ಕೊಚ್ಚಿ ಹೋಗಲಿದೆ ಮಹಾಘಟ ಬಂಧನ್ – ಸಂಡೂರಿನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ

ಸಂಡೂರು: ಡಿ.ಕೆ.ಶಿವಕುಮಾರ್ ಕರ್ನಾಟಕ ಸಚಿವ ಸಂಪುಟದ ಅತ್ಯಂತ ದರ್ಪದ ಮಂತ್ರಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ದೂರಿದರು. ಪಟ್ಟಣದ ಕೃತಿಕಾ ಫಾರಂಹೌಸ್ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

ಡಿಕೆಶಿಯವರ ಸೊಕ್ಕು ಮತ್ತು ಅಹಂಕಾರಕ್ಕೆ ಹಾಗೂ ಹಣದ ಮದಕ್ಕೆ ಜನ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ದೇಶದ ಸುರಕ್ಷತೆ ಮತ್ತು ಭದ್ರತೆ ಹಿತದೃಷ್ಟಿಯಿಂದ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕೆಂದು ದೇಶದ ಜನ ಸಂಕಲ್ಪ ಮಾಡಿದ್ದಾರೆ. ರಾಜ್ಯ ಸೇರಿ ದೇಶಾದ್ಯಂತ ಮೋದಿಯವರ ಸುನಾಮಿ ಎದ್ದಿದೆ. ಅದರಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳ ಮಹಾಘಟ ಬಂಧನ್ ಕೊಚ್ಚಿ ಹೋಗಲಿದೆ. ಜೆಡಿಎಸ್-ಕಾಂಗ್ರೆಸ್‌ನ ಅನೈತಿಕ ಸಂಬಂಧ ಡೈವೋರ್ಸ್‌ ಹಂತಕ್ಕೆ ಬಂದು ನಿಂತಿದೆ. ಹಾಸನ, ಮಂಡ್ಯ, ತುಮಕೂರು ಘಟನೆಗಳೆ ಅದಕ್ಕೆ ಸಾಕ್ಷಿ. ಸಂಸತ್ ಚುನಾವಣೆ ಬಳಿಕ ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯುತ್ತದೆ. ಇಲ್ಲವೆ ಕುಮಾರಸ್ವಾಮಿ ರಾಜೀನಾಮೆ ನೀಡುವ ಮೂಲಕ ರಾಜ್ಯ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಉರುಳಲಿದೆ ಎಂದು ಭವಿಷ್ಯ ನುಡಿದರು.

ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವಾಗ ಮಮತಾ, ಮಾಯಾವತಿ, ಚಂದ್ರಬಾಬು ನಾಯ್ಡು ಸೇರಿ ದೇಶದ ಎಲ್ಲ ಎನ್‌ಡಿಎ ವಿರೋಧಿ ನಾಯಕರು ಸೇರಿಸಿದರು. ಮೋದಿ ವಿರುದ್ಧ್ದ ಮಹಾಘಟ ಬಂಧನ್ ಹೆಸರಲ್ಲಿ ರಣಕಹಳೆ ಊದಿದರು. ತಮ್ಮ ಸ್ಥಾನಗಳಿಗೆ ತೆರಳುತ್ತಿದ್ದಂತೆ ಎಲ್ಲರೂ ಕಾಂಗ್ರೆಸ್ ಮೈತ್ರಿಗೆ ಅಸಮ್ಮತಿ ಸೂಚಿಸಿದರು. ದೇವೇಂದ್ರಪ್ಪ ಪಾರ್ಲಿಮೆಂಟ್‌ನಲ್ಲಿ ಏನು ಮಾತಾಡುತ್ತಾರೆ ಎಂದು ಮೊನ್ನೆ ನಡೆದ ಸಂಡೂರಿನ ಸಭೆಯಲ್ಲಿ ಕಾಂಗ್ರೆಸ್‌ನವರು ಟೀಕಿಸಿದ್ದನ್ನು ತೀವ್ರವಾಗಿ ಖಂಡಿಸಿದರು. ಹಿಂದೆ ತಮಿಳುನಾಡಿನ ಸಿಎಂ ಆಗಿದ್ದ ಕಾಮರಾಜ್ ಒಡೆಯರ್ ಅವಿದ್ಯಾವಂತರಾಗಿದ್ದರು. ಇಡೀ ದೇಶ ಮೆಚ್ಚುವ ಆಡಳಿತ ನೀಡಿದರು. ದೇವೇಂದ್ರಪ್ಪಗೆ 30-40 ವರ್ಷಗಳ ರಾಜಕೀಯ ಅನುಭವವಿದೆ ಎಂದು ತಿರುಗೇಟು ನೀಡಿದರು.

