ಪುರಸಭೆಗೆ ಆರ್ಥಿಕ ಸಮಸ್ಯೆ

ಮಹೇಶ ಮನ್ನಯ್ಯನವರಮಠ ಮಹಾಲಿಂಗಪುರ:ಸ್ಥಳೀಯ ಪುರಸಭೆ ಅಧಿಕ ವೆಚ್ಚ ಹಾಗೂ ಕಡಿಮೆ ಆದಾಯ ದಿಂದ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ.

ಪೌರಕಾರ್ವಿುಕರ ವೇತನ, ಕಸ ವಿಲೇವಾರಿ ವಾಹನಗಳಿಗೆ ಡೀಸೆಲ್ ಹಾಕಿಸುವುದೇ ಪುರಸಭೆಗೆ ದೊಡ್ಡ ಸವಾಲಾಗಿದೆ. ಇದರ ಜತೆಗೆ ಈಗ ಗುತ್ತಿಗೆದಾರರ ಅಂದಾಜು 40.50 ಲಕ್ಷ ರೂ. ಬಿಲ್ ಪೆಂಡಿಂಗ್ ಉಳಿದಿದ್ದು, ಇಡೀ ಪುರಸಭೆ ಆರ್ಥಿಕ ಮುಗ್ಗಟ್ಟಿನಿಂದ ಸಾಗುತ್ತಿದೆ ಎಂಬ ಆತಂಕ ಶುರುವಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪತ್ರಿಕೆಗೆ ದೊರೆತ ಮಾಹಿತಿಯಲ್ಲಿ ಇದೆಲ್ಲ ಅಂಶಗಳು ಬಹಿರಂಗವಾಗಿದ್ದು, ಗುತ್ತಿಗೆದಾರರ ಬಿಲ್ ಪಾವತಿಸದೆ ಪುರಸಭೆ ಸತಾಯಿಸುತ್ತಿರುವುದು ಬೆಳಕಿಗೆ ಬಂದಿದೆ.

ಎಷ್ಟಿದೆ ಸಂಗ್ರಹ, ಬಾಕಿ?: ಪುರಸಭೆ ನಿಧಿಯಲ್ಲಿ 14.95 ಲಕ್ಷ ರೂ. ಸಂಗ್ರಹವಾಗಿದ್ದರೆ 29.30 ಲಕ್ಷ ರೂ. ಪಾವತಿಸಬೇಕಿದೆ. ಅದೇ ರೀತಿ ನೀರು ಸರಬರಾಜಿನಲ್ಲಿ 1.40 ಲಕ್ಷ ರೂ. ಸಂಗ್ರಹವಾಗಿದ್ದರೆ 11.20 ಲಕ್ಷ ರೂ. ಪಾವತಿಸಬೇಕಿದೆ. ಉದ್ಯಮ ನಿಧಿಯಲ್ಲಿ 87.46 ಲಕ್ಷ ರೂ. ಇದ್ದರೂ ಅದೇ ನಿಧಿಗೆ ಅದನ್ನು ಬಳಸಬೇಕಿದ್ದರಿಂದ ಯಾವುದೇ ಬಿಲ್ ಪಾವತಿಸುವುದು ಬಾಕಿ ಉಳಿದಿಲ್ಲ ಎಂದು ಮಾಹಿತಿ ನೀಡಲಾಗಿದೆ. ಎಸ್​ಎಫ್​ಸಿ ವಿವಿಧ ನಿಧಿಯಡಿ ಬಾಕಿ ಅನುದಾನ ಸೇರಿ 26.49 ಲಕ್ಷ ರೂ. ಇದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದರೆ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಿಲ್ಲ. ಅದೇ ರೀತಿ ಪುರಸಭೆ ನಿಧಿಯಡಿ 9.72 ಲಕ್ಷ ರೂ. ಇದೆ. ಪಾವತಿಗಾಗಿ ಕ್ರಮ ಜರುಗಿಸಲಾಗುತ್ತಿದೆ. ಇವರೆಡು ನಿಧಿಯಡಿ ಕಾಮಗಾರಿಗಳು ಪೂರ್ಣಗೊಂಡಿವೆ. ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಆದರೆ ಇನ್ನೂ ಬಿಲ್ ಪಾವತಿಸಿಲ್ಲ. ಹಣಕಾಸು ನಿಧಿಯಡಿ 95.70 ಲಕ್ಷ ರೂ. ಇದೆ. ಟೆಂಡರ್ ಕರೆದಿದ್ದು, ದರ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಅಂದಾಜು 38 ಸಾವಿರ ಜನಸಂಖ್ಯೆ ಹೊಂದಿರುವ ಪುರಸಭೆ, ಹಲವು ಆದಾಯ ಮೂಲಗಳನ್ನು ಹೊಂದಿದ್ದರೂ ತೆರಿಗೆ ವಸೂಲಿ ಸರಿಯಾಗಿ ಆಗದಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ನಿರ್ವಹಣೆಗೆ ಖರ್ಚು ಸರಿದೂಗಿಸುವುದಕ್ಕೆ ಪುರಸಭೆ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಬಡಾವಣೆಗಳು ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಮೂಲ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ. ಪುರಸಭೆಗೆ ವಾಸದ ಮನೆಗಳಿಂದ ತೆರಿಗೆ ಮೂಲಕ ಹಣ ಬರಬೇಕಾಗಿದೆ. ಇನ್ನು ಪುರಸಭೆಯ ವಾಣಿಜ್ಯ ಮಳಿಗೆಗಳಿಂದಲೂ ವಾರ್ಷಿಕ ಬಾಡಿಗೆ ಬರಬೇಕು. ಕುಡಿಯುವ ನೀರಿನ ನಲ್ಲಿಗಳ ತೆರಿಗೆಯಲ್ಲಿ ಕಳೆದ ವರ್ಷ ಉಳಿದುಕೊಂಡಿರುವ ಬಾಕಿ ಹಾಗೂ ಪ್ರಸಕ್ತ ವರ್ಷದ ತೆರಿಗೆ ಸೇರಿ ಹಣ ಬರಬೇಕಾಗಿದೆ.

