More

    ಸಮುದಾಯ ಅಭಿವೃದ್ಧಿ ಹೊಂದಲಿ

    ಮಹಾಲಿಂಗಪುರ: ಬಸವಣ್ಣನವರ ಮಾರ್ಗದರ್ಶನದಂತೆ ನಡೆದು, ನಿಷ್ಠೆಯಿಂದ ಕಾಯಕ ಮಾಡಿ ದಾಸೋಹ ನಡೆಸಿದ ಶಿವಶರಣ ಮೇದಾರ ಕೇತೇಶ್ವರ ಸರ್ವ ಜನಾಂಗದ ಶರಣ ಆಗಿದ್ದಾರೆ ಎಂದು ಮೇದಾರ ಗುರುಪೀಠ ಸೀಬಾರ ಚಿತ್ರದುರ್ಗದ ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು ಹೇಳಿದರು.

    ಸ್ಥಳೀಯ ಟೊಣಪಿನಾಥ ಕಲ್ಯಾಣಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಮೇದಾರ ಹಾಗೂ ಬುರುಡ ಜನಾಂಗದ ಪ್ರಥಮ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿ, ಬಸವಣ್ಣನವರಲ್ಲಿಯೇ ದೇವರನ್ನು ಕಂಡ ಕೇತಯ್ಯನವರು ಬಿದಿರಿನ ಮೇಲೆ ಬಸವಣ್ಣನವರಿಗೆ ಸಲ್ಲುವ ವಚನ ರಚಿಸಿದ್ದರು. ಅವರಿಂದಲೇ ಮೇದಾರ ಸಮಾಜ ಗುರುತಿಸಲು ಕಾರಣವಾಗಿದೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಸಮುದಾಯ ಅಭಿವೃದ್ಧಿ ಹೊಂದಬೇಕು ಎಂಬುದು ನನ್ನ ಆಸೆ. ಶರಣರ ದಾಸೋಹ ಪರಂಪರೆ ಮುಂದುವರಿಯಲಿ. ಸ್ಥಳೀಯ ಶಾಸಕ ಸಿದ್ದು ಸವದಿ ಅವರು ಸಮಾಜದ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಹೇಳಿದರು.

    ವಚನಕಾರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಮಾವೇಶ ಅಗತ್ಯ. ಮಕ್ಕಳನ್ನು ಶಿಕ್ಷಣವಂತರಾಗಿಸಿ ಸಾಮಾಜಿಕ, ಆರ್ಥಿಕವಾಗಿ ಏಳಿಗೆ ಹೊಂದಲು ಶ್ರಮಿಸಬೇಕು. ಮೇದಾರರ ಕಾಯಕದಲ್ಲಿ ಆದಾಯ ಕಡಿಮೆಯಿದೆ. ಮಕ್ಕಳು ಸುಶಿಕ್ಷಿತರಾದರೆ ಆರ್ಥಿಕವಾಗಿ ಸಬಲರಾಗುತ್ತಾರೆ. ಮೇದಾರ ಕೇತಯ್ಯನವರ ಪ್ರತಿ ವಚನದಲ್ಲೂ ಕಾಯಕ ಸಂದೇಶವಿದೆ ಎಂದರು.

    ಚಿತ್ರದುರ್ಗದ ಮೇದಾರ ಗುರುಪೀಠದ ಅಧ್ಯಕ್ಷ ಸಿ.ಪಿ. ಪಾಟೀಲ ಮಾತನಾಡಿ, ವಾಲ್ಮೀಕಿ ಸಮಾಜದ ನಂತರ ನಮ್ಮದು ಅತಿ ಹೆಚ್ಚು ಪರಿಶಿಷ್ಟರನ್ನು ಹೊಂದಿದ ಸಮಾಜವಾಗಿದೆ ಎಂದರು.

    ಗುರುಪೀಠದ ಕಾರ್ಯದರ್ಶಿ ಎಂ.ಹನುಮಂತಪ್ಪ, ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಪ್ಪ, ಬಸವರಾಜ ದಾವಣಗೇರೆ ಮಾತನಾಡಿದರು. ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ, ಡಿಎಸ್‌ಎಸ್ ಅಧ್ಯಕ್ಷ ಲಕ್ಷ್ಮಣ ಮಾಂಗ ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಮೇದಾರ ಸಮಾಜದ ಅಧ್ಯಕ್ಷ ಹಣಮಂತ ಬುರುಡ, ರಮೇಶ ಬುರುಡ ಮುಂತಾದವರು ಇದ್ದರು. ರಾಜು ಬುರುಡ ಸ್ವಾಗತಿಸಿದರು. ಶಿವಾನಂದ ಬುರುಡ ನಿರೂಪಿಸಿದರು.

    ಜ್ಯೋತಿ ಯಾತ್ರೆಗೆ ಸ್ವಾಗತ
    ಮಹಾಲಿಂಗಪುರ ಬಸವೇಶ್ವರ ವೃತ್ತದಲ್ಲಿ ಶಿವಶರಣ ಮೇದಾರ ಕೇತೇಶ್ವರ ಜ್ಯೋತಿ ಯಾತ್ರೆಯನ್ನು ಕುಂಭಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು ಬೆಳ್ಳಿ ರಥದಲ್ಲಿ ಆಸೀನರಾಗಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜ್ಯೋತಿ ಯಾತ್ರೆ ಸಂಚರಿಸಿ ಟೊಣಪಿನಾಥ ಕಲ್ಯಾಣಮಂಟಪಕ್ಕೆ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts