ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ

ಮಹಾಲಿಂಗಪುರ: ವಿಶ್ವದ 195 ರಾಷ್ಟ್ರಗಳು ಭಾರತದಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲೆಂದು ಬಯಸುತ್ತಿದ್ದರೆ ನಮ್ಮದೆ ದೇಶದ 22 ಪಕ್ಷಗಳ ಮುಖಂಡರು ಮಹಾಘಟಬಂಧನ್ ಎಂಬ ಭ್ರಷ್ಟಕೂಟ ರಚಿಸಿ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಗೋವಿಂದ ಕಾರಜೋಳ ಟೀಕಿಸಿದರು.

ಸಮೀಪದ ರನ್ನಬೆಳಗಲಿಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಮೋದಿ ಅವರು ಮತ್ತೆ ಪ್ರಧಾನಿ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಗದ್ದಿಗೌಡರ ಅವರಿಗೆ ಮತ ನೀಡಿ ಎಂದರು.

ಅಭ್ಯರ್ಥಿ ಗದ್ದಿಗೌಡರ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗಿ ಉಳಿಯುತ್ತಿದ್ದರು. ಆದರೆ, ಮೋದಿ ಪ್ರಧಾನಿಯಾದ ಮೇಲೆ ಸರ್ಕಾರದ ಸೌಲಭ್ಯಗಳು ಮಧ್ಯವರ್ತಿಯಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದಾರೆ. ಇದರಿಂದಾಗಿ ಬಡವರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ ಗಣನೀಯವಾಗಿ ಅನುಕೂಲವಾಗಿದೆ ಎಂದರು.

ಮುಧೋಳ ಗ್ರಾಮೀಣ ಘಟಕದ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಮುಖಂಡರಾದ ಬಿ.ಎಚ್. ಪಂಚಗಾಂವಿ, ಆರ್.ಟಿ. ಪಾಟೀಲ, ನಾಗಪ್ಪ ಅಂಬಿ, ಅಶೋಕ ಸಿದ್ದಾಪುರ, ಸಿದ್ದು ಪಾಟೀಲ, ಶಿವನಗೌಡ ಪಾಟೀಲ, ಪಂಡಿತ ಪೂಜೇರಿ, ಪುಟ್ಟು ಕುಲಕರ್ಣಿ, ಚಿಕ್ಕಪ್ಪ ನಾಯಿಕ, ರಾಮನಗೌಡ ಪಾಟೀಲ, ಲಕ್ಷ್ಮಣ ಶಿರೋಳ, ಲಕ್ಷ್ಮಣ ಕಲ್ಲೊಳೆಪ್ಪಗೋಳ, ಗಂಗಪ್ಪ ಬಿಸನಕೊಪ್ಪ, ಪಾಂಡು ಸಿದ್ದಾಪುರ, ಮಹಾಲಿಂಗ ಶಿರೋಳ ಇತರರಿದ್ದರು.

ಅಳುವುದರಲ್ಲೇ ಕಾಲ ಕಳೆದ ಎಚ್‌ಡಿಕೆ
5 ವರ್ಷ ಮುಖ್ಯಮಂತ್ರಿಯಾಗಿ ನಿದ್ದೆ ಮಾಡುವುದರಲ್ಲಿಯೇ ಕಾಲ ಕಳೆದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ 11 ತಿಂಗಳಾದರೂ ಅಳುವುದರಲ್ಲಿಯೇ ಕಾಲ ಕಳೆದ ಕುಮಾರಸ್ವಾಮಿ ರಾಜ್ಯದ ಜನತೆಗೆ ಏನನ್ನೂ ಮಾಡಲಿಲ್ಲ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮಂಡ್ಯ, ಹಾಸನ ಹಾಗೂ ರಾಮನಗರ ಜಿಲ್ಲೆಗಳಿಗೆ 12 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಖಜಾನೆ ಲೂಟಿ ಮಾಡಲಾಗಿದೆ. ಉತ್ತರ ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ. ಮುಧೋಳಕ್ಕೆ 1 ಪೈಸೆ ಕೂಡ ಕೊಟ್ಟಿಲ್ಲ ಎಂದು ಕಾರಜೋಳ ಆರೋಪಿಸಿದರು.

Leave a Reply

Your email address will not be published. Required fields are marked *