂದ ಕಂಗೊಳಿಸುತ್ತಿದ್ದ ರಥ ಭಕ್ತರ ಸಡಗರದಲ್ಲಿ ಮುಂದೆ ಸಾಗಿತು.
ರಥೋತ್ಸವದ ಮುಂದೆ ಕಂಡ್ಯಾಳ ಬಾಸಿಂಗ್, ಉಚ್ಛಾಯ, ನಂದಿಕೋಲು, ಕರಡಿಮಜಲು ತಂಡ, ಹಲಗೆ ವಾದನ, ಡೊಳ್ಳಿನ ಮೇಳ, ಶಹನಾಯಿ, ಕುದುರೆ ಕುಣಿತ, ಭಕ್ತರ ಜಯಘೋಷದೊಂದಿಗೆ ರಥಕ್ಕೆ ಬೆಂಡು-ಬೆತಾಸು, ಉತ್ತತ್ತಿ, ಕಾಯಿ, ಅರ್ಪಣೆ ಜಾತ್ರೆಗೆ ಮೆರಗು ನೀಡಿದವು. ಪಟ್ಟಣ, ಸುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳು, ದೇಶ-ವಿದೇಶಗಳಿಂದ ಆಗಮಿಸಿದ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ನಡೆದ ರಥೋತ್ಸವ ನೋಡಲು ನಯನಮನೋಹರವಾಗಿತ್ತು.
ಹರಿವಾನ ಕಟ್ಟೆ ಲೂಟಿ: ರಥೋತ್ಸವಕ್ಕೂ ಮುಂಚೆ ದೇವಸ್ಥಾನದ ಪಾದಗಟ್ಟಿ ಮುಂದೆ ಹರಿವಾನ ಕಟ್ಟೆ ಲೂಟಿ ಕಾರ್ಯಕ್ರಮ ನಡೆಯಿತು. ನೂರಾರು ರೈತರು ತಮ್ಮ ಹೊಲದಲ್ಲಿ ಬೆಳೆದ ಕಬ್ಬು, ಬಾಳಿಗಿಡ, ಗೋವಿನಜೋಳ ಮುಂತಾದವುಗಳನ್ನು ತಂದು ಪಾದಗಟ್ಟೆ ಮುಂದಿನ ಹಂದರದ ಮೇಲೆ ಇಟ್ಟರು. ಮಹಾಲಿಂಗೇಶ್ವರ ಶ್ರೀಗಳು ಇವುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಹಿಂದಿನಿಂದಲೂ ಬಂದ ಸಂಪ್ರದಾಯದಂತೆ ಭಕ್ತರು ನುಗ್ಗಿ ಬಂದು ಕಬ್ಬು, ಬಾಳಿಗಿಡ, ಗೋವಿನಜೋಳ ಮುಂತಾದವುಗಳನ್ನು ದೋಚಿಕೊಂಡು ಹೋದರು. ಹೀಗೆ ಲೂಟಿಮಾಡಿದ ಕೃಷಿ ಉತ್ಪನ್ನಗಳನ್ನು ರೈತರು ಹಾಗೂ ಭಕ್ತರು ತಮ್ಮ ಮನೆ ಮತ್ತು ವ್ಯಾಪಾರಿ ಸ್ಥಳಗಳಲ್ಲಿ ಕಟ್ಟಿ ವರ್ಷದವರೆಗೆ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದರಿಂದ ಮನೆಯಲ್ಲಿ ಅನ್ನದ ಕೊರೆತೆಯಾಗುವುದಿಲ್ಲ ಮತ್ತು ವ್ಯಾಪಾರಸ್ಥರಿಗೆ ಉತ್ತಮ ಆದಾಯ ಬರುತ್ತದೆ ಎಂಬ ನಂಬಿಕೆ ಇದೆ.
ಬುಧವಾರ ಪ್ರಥಮ ದಿನದ ರಥೋತ್ಸವ ರಾತ್ರಿಯಿಡೀ ನಡೆದು ಗುರುವಾರ ಬೆಳಗ್ಗೆ ಶ್ರೀ ಚನ್ನಗಿರೇಶ್ವರ ದೇವಸ್ಥಾನ ತಲುಪಿತು. ಗುರುವಾರ ಮರು ರಥೋತ್ಸವ ನಡೆಯಿತು. ಜಾತ್ರೆ ನಿಮಿತ್ತ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.