ಮಹಾಘಟಬಂಧನ ರಾಜ್ಯಕ್ಕೇ ಸೀಮಿತ

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಾಗಿ ರಾಜ್ಯದಲ್ಲಿ ಆರಂಭವಾದ ಮಹಾಘಟಬಂಧನ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಮಹಾಘಟಬಂಧನ್ ಎಲ್ಲಿಗೆ ಹೋಯ್ತು? ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಸೀಟು ಕೊಟ್ಟಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷವನ್ನು ಬಾಗಿಲಿನಿಂದ ಆಚೆ ನಿಲ್ಲಿಸಿದ್ದಾರೆ. ದೇಶದಲ್ಲಿ ಎಲ್ಲೂ ಕಾಂಗ್ರೆಸ್​ಗೆ ಮಹಾಘಟಬಂಧನ್​ನಲ್ಲಿ ಸ್ಥಾನ ನೀಡಿಲ್ಲ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷದ ಸ್ಥಾನ ಪಡೆಯುವುದಕ್ಕೂ ಕಾಂಗ್ರೆಸ್​ಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಅದಕ್ಕಿಂತ ಕಡಿಮೆ ಸ್ಥಾನ ಗಳಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಬಲದಿಂದ 20ರಿಂದ 22 ಸೀಟು ಗೆಲ್ಲಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕಚ್ಚಾಟದಿಂದ ಬಿಜೆಪಿ ಸೀಟು 28ಕ್ಕೂ ಹೋಗಬಹುದು. ಹೊರಗೆ ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ, ಒಳಗೆ ಹೇಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ರಾಷ್ಟ್ರದ ರಕ್ಷಣೆ, ದೇಶದ ಭದ್ರತೆ, ಅಭಿವೃದ್ಧಿ ಇತ್ಯಾದಿ ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ ಈ ಬಾರಿಯ ಲೋಕಸಭೆ ಚುನಾವಣೆ ನಡೆಯಲಿದೆ. ನಕಲಿ ಡೈರಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಕುತಂತ್ರದ ರಾಜಕಾರಣ ಮಾಡಿದೆ. ಚುನಾವಣೆ ಎದುರಿಸಲು ಅವರಲ್ಲಿ ಸಮರ್ಥ ವಿಷಯಗಳೇ ಇಲ್ಲ.

| ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ

ಕ್ರಮ ಸರಿಯಲ್ಲ

ರಾಜ್ಯದ ಮೈತ್ರಿ ಸರ್ಕಾರ ಓಲಾ ಕ್ಯಾಬ್​ಗಳನ್ನು ನಿಷೇಧಿಸುವ ಮೂಲಕ 40 ಸಾವಿರ ಕುಟುಂಬಗಳನ್ನು ಬೀದಿಗೆ ಬರುವಂತೆ ಮಾಡಿದೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧವೇ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಏಕಾಏಕಿ ಕಾರು ಚಾಲಕರ ವಿರುದ್ಧ ಈ ರೀತಿಯ ಕ್ರಮ ಸರಿಯಲ್ಲ ಎಂದು ಡಿ.ವಿ. ಸದಾನಂದಗೌಡ ಹೇಳಿದರು.