ಆಧುನಿಕ ವಿನ್ಯಾಸದ ಉತ್ಪನ್ನ ತಯಾರಿಸಿ

ಮಹಾಲಿಂಗಪುರ: ಹಳೇ ಮನಸ್ಥಿತಿಗೆ ಜೋತು ಬೀಳದೆ ಆಧುನಿಕ ವಿನ್ಯಾಸ ಹಾಗೂ ಗುಣಮಟ್ಟದ ಉತ್ಪನ್ನ ನೀಡಿ ಬದಲಾಗುತ್ತಿರುವ ಜಗತ್ತಿನೊಂದಿಗೆ ನೀವು ಬದಲಾಗಿ ಎಂದು ರಾಜ್ಯ ಜವಳಿ ಅಭಿವೃದ್ಧಿ ಆಯುಕ್ತ ಡಾ.ಎಂ.ಆರ್. ರವಿ ನೇಕಾರರಿಗೆ ಸಲಹೆ ನೀಡಿದರು.

ಬಾಗಲಕೋಟೆಯ ಕೈಮಗ್ಗ ಮತ್ತು ಜವಳಿ ಇಲಾಖೆ, ಮಹಾಲಿಂಗಪುರದ ನೇಕಾರರ ಸಹಕಾರಿ ಸಂಘಗಳ ಸಹಯೋಗದಲ್ಲಿ ಪಟ್ಟಣದ ನೀಲಕಂಠೇಶ್ಚರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

2017ರಲ್ಲಿ ನೇಕಾರರ 27 ಕೋಟಿ 34 ಲಕ್ಷ ರೂ. ಸಾಲಮನ್ನಾ ಮಾಡಲಾಗಿದ್ದು, 9,700 ಕ್ಕೂ ಹೆಚ್ಚು ನೇಕಾರರಿಗೆ ಅನುಕೂಲವಾಗಿದೆ. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ನೇಕಾರರ 23 ಕೋಟಿ 45 ಲಕ್ಷ ರೂ. ಮನ್ನಾ ಆಗಿದ್ದು, ಒಟ್ಟು ಸಾಲಮನ್ನಾದಲ್ಲಿ ಶೇ.80 ರಷ್ಟು ಫಲಾನುಭವಿಗಳು ಜಿಲ್ಲೆಯ ನೇಕಾರರೆ ಆಗಿದ್ದಾರೆ ಎಂದರು.

ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳು ಹೆಸರು ಮಾಡಿವೆ. ಇಳಕಲ್ಲ ಸೀರೆ, ಗುಳೇದಗುಡ್ಡದ ಕುಪ್ಪಸ ದೇಶದಲ್ಲಷ್ಟೆ ಅಲ್ಲ, ವಿದೇಶದಲ್ಲೂ ಪ್ರಸಿದ್ಧವಾಗಿವೆ. ಕೈಮಗ್ಗ ಕ್ಷೇತ್ರ ಬೆಳೆಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಇಲಾಖೆಯ ಇಚ್ಛೆ ಎಂದರು.

ತಾಂತ್ರಿಕ ತರಬೇತಿ
ತರಬೇತಿಗಾಗಿ ಪ್ರತಿ ವರ್ಷ 26 ಕೋಟಿ ರೂ. ನೀಡಲಾಗುತ್ತಿದ್ದು, ಮಹಿಳೆಯರು ಹೊಲಿಗೆ ತರಬೇತಿ ಪಡೆದು ಸ್ವಾವಲಂಬಿಗಳಾಗಿ ಎಂದರು. ನೇಕಾರ ಮುಖಂಡ ಜಿ.ಎಸ್. ಗೊಂಬಿ ಮಾತನಾಡಿದರು. ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಜೆ.ಟಿ. ಕುಮಾರ, ಜಿಲ್ಲಾ ಉಪನಿರ್ದೇಶಕಿ ಭಾರತಿ ಬಿದರಿಮಠ, ಸೌಜನ್ಯ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ಜಯವಂತ ಕಾಗಿ, ಶಂಕರ ಕೈಮಗ್ಗ ಸಹಕಾರಿ ಸಂಘದ ಷಣ್ಮುಖ ಗೊಂಬಿ, ಸಂಗಪ್ಪ ಹಳ್ಳೂರ, ಇಲಾಖೆಯ ತನಿಖಾಕಾರಿ ಸತೀಶ ಕಮಲದಿನ್ನಿ, ಸಿದ್ದು ಕುಂಬಾರ, ನೇಕಾರ ಧುರೀಣ ಚನ್ನಗಿರಿ ಜವಳಗಿ, ಶಶಿಕಾಂತ ಜಗದಾಳ, ಚನ್ನಪ್ಪ ಹುಣಶ್ಯಾಳ, ಶಿವಾನಂದ ಹಳ್ಳಿ, ಪ್ರಕಾಶ ಬಿಲಕುಂದಿ, ಅಡಿವೆಪ್ಪ ಹುಣಶ್ಯಾಳ ಇದ್ದರು. ಜಿ.ಎಸ್. ಗೊಂಬಿ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *