ಮೈಸೂರಿನ ಮಹಾಜನ ಕಾಲೇಜು ಚಾಂಪಿಯನ್

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಅರ್ಥಶಾಸ್ತ್ರ ಹಬ್ಬದಲ್ಲಿ ಮೈಸೂರಿನ ಮಹಾಜನ ಕಾಲೇಜು ತಂಡ 4 ಬಹುಮಾನ ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾಜನ ಕಾಲೇಜು ತಂಡ ಜನಪದ ನೃತ್ಯ, ಕಿರುಪ್ರಹಸನ, ಮಾದರಿ ಪ್ರದರ್ಶನ, ರಸಪ್ರಶ್ನೆ ವಿಭಾಗಗಳಲ್ಲಿ ಬಹುಮಾನ ಗಳಿಸಿದೆ. ಪುತ್ತೂರಿನ ಸೆಂಟ್ ಫಿಲೋಮಿನಾ ಕಾಲೇಜು ತಂಡ 2ನೇ ಸ್ಥಾನ ಅಲಂಕರಿಸಿತು.

ಫಲಿತಾಂಶ: ಜನಪದ ನೃತ್ಯದಲ್ಲಿ ಪುತ್ತೂರಿನ ಸೆಂಟ್ ಫಿಲೋಮಿನಾ ಕಾಲೇಜು ತಂಡ ಪ್ರಥಮ, ಮೈಸೂರಿನ ಮಹಾಜನ ಕಾಲೇಜು ದ್ವಿತೀಯ, ಕಿರುಪ್ರಹಸನ ಸ್ಪರ್ಧೆಯಲ್ಲಿ ಮಹಾಜನ ಪ್ರಥಮ, ಪುತ್ತೂರಿನ ಸೆಂಟ್ ಫಿಲೋಮಿನಾ ದ್ವಿತೀಯ, ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಮಹಾಜನ ಪ್ರಥಮ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಮಹಾಜನ ಪ್ರಥಮ, ಸೆಂಟ್ ಫಿಲೋಮಿನಾ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ನಿಧಿಶೋಧ ಸ್ಪರ್ಧೆಯಲ್ಲಿ ಪುತ್ತೂರಿನ ಸೆಂಟ್ ಫಿಲೋಮಿನಾ ಕಾಲೇಜು ಏಕಮಾತ್ರ ಪ್ರಶಸ್ತಿ ಪಡೆದುಕೊಂಡಿದ್ದು, ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ ಮೈಸೂರಿನ ಮಹಾಜನ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಉದ್ಯಮಿ ಮಚ್ಚಮಾಡ ಅನೀಸ್ ಮಾದಪ್ಪ ಸ್ಪರ್ಧೆಗೆ ಚಾಲನೆ ನೀಡಿದರು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎ.ಸಿ.ಗಣಪತಿ, ನಿರ್ದೇಶಕಿ ಡಾ.ಪೊನ್ನಮ್ಮ ಮಾಚಯ್ಯ, ವಿರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ.ಎ.ಎಂ.ಕಮಲಾಕ್ಷಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ, ಪ್ರಭಾರ ಪ್ರಾಂಶುಪಾಲೆ ಪ್ರೊ.ಕೆ.ವಿ.ಕುಸುಮಾಧರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬೆನಡಿಕ್ಟ್ ಸಾಲ್ಡಾನ, ಉಪನ್ಯಾಸಕರಾದ ಸಿ.ಎಂ.ಕಿರಣ್, ಜಿ.ಪವಿತ್ರ ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *