ಸಹಜ ಅಭಿನಯದ ರಂಗ ಕಲೆ ಉಳಿಯಲಿ

ಮಹಾಲಿಂಗಪುರ: ಪಾತ್ರದ ಸನ್ನಿವೇಶಕ್ಕೆ ತಕ್ಕಂತೆ ಅಳುವ-ಅಳಿಸುವ, ನಗುವ-ನಗಿಸುವ ಸಹಜ ಅಭಿನಯದ ರಂಗ ಕಲೆ ಉಳಿಯಬೇಕು. ಅಂತಹ ಕಲಾವಿದರ ಹೆಸರು ಕೂಡ ಅಜರಾಮರವಾಗಲಿ ಎಂದು ಮಕ್ಕಳ ಸಾಹಿತಿ ಅಣ್ಣಾಜಿ ಡತಾರೆ ಹೇಳಿದರು.

ಸಮೀಪದ ಢವಳೇಶ್ವರ ಗ್ರಾಮದ ಯರಗಟ್ಟಿ ತೋಟದ ವಸತಿಯಲ್ಲಿ ಐದು ದಶಕ ಮಹಾಭಾರತ ನಾಟಕದ ಭೀಮನ ಪಾತ್ರದಲ್ಲಿ ಅಭಿನಯಿಸಿ ಮನಗೆದ್ದಿದ್ದ ಗೂಳಪ್ಪ ಯರಗಟ್ಟಿ, ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಚಪ್ಪ ಜಕಾತಿ ಅವರ ಸ್ಮರಣಾರ್ಥ ಶುಕ್ರವಾರ ನಡೆದ ಸ್ಮರಣೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗ ಕಲೆ ಎಂಬುದು ವೀಕ್ಷಕರಿಗೆ ರಂಜನೆ ಮಾತ್ರ. ಆದರೆ, ಕಲಾವಿದರಿಗೆ ಅದೊಂದು ಪಾತ್ರ, ಪರಕಾಯ ಪ್ರವೇಶದ ಉತ್ತುಂಗ ಸ್ಥಿತಿಯಾಗಿದೆ. ಅಭಿಮಾನ, ಗೌರವ ಹೊಂದಿರುವ ಕಲಾವಿದರಿಗೆ ಕಲೆಯೇ ದೇವರು ಎಂದರು.

ಶಿಕ್ಷಕ ಎಸ್.ಬಿ. ರಡ್ಡೆರಟ್ಟಿ ಮಾತನಾಡಿ, ಕಲೆಯ ಬೆನ್ನತ್ತಿದ ಬಹುತೇಕ ಕಲಾವಿದರು ಮನೆ ಜವಾಬ್ದಾರಿ ಮರೆತು, ಚಟಕ್ಕೆ ಜೋತುಬಿದ್ದು, ಹಾಳಾಗಿರಬಹುದು. ಗೂಳಪ್ಪ ಯರಗಟ್ಟಿಯವರಂತಹ ಕಲಾವಿದ ಮನೆ, ಸಮಾಜ ಮತ್ತು ಕಲಾಲೋಕಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ ಎಂದರು.

ಅಕ್ಕಿಮರಡಿಯ ಜನಪದ ಕಲಾವಿದ ರಾಮಣ್ಣ ಕೊಣ್ಣೂರ ಸ್ವರಚಿತ ಗೀತೆ, ಪ್ರಕಾಶ ಮಲ್ಲಿಮಾರ್ ದಿ.ಗೂಳಪ್ಪ ಯರಗಟ್ಟಿ ಜೀವನಾಧಾರಿತ ಸ್ವರಚಿತ ಗೀತೆ ಹಾಡಿದರು. ಕಜಾಪ ಮಹಾಲಿಂಗಪುರ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿದರು.

ಹಿರಿಯ ವಿಶ್ರಾಂತ ಶಿಕ್ಷಕ ಬಿ.ಟಿ. ಗುಡ್ಲಮನಿ, ಮಹಾಲಿಂಗಪ್ಪ ಜಕ್ಕನ್ನವರ, ಗೌಡಪ್ಪಗೌಡ ಪಾಟೀಲ, ಮನೋಹರ ಕೆಂಪವಾಡ, ಮಲ್ಲಪ್ಪ ಸಿಂಗಾಡಿ, ಮಹಾಲಿಂಗಪ್ಪ ಸನದಿ, ಹೊಳೆಬಸು ಹಡಪದ, ಗಂಗವ್ವ ಯರಗಟ್ಟಿ ಇತರರು ಇದ್ದರು.