ಮಹಾಲಿಂಗಪುರ: ಪಟ್ಟಣದ ಮಮದಾಪುರ ಪೆಟ್ರೋಲ್ ಬಂಕ್ ಹತ್ತಿರ ಕಸದ ತಿಪ್ಪೆಯಲ್ಲಿ ದೊರೆತ ನವಜಾತ ಶಿಶುವನ್ನು ಚಿಂದಿ ಆಯುವ ಮಹಿಳೆ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಲಕ್ಷ್ಮೀ ಶಿವಪ್ಪ ಸಿಕ್ಕಲಗಾರ ಎಂದಿನಂತೆ ಮಾ.2 ರಂದು ಚಿಂದಿ ಆಯುವಾಗ ತಿಪ್ಪೆಯಲ್ಲಿ ಶಿಶು ಅಳುವುದನ್ನು ಕಂಡು ಮರುಗಿ ತನ್ನ ಮನೆಗೆ ತೆಗೆದುಕೊಂಡು ಹೋಗಿ ಮಾತೃ ಹೃದಯದಿಂದ ಆರೈಕೆ ಮಾಡಿದ್ದಾರೆ.
ಈ ವಿಷಯ ಮಾ.3 ರಂದು ಪೊಲೀಸರ ಗಮನಕ್ಕೆ ಬಂದಾಗ ಅವರು ಮುಧೋಳ ತಾಲೂಕು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅಧಿಕಾರಿಗಳು ಮಹಾಲಿಂಗಪುರದ ಸಿಕ್ಕಲಗಾರ ಓಣಿಯಲ್ಲಿನ ಲಕ್ಷ್ಮೀ ಅವರ ಮನೆಗೆ ಭೇಟಿ ನೀಡಿ ಶಿಶುವನ್ನು ತಮ್ಮ ವಶಕ್ಕೆ ಪಡೆದರು.
ಯಾರೋ ಸಾರ್ವಜನಿಕ ಸ್ಥಳದಲ್ಲಿ ಶಿಶು ಬಿಟ್ಟು ಹೋಗಿದ್ದಾರೆಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ತಜ್ಞ ಡಾ.ವಿಶ್ವನಾಥ ಗುಂಡಾ ಅವರ ಬಳಿ ತಪಾಸಣೆ ಮಾಡಿಸಿ, ಮಗು ಆರೋಗ್ಯವಾಗಿರುವ ಬಗ್ಗೆ ಖಾತರಿಪಡಿಸಿಕೊಂಡರು. ನಂತರ ಬಾಗಲಕೋಟೆ ಜಿಲ್ಲಾ ದತ್ತು ಸ್ವೀಕಾರ ಕೇಂದ್ರಕ್ಕೆ ವಿಷಯ ತಿಳಿಸಿ ನಿರ್ದೇಶಕ ವೆಂಕಟೇಶ ಮುಖೆ ಅವರ ಸುಪರ್ದಿಗೆ ಶಿಶುವನ್ನು ಒಪ್ಪಿಸಿದ್ದಾರೆ.ಈಗ ಶಿಶು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷೇಮವಾಗಿದೆ.
ಕಾನೂನಿನನ್ವಯ 60 ದಿನ ದತ್ತು ಸ್ವೀಕಾರ ಕೇಂದ್ರವೇ ಮಗುವನ್ನು ಸಾಕುತ್ತದೆ. ಸಂಬಂಧಿಸಿದವರು ಬಾರದಿದ್ದರೆ 60 ದಿನಗಳ ನಂತರ ನಿಯಮಾವಳಿ ಅನುಸರಿಸಿ ದತ್ತು ನೀಡಲಾಗುತ್ತದೆ. ಅನಾಥ ಶಿಶುವಿನ ಸಂಬಂಧಿಗಳಾರಾದರೂ ಇದ್ದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆ ಸಂಪರ್ಕಿಸಲು ಪಿಎಸ್‌ಐ ರಾಜು ಬೀಳಗಿ ತಿಳಿಸಿದ್ದಾರೆ.
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮಹಾಲಿಂಗಪುರದ ಮೇಲ್ವಿಚಾರಕಿ ಲತಾ ಬೆನಕಟ್ಟಿ, ಮಹಿಳಾ ಪೊಲೀಸ್ ಸಿಬ್ಬಂದಿ ಎಸ್.ಎಚ್.ನಾವಿ, ಮಕ್ಕಳ ವೈದ್ಯ ವಿಶ್ವನಾಥ ಗುಂಡಾ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಎಎಸ್‌ಐ ಎಸ್.ಬಿ. ಹಿರೇಕುರುಬರ, ಸಿಬ್ಬಂದಿ ಅಶೋಕ ಸವದಿ, ಎಸ್.ಎಸ್. ನಾವಿ, ಎಂ.ಎಸ್. ಕಣಶೆಟ್ಟಿ, ಭೀಮಶಿ ನಾಯಕ ಇತರರು ಇದ್ದರು.
ನವಜಾತ ಶಿಶುಗಳನ್ನು ಬೀದಿಯಲ್ಲಿ ಬಿಟ್ಟು ಹೋಗುವುದು ಸರಿಯಲ್ಲ. ಮಕ್ಕಳು ಬೇಡವಾಗಿದ್ದರೆ, ಸಾಕಲು ಆಗದಿದ್ದರೆ ನಮ್ಮ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದರೆ ಮಗುವನ್ನು ಜಿಲ್ಲಾ ತೊಟ್ಟಿಲು ಕೇಂದ್ರಗಳಲ್ಲಿ ಬೆಳೆಸಲಾಗುವುದು. ಮಗು ಬೇಕು ಎನ್ನುವವರಿಗೆ ದತ್ತು ಕೇಂದ್ರಗಳಿಂದ ಕಾನೂನು ಪ್ರಕಾರ ಕೊಡಲಾಗುವುದು.
–ಶೋಭಾ ಮಂಟೂರ ಸಿಡಿಪಿಒ ಮುಧೋಳ