ಎಂ.ವೈ.ಘೋರ್ಪಡೆ ಸ್ಮರಣೆ
ಉತ್ತಮ ಆರ್ಥಿಕ ತಜ್ಞರು, ಹಣಕಾಸು ಸಚಿವರಾಗಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದ ದಿ.ಎಂ.ವೈ.ಘೋರ್ಪಡೆ ದೂರದೃಷ್ಟಿ ನಾಯಕರು ಎಂದು ಶೆಟ್ಟರ್ ಪ್ರಶಂಸಿದರು. ಹಿರಿಯ ಮುಖಂಡ ಕಾರ್ತಿಕ್ ಘೋರ್ಪಡೆ ಮಾತನಾಡಿ, ಸಂಡೂರು ಎಂದೂ ಬಿಜೆಪಿಗೆ ಒಲಿದಿಲ್ಲ. ಆದರೆ, ಈ ಬಾರಿ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡುವ ಮೂಲಕ ಸಚಿವ ಸ್ಥಾನದಿಂದ ಬೀಗುವವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ಪರೋಕ್ಷವಾಗಿ ಸಚಿವ ತುಕಾರಾಮ್‌ಗೆ ಟಾಂಗ್ ನೀಡಿದರು.

ಮಾಜಿ ಎಂಎಲ್ಸಿ ಮೃತ್ಯುಂಜಯ ಜಿನಗಾ, ಅಭ್ಯರ್ಥಿ ವೈ.ದೇವೇಂದ್ರಪ್ಪ, ಯುವ ಮುಖಂಡ ಡಿ.ರಾಘವೇಂದ್ರ, ತಾಲೂಕು ಅಧ್ಯಕ್ಷ ಜಿ.ಟಿ.ಪಂಪಾಪತಿ, ಉಪಾಧ್ಯಕ್ಷ ಮಂಜುನಾಥ ಹಿರೇಮಠ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟಿಲ್, ಎಸ್ಸಿ ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಹನುಮಂತಪ್ಪ, ಜಿ.ಚಿನ್ನಬಸಪ್ಪ, ಎಸ್.ಎಲ್.ಪುರುಷೋತ್ತಮ, ವಿರೇಶ್, ಚೋರನೂರು ಹುಲಿರಾಜ, ವಾಮದೇವ, ಕೊಟಿಗಿನಾಳ್ ಶರಣಪ್ಪ, ವದ್ದಟ್ಟಿ ಅಂಬರೀಷ, ಗಂಡಿ ಮಾರೆಪ್ಪ, ಎಲಿಗಾರ ನಾಗರಾಜ, ವಿಶ್ವನಾಥರೆಡ್ಡಿ, ಹಟ್ಟಿ ಕುಮಾರಸ್ವಾಮಿ, ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಪಂಪನಗೌಡ, ದೀಪಾ ಷಣ್ಮುಖ, ತಾಪಂ, ಪುರಸಭೆ ಸದಸ್ಯರು ಮತ್ತು ಕಾರ್ಯಕರ್ತರಿದ್ದರು.