ಕಚೇರಿಯಲ್ಲಿ ಸಿಬ್ಬಂದಿ ಕೊರತೆ:ಪುರಸಭೆ ಸಿಬ್ಬಂದಿ ಕೊರತೆಯನ್ನೂ ಎದುರಿಸುತ್ತಿದೆ. 97 ಜನ ನೌಕರರು ಕಾರ್ಯ ನಿರ್ವಹಿಸಬೇಕಾದ ಇಲ್ಲಿನ ಪುರಸಭೆಯಲ್ಲಿ ಕೇವಲ 34 ಜನ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಅವಶ್ಯಕ ಇರುವ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳು ಯೋಚಿಸುತ್ತಿಲ್ಲ. ಇದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟುಮಾಡಿದೆ. ಪರಿ ಸರ ಅಧಿಕಾರಿ, ಅಕೌಂಟಂಟ್, ಜ್ಯೂ. ಇಂಜಿ ನಿಯರ್, ಸೀನಿಯರ್ ಹೆಲ್ತ್ ಇನ್​ಸ್ಪೆಕ್ಟರ್, ಸ್ಟೆನೋಗ್ರಾಫರ್, ಜ್ಯೂ.ಪ್ರೋಗ್ರಾಮರ್, ಬಿಲ್ ಕಲೆಕ್ಟರ್ ಸೇರಿ 63 ಹುದ್ದೆಗಳು ಖಾಲಿ ಇವೆ.

ಪುರಸಭೆಗೆ ಆರ್ಥಿಕ ತೊಂದರೆ ಏನೂ ಇಲ್ಲ. ಅದನ್ನು ಹಂತ ಹಂತವಾಗಿ ಸರಿದೂಗಿಸಲಾಗುತ್ತಿದೆ. ತೆರಿಗೆ ಪಾವತಿಸುವುದು ಪ್ರಗತಿಯಲ್ಲಿದೆ. ಕುಡಿಯುವ ನೀರಿನ ನಲ್ಲಿಗಳ ತೆರಿಗೆ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಇದರ ಕುರಿತು ಜನರಲ್ಲಿಯೂ ಅರಿವು ಮೂಡಬೇಕಿದೆ. ವಾಣಿಜ್ಯ ಮಳಿಗೆಗಳ ವಾರ್ಷಿಕ ಬಾಡಿಗೆ ಸ್ಪಲ್ಪ ಪ್ರಮಾಣದಲ್ಲಿ ಬರಬೇಕಿದೆ.

| ಎ.ಬಿ. ಕಲಾಲ ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