ಮಹಾಮೈತ್ರಿ ಅಸಂಬದ್ಧ

ಚೆನ್ನೈ: ವಿರೋಧ ಪಕ್ಷಗಳು ರಚಿಸಿಕೊಳ್ಳಲು ಉದ್ದೇಶಿಸಿರುವ ಮಹಾಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇದು ಶ್ರೀಮಂತ ಮನೆತನಗಳ ಅಸಂಬದ್ಧ ಮೈತ್ರಿ, ಅಧಿಕಾರದ ಲಾಲಸೆಯಿಂದ ರಚನೆಯಾಗುತ್ತಿರುವ ಕೂಟವೇ ಹೊರತು ಜನರಿಗಾಗಿ ಅಲ್ಲ ಎಂದಿದ್ದಾರೆ.

ತಮಿಳುನಾಡಿನ ವಿವಿಧ ಲೋಕಸಭಾ ಕ್ಷೇತ್ರಗಳ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ರಾಜಕಾರಣದಲ್ಲಿ ವೈಯಕ್ತಿಕ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಮಾಡಿಕೊಳ್ಳುತ್ತಿರುವ ಅಪವಿತ್ರ ಕೂಟ ಇದು. ಇದಕ್ಕೆ ಯಾವುದೇ ಸೈದ್ಧಾಂತಿಕ ಆಧಾರ ಇಲ್ಲ. ಈ ಮೈತ್ರಿಕೂಟದ ಉದ್ದೇಶ ಜನರಿಗೆ ಗೊತ್ತಿದೆ ಎಂದರು.

ಕಾಂಗ್ರೆಸ್​ನ ಮಿತಿ ಮೀರಿದ ಹಸ್ತಕ್ಷೇಪ ವಿರೋಧಿಸಿ ತೆಲುಗು ದೇಶಂ ಪಕ್ಷ ರಚನೆಯಾಗಿತ್ತು. ಆದರೆ, ಎನ್.ಟಿ. ರಾಮರಾವ್ ಆಶಯವನ್ನು ಅವರ ಅಳಿಯ ಮಣ್ಣುಪಾಲು ಮಾಡುತ್ತಿದ್ದಾರೆ. ಕಾಂಗ್ರೆಸ್ ಜತೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸಿಎಂ ಚಂದ್ರಬಾಬು ನಾಯ್ಡುರನ್ನು ಅವರು ಟೀಕಿಸಿದರು.

ಸಮಾಜವಾದದ ಪ್ರತಿಪಾದಕ ರಾಮಮನೋಹರ ಲೋಹಿಯಾ ತಮ್ಮ ನಾಯಕನೆಂದು ಕೆಲವು ವಿರೋಧ ಪಕ್ಷಗಳು ಹೇಳಿಕೊಳ್ಳುತ್ತವೆ. ಆದರೆ, ಲೋಹಿಯಾ ಜೀವನದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದವರು ಎಂದರು.