ಮಹಾಮೈತ್ರಿಗೆ ಮೋದಿ ತಿವಿತ: ಕರ್ನಾಟಕ ಮಾದರಿಯಲ್ಲಿ ಒಂದಾಗುತ್ತಿರುವುದು ಅಧಿಕಾರಕ್ಕಾಗಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಪ್ರತಿಪಕ್ಷಗಳೆಲ್ಲವೂ ಒಟ್ಟುಗೂಡಿ ರಚಿಸಿಕೊಳ್ಳಲು ಉದ್ದೇಶಿಸಿರುವ ಮಹಾ ಮೈತ್ರಿ ಅಥವಾ ಮಹಾಘಟಬಂಧವನ್ನು ನರೇಂದ್ರ ಮೋದಿ ಟೀಕೆಗೆ ಗುರಿಪಡಿಸಿದ್ದಾರೆ. ವಿರೋಧಿಗಳು ಒಂದಾಗುತ್ತಿರುವುದು ಅಧಿಕಾರಕ್ಕಾಗಿ ಮಾತ್ರ ಎಂದು ಅವರು ಲೇವಡಿ ಮಾಡಿದ್ದಾರೆ.

ನಮೋ ಆ್ಯಪ್​ ಮೂಲಕ ಬಿಜೆಪಿ ಕಾರ್ಯಕರ್ತರ ಜತೆಗೆ ಬುಧವಾರ ಸಂವಾದ ನಡೆಸಿದ ಪ್ರಧಾನಿ ಮೋದಿ, ” ಮಹಾಘಟಬಂಧನ ಎಂಬುದು ಒಂದು ವಿಫಲ ಕಲ್ಪನೆ. ಈಗ ಒಂದಾಗುತ್ತಿರುವ ಈ ಪಕ್ಷಗಳೆಲ್ಲವೂ ಸದಾ ಪರಸ್ಪರ ಕಚ್ಚಾಡುತ್ತವೆ. ಆದರೂ ಎಲ್ಲ ಪಕ್ಷಗಳೂ ಒಂದಾಗಿ, ಒಟ್ಟಾಗಿ ಮೈತ್ರಿಕೂಟ ರಚಿಸಿಕೊಳ್ಳುತ್ತಿರುವ ಉದ್ದೇಶ ಅಧಿಕಾರ ಮಾತ್ರ. ಕರ್ನಾಟಕದಲ್ಲಿ ಆಗಿರುವ ಮೈತ್ರಿಯ ರೀತಿಯಲ್ಲಿ ಕೇಂದ್ರದಲ್ಲಿಯೂ ಸರ್ಕಾರ ರಚಿಸುವ ಆಸೆಯಿಂದ ಇವರೆಲ್ಲರೂ ಒಂದಾಗುತ್ತಿದ್ದಾರೆ,” ಎಂದು ಅವರು ಕರ್ನಾಟಕದ ಉದಾಹರಣೆಯೊಂದಿಗೆ ಟೀಕೆ ಮಾಡಿದ್ದಾರೆ.

ಅಲ್ಲದೆ, ” ಕರ್ನಾಟಕದ ಮಾದರಿಯಲ್ಲೇ ಉತ್ತರಪ್ರದೇಶ, ಮಧ್ಯಪ್ರದೇಶದಲ್ಲೂ ಮಹಾಮೈತ್ರಿಯ ಪ್ರಯತ್ನಗಳು ನಡೆಯುತ್ತಿವೆ,” ಎಂದು ಅವರು ಗುಡುಗಿದ್ದಾರೆ.

ಕರ್ನಾಟಕ ವಿಧಾನಸಭೆಗೆ ಮೇನಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಕೂಟ ಕಳೆದ ಸರ್ಕಾರ ರಚಿಸಿತ್ತು. ಜೆಡಿಎಸ್​ನ ಎಚ್​.ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನೆಲ್ಲ ಒಂದೇ ವೇದಿಕೆಯಡಿ ಕರೆತಂದಿದ್ದರು. ಈ ಸಮಾರಂಭ ಮುಂದಿನ ಲೋಕಸಭೆ ಚುನಾವಣೆಗೆ ಆಗಲಿರುವ ಸಂಭಾವ್ಯ ಮಹಾ ಮೈತ್ರಿಗೆ ಮುನ್ನುಡಿ ಎಂದೇ ಬಿಂಬಿಸಲಾಗಿತ್ತು.